ಅಂಫಾನ್ ಅಬ್ಬರಕ್ಕೆ ಒಡಿಶಾ, ಬಂಗಾಳ ತಲ್ಲಣ; 12 ಮಂದಿ ಸಾವು

Update: 2020-05-21 03:41 GMT

ಭುವನೇಶ್ವರ/ ಕೊಲ್ಕತ್ತಾ, ಮೇ 21: ಬಂಗಾಳ ಕೊಲ್ಲಿಯಿಂದ ಸುಮಾರು 185 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲ್ಲಣ ಸೃಷ್ಟಿಸಿದ್ದು, ಎರಡು ರಾಜ್ಯಗಳ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಆರೂವರೆ ಗಂಟೆಯ ರುದ್ರನರ್ತನಕ್ಕೆ 10-12 ಮಂದಿ ಜೀವ ಕಳೆದುಕೊಂಡಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಬೆಂಕಿ ಕಡ್ಡಿಯಂತೆ ಬುಡಮೇಲಾಗಿವೆ. ದಕ್ಷಿಣ ಬಂಗಾಳ ಬಹುತೇಕ ಧ್ವಂಸವಾಗಿದೆ.

ಒಡಿಶಾ ಭಾರಿ ಅನಾಹುತದಿಂದ ಪಾರಾಗಿದ್ದರೆ, ಸುಂದರಬನ್ಸ್ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದೆ. ಅಪರಾಹ್ನ 2.30ರ ಸುಮಾರಿಗೆ ಸಾಗರ್ ದ್ವೀಪದಲ್ಲಿ ತೀವ್ರತೆ ಪಡೆದುಕೊಂಡ ಚಂಡಮಾರುತ 100 ಕಿಲೋಮೀಟರ್ ಉತ್ತರದ ಬಂಗಾಳಕ್ಕೆ ಸಂಜೆ 5ರ ವೇಳೆಗೆ ಅಪ್ಪಳಿಸಿತು. ಕನಿಷ್ಠ 10-12 ಮಂದಿ ಮೃತಪಟ್ಟಿರುವ ವರದಿಗಳಿದ್ದು, ಭಾರಿ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಾನಿಯ ಪ್ರಮಾಣವನ್ನು ಅಂದಾಜಿಸಲು ಕೆಲ ದಿನ ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೌರಾದ ಶಾಲಿಮರ್‌ನಲ್ಲಿ ಒಂದು ಸಾವು ಸಂಭವಿಸಿದ್ದು, ನಾರ್ತ್ 24 ಪರಗಣ ಜಿಲ್ಲೆಯಿಂದ ಮತ್ತೆರಡು ಸಾವು ವರದಿಯಾಗಿದೆ. ದಕ್ಷಿಣ ಬಂಗಾಳದಲ್ಲಿ ಹಲವು ಕಟ್ಟಡಗಳು ಕುಸಿದಿವೆ.

ಕೊಲ್ಕತ್ತಾದಲ್ಲಿ ಮಧ್ಯರಾತ್ರಿಯವರೆಗೂ ವಿದ್ಯುತ್ ಸಂಪರ್ಕ ಇಲ್ಲದೇ ಮೊಬೈಲ್ ಹಾಗೂ ಬ್ರಾಡ್‌ಬ್ಯಾಂಡ್ ಸೇವೆ ಅಸ್ತವ್ಯಸ್ತವಾಗಿದೆ. ಹಲವು ಕಡೆ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ.

ಹವಾಮಾನ ಇಲಾಖೆಯ ಮುನ್ಸೂಚನೆಗೆ ಅನುಸಾರವಾಗಿ ಪಶ್ಚಿಮ ಬಂಗಾಳದಲ್ಲಿ ಸಮರೋಪಾದಿಯಲ್ಲಿ ಸುಮಾರು 5 ಲಕ್ಷ ಮಂದಿಯನ್ನು ಹಾಗೂ ಒಡಿಶಾದಲ್ಲಿ 1.58 ಲಕ್ಷ ಮಂದಿಯನ್ನು ಸಕಾಲಿಕವಾಗಿ ಸುರಕ್ಷಿತ ತಾಣಗಳಿಗೆ ಕರೆದೊಯ್ದ ಹಿನ್ನೆಲೆಯಲ್ಲಿ ಆಗಬಹುದಾಗಿದ್ದ ಭಾರಿ ಜೀವಹಾನಿ ತಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News