ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ ಏರಿಕೆ 0 ಶೇಕಡ ಎಂದ ‘ಮೂಡೀಸ್’
Update: 2020-05-08 10:59 GMT
ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 0ರಷ್ಟು ಏರಿಕೆ ಕಾಣಬಹುದು ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಹೇಳಿದೆ. ಕೋವಿಡ್-19 ಸಮಸ್ಯೆಯ ಹಿನ್ನೆಲೆಯಲ್ಲಿ ದೇಶದ ಪ್ರಗತಿ ಪ್ರಮಾಣ ಕುಂಠಿತವಾಗುವ ಸ್ಪಷ್ಟ ಲಕ್ಷಣಗಳು ಕಂಡು ಬರುತ್ತಿರುವ ಬೆನ್ನಲ್ಲೇ ಮೂಡೀಸ್ ಹೇಳಿಕೆ ಬಂದಿದೆ.
ಆರ್ಥಿಕ ವರ್ಷ 2020-21ರಲ್ಲಿ ಪ್ರಗತಿ ಪ್ರಮಾಣದಲ್ಲಿ ಯಾವುದೇ ಏರಿಕೆಯಿರದು. ಆದರೆ ಆರ್ಥಿಕ ವರ್ಷ 2022ರಲ್ಲಿ ಜಿಡಿಪಿ ಮತ್ತೆ ಶೇ 6.6ರಷ್ಟಾಗಬಹುದು. ಆರ್ಥಿಕ ವರ್ಷ 2021ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ 5.5ರಷ್ಟಾಗಲಿದ್ದು ಈ ನಿಟ್ಟಿನಲ್ಲಿ ಬಜೆಟಿನಲ್ಲಿ ಮಾಡಲಾದ ಅಂದಾಜು ಶೇ 3.5 ಆಗಿತ್ತು.
ಭಾರತದ ಸಾವರಿನ್ ರೇಟಿಂಗ್ `ಬಿಎಎ2 ಅನ್ನು `ಸ್ಥಿರ' ದಿಂದ ನೆಗೆಟಿವ್‍ಗೆ ಮೂಡೀಸ್ ಕಳೆದ ನವೆಂಬರ್ ತಿಂಗಳಿನಲ್ಲಿ ವರ್ಗಾಯಿಸಿತ್ತಲ್ಲದೆ ದೇಶದ ಸಾಲದ ಪ್ರಮಾಣವನ್ನು ತಾನು ಸೂಕ್ಷ್ಮವಾಗಿ ಅವಲೋಕಿಸುವುದಾಗಿಯೂ ತಿಳಿಸಿತ್ತು.