ನಾವು ತಪ್ಪು ಮಾಡಿದ್ದೇವೆ ಎನ್ನುವುದು ನಮಗೆ ಗೊತ್ತು: ಅಮೆರಿಕ ಕಾಂಗ್ರೆಸ್‌ಗೆ ಬೋಯಿಂಗ್ ವಿವರಣೆ

Update: 2019-10-29 14:43 GMT

ವಾಶಿಂಗ್ಟನ್, ಅ. 29: ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ತಪ್ಪುಗಳನ್ನು ಮಾಡಿದೆ ಎಂಬುದನ್ನು ಸಂಸ್ಥೆಯ ಸಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೆನಿಸ್ ಮುಯಿಲನ್‌ಬರ್ಗ್ ಮಂಗಳವಾರ ಅಮೆರಿಕ ಸಂಸತ್ತು ಕಾಂಗ್ರೆಸ್‌ನ ವಿಚಾರಣೆಯ ವೇಳೆ ಒಪ್ಪಿಕೊಳ್ಳಲಿದ್ದಾರೆ ಎಂದು ಸೋಮವಾರ ಬಹಿರಂಗಪಡಿಸಲಾದ ಅವರ ಲಿಖಿತ ಸಾಕ್ಷದಲ್ಲಿ ಹೇಳಲಾಗಿದೆ.

ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ಎರಡು ವಿಮಾನಗಳು ಪತನಗೊಂಡಿರುವುದಕ್ಕೆ ಸಂಬಂಧಿಸಿ ಅವರು ಕಾಂಗ್ರೆಸ್ ವಿಚಾರಣೆ ಎದುರಿಸುತ್ತಿದ್ದಾರೆ. ಇಂಡೋನೇಶ್ಯ ಮತ್ತು ಇಥಿಯೋಪಿಯಗಳಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಒಟ್ಟು 346 ಮಂದಿ ಮೃತಪಟ್ಟಿದ್ದಾರೆ.

‘‘ಈ ಅಪಘಾತಗಳಿಂದ ನಾವು ಕಲಿತಿದ್ದೇವೆ ಹಾಗೂ ಈಗಲೂ ಕಲಿಯುತ್ತಿದ್ದೇವೆ, ಅಧ್ಯಕ್ಷರೇ. ನಾವು ತಪ್ಪುಗಳನ್ನು ಮಾಡಿದ್ದೇವೆ ಹಾಗೂ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎನ್ನುವುದು ನಮಗೆ ಗೊತ್ತು’’ ಎಂಬುದಾಗಿ ಅಮೆರಿಕದ ಸೆನೆಟ್ ವಾಣಿಜ್ಯ ಸಮಿತಿಯ ಸಮ್ಮುಖದಲ್ಲಿ ಮುಯಿಲನ್‌ಬರ್ಗ್ ಹೇಳಿದ್ದಾರೆ.

ಈಗ ಸೇವೆಯಿಂದ ಹೊರಗಿಡಲಾಗಿರುವ ಮ್ಯಾಕ್ಸ್ 737 ವಿಮಾನಕ್ಕೆ ಸಾಕಷ್ಟು ಸುಧಾರಣೆಗಳನ್ನು ತಂದಿದ್ದೇವೆ ಹಾಗೂ ಈಗ ನಡೆದಿರುವಂಥ ಅಪಘಾತಗಳು ಇನ್ನೆಂದೂ ಸಂಭವಿಸದಂತೆ ಅವುಗಳು ಖಾತರಿಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೋಯಿಂಗ್ ಆಡಳಿತ ಮಂಡಳಿಯು ಈ ತಿಂಗಳ ಆದಿ ಭಾಗದಲ್ಲಿ ಮುಯಿಲನ್‌ಬರ್ಗ್‌ರನ್ನು ಕಂಪೆನಿಯ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿತ್ತು. ಅವರು ಬುಧವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸಾರಿಗೆ ಮತ್ತು ಮೂಲಸೌಕರ್ಯ ಸಮಿತಿಯ ಮುಂದೆಯೂ ಸಾಕ್ಷ ನುಡಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News