ಅಸ್ಸಾಂ: ನರ್ಸ್‌ಗಳಿಗೆ ‘ಕೊರೋನ ವೈರಸ್’ ಗಳೆಂದು ನಿಂದನೆ
ಗುವಾಹಟಿ, ಎ.6: ರಸ್ತೆಯಲ್ಲಿ ಹೋಗುತ್ತಿರುವಾಗ ಜನರು ತಮ್ಮನ್ನು 'ಕೊರೋನ ವೈರಸ್' ಗಳೆಂದು ನಿಂದಿಸುತ್ತಿದ್ದಾರೆ ಎಂದು ಅಸ್ಸಾಂನ ಖಾಸಗಿ ಆಸ್ಪತ್ರೆಯ ನರ್ಸ್‌ಗಳು ದೂರು ನೀಡಿದ್ದಾರೆ.
ಎಪ್ರಿಲ್ 3ರ ಸಂಜೆ ತಾನು ಹಾಗೂ ಇತರ ಸಹೋದ್ಯೋಗಿಗಳು ಕರ್ತವ್ಯ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಗುವಾಹಟಿಯ ಟೆಟೇಲಿಯಾ ಪ್ರದೇಶದಲ್ಲಿ ಮನೆಯ ಟೆರೇಸ್‌ನಲ್ಲಿದ್ದ ಕೆಲವರು ತಮ್ಮನ್ನು ನೋಡಿ ‘ಕೊರೋನ ವೈರಸ್, ಕೊರೋನ ವೈರಸ್’ ಎಂದು ಹೀಯಾಳಿಸಿರುವುದಾಗಿ ಮಣಿಪುರ ಮೂಲದ ನರ್ಸ್ ವಿದ್ಯಾವತಿ ದೇವಿ ದೂರಿದ್ದಾರೆ.
ಈ ಹಿಂದೆಯೂ ತಮ್ಮನ್ನು ನೋಡಿ ಕೆಲವರು ಇದೇ ರೀತಿ ತಮಾಷೆ ಮಾಡಿದ್ದರು. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಅವರು ಪೊಲೀಸರನ್ನು ಸಂಪರ್ಕಿಸಿಲ್ಲ ಎಂದವರು ಹೇಳಿದ್ದಾರೆ. ಈ ಹೀಯಾಳಿಕೆಯ ಹಿಂದೆ ಜನಾಂಗೀಯ ನಿಂದನೆಯ ಭಾವನೆಯಿದೆ.
ಈಶಾನ್ಯ ರಾಜ್ಯಗಳೆಂದರೆ ಚೀನಾ ಎಂಬ ಭಾವನೆ ದಿಲ್ಲಿಯ ಕೆಲವರಲ್ಲಿದೆ. ಆದರೆ ಅಸ್ಸಾಂನವರೂ ಇದೇ ಭಾವನೆ ಬೆಳೆಸಿಕೊಂಡಿರುವುದು ವಿಪರ್ಯಾಸಕರ. ಈಶಾನ್ಯ ರಾಜ್ಯಗಳ ಹಲವು ನರ್ಸ್‌ಗಳಿಗೂ ಈ ಅನುಭವ ಆಗಿದೆ. ಅವರು ಬಾಡಿಗೆಗೆ ಇರುವ ಮನೆಯ ಮಾಲಿಕರು ನಿಂದನೆ ಮಾಡಿ ಕಿರುಕುಳ ನೀಡುತ್ತಿರುವುದಾಗಿ ದೂರಿದ್ದಾರೆ ಎಂದು ವಿದ್ಯಾವತಿ ದೇವಿ ಹೇಳಿದ್ದಾರೆ. ಕೊರೋನ ವೈರಸ್‌ನ ಮೂಲ ಚೀನಾ ಆಗಿರುವುದರಿಂದ, ಏಶ್ಯನ್ನರು ಕೊರೋನ ವೈರಸ್‌ನ ಜನಕರೆಂದು ವಿಶ್ವದ ಹಲವೆಡೆ ಏಶ್ಯನ್ನರ ವಿರುದ್ಧ ಜನಾಂಗೀಯ ನಿಂದನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಅಲ್ಲದೆ ಭಾರತದಲ್ಲಿ ಈಶಾನ್ಯ ರಾಜ್ಯಗಳ ಪ್ರಜೆಗಳೂ ಕೊರೋನ ವೈರಸ್‌ಗೆ ಸಂಬಂಧಿಸಿದ ಜನಾಂಗಭೇದ ನಿಂದನೆಗೆ ಒಳಗಾಗಿದ್ದಾರೆ. ವಾಯವ್ಯ ದಿಲ್ಲಿಯ ಮುಖರ್ಜಿ ನಗರ ಪ್ರದೇಶದಲ್ಲಿ ಮಣಿಪುರದ 25 ವರ್ಷದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬ, ಕೊರೋನ ಎಂದು ಹೀಯಾಳಿಸಿ ಆಕೆಯ ಮೇಲೆ ಉಗುಳಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.