ಅಂಟಾರ್ಕ್ಟಿಕಾದಲ್ಲಿ ಆಹಾರ ಬೇಯಿಸಿದರೆ...

Update: 2021-04-24 19:30 GMT

ನಮಗೆಲ್ಲಾ ತಿಳಿದಂತೆ ಅಂಟಾರ್ಕ್ಟಿಕಾ ಭೂಮಿಯ ಮೇಲಿನ ಅತ್ಯಂತ ತಂಪಾದ ಪ್ರದೇಶ ಸ್ಥಳ. ಇಲ್ಲಿ ಮಾನವರ ವಾಸ ತೀರಾ ವಿರಳ. ಅಲ್ಲದೆ ಪ್ರಾಣಿಗಳೂ ವಿರಳ. ಪೆಂಗ್ವಿನ್‌ನಂತಹ ಕೆಲವು ಶೀತ ಪ್ರಾಣಿಗಳು ಮಾತ್ರ ಇಲ್ಲಿ ಬದುಕುತ್ತವೆ. ಇಲ್ಲಿ ಅತ್ಯಂತ ಶೀತ ತಾಪಮಾನ -1290 ಫ್ಯಾರನ್‌ಹೀಟ್(-890 ಸೆಲ್ಸಿಯಸ್). ಅಂಟಾರ್ಕ್ಟಿಕಾದಲ್ಲಿ ಕಡಿಮೆ ತೇವಾಂಶವಿದೆ. ಆದ್ದರಿಂದ ಇದನ್ನು ವಿಶ್ವದ ಅತ್ಯಂತ ಒಣ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಅಂಟಾರ್ಕ್ಟಿಕಾದಲ್ಲಿ ಜನವಸತಿ ಇಲ್ಲ, ಪ್ರಾಣಿಗಳೂ ಇಲ್ಲ. ಆದಾಗ್ಯೂ ವಿಜ್ಞಾನಿಗಳ ಪಾಲಿಗೆ ಇದೊಂದು ಸ್ವರ್ಗ. ಕನಸಿನ ಮನೆ. ಅಧ್ಯಯನ ಮಾಡಲು ಜಗತ್ತಿನ ಮೂಲೆ ಮೂಲೆಗಳಿಂದ ವಿಜ್ಞಾನಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಸೂರ್ಯ ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ. ಆರು ತಿಂಗಳು ಹಗಲು ಮತ್ತು ಇನ್ನಾರು ತಿಂಗಳು ರಾತ್ರಿ. ಚಳಿಗಾಲದಲ್ಲಿ ಸೂರ್ಯನ ಶಾಖವಿಲ್ಲ. ದೇಹ ಬೆಚ್ಚಗಿಡಲು ಬೆಂಕಿ ಮತ್ತು ಉಣ್ಣೆ ಸ್ವೆಟರ್, ಕೈಗವಸು, ಸಾಕ್ಸ್‌ನಂತಹ ಪರಿಕರಗಳು ಬೇಕೇ ಬೇಕು. ಇಲ್ಲಿಗೆ ಬಂದ ವಿಜ್ಞಾನಿಗಳಲ್ಲಿ ಕೆಲವರು ವರ್ಷ ಪೂರ್ತಿ ವಾಸವಾಗುತ್ತಾರೆ. ಇನ್ನು ಕೆಲವರು ಆರು ತಿಂಗಳು ಮಾತ್ರ ವಾಸಿಸುತ್ತಾರೆ. ಹಾಗಾದರೆ ವಿಜ್ಞಾನಿಗಳು ಆಹಾರಕ್ಕೆ ಏನು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿಪರೀತ ಚಳಿಯಲ್ಲೂ ಹೇಗೆ ಆಹಾರ ಬೇಯಿಸಿಕೊಂಡು ತಿನ್ನುತ್ತಾರೆ ಎಂಬುದೇ ಈ ಕ್ಷಣದ ಚರ್ಚೆಯ ವಿಷಯ. ಬನ್ನಿ ಅಂಟಾರ್ಕ್ಟಿಕಾದಲ್ಲಿ ಹೇಗೆ ಆಹಾರ ಬೇಯಿಸಿಕೊಂಡು ತಿನ್ನುತ್ತಾರೆ ಎಂಬುದರ ಕುರಿತು ಚರ್ಚಿಸೋಣ.

