ಅಲಿಪ್ತ ಚಳವಳಿ ಜೊತೆಯಾಗಿ ಕೆಲಸ ಮಾಡುವುದು ಅಗತ್ಯ: ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್

Update: 2019-10-23 17:41 GMT

ಬಾಕು (ಅಝರ್‌ಬೈಜಾನ್), ಅ. 23: ಜಾಗತಿಕ ರಾಜಕೀಯ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಆಡಳಿತ ವ್ಯವಸ್ಥೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಅಲಿಪ್ತ ಚಳವಳಿಯು ಜೊತೆಯಾಗಿ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

 ಅವರು ಅಝರ್‌ಬೈಜಾನ್ ದೇಶದ ರಾಜಧಾನಿ ಬಾಕುವಿನಲ್ಲಿ ಬುಧವಾರ ನಡೆದ ಅಲಿಪ್ತ ಚಳವಳಿಯ ಸಚಿವ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘‘ಬಹುಪಕ್ಷೀಯತೆ ಇಂದು ನಿಸ್ಸಂಶಯವಾಗಿ ಒತ್ತಡದಲ್ಲಿದೆ. ಜಗತ್ತಿನ ಜನಸಂಖ್ಯೆಯ ಮೂರನೇ ಎರಡು ಭಾಗವನ್ನು ಪ್ರತಿನಿಧಿಸುವ ನಮ್ಮ ಚಳವಳಿಯು ಜೊತೆಯಾಗಿ ಕೆಲಸ ಮಾಡುತ್ತಾ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವುಳ್ಳ ಬಹುಪಕ್ಷೀಯ ಆಡಳಿತ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ’’ ಎಂದು ಜೈಶಂಕರ್ ಟ್ವಿಟರ್‌ನಲ್ಲಿ ಜೈಶಂಕರ್ ಬರೆದಿದ್ದಾರೆ.

ಅಲಿಪ್ತ ಚಳವಳಿಯ ಹಾಲಿ ವ್ಯವಸ್ಥೆಗಳು ಮತ್ತು ಅದು ಕೆಲಸ ಮಾಡುವ ವಿಧಾನದಲ್ಲಿ ಸುಧಾರಣೆಯಾಗಬೇಕು ಎಂಬುದಾಗಿಯೂ ವಿದೇಶ ವ್ಯವಹಾರಗಳ ಸಚಿವರು ಕರೆ ನೀಡಿದ್ದಾರೆ. ಅದೇ ವೇಳೆ, ಸಂಕುಚಿತ ಹಿತಾಸಕ್ತಿಗಳಿಗಾಗಿ ಬಹುಪಕ್ಷೀಯ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಗಳ ವಿರುದ್ಧವೂ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಅವರು ಹೇಳಿದರು.

ಸುಧಾರಿತ ಬಹುಪಕ್ಷೀಯ ವ್ಯವಸ್ಥೆಯು 21ನೇ ಶತಮಾನದ ಅವಶ್ಯಕತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News