ಬಿಬಿಸಿ ವರ್ಲ್ಡ್ ನ ಮಾದರಿಯಲ್ಲಿ ಜಾಗತಿಕ ಟಿವಿ ಚಾನೆಲ್ ಆರಂಭಕ್ಕೆ ಕೇಂದ್ರದ ಚಿಂತನೆ: ವರದಿ

Update: 2021-05-20 17:45 GMT

ಹೊಸದಿಲ್ಲಿ, ಮೇ 20: ಪ್ರಮುಖ ಜಾಗತಿಕ ಮತ್ತು ದೇಶೀಯ ವಿಷಯಗಳ ಕುರಿತು ಭಾರತದ ಅಭಿಪ್ರಾಯವನ್ನು ಪ್ರಸ್ತುತಪಡಿಸುವ ಉದ್ದೇಶದಿಂದ, ಬಿಬಿಸಿ ವರ್ಲ್ಡ್ ಚಾನೆಲ್ನ ಮಾದರಿಯಲ್ಲಿ ‘ಡಿಡಿ ಇಂಟರ್ನ್ಯಾಷನಲ್’ ಎಂಬ ಹೊಸ ಟಿವಿ ಚಾನೆಲ್ ಆರಂಭಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಪ್ರಸಾರ ಭಾರತಿ ಕರಡು ಆಸಕ್ತಿ ಪಟ್ಟಿ(ಇಒಐ)ಯನ್ನು ಜಾರಿಗೊಳಿಸಿದ್ದು ಖಾಸಗಿ ಸಂಸ್ಥೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ. ‌

ಈ ಅಭಿಪ್ರಾಯವನ್ನು ಆಧರಿಸಿ ಕರಡು ಪಟ್ಟಿಯನ್ನು ಅಂತಿಮಗೊಳಿಸಿ ಬಳಿಕ, ಚಾನೆಲ್ ಆರಂಭದ ಬಗ್ಗೆ ವಿವರವಾದ ಯೋಜನಾ ವರದಿ ಸಲ್ಲಿಸಲು ಆಸಕ್ತ ಖಾಸಗಿ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಲಾಗುತ್ತದೆ. ಈ ಹೊಸ ಚಾನೆಲ್, ಬಿಬಿಸಿ ವರ್ಲ್ಡ್ ಚಾನೆಲ್ನಂತೆ ಕೇವಲ ಜಾಗತಿಕ ಚಾನೆಲ್ ಆಗಿ ಕಾರ್ಯನಿರ್ವಹಿಸಲಿದೆ ಮತ್ತು ಕೇವಲ ಭಾರತೀಯ ವೀಕ್ಷಕರಲ್ಲದೆ ಜಾಗತಿಕ ವೀಕ್ಷಕರೂ ಇದನ್ನು ವೀಕ್ಷಿಸಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಪ್ರಸಾರ ಭಾರತಿಯ ಮೂಲಗಳನ್ನು ಉಲ್ಲೇಖಿಸಿ "ದಿ ಪ್ರಿಂಟ್’ ವರದಿ ಮಾಡಿದೆ.
 
ಅಮೆರಿಕ ಸರಕಾರದ ಅನುದಾನಿತ ಸಂಸ್ಥೆ ‘ಫ್ರೀಡಂ ಹೌಸ್’ ಭಾರತದ ಸ್ಥಾನಮಾನವನ್ನು "ಮುಕ್ತ’ದಿಂದ ‘ಭಾಗಶಃ ಮುಕ್ತ’ ಹಂತಕ್ಕೆ ಇಳಿಸಿದ ಬಳಿಕ, ಭಾರತವೂ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಶ್ರೇಯಾಂಕ ನೀಡುವ ಮತ್ತು ಜಾಗತಿಕ ಪ್ರಜಾತಾಂತ್ರಿಕ ವರದಿ ನೀಡುವ ಟಿವಿ ವಾಹಿನಿಯೊಂದನ್ನು ಹೊಂದಿರಬೇಕು ಎಂದು ಕೇಂದ್ರ ಸರಕಾರ ನಿರ್ಧರಿಸಿದೆ. ಭಾರತದ ಸ್ವತಂತ್ರ ಚಿಂತಕರ ಚಾವಡಿಯ ಮೂಲಕ ಎರಡು ಹೊಸ ವಾಹಿನಿಗಳನ್ನು ಆರಂಭಿಸುವ ಕುರಿತು ವಿದೇಶ ವ್ಯವಹಾರ ಇಲಾಖೆ ಈಗಾಗಲೇ ಮಾತುಕತೆ ನಡೆಸಿದೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ.
 
ಈ ವರ್ಷದ ಮಾರ್ಚ್ನಲ್ಲಿ ಅಮೆರಿಕದ ಫ್ರೀಡಂ ಹೌಸ್ ಸಂಸ್ಥೆ ‘ಭಾರತದಲ್ಲಿ ಅಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಭಾರತದ ಸ್ಥಾನಮಾನವನ್ನು "ಮುಕ್ತ’ದಿಂದ ಭಾಗಶಃ ಮುಕ್ತ ಹಂತಕ್ಕೆ ಇಳಿಸಲಾಗುತ್ತದೆ. ಅಲ್ಲದೆ ರಾಜಕೀಯ ಮತ್ತು ನಾಗರಿಕ ಹಕ್ಕುಗಳ ವಿಷಯದಲ್ಲಿ, ದೇಶದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಯ ಆಧಾರದಲ್ಲಿ ಭಾರತದ ಜಾಗತಿಕ ಸ್ವಾತಂತ್ರ್ಯ ಅಂಕ 100ರಲ್ಲಿ 67 ಮಾತ್ರ ಎಂದು ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News