ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಬಂಧನಕ್ಕೆ ತಡೆ ಹೇರಿದ ಹೈಕೋರ್ಟ್
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ದಿಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಅವರ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 22ರಂದು ನಡೆಯಲಿದೆ.
ತಮ್ಮ ವಿರುದ್ಧ ದುರುದ್ದೇಶಪೂರಿತ ಆರೋಪ ಹೊರಿಸಲಾಗಿದೆ ಹಾಗೂ ಮಾರ್ಚ್ ತಿಂಗಳಿನಿಂದ ಹಲವರು ದ್ವೇಷದ ಹೇಳಿಕೆಗಳನ್ನು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಖಾನ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅಪೀಲಿನಲ್ಲಿ ಹೇಳಿದ್ದರು
ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಮತೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಭಾರತೀಯ ಮುಸ್ಲಿಮರ ಪರ' ನಿಂತಿದ್ದಕ್ಕಾಗಿ ಕುವೈತ್ ಗೆ ಧನ್ಯವಾದ ತಿಳಿಸಿ ಎಪ್ರಿಲ್ 28ರಂದು ಖಾನ್ ಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ ಅವರು ಝಕೀರ್ ನಾಯ್ಕ್ ರನ್ನು ಹೊಗಳಿದ್ದರಲ್ಲದೆ ಅವರು ‘ಅರಬ್ ಮತ್ತು ಮುಸ್ಲಿಂ ಜಗತ್ತನಲ್ಲಿ ಗೌರವಾನ್ವಿತ ಮನೆಮಾತಾಗಿರುವ ಹೆಸರು’ ಎಂದಿದ್ದರು.