ಜಿಎಸ್‌ಟಿ ವರ್ಗೀಕರಣದ ವಿಲಕ್ಷಣತೆಗೆ ಬೆಳಕು ಚೆಲ್ಲಿದ ಪರೋಟಾ ಕುರಿತು ಆನಂದ್ ಮಹೀಂದ್ರಾ ಟ್ವೀಟ್

Update: 2020-06-12 16:21 GMT

ಹೊಸದಿಲ್ಲಿ, ಜೂ.12: ಜಿಎಸ್‌ಟಿಗೆ ಸಂಬಂಧಿಸಿ ರೋಟಿ ಮತ್ತು ಪರೋಟವನ್ನು ಒಂದೇ ವಿಭಾಗದಲ್ಲಿ ಪರಿಗಣಿಸಲಾಗದು ಎಂಬ ಸರಕಾರದ ಆದೇಶದ ವಿಲಕ್ಷಣತೆಯ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ರೊಟ್ಟಿಯ ಕುಟುಂಬದಿಂದ ಪರೋಟವನ್ನು ದೂರಗೊಳಿಸಿರುವುದು ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿರುವ ಭಾರತಕ್ಕೆ ಸಾಕಷ್ಟು ತಳಮಳಕ್ಕೆ ಕಾರಣವಾಗಬಹುದೇ ಎಂದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದೇಶವು ಎದುರಿಸುತ್ತಿರುವ ಇತರ ಎಲ್ಲಾ ಸವಾಲುಗಳ ಜೊತೆಗೆ, ಈಗ ನಾವು ಪರೋಟದ ಅಸ್ತಿತ್ವವಾದದ ಬಿಕ್ಕಟ್ಟಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಎಂದು ನೀವು ಆಶ್ಚರ್ಯ ಪಡಬಹುದು. ಆದರೆ ಭಾರತೀಯರ ವಿಶಿಷ್ಟ ಕೌಶಲ್ಯವನ್ನು ಗಮನಿಸಿದರೆ, ಯಾವುದೇ ವರ್ಗೀಕರಣಕ್ಕೆ ಸವಾಲೆಸೆಯಬಲ್ಲ ಹೊಸ ‘ಪರೋಟಿ’ ತಳಿಯ ಆವಿಷ್ಕಾರವಾಗಬಹುದು ಎಂಬ ಬಗ್ಗೆ ನನಗೆ ಖಾತರಿಯಿದೆ ಎಂದವರು ಟ್ವೀಟ್ ಮಾಡಿದ್ದಾರೆ. ಅರೆ ತಯಾರಿಸಿದ ಆಹಾರ ವಸ್ತುಗಳನ್ನು ಪೂರೈಸುವ ‘ಐಡಿ ಫ್ರೆಶ್ ಫುಡ್ಸ್’ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನೀಡಿರುವ ಆದೇಶದಲ್ಲಿ ‘ಪರೋಟವು ಸಿದ್ಧಪಡಿಸಿದ ಆಹಾರವಲ್ಲ. ಅದನ್ನು ತಿನ್ನುವ ಮೊದಲು ಬಿಸಿ ಮಾಡಬೇಕು ಎಂದು ವಿಶ್ಲೇಷಿಸಲಾಗಿದೆ. ಆದ್ದರಿಂದ ಜಿಎಸ್‌ಟಿಯ 1905ನೇ ವಿಭಾಗದಡಿ ಇರುವ ಖಾಕ್ರ, ಚಪಾತಿ ಅಥವಾ ರೋಟಿಯ ವಿಭಾಗದಲ್ಲಿ ಪರೋಟವನ್ನು ಸೇರಿಸಲಾಗದು.

ಆದ್ದರಿಂದ 3ರಿಂದ 5 ದಿನಗಳವರೆಗೆ ಇಡಬಹುದಾದ ಗೋಧಿಯ ಪರೋಟ ಅಥವಾ ಮಲಬಾರ್ ಪರೋಟ(ಸಂಸ್ಕರಿಸಿದ ಹಿಟ್ಟಿನಿಂದ ಮಾಡುವ ಪರೋಟ)ವನ್ನು 18% ತೆರಿಗೆ ವಿಭಾಗದಲ್ಲಿಯೇ ಮುಂದುವರಿಸಬೇಕು ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್‌ನ ಕರ್ನಾಟಕ ಪೀಠದ ಆದೇಶ ತಿಳಿಸಿದೆ. ರೋಟಿಯ ಮೇಲೆ 5% ಜಿಎಸ್‌ಟಿ ವಿಧಿಸಲಾಗುತ್ತಿದೆ. ರೋಟಿಯ ವಿಭಾಗದಲ್ಲಿ ಕೇಕ್, ಬಿಸ್ಕಿಟ್ಸ್, ಬ್ರೆಡ್‌ಗಳನ್ನು ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News