ಕೇರಳ ಪ್ರವಾಹದ ವೇಳೆ ತಿರಸ್ಕರಿಸಿದ್ದ ವಿದೇಶಿ ನೆರವನ್ನು ಈಗ ಯಾಚಿಸುತ್ತಿರುವ ಕೇಂದ್ರ ಸರಕಾರ

Update: 2020-04-07 16:37 GMT
ಫೈಲ್ ಚಿತ್ರ

ಹೊಸದಿಲ್ಲಿ,ಎ.7: ತಿಂಗಳುಗಳ ಹಿಂದೆ ನೆರೆ ವಿಕೋಪದಿಂದ ಕಂಗೆಟ್ಟಿದ್ದ ಕೇರಳಕ್ಕೆ ವಿದೇಶಿ ನೆರವು ಸ್ವೀಕರಿಸಲು ಅನುಮತಿ ನಿರಾಕರಿಸಿದ್ದ ಕೇಂದ್ರವು ಈಗ ಕೊರೋನ ವೈರಸ್ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ನಿರ್ಧರಿಸಿ ರುವುದು ಕೇರಳದ ಟ್ರೋಲಿಗರ ಪಿತ್ತವನ್ನು ಕೆರಳಿಸಿದೆ. ಸರಕಾರದ ವಿರುದ್ಧ ಮುಗಿಬಿದ್ದಿರುವ ಈ ಟ್ರೋಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018,ಆಗಸ್ಟ್‌ನಲ್ಲಿ ಕೇಂದ್ರವು 2016ರಲ್ಲಿ ತಿದ್ದುಪಡಿಗೊಂಡಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಯೋಜನೆಯನ್ನು ಉಲ್ಲೇಖಿಸಿ ಎಡರಂಗ ಆಡಳಿತದ ಕೇರಳಕ್ಕೆ ಎಲ್ಲ ವಿದೇಶಿ ನೆರವುಗಳನ್ನು ತಿರಸ್ಕರಿಸಿತ್ತು. ಇದರಿಂದಾಗಿ ನೆರೆ ನಷ್ಟದ ಹೊರೆಯನ್ನು ಕೇರಳ ಸರಕಾರವೇ ಭರಿಸುವಂತಾಗಿತ್ತು. ಅಲ್ಪ ನೆರವು ನೀಡಿದ್ದ ಕೇಂದ್ರವು ತುರ್ತು ಸಂದರ್ಭದಲ್ಲಿ ತಾನು ಒದಗಿಸಿದ್ದ ಅಕ್ಕಿಗೆ ಮತ್ತು ವಾಯುಪಡೆ ಹೆಲಿಕಾಪ್ಟರ್‌ಗಳ ಬಳಕೆಗೆ ಶುಲ್ಕವನ್ನು ವಿಧಿಸಿತ್ತು.

 ‘ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ನಿರ್ಧಾರವು ಕೇರಳಕ್ಕೆ ಮಾಡಿದ್ದ ಅನ್ಯಾಯವನ್ನು ಪ್ರತಿಬಿಂಬಿಸುತ್ತಿದೆ ಎನ್ನುವುದು ಈಗಿನ ಸಾರ್ವತ್ರಿಕ ಭಾವನೆಯಾಗಿದೆ. ನಮಗೆ ನಿಜವಾಗಲೂ ನೆರವಿನ ಅಗತ್ಯವಿದ್ದಾಗ ಕೇರಳಕ್ಕೆ ಎಸಗಿದ್ದ ಅನ್ಯಾಯವನ್ನು ಇದು ನೆನಪಿಸುತ್ತಿದೆ. ಹಲವು ರಾಷ್ಟ್ರಗಳಿಂದ ಕೊಡುಗೆಗಳನ್ನು ಸ್ವೀಕರಿಸಲೂ ಕೇಂದ್ರವು ನಮಗೆ ಅವಕಾಶ ನೀಡಿರಲಿಲ್ಲ ’ಎಂದು ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ರಾಜ್ಯ ವಿತ್ತಸಚಿವ ಥಾಮಸ್ ಇಸಾಕ್ ಹೇಳಿದ್ದರು.

ದೇಣಿಗೆಗಳನ್ನು ಸ್ವೀಕರಿಸಲು ಪ್ರಧಾನಿಗಳ ವಿಪತ್ತು ಪರಿಹಾರ ನಿಧಿ ಇರುವಾಗ ಪಿಎಂ-ಕೇರ್ಸ್‌ನ್ನು ಸ್ಥಾಪಿಸಿದ್ದೇಕೆ ಎನ್ನುವುದು ಈಗಿನ ದೊಡ್ಡ ಪ್ರಶ್ನೆಯಾಗಿದೆ. ಸರಕಾರವು ಇದಕ್ಕೆ ವಿವರಣೆಯನ್ನು ನೀಡಬೇಕಾಗಿದೆ ಎಂದೂ ಅವರು ಬೆಟ್ಟು ಮಾಡಿದ್ದರು.

ಕೃಪೆ: telegraphindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News