ಮನಿಲಾಂಡರಿಂಗ್ ಆರೋಪ: ತಬ್ಲೀಗಿ ಜಮಾಅತ್ ವರಿಷ್ಠ ಸಾದ್ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ದಿಲ್ಲಿಯಲ್ಲಿ ತಬ್ಲೀಗಿ ಜಮಾಅತ್ ಸಮಾವೇಶವನ್ನು ಆಯೋಜಿಸಿದ್ದ ನಿಝಾಮುದ್ದೀನ್ ಮರ್ಕಝ್ ನ ವರಿಷ್ಠ ಮೌಲಾನಾ ಮುಹಮ್ಮದ್ ಸಾದ್ ಖಂಡಾಲ್ವಿ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ಸಕ್ರಮಗೊಳಿಸಿದ(ಮನಿ ಲಾಂಡರಿಂಗ್) ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿಲ್ಲಿ ಪೊಲೀಸರು ದಾಖಲಿಸಿದ ಪ್ರಕರಣವೊಂದನ್ನು ಆಧರಿಸಿ ಜಾರಿ ನಿರ್ದೇಶನಾಲವು ಮೌಲಾನಾ ಸಾದ್ ಹಾಗೂ ತಬ್ಲಿಗಿ ಜಮಾಅತ್ ಜೊತೆ ನಂಟು ಹೊಂದಿರುವ ಟ್ರಸ್ಟ್ ಗಳ ವಿರುದ್ಧ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಅನ್ನು ಸಲ್ಲಿಸಿದೆ.
ಈ ಮಧ್ಯೆ ತಬ್ಲಿಗಿ ಜಮಾಅತ್ ನ ವಕ್ತಾರ ಮುಜೀಬುರ್ರಹ್ಮಾನ್ ಅವರು ಹೇಳಿಕೆಯೊಂದು ನೀಡಿ, ಸಾದ್ ವಿರುದ್ಧ ಹೊಸ ಆರೋಪಗಳನ್ನು ಹೊರಿಸಲಾಗಿರುವ ಬಗ್ಗೆ ಈ ತನಕ ತಮಗೆ ಯಾವುದೇ ದೃಢೀಕೃತ ವರದಿಗಳು ಬಾರದೆ ಇರುವುದರಿಂದ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಾದ್ ಖಂಡಾಲ್ವಿ ವಿರುದ್ದ ದಿಲ್ಲಿ ಪೊಲೀಸರು ‘ಕೊಲೆಯೆಂದು ಪರಿಗಣಿಸಲಾಗದ ದಂಡನೀಯವಾದ ನರಹತ್ಯೆ’ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ತಬ್ಲಿಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಿಗೆ ಕೊರೋನ ಸೋಂಕು ಹರಡಿದ ಪ್ರಕರಣಗಳಿಗೆ ಸಂಬಂಧಿಸಿ ಮೌಲಾನ ಮುಹಮ್ಮದ್ ಸಾದ್ ವಿರುದ್ಧ ಭಾರತೀಯ ದಂಡಸಂಹಿತೆಯ 304ನೇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಸಾದ್ ಹಾಗೂ ಇತರ ಆರು ಮಂದಿಯ ವಿರುದ್ಧ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ರೀತಿಯ ಧಾರ್ಮಿಕ ಹಾಗೂ ಬೃಹತ್ ಸಮಾವೇಶಗಳನ್ನು ನಿಷೇಧಿಸುವ ಸರಕಾರದ ಆದೇಶಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕೂಡಾ ಮಾರ್ಚ್ 31ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.