ಪರ್ವತಗಳೆಲ್ಲ ನೆಲಸಮವಾಗಿದ್ದರೆ ಏನಾಗುತ್ತಿತ್ತು?

Update: 2021-03-13 19:30 GMT

ಹೆಮ್ಮೆಯ ಹಿಮಾಲಯ ರೂಪಗೊಂಡದ್ದು...
 ಏಳುಕೋಟಿ ವರ್ಷಗಳ ಹಿಂದೆ ಭಾರತ ಮತ್ತು ಯುರೇಶ್ಯ ಫಲಕಗಳು ಎದುರುಬದುರಾಗಿ ನಡುವೆ ಇದ್ದ ಟೆಥಿಸ್ ಸಾಗರವನ್ನು ಹಿಚುಕಿದವು. ಆಗ ಅದರೊಳಗಿದ್ದ ಸ್ತರಶಿಲೆಗಳು ಮೇಲೇಳಲು ಪ್ರಾರಂಭಿಸಿದವು. ಐದು ಹಂತಗಳಲ್ಲಿ ನಮ್ಮ ಹಿಮಾಲಯ ರೂಪುಗೊಂಡಿತು. ಅದು ಕೊನೆಯ ಹಂತದಲ್ಲಿ ತಲೆ ಎತ್ತಿ ನಿಲ್ಲುವ ವೇಳೆಗೆ ಭೂಮಿಯ ಮೇಲೆ ಮಾನವ ಕಾಣಿಸಿಕೊಂಡ. ಅಂದು ಪ್ರಾರಂಭವಾದ ಹಿಮಾಲಯದ ಫಲಕಗಳ ಘರ್ಷಣೆ ಈಗಲೂ ನಿಂತಿಲ್ಲ. ಮಡಿಕೆ ಮಡಿಕೆಗಳಿಂದ ಕೂಡಿದ ಹಿಮಾಲಯ ಪ್ರತಿವರ್ಷ ಕೆಲವು ಸೆಂಟಿಮೀಟರ್‌ಗಳಷ್ಟು ಮೇಲೇಳುತ್ತದೆ ಎಂದು ವಿಜ್ಞಾನಿಗಳು ಲೆಕ್ಕಿಸಿದ್ದಾರೆ.


ಬೇಸಿಗೆ ರಜೆಯಲ್ಲಿ ಪ್ರತಿದಿನ ಮಧ್ಯಾಹ್ನ ಪದ್ಮಾವತಿ ತನ್ನ ದೊಡ್ಡಪ್ಪನೊಂದಿಗೆ ಹರಟುತ್ತಾ ಕುಳಿತುಕೊಳ್ಳುತ್ತಿದ್ದಳು. ಅವಳು ಕೆಲವು ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ ದೊಡ್ಡಪ್ಪನಿಂದ ಉತ್ತರ ಪಡೆಯುತ್ತಿದ್ದಳು. ಒಂದು ದಿನ ಭೂಸ್ವರೂಪಗಳ ಬಗ್ಗೆ ಹರಟೆ ಪ್ರಾರಂಭವಾಗಿತ್ತು. ಪರ್ವತಗಳ ಬಗ್ಗೆ ಚರ್ಚಿಸುವಾಗ ಅವಳು ತುಂಬಾ ಉತ್ಸುಕಳಾದಳು. ಅನೇಕ ಪ್ರಶ್ನೆಗಳನ್ನು ಕೇಳುತ್ತಾ ಸಾಗಿದಳು. ಅದರಲ್ಲಿ ಅವಳ ಒಂದು ಪ್ರಶ್ನೆ ದೊಡ್ಡಪ್ಪನನ್ನೇ ದಂಗು ಬಡಿಸಿತು. ಹೀಗೆ ದಂಗುಬಡಿಸಿದ ಪದ್ಮಾವತಿಯ ಪ್ರಶ್ನೆ ಏನೆಂದರೆ ‘‘ಪರ್ವತಗಳೆಲ್ಲ ನೆಲಸಮವಾಗಿದ್ದರೆ ಏನಾಗುತ್ತಿತ್ತು?’’ ಅವಳ ಪ್ರಶ್ನೆಯ ವಿಷಯವೇ ಈ ಅಧ್ಯಾಯ. ಪರ್ವತ ಎಂದರೆ...?: ಪದ್ಮಾವತಿಯ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಮೊದಲು ಪರ್ವತಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ. ಪರ್ವತಗಳು ಈ ಜಗತ್ತಿನ ವಿಸ್ಮಯ ಹಾಗೂ ಸ್ಫೂರ್ತಿದಾಯಕ ಭೂಸ್ವರೂಪ ಗಳಾಗಿವೆ. ಭೂರಮೆಗೆ ಸೌಂದರ್ಯ ಹಾಗೂ ಘನತೆಯನ್ನು ತಂದುಕೊಡುವಲ್ಲಿ ಪರ್ವತಗಳ ಪಾತ್ರ ಹಿರಿದು. ಅತೀ ಹೆಚ್ಚು ಸಂಕಷ್ಟಗಳನ್ನು ಸಹಿಸಿಕೊಂಡು ಉನ್ನತ ಹಂತಕ್ಕೆ ಬೆಳೆದವರನ್ನು ಪರ್ವತಕ್ಕೆ ಹೋಲಿಸಲಾಗುತ್ತದೆ. ಪರ್ವತಗಳ ಮಹತ್ವ ಇಷ್ಟಕ್ಕೆ ನಿಲ್ಲುವುದಿಲ್ಲ. ಅದೆಲ್ಲವನ್ನು ಇಲ್ಲಿ ಹೇಳಲು ಅವಕಾಶವೂ ಇಲ್ಲ. ಕಾಲ ಮತ್ತು ಅವಶ್ಯಕತೆಗಳು ದೊರೆತಾಗ ಎಲ್ಲವನ್ನು ನೀವೇ ತಿಳಿದುಕೊಳ್ಳಬಹುದು. ಈಗ ಪರ್ವತಗಳೆಂದರೆ ಏನು ಎಂಬುದನ್ನು ಚರ್ಚಿಸಿ ಮುಂದೆ ಸಾಗೋಣ.

ಸುತ್ತಲಿನ ಸಾಮಾನ್ಯ ಭೂಭಾಗಕ್ಕಿಂತ ಸ್ವಲ್ಪಎತ್ತರವಾದ ಶಿಖರದ ರೀತಿಯ ಮೇಲ್ಮೈ ಪ್ರದೇಶವನ್ನು ಪರ್ವತ ಎನ್ನುತ್ತಾರೆ. ಪರ್ವತಗಳು ಕಡಿದಾದ ಇಳಿಜಾರು ಹಾಗೂ ಚಿಕ್ಕ ಶಿಖರಗಳನ್ನು ಹೊಂದಿದ್ದು, ಸಮುದ್ರಮಟ್ಟಕ್ಕಿಂತ ಸಾವಿರಾರು ಮೀ. ಎತ್ತರದಲ್ಲಿರುತ್ತವೆ. ಪರ್ವತಗಳ ಬಗೆಗಿನ ಅಧ್ಯಯನವನ್ನು ಆರಾಗ್ರಫಿ ಎಂದು ಕರೆಯಲಾಗುತ್ತದೆ. ಪರ್ವತಗಳು ಸಾಮಾನ್ಯವಾಗಿ ಭೂಪದರದ ಚಲನೆಯಿಂದ ರಚನೆಯಾಗುತ್ತವೆ. ಸಾಮಾನ್ಯವಾಗಿ ಜ್ವಾಲಾಮುಖಿಯಿಂದ ಭೂಮೇಲ್ಮೈಯ ಶಿಲಾಪದರ ಮೇಲಕ್ಕೆ ತಳ್ಳಲ್ಪಟ್ಟು ಪರ್ವತಗಳು ನಿರ್ಮಾಣಗೊಳ್ಳುತ್ತವೆ. ಭೂಮಿಯ ಶೇ.22 ಭಾಗವನ್ನು ಪರ್ವತಗಳು ಆವರಿಸಿವೆ. ಪರ್ವತಗಳ ಗುಣಲಕ್ಷಣಗಳು ಹಾಗೂ ಭೌಗೋಳಿಕ ಕ್ರಿಯೆಯ ಆಧಾರದ ಮೇಲೆ ಮಡಿಕೆ ಪರ್ವತ, ಖಂಡ ಪರ್ವತ, ಜ್ವಾಲಾಮುಖಿ ಪರ್ವತ ಹಾಗೂ ಶೇಷ ಪರ್ವತಗಳೆಂದು ನಾಲ್ಕು ವಿಧಗಳಲ್ಲಿ ವಿಂಗಡಿಸಲಾಗಿದೆ. ಪರ್ವತಗಳು ಭೂಗ್ರಹದಲ್ಲಷ್ಟೆ ಅಲ್ಲ ಇನ್ನಿತರೇ ಗ್ರಹಗಳಲ್ಲೂ ಇವೆ. ಹಿಮಾಲಯ ಪರ್ವತ (29,031 ಅಡಿ) ಪ್ರಪಂಚದ ಅತೀ ಎತ್ತರದ ಪರ್ವತವಾದರೆ, ಆಂಡೀಸ್ ಪರ್ವತ (ಸುಮಾರು 7,000 ಕಿ.ಮೀ.) ಅತ್ಯಂತ ಉದ್ದವಾದ ಪರ್ವತವಾಗಿದೆ. ನಮ್ಮ ಸೌರವ್ಯೆಹದ ಅತ್ಯಂತ ಎತ್ತರವಾದ ಪರ್ವತ ಒಲಿಂಪಸ್ ಮಾನ್ಸ್ (21,171 ಮಿ.) ಮಂಗಳ ಗ್ರಹದಲ್ಲಿದೆ. ಪರ್ವತಗಳು ನೆಲಸಮವಾದರೆ...

ಪರ್ವತಗಳು ವಿಶ್ವದ ಲಕ್ಷಾಂತರ ಜನರಿಗೆ ನೀರು ಮತ್ತು ಆಹಾರ ಒದಗಿಸುತ್ತವೆ. ವಿಶ್ವದ ಜನಸಂಖ್ಯೆಯ ಶೇ.13ರಷ್ಟು ಜನರು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಪರ್ವತಗಳು ನಾಶವಾದರೆ ಇಷ್ಟೊಂದು ಪ್ರಮಾಣದ ಜನರಿಗೆ ವಸತಿ ಸೌಲಭ್ಯ ಒದಗಿಸುವುದು ಹೇಗೆ? ಎಂಬ ಮತ್ತೊಂದು ಸಮಸ್ಯೆ ಉದ್ಭವಿಸುತ್ತದೆ. ಪರ್ವತಗಳು ಜಗತ್ತಿನ ಶೇಕಡಾ 60-80ರಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತವೆ. ಅದರಲ್ಲೂ ಭಾರತದ ಹಿಮಾಲಯ ಪರ್ವತದಲ್ಲಿ 1,500ಕ್ಕೂ ಹೆಚ್ಚು ಹಿಮನದಿಗಳಿವೆ. ಹಿಮಕರಗುವಿಕೆಯಿಂದ ಶೇ.58ರಷ್ಟು ನೀರು ನದಿಗಳಿಗೆ ಹರಿಯುತ್ತದೆ. ಪರ್ವತಗಳು ನೆಲಸಮವಾದರೆ ಅವುಗಳಿಂದ ದೊರೆಯುವ ನೀರಿನ ಸೌಲಭ್ಯ ಮೊಟಕುಗೊಳ್ಳುತ್ತದೆ ಮತ್ತು ನೀರಿನ ಸಮಸ್ಯೆ ಉಂಟಾಗುತ್ತದೆ. ಬಹುತೇಕ ಪರ್ವತಗಳಲ್ಲಿ ಬಿಸಿನೀರು ಮತ್ತು ಹಬೆಗಳನ್ನು