ವೈಯಕ್ತಿಕ ಬದುಕು, ಧರ್ಮನಿರಪೇಕ್ಷತೆ ಮತ್ತು ಕಾನೂನುಗಳು...

Update: 2019-12-13 18:22 GMT

ನಾನು ಹುಟ್ಟಿನಿಂದ ಹಿಂದೂ ಧರ್ಮೀಯ. ಬೆಳೆದದ್ದು ಕ್ರೈಸ್ತ ವಾತಾವರಣದಲ್ಲಿ. ಮನೆ ಸುತ್ತ ನಮ್ಮ ಬಂಧುಗಳೇ ಕ್ರೈಸ್ತರಾಗಿದ್ದ ಕಾರಣ ಕ್ರೈಸ್ತ ಧರ್ಮದ ಒಡನಾಟ ಬಹಳವೇ ಹೆಚ್ಚು. ಹಾಗೆಯೇ ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ಶಿಕ್ಷಣ ಕೂಡ ಕ್ರೈಸ್ತ ಬೋರ್ಡಿಂಗ್‌ಗಳಲ್ಲಿ. ಅಲ್ಲಿ ಯಾವ ಮಟ್ಟಿಗಿನ ಕ್ರೈಸ್ತ ಧರ್ಮದೊಡನೆ involvement ಎಂದರೆ ಏಸು ಕ್ರಿಸ್ತನ ಬಗ್ಗೆ ಬಾಲ್ಯದಲ್ಲಿಯೇ ಹಾಡುಗಳನ್ನು ಬರೆದಿದ್ದೆ. ಯಾರನ್ನೂ ಬೈಯುತ್ತಿರಲಿಲ್ಲ, ಜಗಳ ಆಗುತ್ತಿರಲಿಲ್ಲ. ಯಾರಾದರೂ ನನಗೆ ತೊಂದರೆ ಕೊಟ್ಟರೆ ತಂದೆಯೇ, ಅವರನ್ನು ಕ್ಷಮಿಸು ಎಂದು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೆ!

ಇನ್ನು ಹೈಸ್ಕೂಲ್ ಮುಗಿದ ನಂತರ ನನ್ನಣ್ಣನ ಪ್ರಭಾವ ಮತ್ತು ನಾನು ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಪ್ರಭಾವ ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳು ಮೈಗೂಡಲಾರಂಭಿಸಿದವು. ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳ ಚರ್ಚೆ, ದಲಿತ ಚಳವಳಿ ಮತ್ತು ಇತರ ಚಳವಳಿಗಳ ಚರ್ಚೆ ನನ್ನನ್ನು ಅಂಬೇಡ್ಕರ್ ಚಿಂತನೆಗಳ ಗಾಢ ಪ್ರಭಾವದೆಡೆಗೆ ಕೊಂಡೊಯ್ದವು. ಈ ನಡುವೆಯೇ ಇದರ ಪರಿಣಾಮ ಸ್ವತಃ ನಮ್ಮ ಊರಲ್ಲೇ ನಾವೇ ಏರ್ಪಡಿಸಿದ್ದ ಬೌದ್ಧ ಧರ್ಮಕ್ಕೆ ಮತಾಂತರ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡೆ ಬೌದ್ಧ ಧರ್ಮೀಯನಾದೆ. ಈಗಲೂ ಬೌದ್ಧ ಧರ್ಮೀಯನಾಗಿಯೇ ಮುಂದುವರಿದಿರುವೆ.

ಅಂದಹಾಗೆ ನಾನು ಬರಹಗಳನ್ನು ಬರೆಯುವ ಕಾಲಕ್ಕೆ ನನಗೊಂದು ವೇದಿಕೆಯ ಅವಶ್ಯಕತೆ ಇತ್ತು. ಅದನ್ನು ‘ವಾರ್ತಾಭಾರತಿ’ ದಿನಪತ್ರಿಕೆ ಒದಗಿಸಿತು. ಆದರೆ ಹಿಂದೂ ಮಾಲಕರ ಯಾವುದೇ ಪತ್ರಿಕೆಗಳು ದಲಿತ ಸಮುದಾಯದ ನಮ್ಮಂತ ಲೇಖಕರಿಗೆ ಯಾಕೆ ವೇದಿಕೆಯಾಗುವುದಿಲ್ಲ? ಕೇಳಲೇಬೇಕಾದ ಪ್ರಶ್ನೆ ಇದು. ಈ ನಿಟ್ಟಿನಲ್ಲಿ ಹೇಳುವುದಾದರೆ ಇದು ನನ್ನ ಧಾರ್ಮಿಕ ಯಾನ ಅಥವಾ ಪಯಣ ಎನ್ನಬಹುದು. ಇದು ನನ್ನದೊಬ್ಬನದೇ ಅಲ್ಲ. ಪ್ರತಿಯೊಬ್ಬ ಭಾರತೀಯನದೂ ಕೂಡ ಇದೇ ಅನುಭವವಾಗಿರುತ್ತದೆ. ಹೀಗಿರುವಾಗ ಯಾರೇ ಆದರೂ ನೀನು ಇಂತಹದ್ದೆ ಧರ್ಮೀಯ ಎಂದು ಹೇಗೆ ತಾನೇ ಕಟ್ಟಿಹಾಕಲು ಸಾಧ್ಯ? ಮತ್ತೊಂದು ವಿಚಾರವೆಂದರೆ ವ್ಯಕ್ತಿಯೊಬ್ಬ ತಾನು ಯಾವುದೇ ಧರ್ಮಕ್ಕೂ ಸೇರಿಲ್ಲ ಎಂದೂ ಕೂಡ ಹೇಳಿಕೊಳ್ಳಬಹುದು ಮತ್ತು ಹಾಗೆ ಬದುಕಬಹುದು. ಈ ಪ್ರವೃತ್ತಿ ಯೂರೋಪ್‌ನಲ್ಲಿ ಈಚೆಗೆ ಟ್ರೆಂಡ್ ಆಗಿದೆ ಕೂಡ. ಚುನಾವಣೆಯಲ್ಲಿ ಹೇಗೆ NOTA (None Of The Above)  ಬಂದಿದೆಯೋ ಹಾಗೆ. ಹೀಗಿರುವಾಗ ಯಾರೇ ಆಗಲಿ ಯಾರನ್ನೇ ಆಗಲಿ ಈತ ಇಂತಹ ಧರ್ಮೀಯ ಎಂದು ಹೇಗೆ ತಾನೇ ಬ್ರಾಂಡ್ ಮಾಡಲು ಹಣೆ ಮುದ್ರೆ ಒತ್ತಲು ಸಾಧ್ಯ? ಖಂಡಿತ ಸಾಧ್ಯವಿಲ್ಲ.

