ಭಾರತಕ್ಕೆ ವೆಂಟಿಲೇಟರ್‌ಗಳ ಪೂರೈಕೆಗೆ ಸಿದ್ಧ: ಚೀನಾ

Update: 2020-04-02 17:16 GMT

ಹೊಸದಿಲ್ಲಿ, ಮಾ.21: ಆಂತರಿಕವಾಗಿಯೂ ಮತ್ತು ಭಾರತ ಸೇರಿದಂತೆ ಸಾಗರೋತ್ತರ ರಾಷ್ಟ್ರಗಳಲ್ಲಿ ಕೋವಿಡ್-19 ರೋಗಿಗಳಿಗೆ ವೆಂಟಿಲೇಟರ್‌ಗಳ ಪೂರೈಕೆಗಾಗಿ ತನಗೆ ಅಗಾಧ ಬೇಡಿಕೆಯಿದ್ದು, ಅವುಗಳನ್ನು ಪೂರೈಸಲು ತನ್ನ ತಯಾರಕರು ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಇತರ ದೇಶಗಳ ನೆರವಿಗೆ ಧಾವಿಸಲು ತನಗೆ ತಕ್ಷಣವೇ ತನಗೆ ಸಾಧ್ಯವಾಗದು ಎಂದು ಅದು ಹೇಳಿದೆ.

ತಾನು ಉತ್ಪಾದಿಸುವ ವೆಂಟಿಲೇಟರ್‌ಗಳಿಗೆ ಅಗಾಧವಾದ ಬೇಡಿಕೆಯಿರುವ ಜೊತೆಗೆ, ತನ್ನ ದೇಶದಲ್ಲಿಯೂ ಹೊಸದಾಗಿ ಕೊರೋನ ವೈರಸ್ ಸೋಂಕು ಹರಡದಂತೆ ತಡೆಗಟ್ಟುವ ಒತ್ತಡನ್ನು ಕೂಡಾ ಎದುರಿಸುತ್ತಿರುವುದಾಗಿ ಚೀನಾ ಸರಕಾರ ತಿಳಿಸಿದೆ.

ಆದಾಗ್ಯೂ ತನ್ನ ಎಲ್ಲಾ ಸಾಮರ್ಥ್ಯವನ್ನು ಬಳಸಿಕೊಂಡು ಈ ಮಾರಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದ್ದಾರೆ.

ಬೀಜಿಂಗ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ವೆಂಟಿಲೇಟರ್ ಹಾಗೂ ಮತ್ತಿತರ ಉಪಕರಣಗಳನ್ನು ಉತ್ಪಾದಿಸಲು ಚೀನಿ ತಯಾರಕರು ಹಗಳಿರುಳು ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಾವು ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಇವುಗಳನ್ನು ಒದಗಿಸಬಲ್ಲೆವು’’ ಎಂದವರು ಹೇಳಿದ್ದಾರೆ.

ಆದರೆ ಈ ಸೋಂಕು ರೋಗ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವುದನ್ನು ಗಮನಿಸಿದಲ್ಲಿ ಅಷ್ಟೊಂದು ಬೃಹತ್ ಪ್ರಮಾಣದಲ್ಲಿ ವೆಂಟಿಲೇಟರ್‌ಗಳನ್ನು ಉತ್ಪಾದಿಸುವುದು ಸುಲಭವಲ್ಲ. ಹಾಗೆಯೆ ಎಲ್ಲಾ ಬೇಡಿಕೆಗಳನ್ನು ತಕ್ಷಣವೇ ಪೂರೈಸುವುದು ಕೂಡಾ ಅಸಾಧ್ಯವೆಂದು ವಕ್ತಾರರು ಹೇಳಿದರು.

‘‘ಜಾಗತಿಕ ಪೂರೈಕೆ ಸರಪಣಿಯು ಮುಕ್ತ,ಸ್ಥಿರ ಹಾಗೂ ಸುಭದ್ರವಾಗಿರುವದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಎಲ್ಲಾ ದೇಶಗಳು ಜೊತೆಯಾಗಿ ಶ್ರಮಿಸಲಿವೆಯೆಂದು ನಾವು ಆಶಿಸುತ್ತೇವೆ. ಚುಟುಕಾಗಿ ಹೇಳುವುದಾದರೆ, ನಾವು ನಮಗೆ ಸಾಧ್ಯವಿರುವಷ್ಟು ಸಾಮರ್ಥ್ಯದೊಂದಿಗೆ ಭಾರತಕ್ಕೆ ನೆರವು ಹಾಗೂ ಬೆಂಬಲ ಮುಂದುವರಿಸಲು ಸಿದ್ಧರಿದ್ದೇವೆ ’’ ಎಂದು ಹುವಾ ಚುನಿಂಗ್ ತಿಳಿಸಿದ್ದಾರೆ.

ಕೊರೋನ ವೈರಸ್ ರೋಗಿಗಳು ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುವುದರಿಂದ ಅವರನ್ನು ವೆಂಟಿಲೇಟರ್ ವ್ಯವಸ್ಥೆಯಲ್ಲಿರಿಸಬೇಕಾಗುತ್ತದೆ. ಭಾರತದಲ್ಲಿ ಈಗ ಕೇವಲ 40 ಸಾವಿರ ವೆಂಟಿಲೇಟರ್‌ಗಳು ಮಾತ್ರವೇ ಕಾರ್ಯನಿರ್ವಹಿಸುತ್ತವೆ. ಆದರೆ ಒಂದು ವೇಳೆ ಕೊರೋನ ವೈರಸ್ ಪೀಡಿತರ ಸಂಖ್ಯೆಯಲ್ಲಿ ಅಗಾಧ ಏರಿಕೆಯಾದಲ್ಲಿ , ದೇಶದಲ್ಲಿರುವ ವೆಂಟಿಲೇಟರ್‌ಗಳು ಎಷ್ಟು ಮಾತ್ರಕ್ಕೂ ಸಾಕಾಲಾಗರದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಈವರೆಗೆ 1195 ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಕನಿಷ್ಠ 50 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News