ಆರೆಸ್ಸೆಸ್ ಗಳಿಸುತ್ತಿರುವ ಪ್ರಾಬಲ್ಯಕ್ಕೆ ಯುರೋಪಿಯನ್ ಸಂಸದರಿಂದ ಕಳವಳ

Update: 2021-04-11 17:32 GMT

ಪ್ಯಾರಿಸ್ (ಫ್ರಾನ್ಸ್), ಎ. 11: ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್ ) ಗಳಿಸುತ್ತಿರುವ ಪ್ರಾಬಲ್ಯದ ಬಗ್ಗೆ ಯುರೋಪಿಯನ್ ಸಂಸದರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್‌ನ ಭಾರತ ರಾಯಭಾರಿ ಇಮಾನುಯೆಲ್ ಲೆನೈನ್ ಆರ್‌ಎಸ್‌ಎಸ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿರುವುದಕ್ಕೆ ಫ್ರಾನ್ಸ್ ಸಂಸದೆ ಕ್ಲೆಮಂಟೈನ್ ಆಟೈನ್ ಇತ್ತೀಚೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶ ವ್ಯವಹಾರಗಳ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ರಾನ್ಸ್ ರಾಯಭಾರಿಯು ಫೆಬ್ರವರಿ 9ರಂದು ನಾಗಪುರದಲ್ಲಿರುವ ಆರೆಸ್ಸೆಸ್  ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

‘‘ಆರೆಸ್ಸೆಸ್  ಹಿಂದೂ ರಾಷ್ಟ್ರೀಯವಾದಿ ಪ್ಯಾರಾಮಿಲಿಟರಿ (ಅರೆ ಸೇನಾ) ಗುಂಪು. ಆ ಸಂಘಟನೆಯ ಆರಂಭಿಕ ನಾಯಕರು, ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸೊಲಿನಿಯನ್ನು ಬಹಿರಂಗವಾಗಿ ಪ್ರಶಂಸಿಸಿದ್ದರು. ಧರ್ಮಗಳ ಮಧ್ಯೆ ವ್ಯವಸ್ಥಿತವಾಗಿ ದ್ವೇಷ ಬಿತ್ತುವ ಕೆಲಸವನ್ನು ಹಾಗೂ ಹಿಂಸಾಕೃತ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಆರೋಪಗಳನ್ನು ಅದು ಎದುರಿಸುತ್ತಿದೆ’’ ಎಂದು ಇತ್ತೀಚೆಗೆ ಫ್ರಾನ್ಸ್ ನ್ಯಾಶನಲ್ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು ಹೇಳಿದರು.

‘‘ಸರಕಾರಿ ಕರ್ತವ್ಯಗಳನ್ನು ಹೊಂದಿರದ ಹಾಗೂ ಜನಾದೇಶವಿಲ್ಲದ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಮತ್ತು ಫ್ರಾನ್ಸ್ ಸರಕಾರದ ನಡುವಿನ ನಂಟು ಏನು?’’ ಎಂದು ಅವರು ಪ್ರಶ್ನಿಸಿದರು.

ಜರ್ಮನಿ ರಾಯಭಾರಿ-ಭಾಗವತ್ ಭೇಟಿ

2021ರ ಆದಿ ಭಾಗದಲ್ಲಿ, ಜರ್ಮನಿಯ ಡೈ ಲಿಂಕ್ ಪಾರ್ಟಿಗೆ ಸೇರಿದ 10ಕ್ಕೂ ಅಧಿಕ ಸಂಸದರ ಗುಂಪೊಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಟೀಕಿಸಿತ್ತು ಹಾಗೂ ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಜರ್ಮನ್ ಸರಕಾರದ ನಿಲುವೇನು ಎಂದು ಕೇಳಿತ್ತು.

‘‘ಸರಕಾರದ ಟೀಕಾಕಾರರನ್ನು ದಮನಿಸಲು ಹಾಗೂ ಮಾನವಹಕ್ಕುಗಳ ಹೋರಾಟಗಾರರು ತಮ್ಮ ಕಾನೂನುಬದ್ಧ ಕೆಲಸವನ್ನು ಮಾಡುವುದರಿಂದ ತಡೆಯಲು ಭಾರತ ಸರಕಾರವು ರಾಷ್ಟೀಯ ಭದ್ರತೆಯ ಸೋಗಿನಲ್ಲಿ ಅವರ ವಿರುದ್ಧ ಹಲವಾರು ಕಠೋರ ಕಾನೂನುಗಳನ್ನು ಬಳಸುತ್ತಿದೆ’’ ಎಂಬುದಾಗಿ ಈ ಗುಂಪು ಹೇಳಿತ್ತು.

 2019 ಜುಲೈನಲ್ಲಿ, ಜರ್ಮನಿಯ ಭಾರತ ರಾಯಭಾರಿ ವಾಲ್ಟರ್ ಲಿಂಡ್‌ನರ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರನ್ನು ಅವರ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿದ್ದರು. ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು ಹಾಗೂ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಆಸ್ಟ್ರೇಲಿಯ ರಾಯಭಾರಿಯಿಂದ ಆರ್‌ಎಸ್‌ಎಸ್ ಮುಖ್ಯಸ್ಥರ ಭೇಟಿ

2020ರ ನವೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತೀಯ ರಾಯಭಾರಿ ಬಾರಿ ಒ’ಫರೆಲ್ ಅವರು ಮೋಹನ್ ಭಾಗವತ್‌ರನ್ನು ಭೇಟಿಯಾಗಿದ್ದರು. ಆಗ ಆಸ್ಟ್ರೇಲಿಯದ ಸೆನೆಟರ್ ಜಾನೆಟ್ ರೈಸ್ ಆರೆಸ್ಸೆಸ್  ಮತ್ತು ಆಸ್ಟ್ರೇಲಿಯ ರಾಯಭಾರಿಯ ವಿರುದ್ಧ ಕೆಂಡ ಕಾರಿದ್ದರು.

‘‘ಇದು ಅವಮಾನಕರ. ರಾಯಭಾರಿ ರಾಜೀನಾಮೆ ನೀಡಬೇಕೆಂದು ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದ್ದರು.

‘‘ಆರೆಸ್ಸೆಸ್  ಒಂದು ಫ್ಯಾಶಿಸ್ಟ್ ಸಂಘಟನೆ. ಅದು ಬಹಿರಂಗವಾಗಿಯೇ ಅಡಾಲ್ಫ್ ಹಿಟ್ಲರ್‌ನನ್ನು ಪ್ರಶಂಸಿಸುತ್ತದೆ ಹಾಗೂ ಹಿಟ್ಲರ್‌ನ ನಾಝಿ ಸರಕಾರದ ಆಡಳಿತದಲ್ಲಿ ನಡೆದ ಜನಾಂಗೀಯ ಹತ್ಯೆಯನ್ನು ಸಮರ್ಥಿಸುತ್ತದೆ’’ ಎಂದು ರೈಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News