ಹೊರಚಿಮ್ಮುವ ಅಸಂಖ್ಯಾತ ಚಿಲುಮೆಗಳಿವೆ. ಈ ಚಿಲುಮೆಗಳನ್ನು ಸರಿಯಾಗಿ ಬಳಸಿಕೊಂಡರೆ ಅವುಗಳಿಂದ ಥರ್ಮಲ್ ವಿದ್ಯುತ್ ತಯಾರಿಸಬಹುದು. ಲಡಾಖ್‌ನಲ್ಲಿ 34, ಹಿಮಾಚಲ ಪ್ರದೇಶದಲ್ಲಿ 34, ಕುಮಾನ್‌ನಲ್ಲಿ 37, ಸಿಕ್ಕಿಂನಲ್ಲಿ 7 ಮತ್ತು ಅರುಣಾಚಲ ಪ್ರದೇಶದಲ್ಲಿ 11, ಹೀಗೆ ನಮ್ಮ ಹಿಮಾಲಯ ಪರ್ವತದಲ್ಲಿ ಒಟ್ಟು 123 ಬಿಸಿನೀರ ಬುಗ್ಗೆಗಳಿವೆ. ಪರ್ವತಗಳು ಇಲ್ಲವಾದರೆ ಬಿಸಿನೀರ ಬುಗ್ಗೆಗಳೂ ಇಲ್ಲ, ಅವುಗಳಿಂದ ಥರ್ಮಲ್ ವಿದ್ಯುತ್ ಇಲ್ಲದಂತಾಗುತ್ತದೆ.

ಪರ್ವತಗಳು ಇಲ್ಲದಿದ್ದರೆ ಬಹುಮುಖ್ಯವಾದ ಸಸ್ಯ ಸಂಪತ್ತು ಹಾಗೂ ಮರಗಳನ್ನು ಕಳೆದುಕೊಳ್ಳುತ್ತಿದ್ದೆವು. ಬಹುತೇಕ ಪರ್ವತಗಳು ವೈವಿಧ್ಯಮಯವಾದ ಅಪಾರ ಸಸ್ಯಸಂಪತ್ತು ಹಾಗೂ ಹುಲ್ಲುಗಾವಲನ್ನು ಹೊಂದಿವೆ. ಕೇವಲ ಹಿಮಾಲಯ ಪರ್ವತದಲ್ಲಿಯೇ ಅಪಾರ ಹಾಗೂ ಬೆಲೆಬಾಳುವ ಸಸ್ಯ ಸಂಪತ್ತು ಇದೆ. ಹಿಮಾಲಯದ ಅರಣ್ಯ ಪ್ರದೇಶದಲ್ಲಿನ ಶೇ. 30ರಷ್ಟು ವಿವಿಧ ಜಾತಿಯ ಮರ ಗಿಡಗಳು ಪ್ರಪಂಚದ ಯಾವುದೇ ಭಾಗದಲ್ಲಿಲ್ಲ ಎಂಬುದು ನಮಗೆ ಹೆಮ್ಮೆಯ ಸಂಗತಿ. ಇದರಲ್ಲಿ ಓಕ್, ಪೈನ್, ಗುಲ್ಮ, ಲಾಕುರೇಸಿಯಸ್ ಮರಗಿಡಗಳನ್ನು ಹೊಂದಿವೆ. ಪರ್ವತಗಳು ನೆಲಸಮವಾದರೆ ಇಷ್ಟೊಂದು ಪ್ರಮಾಣದ ಸಸ್ಯಸಂಪತ್ತು ನಾಶವಾಗಿ ಜೀವಿಗಳಿಗೆ ಅಪಾಯ ಒದಗುತ್ತಿತ್ತು. ಜೀವಿಗಳಿಗೆ ಶುದ್ಧಗಾಳಿ, ಮಳೆ ಹಾಗೂ ಆಹಾರಕ್ಕಾಗಿ ಸಸ್ಯಸಂಪತ್ತು ಅಗತ್ಯವಲ್ಲವೇ? ಪರ್ವತ ಅರಣ್ಯದಲ್ಲಿ ಜೀವಿಸುವ ಪ್ರಾಣಿ, ಪಕ್ಷಿ ಸಂಕುಲಗಳಿಗೆ ಪರ್ವತವೇ ಇಲ್ಲವಾದರೆ ಅವುಗಳ ಆವಾಸಕ್ಕೆ ತೊಂದರೆಯಾಗಿ ಅವುಗಳ ಸಂತತಿ ನಶಿಸಿಹೋಗುತ್ತದೆ. ನಮ್ಮ ಹೆಮ್ಮೆಯ ಹಿಮಾಲಯ ಪರ್ವತದಲ್ಲಿ ಜಗತ್ತಿನಲ್ಲಿಯೇ ವಿಶೇಷತೆಯುಳ್ಳ ಕಂಕರ್, ಗುರಾಲ್, ಭಾರಲ್, ಹಿಮಾಲಯನ್ ಕಪ್ಪುಕರಡಿ, ಕಸ್ತೂರಿಮೃಗ, ಹಿಮಾಲಯನ್ ತಹರ್, ಹಿಮಚಿರತೆ, ಹುಲಿ, ಆನೆ ಮುಂತಾದ ವಿವಿಧ ಜಾತಿಯ ಪ್ರಾಣಿಗಳು ಹಾಗೂ 230 ಜಾತಿಯ ವಿವಿಧ ಪಕ್ಷಿಗಳು ಇವೆ. ಪರ್ವತಗಳು ಇಲ್ಲವಾದರೆ ಈ ಎಲ್ಲಾ ಪ್ರಾಣಿ, ಪಕ್ಷಿಗಳು ಅವನತಿ ಹೊಂದುತ್ತವೆ. ಪರ್ವತಗಳು ನೆಲಸಮ ವಾದರೆ ಹವಾಮಾನ ವೈಪರೀತ್ಯಗಳು ಉಂಟಾಗುತ್ತವೆ. ಬಿರುಗಾಳಿಯ ಪ್ರಮಾಣ ಹೆಚ್ಚಾಗುತ್ತದೆ. ಪರ್ವತಗಳ ಅಂಚಿನಲ್ಲಿನ ಪ್ರದೇಶಗಳು ಬಿರುಗಾಳಿಗೆ ನಲುಗಿ ಹೋಗುತ್ತವೆ. ಸಕಾಲದಲ್ಲಿ ಮಳೆ ಬರುವುದಿಲ್ಲ. ಇದರಿಂದ ಆ ಪ್ರದೇಶಗಳೆಲ್ಲ ಕುಡಿಯುವ ನೀರಿನ ಸಮಸ್ಯೆ ಅನುಭವಿಸುವಂತಾಗುತ್ತದೆ.

ಶುದ್ಧಗಾಳಿ, ನೀರು, ವಾತಾವರಣ ಇಲ್ಲದೆ ಪರ್ವತ ಪ್ರದೇಶಗಳಲ್ಲಿ ವಾಸಿಸುವ 329 ಮಿಲಿಯನ್ ಜನರು ಆಹಾರವಿಲ್ಲದೆ ಅವರ ಜೀವನ ತೊಂದರೆಗೀಡಾಗುತ್ತದೆ. ಅದರಲ್ಲಿ ಕೆಲವು ಜನರು ಸಾಯಲೂಬಹುದು. ಸಾವಿರಾರು ವರ್ಷಗಳಿಂದ ಭೂಮಿಗೆ ಆಶ್ರಯವಾಗಿರುವ ಪರ್ವತಗಳನ್ನು ನೆಲಸಮಗೊಳಿ ಸಿದರೆ ಭೂಗ್ರಹಕ್ಕೆ ಗಂಡಾಂತರ ಸಂಭವಿಸಬಹುದು. ಪರ್ವತಗಳು ನಾಶವಾದರೆ ಇಡೀ ಭೂಮಿ ಜಾಗತಿಕ ತಾಪಮಾನವನ್ನು ಎದುರಿಸಬೇಕಾಗುತ್ತದೆ. ವರ್ಷದುದ್ದಕ್ಕೂ ಹರಿಯುವ ಪರ್ವತ ನದಿಗಳ ನೀರು ಬರಿದಾಗಿ ನದಿ ಪಾತ್ರದ ನೆಲವೆಲ್ಲ ಮರುಭೂಮಿಯಾಗಬಹುದು. ಭೂಮಿಯು ತನ್ನ ಈಗಿನ ವಾತಾವರಣ ಕಳೆದುಕೊಂಡು ಎಲ್ಲವೂ ಶಿಲೆಯಾಗಿ ಮಾರ್ಪಾಟಾಗಬಹುದು. ಭೂಮಿಯ ಮೇಲಿನ ಬಹುತೇಕ ಜನಜೀವನ ಅಸ್ತವ್ಯಸ್ತವಾಗುತ್ತದೆ.

