ರಾತ್ರಿಯಿಡೀ ಆಮ್ಲಜನಕ ಸ್ಥಗಿತಗೊಳಿಸಿ ಚಿತ್ರಹಿಂಸೆ: ಆಗ್ರಾದ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯಿಂದ ಕುಟುಂಬಕ್ಕೆ ಸಂದೇಶ
ಲಕ್ನೋ, ಜೂ.13: ಆಮ್ಲಜನಕ ಪೂರೈಕೆ ಸ್ಥಗಿತವಾದರೆ ರೋಗಿಗಳು ಯಾರೆಲ್ಲಾ ಬದುಕುಳಿಯಬಹುದು ಎಂಬುದನ್ನು ಪರಿಶೀಲಿಸಲು ಆಸ್ಪತ್ರೆಯ ಸಿಬಂದಿಗಳು ಆಮ್ಲಜನಕ ಸ್ಥಗಿತಗೊಳಿಸಿದ ಪ್ರಕರಣ ಇತ್ತೀಚೆಗೆ ಆಗ್ರಾದಲ್ಲಿ ವರದಿಯಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದುರಂತದಲ್ಲಿ ಮೃತಪಟ್ಟಿದ್ದ 22 ರೋಗಿಗಳಲ್ಲಿ 36 ವರ್ಷದ ರಾಧಿಕಾ ಅಗರ್ವಾಲ್, ಕೊನೆ ಕ್ಷಣದಲ್ಲಿ ತನ್ನ ಪತಿಗೆ ಕಳಿಸಿದ ಮೊಬೈಲ್ ಸಂದೇಶ ಈಗ ಬಹಿರಂಗಗೊಂಡಿದೆ. ‘ರಾತ್ರಿಯಿಡೀ ಆಮ್ಲಜನಕ ಪೂರೈಸದೆ ಚಿತ್ರಹಿಂಸೆ ನೀಡಲಾಗಿದೆ. ನಾನು ಇನ್ನೇನು ಸಾಯುವ ಸ್ಥಿತಿಗೆ ತಲುಪಿದ್ದೇನೆ’ ಎಂದು ಒಂದು ಸಂದೇಶದಲ್ಲಿ ತಿಳಿಸಿದ್ದರೆ, ಪದೇ ಪದೇ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇಲ್ಲಿ ಎಲ್ಲರೂ ಯಾತನೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನನ್ನನ್ನು ಬೇರೆಡೆ ಕರೆದೊಯ್ಯಿರಿ, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಮತ್ತೊಂದು ಸಂದೇಶ ರವಾನಿಸಿದ್ದಾರೆ.
ಮರುದಿನ ಬೆಳಿಗ್ಗೆ ರಾಧಿಕಾ ಅಗರ್ವಾಲ್ ಮೃತಪಟ್ಟಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಾಧಿಕಾಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತು ಉಸಿರಾಟದ ತೊಂದರೆಯ ಕಾರಣದಿಂದ ಎಪ್ರಿಲ್ 15ರಂದು ಆಗ್ರಾದ ಶ್ರೀ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯವರು 3 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆ. ಆಕೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದು ಯಾವ ಆಸ್ಪತ್ರೆಯಲ್ಲೂ ಬೆಡ್ ಕಾಲಿಯಿರಲಿಲ್ಲ. ಎಪ್ರಿಲ್ 27ರಂದು ಬೆಳಿಗ್ಗೆ 6 ಗಂಟೆಗೆ(ಆಕೆ ಮೊಬೈಲ್ ಸಂದೇಶ ಕಳಿಸಿದ ಕೆಲ ಗಂಟೆಗಳ ಬಳಿಕ) ರಾಧಿಕಾ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ.
ರಾಧಿಕಾ ಮೊಬೈಲ್ ಸಂದೇಶದ ಆಧಾರದಲ್ಲಿ ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದಾಗ, ತನ್ನ ವಿರುದ್ಧ ಯಾವ ಆರೋಪವನ್ನೂ ಸಾಬೀತುಗೊಳಿಸಲು ಯಾರಿಂದಲೂ ಆಗದು ಎಂದು ಆಸ್ಪತ್ರೆಯ ಮಾಲಿಕ ಅರಿಂಜಯ್ ಜೈನ್ ಉಡಾಫೆಯಿಂದ ಉತ್ತರಿಸಿರುವುದಾಗಿ ಪರಿ ಸೌರಭ್ ಅಗರ್ವಾಲ್ ದೂರಿದ್ದಾರೆ.
ಪತ್ನಿ ಕಳಿಸಿದ ಮೊಬೈಲ್ ಸಂದೇಶವನ್ನು ಸೌರಭ್ ಅಗರ್ವಾಲ್ ಮಾಧ್ಯಮಗಳಿಗೆ ಬಹಿರಂಗಗೊಳಿಸಿದ್ದು ಇದರ ಆಧಾರದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರು ನನ್ನ ಪತ್ನಿಯನ್ನು ಸಾಯಿಸಿದ್ದಾರೆ. ವೈರಲ್ ಆದ ವೀಡಿಯೊದಲ್ಲಿ ತಾನೇ ಉದ್ದೇಶಪೂರ್ವಕವಾಗಿ ಆಮ್ಲಜನಕ ಸ್ಥಗಿತಗೊಳಿಸಿರುವುದಾಗಿ ಹೇಳಿಕೊಂಡಿದ್ದ ಆಸ್ಪತ್ರೆಯ ಮಾಲಿಕ ಅರಿಂಜಯ್ ಜೈನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಆಗ್ರಹಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ.