ಬಾಲಕನಾಗಿದ್ದಾಗ 'ಸ್ಪ್ಯಾನಿಶ್ ಫ್ಲೂ' ಗೆದ್ದ 106ರ ಅಜ್ಜನಿಗೆ ಈಗ ಕೋವಿಡ್-19 ವಿರುದ್ಧವೂ ಜಯ
ಹೊಸದಿಲ್ಲಿ: ನಾಲ್ಕು ವರ್ಷದ ಬಾಲಕನಾಗಿದ್ದಾಗ 1918ರಲ್ಲಿ ಮಾರಕ ಸ್ಪಾನಿಶ್ ಫ್ಲೂ ದವಡೆಯಿಂದ ಪಾರಾಗಿದ್ದ 106 ವರ್ಷದ ವ್ಯಕ್ತಿಯೊಬ್ಬರು ಇದೀಗ ಕೋವಿಡ್-19 ಸವಾಲನ್ನೂ ಮೆಟ್ಟಿ ನಿಂತು ಅಚ್ಚರಿ ಮೂಡಿಸಿದ್ದಾರೆ.
ದೆಹಲಿಯ ಈ ವ್ಯಕ್ತಿ 70 ವರ್ಷದ ಮಗನಿಗಿಂತಲೂ ವೇಗವಾಗಿ ಚೇತರಿಸಿಕೊಂಡಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ಇವರನ್ನು ಇತ್ತೀಚೆಗೆ ರಾಜೀವ್‍ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಪತ್ನಿ, ಮಗ ಹಾಗೂ ಕುಟುಂಬದ ಇತರ ಸದಸ್ಯರೂ ಆರ್‍ಜಿಎಸ್‍ಎಸ್‍ಎಚ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ಕೋವಿಡ್-19 ಸೋಂಕಿನಂತೆ 1918ರಲ್ಲಿ ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿದ್ದ ಭಯಾನಕ ಸ್ಪ್ಯಾನಿಶ್‍ಫ್ಲೂ ಸೋಂಕಿಗೆ ಒಳಗಾದರೂ ಬದುಕಿ ಉಳಿದು ಇದೀಗ ಕೋವಿಡ್-19 ಸೋಂಕಿನಿಂದಲೂ ಚೇತರಿಸಿಕೊಂಡ ದೆಹಲಿಯ ಮೊಟ್ಟಮೊದಲ ಪ್ರಕರಣ ಇದು. ಈ ವೃದ್ಧ ತನ್ನ 70 ವರ್ಷದ ಮಗನಿಗಿಂತಲೂ ವೇಗವಾಗಿ ಚೇತರಿಸಿಕೊಂಡಿದ್ದಾರೆ” ಎಂದು ಹಿರಿಯ ವೈದ್ಯರು ವಿವರಿಸಿದ್ದಾರೆ.
102 ವರ್ಷಗಳ ಹಿಂದೆ ಇಡೀ ವಿಶ್ವವನ್ನು ವ್ಯಾಪಿಸಿದ್ದ ಸ್ಪ್ಯಾನಿಶ್ ಫ್ಲೂ, ಜಾಗತಿಕ ಜನಸಂಖ್ಯೆಯ ಮೂರನೇ ಒಂದರಷ್ಟು ಮಂದಿಯನ್ನು ಬಾಧಿಸಿತ್ತು. ಎಚ್1ಎನ್1 ವೈರಸ್‍ನಿಂದ ಈ ಸೋಂಕು ತಗುಲುತ್ತದೆ. ಈ ಮಾರಕ ಸೋಂಕಿಗೆ ವಿಶ್ವಾದ್ಯಂತ 4 ಕೋಟಿ ಮಂದಿ ಬಲಿಯಾಗಿದ್ದರು. ಇಡೀ ವಿಶ್ವದಲ್ಲಿ ಮೃತಪಟ್ಟ ರೋಗಿಗಳ ಪೈಕಿ ಐದನೇ ಒಂದರಷ್ಟು ರೋಗಿಗಳು ಭಾರತದಲ್ಲೂ ಮೃತಪಟ್ಟಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.