ಭಾರತದ ಸಂವಿಧಾನ ಕೂಡ ಅಂತಹ ಬಲವಂತದ ಧಾರ್ಮಿಕ ಮುದ್ರೆಯೊತ್ತಲು ಅವಕಾಶ ಕೊಟ್ಟಿಲ್ಲ. ಧಾರ್ಮಿಕ ಹಕ್ಕಿನ ಮೂಲಕ ಅದನ್ನು ಸಂಬಂಧಿತ ವ್ಯಕ್ತಿಯ ಆಯ್ಕೆಗೆ ಬಿಟ್ಟಿದೆ. ಒಟ್ಟಾರೆ ಕಾನೂನುಗಳು ಕೂಡ ಹೀಗಿರುವಾಗ ಪ್ರಕೃತಿಯ ಗುಣ ಸ್ವಭಾವವೂ ಕೂಡ ಧರ್ಮ ಮತ್ತು ನಂಬಿಕೆಯನ್ನು ವ್ಯಕ್ತಿಯ ಆಯ್ಕೆಗೆ ಬಿಟ್ಟಿರುವಾಗ ಸರಕಾರವಾಗಲೀ ಬೇರೊಬ್ಬರಾಗಲೀ ಧರ್ಮದ ಆಧಾರದ ಮೇಲೆ ಯಾರಿಗಾದರೂ ಏನನ್ನಾದರೂ ಹೇಗೆ ತಾನೇ ಬಲವಂತವಾಗಿ ಹೇರಲು ಸಾಧ್ಯ? ಹಾಗೆಯೇ ಅಂತಹ ಬಲವಂತದ ಹೇರಿಕೆಯ ಹಿನ್ನೆಲೆಯಲ್ಲಿ ರೂಪಿಸಲ್ಪಡುವ ಕಾನೂನುಗಳು? ಮನುಷ್ಯ ಕಲಿಯಬೇಕಿರುವುದು ಸಾಕಷ್ಟಿದೆ. ಕಡೆಯದಾಗಿ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಇದೀಗ ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಮೈಸೂರಿನ ಬೈಲಕುಪ್ಪೆಗೆ ಭೇಟಿ ನೀಡಿದ್ದಾರೆ. ಮೊನ್ನೆ ಪತ್ರಿಕೆಯಲ್ಲಿ ಆ ಸುದ್ದಿ ಓದುತ್ತಲೇ ದಲೈಲಾಮಾರನ್ನು ಭೇಟಿಮಾಡಬೇಕು ಎಂದುಕೊಂಡೆ. ಅದೇ ಸಮಯದಲ್ಲಿ ಅತ್ತ ಊರಿನಿಂದ ಕರೆ ಮಾಡಿದ ಅವ್ವ ‘‘ರಘು, ಇದ್ಯಾಕಪ್ಪಒಂದು ಫೋನ್ ಮಾಡಬಾರ್ದಾ? ಚೆನ್ನಾಗಿದೀಯ? ಊರಿಗೆ ಬರಲ್ವ? ಕ್ರಿಸ್ಮಸ್ ಹಬ್ಬಕ್ಕೆ ಬಾ. ಮಟನ್ ತೆಗೆದು ಇಟ್ಟಿರುತ್ತೀನಿ. ಬಂದು ಊಟ ಮಾಡಿಕೊಂಡು ಹೋಗು....’’
ಅವ್ವ ಧರ್ಮನಿರಪೇಕ್ಷತೆಯ ಮೂರ್ತ ರೂಪದಂತೆ ಕಂಡಳು.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News