ಅಂಟಾರ್ಕ್ಟಿಕಾ ನಿರ್ಜನ ಪ್ರದೇಶವಾದರೂ ಇಲ್ಲಿ ಬೇರೆ ಬೇರೆ ರಾಷ್ಟ್ರಗಳಿಂದ ಅಧ್ಯಯನಕ್ಕೆಂದು ಬಂದ ವಿಜ್ಞಾನಿಗಳಿದ್ದಾರೆ. ಅದಕ್ಕೆಂದೇ ಮೆಕ್ಮುರ್ಡೊದಲ್ಲಿ ಒಂದು ಸಂಶೋಧನಾಲಯ ಕೇಂದ್ರವೂ ಇಲ್ಲಿದೆ. ಖಗೋಳವಿಜ್ಞಾನ, ಹವಾಮಾನ ವಿಜ್ಞಾನ, ಜೀವಶಾಸ್ತ್ರ, ಭೂವಿಜ್ಞಾನ, ಪರಿಸರ ವಿಜ್ಞಾನ, ಸಾಗರ ಜೀವಶಾಸ್ತ್ರ, ಸಮುದ್ರಶಾಸ್ತ್ರ, ಮುಂತಾದ ವಿಭಾಗಗಳಿದ್ದು ಹೊಸ ಹೊಸ ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಮೆಕ್ಮುರ್ಡೊದ ಸಂಶೋಧನಾ ಕೇಂದ್ರ ಒಂದು ಸಾವಿರ ಜನರು ವಾಸಿಸಬಹುದಾದಷ್ಟು ವಿಶಾಲವಾಗಿದೆ. ಈ ಕೇಂದ್ರದಲ್ಲಿ ಅಡುಗೆಯವರು ಸೇರಿದಂತೆ ಸೈನಿಕರೂ ಇದ್ದಾರೆ. ಇಲ್ಲಿಗೆ ಹೋಗಲು ಸುಸಜ್ಜಿತವಾದ ಹಾರ್ಬರ್ ಮತ್ತು ಹೆಲಿಪ್ಯಾಡ್ ಇದೆ. ಹಣ್ಣು, ತರಕಾರಿ ಹಾಗೂ ಇನ್ನಿತರ ತಾಜಾ ಆಹಾರ ಇಲ್ಲಿ ವಿರಳ. ಏಕೆಂದರೆ ನಾಗರಿಕ ವಿಮಾನಯಾನ ಇಲ್ಲಿಲ್ಲ. ಕೇವಲ ಸರಕು ವಿಮಾನಗಳು ಮಾತ್ರ ಸಂಚರಿಸುತ್ತವೆ. ನಾಗರಿಕ ವಿಮಾನಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾತ್ರ ಸಂಚರಿಸುತ್ತವೆ. ಹಾಗಾಗಿ ತಾಜಾ ಆಹಾರ ಇಲ್ಲಿ ದುರ್ಲಭ.

