ವ್ಯಾಪಾರ ಸಮರದ ವಿರುದ್ಧ ಆಗ್ನೇಯ ಏಶ್ಯ ದೇಶಗಳು ಜೊತೆಯಾಗಿರಬೇಕು

Update: 2019-11-02 16:06 GMT

ಬ್ಯಾಂಕಾಕ್ (ಥಾಯ್ಲೆಂಡ್), ನ. 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಮರ ಆರಂಭಿಸಿರುವ ಹಿನ್ನೆಲೆಯಲ್ಲಿ ಆಗ್ನೇಯ ಏಶ್ಯದ ದೇಶಗಳು ಜೊತೆಯಾಗಿರಬೇಕು ಎಂದು ಮಲೇಶ್ಯದ ಪ್ರಧಾನಿ ಮಹಾತಿರ್ ಮುಹಮ್ಮದ್ ಶನಿವಾರ ಹೇಳಿದ್ದಾರೆ.

ಅಮೆರಿಕ-ಚೀನಾ ವ್ಯಾಪಾರ ಸಮರದ ನೆರಳಿನಲ್ಲಿ, ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಶನಿವಾರ ಆರಂಭಗೊಂಡ 10 ದೇಶಗಳ ಪ್ರಾದೇಶಿಕ ಸಮ್ಮೇಳನ (ಆಸಿಯಾನ್)ವನ್ನು ಉದ್ದೇಶಿಸಿ 94 ವರ್ಷದ ಹಿರಿಯ ನಾಯಕ ಮಾತನಾಡುತ್ತಿದ್ದರು.

ಆದರೆ, ಜಗತ್ತಿನ ಅತಿ ದೊಡ್ಡ ಮುಕ್ತ ವ್ಯಾಪಾರ ವಲಯವೊಂದನ್ನು ನಿರ್ಮಿಸಬಹುದಾದ ಹಾಗೂ ಚೀನಾ ಬೆಂಬಲಿತ ವ್ಯಾಪಾರ ಒಪ್ಪಂದವೊಂದನ್ನು ಆಸಿಯಾನ್ ಗುಂಪಿನ ನಾಯಕರು ಇನ್ನೂ ಅಂಗೀಕರಿಸಿಲ್ಲ.

‘‘ನಾವು ವ್ಯಾಪಾರ ಸಮರಕ್ಕೆ ಹೋಗಲು ಬಯಸುವುದಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಅವರು ನಮ್ಮೆಂದಿಗೆ ಕಠಿಣವಾಗಿ ವರ್ತಿಸುವಾಗ, ನಾವೂ ಅವರ ಜೊತೆ ಕಠಿಣವಾಗಿ ವರ್ತಿಸಬೇಕಾಗುತ್ತದೆ’’ ಎಂದು ಆಸಿಯಾನ್ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ವ್ಯಾಪಾರ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು ಹೇಳಿದರು.

‘‘ಆ ವ್ಯಕ್ತಿ ಇಲ್ಲದಿದ್ದರೆ, ಬಹುಶಃ ಈ ನಿಟ್ಟಿನಲ್ಲಿ ಬದಲಾವಣೆಗಳು ಗೋಚರಿಸುತ್ತವೆ’’ ಎಂದು ಟ್ರಂಪ್‌ರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಮಹಾತಿರ್ ಮುಹಮ್ಮದ್ ಅಭಿಪ್ರಾಯಪಟ್ಟರು. ಅಮೆರಿಕದ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಚೀನಾದ ಆಮದುಗಳ ಮೇಲಿನ ಸುಂಕವನ್ನು ಈಗಾಗಲೇ ಏರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News