ಎನ್‌ಐಎ ದಾಳಿಯ ಹಿಂದೆ ಪ್ರತಿಭಟನೆ, ಭಿನ್ನಮತ ಹತ್ತಿಕ್ಕುವ ದುರುದ್ದೇಶ: ಆಂಧ್ರ ಮಾನವಹಕ್ಕು ವೇದಿಕೆ ಆರೋಪ

Update: 2021-04-06 17:15 GMT

 ಹೊಸದಿಲ್ಲಿ,ಎ.6: ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹೋರಾಟಗಾರರು ಹಾಗೂ ಬರಹಗಾರರ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ದಾಳಿಗಳು ಕಾನೂನುಬದ್ಧವಾದ ಭಿನ್ನಮತ ಹಾಗೂ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಲಾಗುತ್ತಿರುವ ಸ್ಪಷ್ಟವಾದ ಬೆದರಿಕೆಯಾಗಿದೆ ಹಾಗೂ ಮಾನವಹಕ್ಕುಗಳ ಹೋರಾಟಗಳಿಗೆ ಕಳಂಕ ಹಚ್ಚುವ ಉದ್ದೇಶವನ್ನು ಹೊಂದಿದೆ ಎಂದು ಆಂಧ್ರಪ್ರದೇಶದ ಮಾನವಹಕ್ಕುಗಳ ವೇದಿಕೆ ಆರೋಪಿಸಿದೆ.

2007ರಲ್ಲಿ ವಿಶಾಖಪಟ್ಟಣಂನ ವಕಪಲ್ಲಿ ಗ್ರಾಮದಲ್ಲಿ ವಿಶೇಷ ಪಡೆಗಳ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾದರೆನ್ನಲಾದ 11 ಮಹಿಳೆಯರು ಪೊಲೀಸರ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಅವರ ಮೇಲೆ ಮಾನವಹ್ಕುಗಳ ಸಮನ್ನಯ ಸಮಿತಿಯ ಸದಸ್ಯ ವಿ.ಕೆ. ಕೃಷ್ಣ ಒತ್ತಡ ಹೇರಿದ್ದಾರೆಂದು ಆರೋಪಿಸಿ ಮುಂಚಿಂಗಪುಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಮಾನವಹಕ್ಕುಗಳ ವೇದಿಕೆ ಖಂಡಿಸಿದೆ.

‘‘ಈ ಎಫ್‌ಐಆರ್‌ನಲ್ಲಿರುವ ಅಂಶಗಳು ಸುಳ್ಳುಗಳ ಪಠಣವಾಗಿದೆ ಎಂದು ಮಾನವಹಕ್ಕುಗಳ ವೇದಿಕೆಯು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕೃಷ್ಣ ವಿರುದ್ಧ ದಮನಕಾರಿ ಆರೋಪವನ್ನು ಹೊರಿಸಲಾಗಿದೆ ಎಂದು ವೇದಿಕೆ ಆರೋಪಿಸಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯದೊರಕಿಸುವುದಕ್ಕಾಗಿ ವೇದಿಕೆಯು, ಹಲವಾರು ಆದಿವಾಸಿ ಮಹಿಳೆಯರು, ಸಾರ್ವಜನಿಕ ಸಂಘಸಂಸ್ಥೆಗಳು ಹಾಗೂ ಸಾಮೂಹಿಕ ಸಂಘಟನೆಗಳು 2007ರಿಂದೀಚೆಗೆ ಸಕ್ರಿಯವಾಗಿ ಹೋರಾಡುತ್ತಿದೆಯೆಂದು ಅದು ಹೇಳಿದೆ.

 ಕೃಷ್ಣಾ ವಿರುದ್ಧ ಹೊರಿಸಲಾದ ಆರೋಪವು ಸೇಡಿನ ಮನೋಭಾವದ ಸ್ಪಷ್ಟ ನಿದರ್ಶನವಾಗಿದೆ ಎಂದದು ಹೇಳಿದೆ.

ಎಪ್ರಿಲ್ 1ರಂದು ಎನ್‌ಐಎ ದಾಳಿ ನಡೆದ ಬಳಿಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ‘ನಗರ ಮಾವೋವಾದ’ದ ಮಹಾಸಂಚು ನಡೆಯುತ್ತಿದೆ ಎಂಬ ಕಥೆಯನ್ನು ಹೆಣೆಯಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News