ಪಾಕಿಸ್ತಾನದ ರೈಲಿನಲ್ಲಿ ಬೆಂಕಿ ಅವಘಡ, 74 ಜನರ ಸಾವು

Update: 2019-10-31 16:04 GMT
courtesy: ANI
 

ಇಸ್ಲಾಮಾಬಾದ್, ಅ.31: ಯಾತ್ರಿಕರಿಂದ ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ಅಡಿಗೆ ಅನಿಲದ ಸಿಲಿಂಡರ್‌ಗಳು ಸ್ಫೋಟಿಸಿದ ಪರಿಣಾಮ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ ಕನಿಷ್ಠ 74 ಜನರು ಕೊಲ್ಲಲ್ಪಟ್ಟಿರುವ ದುರಂತ ಗುರುವಾರ ಪಾಕಿಸ್ತಾನದ  ಮಧ್ಯ ಪಂಜಾಬ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿದೆ. ಮೃತರಲ್ಲಿ ಜೀವವುಳಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿದ್ದ ಕೆಲವರೂ ಸೇರಿದ್ದಾರೆ.

ಬೆಂಕಿಯಿಂದ ಉರಿಯುತ್ತಿದ್ದ ಮೂರು ಬೋಗಿಗಳನ್ನು ಟಿವಿ ಫೂಟೇಜ್‌ಗಳು ತೋರಿಸಿವೆ. ಅವುಗಳಲ್ಲಿದ್ದ ಜನರು ಪ್ರಾಣಭೀತಿಯಿಂದ ಆಕ್ರಂದನಗೈಯುತ್ತಿದ್ದರು. ಕರಾಚಿಯಿಂದ ಲಾಹೋರಿಗೆ ಚಲಿಸುತ್ತಿದ್ದ ಈ ರೈಲಿನಲ್ಲಿ ಪಾಕಿಸ್ತಾನದ ಬೃಹತ್ ಧಾರ್ಮಿಕ ಸಮಾವೇಶಕ್ಕೆ ತೆರಳುತ್ತಿದ್ದ ಯಾತ್ರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಯಾತ್ರಿಗಳು ಬೆಳಗ್ಗಿನ ಉಪಹಾರವನ್ನು ತಯಾರಿಸುತ್ತಿದ್ದಾಗ ಅಡಿಗೆ ಅನಿಲದ ಎರಡು ಸಿಲಿಂಡರ್‌ಗಳು ಸ್ಫೋಟಿಸಿದ್ದು,ಕ್ಷಣಾರ್ಧದಲ್ಲಿ ಬೆಂಕಿ ಮೂರು ಬೋಗಿಗಳಿಗೆ ವ್ಯಾಪಿಸಿತ್ತು ಎಂದು ಪಾಕಿಸ್ತಾನ ರೇಲ್ವೇಸ್‌ನ ಹಿರಿಯ ಅಧಿಕಾರಿ ಅಲಿ ನವಾಝ್ ಸುದ್ದಿಸಂಸ್ಥೆಗೆ ತಿಳಿಸಿದರು.

ಹೆಚ್ಚಿನ ಪಾಕಿಸ್ತಾನಿಗಳು ದೂರಪ್ರಯಾಣದ ರೈಲುಗಳಲ್ಲಿ ಆಹಾರವನ್ನು ಹೊತ್ತೊಯ್ಯುತ್ತಾರೆ,ಅಡಿಗೆ ಅನಿಲದ ಸಿಲಿಂಡರ್‌ಗಳ ಸಾಗಾಟಕ್ಕೆ ನಿಷೇಧವಿದೆಯಾದರೂ ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ರೈಲಿನಲ್ಲಿ ಸಿಲಿಂಡರ್‌ಗಳನ್ನು ಸಾಗಿಸಲು ಅವಕಾಶ ನೀಡಿದ್ದು ಪ್ರಮಾದವಾಗಿತ್ತು ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಕಿಯಲ್ಲಿ ಉರಿಯತ್ತಿದ್ದ ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು,ಅಗ್ನಿಶಾಮಕ ದಳದೊಂದಿಗೆ ರಕ್ಷಣಾ ಕಾರ್ಯಕರ್ತರು ಮತ್ತು ಸೈನಿಕರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಕೆಲವು ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿದಾಗ ತಲೆಗೆ ಉಂಟಾದ ಗಾಯಗಳಿಂದ ಮೃತಪಟ್ಟಿದ್ದಾರೆ. ಕನಿಷ್ಠ 44 ಜನರು ಗಾಯಗೊಂಡಿದ್ದಾರೆ ಎಂದು ಲಿಯಾಕತ್‌ ಪುರ ಆಸ್ಪತ್ರೆಯ ವೈದ್ಯಾಧಿಕಾರಿ ಮುಹಮ್ಮದ್ ನದೀಮ್ ಝಿಯಾ ತಿಳಿಸಿದರು.

ಗಾಯಾಳುಗಳನ್ನು ರಹೀಂ ಯಾರ್ ಖಾನ್ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹೆಚ್ಚಿನ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಬೆಂದು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದರು. ದುರ್ಘಟನೆಯ ಬಗ್ಗೆ ಶೋಕವನ್ನು ವ್ಯಕ್ತಪಡಿಸಿರುವ ಪ್ರಧಾನಿ ಇಮ್ರಾನ್ ಖಾನ್ ಅವರು,ತುರ್ತು ವಿಚಾರಣೆಗೆ ಆದೇಶಿಸಿದ್ದಾರೆ.

ತೇಝ್‌ಗಾಮ್ ಹೆಸರಿನ ಈ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಮತ್ತು ಜನಪ್ರಿಯ ರೈಲುಸೇವೆಗಳಲ್ಲಿ ಒಂದಾಗಿದ್ದು, ಕರಾಚಿ ಮತ್ತು ರಾವಲ್ಪಿಂಡಿಗಳ ನಡುವೆ ಸಂಚರಿಸುತ್ತದೆ. ಯಾತ್ರಿಕರ ಸೌಲಭ್ಯಕ್ಕಾಗಿ ರೈಲಿನ ಮಾರ್ಗವನ್ನು ಲಾಹೋರಿಗೆ ಬದಲಿಸಲಾಗಿತ್ತು. ಲಾಹೋರಿನ ಹೊರವಲಯದ ಗ್ರಾಮವೊಂದರಲ್ಲಿ ನಡೆಯುವ ವಾರ್ಷಿಕ ಧಾರ್ಮಿಕ ಸಮಾವೇಶಕ್ಕೆ ಕನಿಷ್ಠ 4 ಲಕ್ಷ ಯಾತ್ರಿಕರು ಆಗಮಿಸುತ್ತಾರೆ. ಹಲವಾರು ದಿನಗಳವರೆಗೆ ಅಲ್ಲಿಯ ಟೆಂಟ್‌ಗಳಲ್ಲಿ ವಾಸವಿರುತ್ತಾರೆ.

ಮೃತರಲ್ಲಿ ಹೆಚ್ಚಿನವರು ದಕ್ಷಿಣ ಸಿಂಧ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಗುರುವಾರ ಆರಂಭಗೊಂಡಿರುವ ಧಾರ್ಮಿಕ ಸಮಾವೇಶ ರವಿವಾರ ಅಂತ್ಯಗೊಳ್ಳಲಿದೆ. ಐದು ದಶಕಗಳ ಹಿಂದೆ  ಆರಂಭಗೊಂಡಿದ್ದ ಈ ಸಮಾವೇಶದಲ್ಲಿ ಇಸ್ಲಾಂ ಕುರಿತು ಬೋಧನೆಗಳನ್ನು ನೀಡಲಾಗುತ್ತದೆ.

ಸಮಾವೇಶಕ್ಕೆ ತೆರಳುವ ಯಾತ್ರಿಗಳಿಗೆ ಸಿಲಿಂಡರ್‌ಗಳನ್ನು ಜೊತೆಗೊಯ್ಯಲು ಅನುಮತಿ ನೀಡುವುದು ವಾಡಿಕೆಯಾಗಿದೆ. ಈ ತಪ್ಪನ್ನು ಒಪ್ಪಿಕೊಳ್ಳ್ಳುತ್ತೇವೆ. ಭವಿಷ್ಯದಲ್ಲಿ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News