ಕ್ವಾರಂಟೈನ್‌ನಲ್ಲಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಸುಖಪ್ರಸವ
ಹೊಸದಿಲ್ಲಿ, ಎ.1: ಕುಟುಂಬ ಸದಸ್ಯರೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಿ ಗಂಡುಮಗುವಿಗೆ ಜನ್ಮ ನೀಡಿದ ಘಟನೆ ಭಾರತ- ಪಾಕಿಸ್ತಾನ ಗಡಿಯ ವಾಸ್ತವ ನಿಯಂತ್ರಣ ರೇಖೆಯ ಬಳಿಯ ಕಾರ್ಗಿಲ್‌ನಿಂದ ವರದಿಯಾಗಿದೆ. ಆದರೆ ಪತಿ ಸೇರಿದಂತೆ ಕುಟುಂಬ ಸದಸ್ಯರು ಕ್ವಾರಂಟೈನ್‌ನಲ್ಲಿರುವುದರಿಂದ ಕುಟುಂಬ ಹೊಸ ಸದಸ್ಯನನ್ನು ಸ್ವಾಗತಿಸುವ ಸ್ಥಿತಿಯಲ್ಲಿಲ್ಲ. ತಂದೆ ಇನ್ನೂ ಮಗುವನ್ನು ನೋಡಿಲ್ಲ!
ಝಹ್ರಾ ಬಾನು ಮಾರ್ಚ್ 28ರಂದು ಗಂಡುಮಗುವಿಗೆ ಜನ್ಮ ನೀಡಿದ್ದು, ಇದು ಭಾರತದ ಮೊಟ್ಟಮೊದಲ ಕ್ವಾರಂಟೈನ್ ಹೆರಿಗೆ ಎನಿಸಿದೆ. ನವಜಾತ ಶಿಶು 3.5 ಕೆ.ಜಿ ತೂಕ ಇದ್ದು, ಲಸಿಕೆ ಹಾಕಲಾಗಿದೆ ಎಂದು ಮಹಿಳೆಗೆ ಹೆರಿಗೆ ಮಾಡಿಸಿದ ಪ್ರಸೂತಿ ತಜ್ಞೆ ಝೊಹ್ರಾ ಬಾನು ಹೇಳಿದ್ದಾರೆ.
ಪ್ರಸವ ದಿನದಿಂದ ಎರಡು ದಿನ ಮೊದಲು ಝಹ್ರಾ ಬಾನು ಅವರನ್ನು ಆ್ಯಂಬುಲೆನ್ಸ್ ಮೂಲಕ ಕುರ್ಬತಂಗ್ ಕ್ವಾರಂಟೈನ್ ಶಿಬಿರದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೊರರೋಗಿ ವಿಭಾಗಕ್ಕೆ ಮಹಿಳೆಯನ್ನು ತೀವ್ರ ಕಾಳಜಿಯಿಂದ ದಾಖಲಿಸಿದ್ದೆವು. ಇತರ ರೋಗಿಗಳ ಜತೆ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಿದ್ದೆವು ಎಂದು ವೈದ್ಯಕೀಯ ಅಧೀಕ್ಷಕ ಡಾ.ಕಚೂ ಸಿಕಂದರ್ ಅಲಿಖಾನ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 353 ಮಂದಿ ಕ್ವಾರಂಟೈನ್ ವ್ಯವಸ್ಥೆಯಲ್ಲಿದ್ದಾರೆ ಎಂದು ಕಾರ್ಗಿಲ್ ಜಿಲ್ಲಾಧಿಕಾರಿ ಬಶೀರ್ ಖಾನ್ ವಿವರಿಸಿದ್ದಾರೆ.
ಝಹ್ರಾ ಅವರನ್ನು ಎರಡು ಬಾರಿ ತಪಾಸಣೆ ಮಾಡಿದಾಗಲೂ ಋಣಾತ್ಮಕ ಫಲಿತಾಂಶ ಬಂದಿದೆ. ಆದರೂ ಅವರ ಆರೈಕೆ ಸಿಬ್ಬಂದಿಗೆ ಹೆಚ್ಚುವರಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಂಗಳವಾರ ಅವರು 14 ದಿನಗಳ ಕ್ವಾರಂಟೈನ್ ಮುಗಿಸಿದ್ದು, ವೈದ್ಯರು ಅವರನ್ನು ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.