ಪರ್ವತಗಳು ಭೂಮಿಗೆ ತಂಪನ್ನು ನೀಡುತ್ತವೆ. ಒಂದು ವೇಳೆ ಅವು ಇಲ್ಲದಿದ್ದರೆ ಬೇಸಿಗೆಯು ಅತೀ ಬಿಸಿಯಿಂದ ಕೂಡಿರುತ್ತಿತ್ತು. ವರ್ಷಪೂರ್ತಿ ನಡೆಯುವ ಟ್ರಕ್ಕಿಂಗ್, ಬೈಕಿಂಗ್, ಫಿಶಿಂಗ್, ಸ್ಕೀಯಿಂಗ್, ಸ್ನೋಬೋರ್ಡಿಂಗ್, ಸ್ಲೈಡಿಂಗ್‌ನಂತಹ ಕ್ರೀಡೆಗಳು ಇರುತ್ತಿರಲಿಲ್ಲ. ಪರ್ವತಗಳು ಅಪಾರ ಖನಿಜ ಸಂಪತ್ತಿನ ಆಗರಗಳು. ನಮ್ಮ ಹಿಮಾಲಯದಲ್ಲೂ ಬೆಲೆಬಾಳುವ ಅಪಾರ ಖನಿಜ ಸಂಪತ್ತು ಮತ್ತು ಖನಿಜ ನಿಕ್ಷೇಪಗಳಿವೆ. ಮಾಗ್ನಸೈಟ್, ಡೋಲೋಮೈಟ್, ಸಿಮೆಂಟ್ ದರ್ಜೆಯ ಸುಣ್ಣದ ಕಲ್ಲು, ರೂಫಿಂಗ್ ಸ್ಟೆಟ್, ನೆಲಗಟ್ಟು ಕಲ್ಲು ಮತ್ತಿ ಜಿಪ್ಸಂ ನಿಕ್ಷೇಪಗಳಿವೆ. ಇವುಗಳಲ್ಲದೇ ಅಲ್ಪಪ್ರಮಾಣದಲ್ಲಿ ಸ್ವೀಟೈಟ್, ಟಾಲ್ಕ್, ಪಾಸ್ಟೋರೈಟ್, ಲಿಗ್ನೈಟ್, ಕಲ್ಲುಪ್ಪು, ಬೇಸ್‌ಮೆಟಲ್‌ನಂತಹ ಕೆಲವು ಖನಿಜಗಳೂ ಸಹ ದೊರೆಯುತ್ತವೆ. ಹೀಗೆ ಪರ್ವತಗಳಿಂದ ಸಾಕಷ್ಟು ಖನಿಜಗಳು ದೊರೆಯುತ್ತವೆ. ಪರ್ವತಗಳು ಇಲ್ಲವಾದರೆ ಈ ಖನಿಜಗಳು ಬಳಕೆಗೆ ದೊರಕಲಾರವು. ಈಗ ಹೇಳಿ ಪರ್ವತಗಳು ನಮಗೆ ಬೇಕೋ? ಬೇಡವೋ? ಬೇಕು ಎನ್ನುವುದಾದರೆ ಅವುಗಳನ್ನು ಉಳಿಸಿಕೊಂಡು ನಮ್ಮನ್ನು ರಕ್ಷಿಸಿಕೊಳ್ಳೋಣವೇ?

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News