ಇಂತಹ ಸಮಯದಲ್ಲಿ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ನಿಲ್ಲಿಸುವ ಅಗತ್ಯವಿರಲಿಲ್ಲ: ಮನಮೋಹನ್ ಸಿಂಗ್

Update: 2020-04-25 17:08 GMT

ಹೊಸದಿಲ್ಲಿ,ಎ.25: ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ಹಣಕಾಸನ್ನು ಕ್ರೋಢೀಕರಿಸಲು ಸರಕಾರಿ ನೌಕರರು, ಪಿಂಚಣಿದಾರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳ ತುಟ್ಟ್ಟಿಭತ್ಯೆ ಹೆಚ್ಚಳ ಪಾವತಿಯನ್ನು ತಡೆಹಿಡಿಯುವ ಕೇಂದ್ರ ಸರಕಾರದ ನಿರ್ಧಾರವನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಇತರ ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ.

 ಕಾಂಗ್ರೆಸ್‌ನ ಸಮಾಲೋಚಕ ತಂಡವು ಶನಿವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ಸೇರಿದ್ದು,ಕೊರೋನ ಬಿಕ್ಕಟ್ಟಿನ ಈ ಸಂದರ್ಭಲ್ಲಿ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಪಾವತಿಯನ್ನು ಸ್ತಂಭನಗೊಳಿಸಿದ್ದಕ್ಕಾಗಿ ಮತ್ತು ದಿಲ್ಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿಯನ್ನು ಮಂದುವರಿಸಿರುವುದಕ್ಕಾಗಿ ಸರಕಾರವನ್ನು ಪಕ್ಷವು ಖಂಡಿಸಿದೆ.

ಕಳೆದ ಮಾರ್ಚ್‌ನಲ್ಲಿ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಏರಿಕೆ ಮಾಡಲಾಗಿದ್ದ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಪಾವತಿಯನ್ನು ಮುಂದಿನ ವರ್ಷದ ಜುಲೈವರೆಗೆ ತಡೆಹಿಡಿದಿರುವುದಾಗಿ ವಿತ್ತ ಸಚಿವಾಲಯವು ಗುರುವಾರ ಪ್ರಕಟಿಸಿತ್ತು.

‘ನಾವು ಸರಕಾರಿ ನೌಕರರ ಪರ ನಿಲ್ಲಬೇಕಿದೆ. ಈ ಹಂತದಲ್ಲಿ ಸರಕಾರಿ ನೌಕರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಮೇಲೆ ಕಷ್ಟಗಳನ್ನು ಹೇರುವ ಅಗತ್ಯವಿಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ ’ಎಂದು ಮನಮೋಹನ ಸಿಂಗ್ ಹೇಳಿದರು.

 ಸರಕಾರದ ಕ್ರಮವು ಅಮಾನವೀಯ ಮತ್ತು ಸಂವೇದನಾಹೀನ ವಾಗಿದೆ ಎಂದು ಶುಕ್ರವಾರ ಬಣ್ಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸರಕಾರವು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುತ್ತಿಲ್ಲ. ಇದೇ ವೇಳೆ ನೀವು ಸೆಂಟ್ರಲ್ ವಿಸ್ಟಾ ನಿರ್ಮಿಸುತ್ತೀದ್ದಿರಿ. ಆದರೆ ನೀವು ಮಧ್ಯಮ ವರ್ಗದವರಿಂದ ಹಣವನ್ನು ತೆಗೆದುಕೊಂಡು ಅದನ್ನು ಬಡವರಿಗೆ ನೀಡದೆ ನಿಮ್ಮ ಸೆಂಟ್ರಲ್ ವಿಸ್ಟಾ ಯೋಜನೆಗೆ ವ್ಯಯಿಸುತ್ತಿದ್ದೀರಿ ಎಂದು ಹೇಳಿದರು.

ಬುಲೆಟ್ ರೈಲು ಯೋಜನೆ,ಸೆಂಟ್ರಲ್ ವಿಸ್ಟಾ ಯೋಜನೆಗಳಿಗೆ ವೆಚ್ಚವನ್ನು ಸರಕಾರವು ನಿಲ್ಲಿಸಿಲ್ಲ. ನೌಕರರ ತುಟ್ಟಿಭತ್ಯೆಗೆ ಕೈ ಹಚ್ಚುವ ಮುನ್ನ ಈ ಯೋಜನೆಗಳನ್ನು ಅದು ನಿಲ್ಲಿಸಬೇಕಿತ್ತು ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದರೆ,ಅನಗತ್ಯ ಯೋಜನೆಗಳಿಗೆ ಹಣವನ್ನು ವ್ಯಯಿಸುವ ಬದಲು ಅದನ್ನು ವಲಸೆ ಕಾರ್ಮಿಕರಿಗೆ ವರ್ಗಾಯಿಸಬಹುದಿತ್ತು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸಿಂಗ್ ಸುರ್ಜೆವಾಲಾ ಹೇಳಿದರು.

20,000 ಕೋ.ರೂ.ಗಳ ಸೆಂಟ್ರಲ್ ವಿಸ್ಟಾ ಯೋಜನೆಯು ರಾಷ್ಟ್ರಪತಿ ಭವನದ ಪ್ರವೇಶದ್ವಾರಗಳಿಂದ ಇಂಡಿಯಾ ಗೇಟ್‌ವರೆಗಿನ ನಾಲ್ಕು ಚ.ಕಿ.ಮೀ.ವಿಸ್ತೀರ್ಣದ ಪ್ರದೇಶದಲ್ಲಿಯ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನೆಲಸಮಗೊಳಿಸಿ ಪುನರ್‌ನಿರ್ಮಿಸುವ ಉದ್ದೇಶವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News