ಟಿವಿ ಚರ್ಚೆಯಲ್ಲಿ ಕೇಂದ್ರ ಕಾರ್ಮಿಕ ಸಚಿವರ ಹೆಸರು ಹೇಳಲು ಪೇಚಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ
ಹೊಸದಿಲ್ಲಿ, ಮೇ 30: ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರೊಬ್ಬರಿಗೆ ಕೇಂದ್ರ ಸರಕಾರದ ಕಾರ್ಮಿಕ ಸಚಿವರ ಹೆಸರೇ ಹೇಳಲು ಗೊತ್ತಿಲ್ಲದೆ ಪೇಚಾಡಿದ ಘಟನೆ ನಡೆದಿದ್ದು, ಆ ವೀಡಿಯೊ ಈಗ ವೈರಲ್ ಆಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ತಮ್ಮ ಪಕ್ಷದ ಹಿರಿಯ ನಾಯಕ ಹಾಗು ಕೇಂದ್ರದ ಕಾರ್ಮಿಕ ಸಚಿವರ ಹೆಸರೇ ಗೊತ್ತಿಲ್ಲದೆ ತೀವ್ರ ಮುಜುಗರಕ್ಕೊಳಗಾದವರು.
ಗೌರವ್ ಭಾಟಿಯಾ ಎಬಿಪಿ ನ್ಯೂಸ್ ಚಾನೆಲ್ 'ಇ-ಶಿಕರ್ ಸಮ್ಮೇಳನ್' ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ನಿಂದ ಭಾಗವಹಿಸಿದ್ದ ಪಕ್ಷದ ಸೋಶಿಯಲ್ ಮೀಡಿಯ ಮುಖ್ಯಸ್ಥ ರೋಹನ್ ಗುಪ್ತಾ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಕೇಂದ್ರ ಕಾರ್ಮಿಕ ಸಚಿವರ ಹೆಸರು ಹೇಳುವಂತೆ ಗೌರವ್ ಭಾಟಿಯಾಗೆ ಸವಾಲು ಹಾಕಿದರು.
ಆದರೆ ಈ ಪ್ರಶ್ನೆಗೆ ಉತ್ತರಿಸಲು ಗೌರವ್ ಭಾಟಿಯಾ ಸಾಕಷ್ಟು ದೀರ್ಘ ಸಮಯ ತೆಗೆದುಕೊಂಡರು. ಈ ನಡುವೆ ಅವರು ಆಗಾಗ ಕೆಳಗೆ ನೋಡುತ್ತಿದ್ದುದು ವೀಕ್ಷಕರ ಗಮನ ಸೆಳೆಯಿತು. ಸಾಕಷ್ಟು ಸಮಯದ ಬಳಿಕ ಅವರು ಈ ಪ್ರಶ್ನೆಗೆ ಉತ್ತರಿಸಲು ಮುಂದಾದರು.
ಗೌರವ್ ಭಾಟಿಯ ಆಗಾಗ ಟೇಬಲ್ ಕೆಳಗೆ ಇಣುಕುತ್ತಿದುದನ್ನು ನೋಡಿದ ಕಾಂಗ್ರೆಸ್ ನ ರೋಹನ್ ಗುಪ್ತಾ "ಗೂಗಲ್ ನಲ್ಲಿ ಹುಡುಕಬೇಡಿ... ನಿಮ್ಮ ಮೊಬೈಲ್ ನಲ್ಲಿ ನೆಟ್ ವರ್ಕ್ ನಿಧಾನ ಇದೆ..." ಎಂದು ಛೇಡಿಸಿದರು.
ಈ ಸಂದರ್ಭದಲ್ಲಿ ಎಬಿಪಿ ಚಾನೆಲ್ ನಿರೂಪಕಿ ರೂಬಿಕ ಲಿಯಾಖತ್ ಬಿಜೆಪಿ ವಕ್ತಾರರ ನೆರವಿಗೆ ಹೋದವರಂತೆ "ಇದೆಂತಹ ಜನರಲ್ ನಾಲೇಜ್ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ" ಎಂದು ಕಾಂಗ್ರೆಸ್ ವಕ್ತಾರರನೇ ಮೊದಲು ಪ್ರಶ್ನಿಸಿದರು. ಬಳಿಕ ಉತ್ತರಿಸಲು ಗೌರವ್ ಸಾಕಷ್ಟು ಸಮಯ ತೆಗೆದು ಕೊಳ್ಳುತ್ತಿರುವುದನ್ನು ಗಮನಿಸಿದ ರೂಬಿಕ ಕೂಡ "ನೀವು ಯಾಕೆ ಉತ್ತರಿಸಲು ಇಷ್ಟು ಹೊತ್ತು ತೆಗೆದುಕೊಳ್ಳುತ್ತೀರಿ ಎಂದು ಬಿಜೆಪಿ ವಕ್ತಾರರನ್ನು ಕೇಳಿದರು.
ಈಗ ಕೇಂದ್ರದ ಕಾರ್ಮಿಕ ಸಚಿವ (ಸ್ವತಂತ್ರ ಖಾತೆ ರಾಜ್ಯ ಸಚಿವ) ಬಿಜೆಪಿಯ ಹಿರಿಯ ನಾಯಕ ಸಂತೋಷ್ ಗಂಗ್ವಾರ್ ಅವರು. ಉತ್ತರ ಪ್ರದೇಶದವರಾದ ಸಂತೋಷ್ ಗಂಗ್ವಾರ್ 1989ರಿಂದ 2019ರವರೆಗೆ 2009 ರಲ್ಲಿ ಒಂದು ಸಲ ಹೊರತುಪಡಿಸಿ ಉಳಿದೆಲ್ಲ ಲೋಕ ಸಭಾ ಚುನಾವಣೆಯಲ್ಲಿ ಗೆದ್ದ ದಾಖಲೆ ಹೊಂದಿದ್ದಾರೆ. ಆದರೆ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾದಾಗ ಅವರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಸಂತೋಷ್ ಗಂಗ್ವಾರ್ ಮೇಲಿದೆ.