ತಿರುಚಿದ ವಿಡಿಯೋ ಪೋಸ್ಟ್ ಮಾಡಿದ ಆರೋಪ: ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ ಐಆರ್

Update: 2020-06-15 13:02 GMT

ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮದ್ಯ ಸೇವನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿ ತಿರುಚಲ್ಪಟ್ಟ ವಿಡಿಯೋವೊಂದನ್ನು ಟ್ವೀಟ್ ಮಾಡಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಬಿಜೆಪಿ ಈ ಕುರಿತಂತೆ ಸಿಂಗ್ ವಿರುದ್ಧ ಪೊಲೀಸ್ ದೂರು ನೀಡಿದೆ.

ಹಿಂದಿನ ಕಮಲ್ ನಾಥ್ ಸರಕಾರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವ ನಿಟ್ಟಿನಲ್ಲಿ ಅಬಕಾರಿ ನೀತಿಯನ್ನು ಬದಲಾಯಿಸಿದ ನಂತರ  ಚೌಹಾಣ್ ಅವರ ಪ್ರತಿಕ್ರಿಯೆಯನ್ನು ಬಳಸಿ ಈ ವೀಡಿಯೋ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಸಿಂಗ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ವೀಡಿಯೋವನ್ನು ರವಿವಾರ ಅಪರಾಹ್ನ ಪೋಸ್ಟ್ ಮಾಡಿದ ನಂತರ ಅದನ್ನು ಹತ್ತು ಮಂದಿ ಇತರರು ರಿಟ್ವೀಟ್ ಮಾಡಿದ್ದರು. ಆದರೆ ನಂತರ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಆ ವೀಡಿಯೋವನ್ನು ಡಿಲೀಟ್ ಮಾಡಲಾಯಿತು.

ಆದರೆ ಈ ಟ್ವೀಟ್ ಹಾಗೂ ವೀಡಿಯೋದ ಸ್ಕ್ರೀನ್ ಶಾಟ್‍ಗಳನ್ನು ಸಾಕ್ಷ್ಯವನ್ನಾಗಿಸಿ ಮಾಜಿ ಗೃಹ ಸಚಿವ ಉಮಾಶಂಕರ್ ಗುಪ್ತಾ ಅವರ ನೇತೃತ್ವದಲ್ಲಿ ಬಿಜೆಪಿಯು ಕ್ರೈಂ ಬ್ರ್ಯಾಂಚ್‍ಗೆ ಎರಡು ಪುಟಗಳಷ್ಟು ದೂರು ನೀಡಿದೆ.

ಮುಖ್ಯಮಂತ್ರಿಯ ವರ್ಚಸ್ಸಿಗೆ ಧಕ್ಕೆ ತರಲೆಂದೇ ಸಿಂಗ್ ಈ ವೀಡಿಯೋ ಟ್ವೀಟ್ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿದೆ. ಘಟನೆ ಸಂಬಂಧ ಪೊಲೀಸರು 11 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಬುಡಕಟ್ಟು ಜನರಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರ ಹಿಂದಿನ ಸರಕಾರದ ಅವಧಿಯಲ್ಲಿ ಆದ ಅನ್ಯಾಯದ ಕುರಿತು ತಾನು ದನಿಯೆತ್ತಿದ್ದರಿಂದ ಬಿಜೆಪಿ ತನ್ನ ಮೇಲೆ ಹೀಗೆ ಸೇಡು ತೀರಿಸುತ್ತಿದೆ. ವೀಡಿಯೋವನ್ನು ಯಾರು ತಿರುಚಿದ್ದಾರೆಂಬ ಕುರಿತು ತನಿಖೆ ನಡೆಯಲಿ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News