ಇಲ್ಲಿ ಒಣ ಮೀನು, ಹೆಪ್ಪುಗಟ್ಟಿಸಿದ ತರಕಾರಿ ಮತ್ತು ಸಂಸ್ಕರಿತ ಮಾಂಸ ಮಾತ್ರ ದೊರೆಯುತ್ತದೆ. ಮೊಸಳೆ ಮತ್ತು ಕಾಂಗರೂನಂತಹ ಕೆಲವು ವಿಲಕ್ಷಣ ಮಾಂಸವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ದೊರೆಯುತ್ತದೆ. ಇನ್‌ಸ್ಟಂಟ್ ನ್ಯೂಡಲ್ಸ್ ಮತ್ತು ಡ್ರೈಫ್ರೂಟ್ಸ್ ಮಾತ್ರ ಇಲ್ಲಿನವರಿಗೆ ವಿಫುಲ ಆಹಾರ. ಅಂಟಾರ್ಕ್ಟಿಕಾದ ಬಯಲಲ್ಲಿ ಆಹಾರ ಬೇಯಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡದೇ ಇರದು. ಹೌದು ಇಂತಹದ್ದೊಂದು ಪ್ರಯತ್ನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಏಕೆಂದರೆ ಹೊರಗಿನ ತಾಪಮಾನ -940 ಫ್ಯಾರನ್‌ಹೀಟ್ ಇರುವಾಗ ಒಲೆ ಹಚ್ಚಿ ಆಹಾರ ಬೇಯಿಸಲು ಸಾಧ್ಯವಾದೀತೇ?. ಬಯಲಲ್ಲಿ ಆಹಾರ ಬೇಯಿಸುವಂತಹ ಸಾಹಸಕ್ಕೆ ಅಲ್ಲಿನ ಬಾಣಸಿಗರು ಕೈಹಾಕಿ ಸೋತಿದ್ದಾರೆ. ಅವರು ಮಾಡಿದ ಅನೇಕ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಮೊದಲೇ ಇದು ತುಂಬಾ ಶೀತಪ್ರದೇಶ. ಆಹಾರದ ಯಾವುದೇ ದ್ರವ ಘಟಕ ತ್ವರಿತವಾಗಿ ಘನೀಕೃತವಾಗುತ್ತದೆ. ಬೆಳಕಿನ ವೇಗದ ಶಾಖದಿಂದಲೂ ಇಲ್ಲಿ ಏನನ್ನೂ ಬೇಯಿಸಲಾಗುವುದಿಲ್ಲವಂತೆ. ಅಬ್ಬಬ್ಬಾ!. ಆದರೆ ಇಲ್ಲಿ ಒಂದು ಅವಕಾಶವಿದೆ. ಎಂತಹ ಆಹಾರವನ್ನೂ ಕೊಳೆಯದೆ ಹಾಗೆ ಸಂರಕ್ಷಿಸಬಹುದು. ಇತರ ಕಡೆಗಳಲ್ಲಾದರೆ ಅಳಿದುಳಿದ ಆಹಾರವನ್ನು ತಟ್ಟೆಯಲ್ಲಿ ಬಿಟ್ಟು ಕೈತೊಳೆಯವುದು ಸಹಜ. ಹೊಟೇಲ್, ಚೌಲ್ಟ್ರಿಗಳಲ್ಲಿ ಸಾಕಷ್ಟು ಆಹಾರವನ್ನು ಚೆಲ್ಲುವುದೇ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ಅಂಟಾರ್ಕ್ಟಿಟಿಕಾದಲ್ಲಿ ಅಳಿದುಳಿದ ಆಹಾರವನ್ನು ಸುಲಭವಾಗಿ ಹಿಮದಲ್ಲಿ ಹೂತಿಟ್ಟು ಸಂರಕ್ಷಿಸಬಹುದು.

ವಿಭಿನ್ನ ಹಾಗೂ ವಿಫಲ ಪ್ರಯತ್ನಗಳು:

ಖಗೋಳ ಜೀವವಿಜ್ಞಾನಿ ಸೈಪ್ರಿಯನ್ ವರ್ಸುಯಕ್ಸ್ ಅವರು ಬ್ರೆಡ್ಡಿನ ತುಂಡಿನ ಮೇಲೆ ಜೇನು ತುಪ್ಪಸುರಿಯಲು ಮಾಡಿದ ಪ್ರಯತ್ನವೊಂದು ವಿಫಲವಾಯಿತು. ಅವರು ಬ್ರೆಡ್ಡಿನ ಮೇಲೆ ಜೇನುತುಪ್ಪಸುರಿಯಲು ಪ್ರಾರಂಭಿಸುತ್ತಿದ್ದಂತೆ ಎರಡೂ ವಸ್ತುಗಳು ಕ್ಷಣಾರ್ಧದಲ್ಲಿ ಹೆಪ್ಪುಗಟ್ಟಿದವು. ಇದು ನಂಬಲಸಾಧ್ಯವಾದರೂ ಸತ್ಯ. ಬಾಟಲಿಯಿಂದ ಜೇನು ಹೊರಬರುತ್ತಿದ್ದಂತೆ ವಾತಾವರಣದ ತಂಪಿನಿಂದ ಹೆಪ್ಪುಗಟ್ಟತೊಡಗಿತು ಎನ್ನುತ್ತಾರೆ ಸೈಪ್ರಿಯನ್ ವರ್ಸುಯಕ್ಸ್. ಅಂತೆಯೇ ಅಲ್ಲಿ ಬೆಣ್ಣೆಯನ್ನು ಕರಗಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ. ಶಾಖದಿಂದ ಬೆಣ್ಣೆಯನ್ನು ಕರಗಿಸಿ ತುಪ್ಪ ಮಾಡಿದರೆ ಪುನಃ ಅದನ್ನು ಇನ್ನೊಂದು ಪಾತ್ರೆಗೆ ಸುರಿಯುವ ವೇಳೆಯಲ್ಲಿಯೇ ಅದು ಘನೀಭವಿಸತೊಡಗುತ್ತದೆ. ಹಾಗಾಗಿ ಅದನ್ನು ದ್ರವರೂಪದಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ.

