ವಿಶಾಖಪಟ್ಟಣ ಅನಿಲ ದುರಂತ: ಎಲ್‌ಜಿ ಪಾಲಿಮರ್ಸ್ ಇಂಡಿಯಾಕ್ಕೆ 50 ಕೋ.ರೂ.ದಂಡ ವಿಧಿಸಿದ ಎನ್‌ಜಿಟಿ
ಹೊಸದಿಲ್ಲಿ, ಮೇ 8: ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಎಲ್‌ಜಿ ಪಾಲಿಮರ್ಸ್ ಇಂಡಿಯಾಕ್ಕೆ 50 ಕೋ.ರೂ.ಗಳ ಆರಂಭಿಕ ದಂಡವನ್ನು ವಿಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು ಕಂಪನಿಯ ಜೊತೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ,ಆಂಧ್ರಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ವಿಶಾಖಪಟ್ಟಣ ಜಿಲ್ಲಾಧಿಕಾರಿಗೆ ನೋಟಿಸ್‌ಗಳನ್ನು ಹೊರಡಿಸಿದ್ದು,ಮುಂದಿನ ವಿಚಾರಣಾ ದಿನಾಂಕವಾದ ಮೇ 18ರೊಳಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ.
ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ತಲಾ 5,000 ಟನ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳಲ್ಲಿದ್ದ ಸೈರಿನ್ ಅನಿಲ ಸೋರಿಕೆಗೊಂಡು 11 ಜನರು ಮೃತಪಟ್ಟು,ಸಾವಿರಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದರು.
ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ವಿಷಯವನ್ನು ಕೈಗೆತ್ತಿಕೊಂಡಿರುವ ಎನ್‌ಜಿಟಿ ಅಧ್ಯಕ್ಷ ಆದರ್ಶ ಕುಮಾರ ಗೋಯೆಲ್ ನೇತೃತ್ವದ ಪೀಠವು ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದೆ.
ಆಂಧ್ರಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾ.ಬಿ.ಶೇಷಶಯನ ರೆಡ್ಡಿ, ಆಂಧ್ರ ವಿವಿಯ ಮಾಜಿ ಕುಲಪತಿ ವಿ.ರಾಮಚಂದ್ರ ಮೂರ್ತಿ,ಆಂಧ್ರ ವಿವಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಪುಲಿಪಾಟಿ ಕಿಂಗ್, ಸಿಪಿಸಿಬಿಯ ಸದಸ್ಯ ಕಾರ್ಯದರ್ಶಿ,ಸಿಎಸ್‌ಐಆರ್-ಐಐಸಿಟಿಯ ನಿರ್ದೇಶಕ ಸಮಿತಿಯ ಸದಸ್ಯರಾಗಿದ್ದಾರೆ. ಮೇ 18ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಎನ್‌ಜಿಟಿ ಸಮಿತಿಗೆ ಸೂಚಿಸಿದೆ.
ಮೇಲ್ನೋಟಕ್ಕೆ ಗೋಚರಿಸಿರುವ ಜೀವಹಾನಿ,ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಆಗಿರುವ ಹಾನಿಯನ್ನು ಪರಿಗಣಿಸಿ ಆರಂಭಿಕ ದಂಡವಾಗಿ 50 ಕೋ.ರೂ.ಗಳನ್ನು ವಿಶಾಖ ಪಟ್ಟಣ ಜಿಲ್ಲಾಧಿಕಾರಿಗಳ ಬಳಿ ಠೇವಣಿಯಿರಿಸುವಂತೆ ಎನ್‌ಜಿಟಿಯು ಎಲ್‌ಜಿ ಪಾಲಿಮರ್ಸ್ ಇಂಡಿಯಾಕ್ಕೆ ಆದೇಶಿಸಿದೆ.