ಸಿದ್ದೀಖ್ ಕಪ್ಪನ್ ಪತ್ನಿಯಿಂದ ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್
ತಿರುವನಂತಪುರಂ: ಹತ್ರಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಲು ಅಲ್ಲಿಗೆ ತೆರಳುತ್ತಿದ್ದ ವೇಳೆ ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಬಂಧಿತರಾಗಿರುವ ಕೇರಳದ ಪತ್ರಕರ್ತ ಸಿದ್ದೀಖ್ ಕಪ್ಪನ್ ಅವರ ಪತ್ನಿ ರೈಹಾನತ್ ಸಿದ್ದೀಖ್ ಅವರು ಉತ್ತರ ಪ್ರದೇಶ ಸರಕಾರಕ್ಕೆ ರವಿವಾರ ನ್ಯಾಯಾಂಗ ನಿಂದನೆ ನೋಟಿಸ್ ಕಳುಹಿಸಿದ್ದಾರೆ.
ಸಿದ್ದೀಖ್ ಕಪ್ಪನ್ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಎಪ್ರಿಲ್ 28ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉತ್ತರ ಪ್ರದೇಶ ಸರಕಾರ ಪಾಲಿಸಿಲ್ಲ ಎಂದು ಹೇಳಿ ರೈಹಾನತ್ ಅವರು ಈ ನೋಟಿಸ್ ಅನ್ನು ತಮ್ಮ ವಕೀಲ ವಿಲ್ಸ್ ಮ್ಯಾಥ್ಯೂಸ್ ಮೂಲಕ ಜಾರಿಗೊಳಿಸಿದ್ದಾರೆ. ಕಪ್ಪನ್ ಅವರ ಆರೋಗ್ಯ ಸ್ಥಿತಿ ಕುರಿತಂತೆ ಸುಪ್ರೀಂ ಕೋರ್ಟ್‍ಗೆ ದಾರಿ ತಪ್ಪಿಸುವ ಮಾಹಿತಿಯನ್ನು ಉತ್ತರ ಪ್ರದೇಶ ಸರಕಾರ ಉದ್ದೇಶಪೂರ್ವಕವಾಗಿ ನೀಡಿದೆ ಎಂದು ನೋಟಿಸ್‍ನಲ್ಲಿ ಆರೋಪಿಸಲಾಗಿದೆ.
ಕಪ್ಪನ್ ಅವರಿಗೆ ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಎಪ್ರಿಲ್ 28ರಂದು ನೀಡಿದ ಆದೇಶದ ಅನುಸಾರ ಅವರನ್ನು ಉತ್ತರ ಪ್ರದೇಶದ ಮಥುರಾ ಜೈಲಿನಿಂದ ರಾಜಧಾನಿಯ ಏಮ್ಸ್ ಆಸ್ಪತ್ರೆಗೆ ಎಪ್ರಿಲ್ 30ರಂದು ದಾಖಲಿಸಲಾಗಿದೆಯಾದರೂ ಅವರು ಕೋವಿಡ್‍ನಿಂದ ಇನ್ನೂ ಗುಣಮುಖರಾಗಿಲ್ಲದೇ ಇದ್ದರೂ ಮೇ 7ರಂದು ಅವರನ್ನು ಆಸ್ಪತ್ರೆಯಿಂದ ಮತ್ತೆ ಮಥುರಾ ಜೈಲಿನ ಐಸೊಲೇಶನ್ ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ ಎಂದು ನೋಟಿಸ್‍ನಲ್ಲಿ ಕಪ್ಪನ್ ಅವರ ಪತ್ನಿ ಆರೋಪಿಸಿದ್ದಾರೆ.
ಮೇ 1ರಂದು ಕಪ್ಪನ್ ಅವರ ಪತ್ನಿ ಹಾಗೂ ಪುತ್ರ ಕೇರಳದಿಂದ ಅವರನ್ನು ನೋಡಲೆಂದು ದಿಲ್ಲಿಗೆ ಬಂದಿದ್ದರೂ ನಿಯಮಗಳ ನೆಪವೊಡ್ಡಿ ಅವರಿಗೆ ಅನುಮತಿ ನಿರಾಕರಿಸಲಾಗಿತ್ತೆಂದು ಆರೋಪಿಸಲಾಗಿದೆ. ತಮ್ಮನ್ನು ಮೇ 7ರ ಬೆಳಿಗ್ಗೆ 2.30ಕ್ಕೆ ಮರಳಿ ಜೈಲಿಗೆ ತರಲಾಗಿದೆ ಹಾಗೂ ಯಾವುದೇ ಆಹಾರ ನೀಡಲಾಗಿಲ್ಲ ಹಾಗೂ ಉತ್ತಮವಲ್ಲದ ಸ್ಥಳದಲ್ಲಿರಿಸಲಾಗಿದೆ ಎಂದು ತಮಗೆ ಕಪ್ಪನ್ ದೂರವಾಣಿ ಮೂಲಕ ತಿಳಿಸಿದ್ದಾರೆಂದು ರೈಹಾನತ್ ಆರೋಪಿಸಿದ್ಧಾರೆ.
ಮಧುಮೇಹದಿಂದ ಬಳಲುತ್ತಿರುವ ಕಪ್ಪನ್ ಅವರನ್ನು ಏಮ್ಸ್ ಆಸ್ಪತ್ರೆಗೆ ಅಥವಾ ದಿಲ್ಲಿಯ ಯಾವುದೇ ಉತ್ತಮ ಆಸ್ಪತ್ರೆಗೆ ವೈದ್ಯರು ಇರುವ ಅಂಬ್ಯುಲೆನ್ಸ್‍ನಲ್ಲಿ ಆರು ಗಂಟೆಗಳೊಳಗಾಗಿ ಸಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.