ಅಂಟಾರ್ಕ್ಟಿಕಾದಲ್ಲಿ ಹಸಿ ಮೊಟ್ಟೆಯನ್ನು ತಿನ್ನಲು ಸಾಧ್ಯವಿಲ್ಲ. ಮೊಟ್ಟೆಯ ಚಿಪ್ಪುಸೀಳುತ್ತಿದ್ದಂತೆ ವಾತಾವರಣದ ತಂಪಿನಿಂದ ಘನೀಭವಿಸುತ್ತದೆ. ಹಾಗೆಯೇ ಸ್ಪಾಗೆಟ್ಟಿ(ಶಾವಿಗೆ/ನ್ಯೂಡಲ್ಸ್ ನಂತಹ ಖಾದ್ಯ)ಯನ್ನೂ ಹೊರಾಂಗಣದಲ್ಲಿ ತಿನ್ನಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಕುದಿಯುತ್ತಿರುವ ನೀರನ್ನು ಧಾರಕದಿಂದ ಇನ್ನೊಂದಕ್ಕೆ ಸುರಿಯುತ್ತಿದ್ದಂತೆ ವಾತಾವರಣದಲ್ಲೇ ಆವಿಯಾಗತೊಡಗುತ್ತದೆ. ಇದರ ಅನೇಕ ವೀಡಿಯೊಗಳು ಯೂಟ್ಯೂಬ್‌ನಲ್ಲಿ ಲಭ್ಯ ಇವೆ. ಕೇವಲ ಆಹಾರ ನೀರು ಮಾತ್ರವಲ್ಲ, ನೀರನ ಗುಳ್ಳೆಗಳೂ ಗಾಳಿಯಲ್ಲೇ ಹೆಪ್ಪುಗಟ್ಟುತ್ತವೆ. ಕೆಲವು ಗುಳ್ಳೆಗಳು ಘನೀಭವಿಸಿ ಮಂಜುಗಡ್ಡೆ ಚೂರುಗಳಾಗಿ ಸಿಡಿಯುತ್ತವೆ. ಮಂಜುಗಡ್ಡೆ ಗುಳ್ಳೆಗಳನ್ನು ಬಾಟಲಿ ಅಥವಾ ಗಾಜಿನ ವಸ್ತುಗಳಲ್ಲಿ ಸಂಗ್ರಹಿಸಿ ಅಲಂಕಾರಕ್ಕಾಗಿ ಬಳಸುವುದೂ ಉಂಟು. ಹಾಗಾಗಿ ಅಂಟಾರ್ಕ್ಟಿಕಾದಲ್ಲಿ ಏನಿದ್ದರೂ ಒಣ ಆಹಾರವೇ ಗತಿ ಅಲ್ಲವೇ? ನಮ್ಮಲ್ಲಿನಂತೆ ತೋಟದಲ್ಲಿ ಊಟ, ಹೊರಾಂಗಣ ಭೋಜನ ಮುಂತಾದವುಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಅಲ್ಲೇನಿದ್ದರೂ ಬೆಂಕಿಯಿಂದ ಬಾಣಲೆಗೆ, ಬಾಣಲೆಯಿಂದ ಬಾಯಿಗೆ ಹೋದರೆ ಮಾತ್ರ ಬಿಸಿ ಆಹಾರ, ಇಲ್ಲದಿದ್ದರೆ ತಣ್ಣಗಾದ ಆಹಾರವೇ ಗತಿ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News