'ರೋಗವಿದೆ ಎಂದು ಆರೋಪಿಗೆ ಜಾಮೀನು ನೀಡಲಾಗದು'

Update: 2020-07-04 18:17 GMT

  ಮುಂಬೈ,ಜು.5: ‘ರೋಗದಿಂದ ಬಳಲುತ್ತಿರುವುದು ಆರೋಪಿಯನ್ನು ಬಿಡುಗಡೆಗೊಳಿಸುವುದಕ್ಕೆ ಕಾರಣವಾಗದು ಎಂದು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಮಧ್ಯಂತರ ಜಾಮೀನು ಕೋರಿ ಸಾಮಾಜಿಕ ಹೋರಾಟಗಾರ್ತಿ ಶೋಮಾ ಸೇನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಶೋಮಾ ಅವರು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಶೋಮಾ ಅವರನ್ನು ಪ್ರಸಕ್ತ ಮುಂಬೈನ ಬೈಕುಲಾ ಜೈಲಿನಲ್ಲಿರಿಸಲಾಗಿದೆ. ತಾನು ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ತನಗೆ ವೈದ್ಯಕೀಯ ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡಬೇಕೆಂದು ಅವರು ಅರ್ಜಿಯಲ್ಲಿ ಕೋರಿದ್ದರು.

2017ರ ಡಿಸೆಂಬರ್ 31ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಶೋಮಾ ಸೇನ್, ವರವರರಾವ್ , ಗೌತಮ್ ನವ್ಲಾಖಾ ಮತ್ತಿತರ ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು. ಎಲ್ಗಾರ್ ಪರಿಷತ್ ಸಭೆಯ ಬಳಿಕ, ಮಾರನೆ ದಿನ ಭೀಮಾ ಕೋರೆಗಾಂವ್‌ನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.

ಕಳೆದ ತಿಂಗಳು ವಿಶೇಷ ನ್ಯಾಯಾಲಯವು ಎಲ್ಗಾರ್ ಪರಿಷತ್ ಹಿಂಸಾಚಾರ ಪ್ರಕರಣದಲ್ಲಿ ಶೋಮಾ ಸೇನ್ ಹಾಗೂ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರ ತಾತ್ಕಾಲಿಕ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. 80 ವರ್ಷ ವಯಸ್ಸಿನ ರಾವ್‌ ಅವರನ್ನು ನವಿ ಮುಂಬೈನ ತಿರೋಜಾ ಜೈಲಿನಲ್ಲಿ ಇರಿಸಲಾಗಿದೆ.

ಕೊರೋನ ಹಾವಳಿಯ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆಗೊಳಿಸಬೇಕೆಂಬ ಉನ್ನತಾಧಿಕಾರ ಸಮಿತಿಯ ಶಿಫಾರಸುಗಳನ್ನು ಕೂಡಾ ಅವರು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ತಮ್ಮ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸಿದರೆ, ತಮಗೆ ಕೋವಿಡ್-19 ಸೋಂಕು ತಗಲುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಇಬ್ಬರೂ ಅರ್ಜಿಯಲ್ಲಿ ತಿಳಿಸಿದ್ದರು.

 ಆದಾಗ್ಯೂ ಇಂತಹ ಪ್ರಕರಣಗಳಲ್ಲಿ ಸಮರ್ಪಕ ಕ್ರಮಗಳನ್ನು ಕಾರಾಗೃಹದ ಅಧೀಕ್ಷಕರು ಕೈಗೊಳ್ಳಬೇಕೆಂದು ವಿಶೇಷ ನ್ಯಾಯಾಲಯ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News