ದಂಪತಿ, ಮಗುವನ್ನು ರಕ್ಷಿಸಿದ ಕಾರು ಅಪಘಾತ!

Update: 2019-10-25 10:33 GMT

ಫೀನಿಕ್ಸ್, ಅ.25: ಅರಿಝೋನಾದ ಫೀನಿಕ್ಸ್ ಎಂಬಲ್ಲಿ  ದಂಪತಿಯೊಂದು ತಮ್ಮ ಮಗುವಿನ ಜೊತೆ ರಸ್ತೆ ದಾಟುತ್ತಿದ್ದ ವೇಳೆ ಭೀಕರ ಅಪಘಾತವೊಂದರಿಂದ ಕೂದಲೆಳೆಯಲ್ಲಿ ಪಾರಾದ ಘಟನೆ ನಡೆದಿದೆ.

ವೇಗವಾಗಿ ಬರುತ್ತಿದ್ದ ಜೀಪೊಂದು ಇನ್ನೇನು ರಸ್ತೆ ದಾಟುತ್ತಿದ್ದ ದಂಪತಿಗೆ ಢಿಕ್ಕಿ ಹೊಡೆಯಬೇಕೆನ್ನುವಷ್ಟರಲ್ಲಿ  ಇನ್ನೊಂದು ಕಾರು ಆ ಜೀಪಿಗೆ ಢಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಸ್ವಲ್ಪ ದೂರ ಸಾಗಿ ಬಿಟ್ಟಿದ್ದವು. ಈ ಸಂದರ್ಭ ದಂಪತಿ ತಮ್ಮ ಮಗುವಿನೊಂದಿಗೆ ಲಗುಬಗೆಯಿಂದ ರಸ್ತೆ  ದಾಟಿದರು.

ದಂಪತಿ ಹಾಗೂ ಮಗುವಿಗೆ ಜೀಪು ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಚೆವ್ರೊಲೆಟ್ ಕ್ರೂಝ್ ಕಾರಿನ ಚಾಲಕಿಯನ್ನು ಪೊಲೀಸರು ಹೊಗಳಿದ್ದಾರೆ ಹಾಗೂ ಈ ಪವಾಡಸದೃಶ ದೃಶ್ಯದ 13 ಸೆಕೆಂಡ್ ಅವಧಿಯ ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ಜೀಪನ್ನು ಚಲಾಯಿಸುತ್ತಿದ್ದ ವ್ಯಕ್ತಿ ಎರ್ನೆಸ್ಟೋ ಒಟನೇಝ್ ಒವೆಸೊ ಎಂಬಾತ ಮದ್ಯದ ನಶೆಯಲ್ಲಿದ್ದನೆನ್ನಲಾಗಿದೆ. ಚಾಲಕನನ್ನು ಪೊಲೀಸರು ಬಂಧಿಸಿದರೂ ಆತನ ಜತೆಗಿದ್ದ ಮಹಿಳೆ ಪರಾರಿಯಾಗಿದ್ದಾಳೆ.

ಜೀಪಿಗೆ ಢಿಕ್ಕಿ ಹೊಡೆದ ಕಾರನ್ನು ಶೆನ್ನಾನ್ ವಿವಾರ್ ಎಂಬ ಮಹಿಳೆ ಚಲಾಯಿಸುತ್ತಿದ್ದಳೆನ್ನಲಾಗಿದ್ದು ಆಕೆಗೆ ಪೊಲೀಸರು ಮೂರು ಜೀವಗಳನ್ನು ಉಳಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News