ದಿಲ್ಲಿ ದಂಗೆಗಳ ತನಿಖೆ ಒಂದು ದಿಕ್ಕನ್ನು ಮಾತ್ರ ಗುರಿಯಾಗಿಸಿದೆ: ಪೊಲೀಸರಿಗೆ ಕೋರ್ಟ್ ತರಾಟೆ
ಹೊಸದಿಲ್ಲಿ,ಮೇ 27: ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕಳೆದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರಗಳ ತನಿಖೆಯ ಕುರಿತು ದಿಲ್ಲಿ ಪೊಲೀಸರನ್ನು ಬುಧವಾರ ತರಾಟೆಗೆತ್ತಿಕೊಂಡಿದೆ.
ಕಳೆದ ವಾರ ಬಂಧಿಸಲ್ಪಟ್ಟಿದ್ದ ಜಾಮಿಯಾ ಮಿಲ್ಲಿಯಾ ವಿವಿಯ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ಕಸ್ಟಡಿ ಕುರಿತು ವಿಚಾರಣೆ ವೇಳೆ ನ್ಯಾಯಾಧೀಶ ಧಮೇಂದ್ರ ರಾಣಾ ಅವರು,ಕೇಸ್ ಡೈರಿಯ ಪರಿಶೀಲನೆಯಿಂದ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ತನಿಖೆಯು ಒಂದು ದಿಕ್ಕನ್ನು ಮಾತ್ರ ಗುರಿಯಾಗಿಸಿಕೊಂಡಂತಿದೆ. ಎದುರಾಳಿ ಬಣದ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಈವರೆಗೆ ಯಾವ ತನಿಖೆಯನ್ನು ನಡೆಸಲಾಗಿದೆ ಎಂದು ತೋರಿಸುವಲ್ಲಿ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ ಮತ್ತು ಅನಿಲ ವಿಚಾರಣೆ ವೇಳೆ ವಿಫಲರಾಗಿದ್ದಾರೆ ಎಂದು ಹೇಳಿದರು.
ನ್ಯಾಯಾಲಯವು ತನ್ಹಾಗೆ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯಾಯಾಧೀಶರ ಹೇಳಿಕೆ ಏಕೆ ಮಹತ್ವದ್ದು?
ದಿಲ್ಲಿ ದಂಗೆಗಳ ಕುರಿತು ಸಮಗ್ರ ತನಿಖೆಗೆ ಸಂಬಂಧಿಸಿದಂತೆ ಇದು ಅತ್ಯಂತ ಮಹತ್ವದ ಅಭಿಪ್ರಾಯವಾಗಿದೆ ಎಂದು ತನ್ಹಾ ಪರ ನ್ಯಾಯವಾದಿ ಸೌಜನ್ಯಾ ಶಂಕರನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ದಂಗೆಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತರಾದವರಲ್ಲಿ ಹೆಚ್ಚಿನವರು ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗಿಯಾದವರಾಗಿದ್ದಾರೆ. ಹೀಗಾಗಿ ನ್ಯಾಯಾಲಯವು ಈ ಅಂಶವನ್ನು ಪ್ರಸ್ತಾಪಿಸಿ ‘ಒಂದು ದಿಕ್ಕನ್ನು ಮಾತ್ರ ’ಎಂದು ಹೇಳಿದಂತಿದೆ.
ಆದ್ದರಿಂದ ‘ಎದುರಾಳಿ ಬಣ’ವು ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿದ್ದಿರಬಹುದಾದ ಸಿಎಎ ಪರ ಅಥವಾ ಸಂಘಪರಿವಾರದ ಶಕ್ತಿಗಳಾಗುತ್ತದೆ. ಹೀಗಾಗಿ ಪೊಲೀಸರು ಸಂಘಪರಿವಾರದ ಬಗ್ಗೆ ಮೃದುವಾಗಿದ್ದಾರೆ ಮತ್ತು ಮುಖ್ಯವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಹಲವಾರು ಸಾಮಾಜಿಕ ಹೋರಾಟಗಾರರ ಆರೋಪವನ್ನು ನ್ಯಾಯಾಲಯವು ಪರೋಕ್ಷವಾಗಿ ಎತ್ತಿ ಹಿಡಿದಿರಬಹುದು.
ತನಿಖೆಯು ನ್ಯಾಯಯುತವಾಗಿರುವಂತಾಗಲು ಅದರ ಮೇಲೆ ನಿಗಾ ಇರಿಸುವಂತೆ ನ್ಯಾಯಾಲಯವು ಸಂಬಂಧಿಸಿದ ಡಿಸಿಪಿಗೆ ಆಗ್ರಹಿಸಿದೆ.