ಮೆಡಿಕಲ್ ಕಾಲೇಜ್ ಗೆ ಉಡುಪಿ PPP ಮಾದರಿಯಾಗಲಿ

Update: 2021-07-15 19:30 GMT

ಮೊನ್ನೆ (14-07-2021) ರಾಜ್ಯದ ಆರೋಗ್ಯ ಸಚಿವರು ಉಡುಪಿಯಲ್ಲಿ ಖಾಸಗಿ-ಸಾರ್ವಜನಿಕ ಪಾಲುಗಾರಿಕೆ (ppp)ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿರುವುದಾಗಿ ಪ್ರಕಟಿಸಿದ್ದಾರೆ. ಬಹುದಿನಗಳ ಉಡುಪಿ ಮೆಡಿಕಲ್ ಕಾಲೇಜು ಬೇಡಿಕೆಯನ್ನು ಈಡೇರಿಸಲು ರಾಜ್ಯಸರಕಾರ ಸನ್ನದ್ಧವಾಗಿರುವುದು ಅಭಿನಂದನಾರ್ಹ. ಅದು ಸರಿಯಾದ ಹಾದಿಯಲ್ಲಿ ಸಾಗಿ, ನಿಜ ಅರ್ಥದಲ್ಲಿ ಖಾಸಗಿ-ಸಾರ್ವಜನಿಕ ಪಾಲುಗಾರಿಕೆಯಲ್ಲಿ ಶೀಘ್ರ ನಿರ್ಮಾಣಗೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ಈ ಬಹಿರಂಗ ಪತ್ರ.

ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಈಗಾಗಲೇ ದೇಶದ ಅತ್ಯಂತ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಹೊಂದಿದೆ. ಹಾಗಾಗಿ, ಇಲ್ಲಿ ಅಂತಹದೇ ಮತ್ತೊಂದು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಪ್ರಸ್ತುತ. ಅದರಿಂದ ಜನಸಾಮಾನ್ಯರಿಗೆ ಸೇವೆಯಲ್ಲಿ, ವೈದ್ಯಕೀಯ ವೆಚ್ಚಗಳಲ್ಲಿ ದೊಡ್ಡ ಬದಲಾವಣೆಯೇನೂ ಸಿಗದು. ಈಗಾಗಲೇ ಗಂಭೀರ ಸ್ವರೂಪ ತಳೆದಿರುವ ದೇಶದ ಸಂಪನ್ಮೂಲಗಳ ಅಸಮತೋಲನವನ್ನು ನೀಗುವ ನಿಟ್ಟಿನಲ್ಲಿ, ಜನಸಾಮಾನ್ಯರು ದೇಶದ ಆರ್ಥಿಕತೆಯ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವಂತಾಗುವುದಕ್ಕೆ ಸದ್ಯ ಕಾಣುತ್ತಿರುವ ಏಕೈಕ ಪರಿಹಾರ ಸಹಕಾರಿ ರಂಗ. ಸಹಕಾರಿ ರಂಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜನ್ನು ಉಡುಪಿಯಲ್ಲಿ ಆರಂಭಿಸುವ ಮೂಲಕ ಸಂಪನ್ಮೂಲ ಹಂಚಿಕೆಯಲ್ಲಿ ಹೊಸ ಮಾದರಿಯನ್ನು ರಾಜ್ಯದ ಮುಂದಿಡಬೇಕೆಂದು ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. (ಈ ಪತ್ರದ ಪ್ರತಿಯನ್ನು ವೈಯಕ್ತಿಕವಾಗಿಯೂ ಅವರಿಗೆ ತಲುಪಿಸಲಿದ್ದೇನೆ).

ಸಹಕಾರಿ ರಂಗದಲ್ಲಿ ವೈದ್ಯಕೀಯ ಆಸ್ಪತ್ರೆಗಳು, ಕಾಲೇಜುಗಳು ಹೊಸ ಬೆಳವಣಿಗೆಯೇನಲ್ಲ. ದೇಶದಲ್ಲಿ ಈಗಾಗಲೇ 52 ಸಹಕಾರಿ ರಂಗದ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ; ನೆರೆಯ ಕೇರಳದಲ್ಲಿ ಹಲವು ಸಹಕಾರಿ ವೈದ್ಯಕೀಯ ಕಾಲೇಜುಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ದೇಶದ ಸಹಕಾರಿ ರಂಗಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಈಗ ಸಹಕಾರಿ ರಂಗದಲ್ಲಿ ಎಲ್ಲ ಪಕ್ಷ ರಾಜಕೀಯಗಳನ್ನು ಬದಿಗಿಟ್ಟು, ನಾಡಿನ ಹಿತಾಸಕ್ತಿಯಿಂದ ಮೆಡಿಕಲ್ ಕಾಲೇಜೊಂದನ್ನು ಸ್ಥಾಪಿಸಲು ಮುಂದಾದರೆ, ತಮ್ಮೆಲ್ಲರ ಹೆಸರುಗಳೂ ಕರಾವಳಿಯಲ್ಲಿ ಅಜರಾಮರವಾಗಲಿವೆ. ಜೊತೆಗೆ, ಯಾರೋ ಹಣವಂತರು, ಕಾರ್ಪೊರೇಟ್ ಶಕ್ತಿಗಳು ಉಡುಪಿ ಜಿಲ್ಲೆಯ ಜನರ ಸುಲಿಗೆ ಅಂಗಡಿ ತೆರೆಯುವುದು ತಪ್ಪಲಿದೆ.

ಸಂತಸದ ಸಂಗತಿ ಎಂದರೆ, ಕೊರೋನ ಕಾಲದಲ್ಲಿ ಆರೋಗ್ಯರಂಗಕ್ಕೆ ಸಹಕಾರಿ ಪ್ರವೇಶವನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರವು ‘‘ಆಯುಷ್ಮಾನ್ ಸಹಕಾರ್’’ ಯೋಜನೆಯನ್ವಯ National Cooperative Development Corporation (NCDC) ಮೂಲಕ ಯೋಜನೆಯ ಶೇ. 90 ಹಣಕಾಸನ್ನು ಒದಗಿಸಲು ಸಿದ್ಧ ಎಂದು ಪ್ರಕಟಿಸಿದೆ. ಇದಕ್ಕೆಂದೇ ಕೇಂದ್ರ ಸರಕಾರ 10,000 ಕೋಟಿ ರೂ.ಗಳನ್ನು ತೆಗೆದಿರಿಸಿರುವುದಾಗಿ ಕೃಷಿ ಇಲಾಖೆಯ ರಾಜ್ಯ ಸಚಿವರಾಗಿದ್ದ ಪುರುಷೋತ್ತಮ್ ರುಪಾಲಾ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಿದ್ದರು.
(https://pib.gov.in/PressReleasePage.aspx?PRID=1665800)

ಈಗ ಆ ಜಾಗದಲ್ಲಿರುವ ಕೃಷಿ ಸಚಿವರು ಉಡುಪಿಯವರೇ. ಜೊತೆಗೆ, ಸಹಕಾರ ಇಲಾಖೆ ಪ್ರತ್ಯೇಕಗೊಳ್ಳುವ ಹಂತದಲ್ಲಿದೆ. ಹಾಗಾಗಿ, ತಕ್ಷಣ ಉಡುಪಿಯಲ್ಲಿ ಸಹಕಾರಿ ರಂಗದ ಮೂಲಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಗತ್ಯ ಇರುವ ಪ್ರಯತ್ನಗಳನ್ನು ಕೈಗೊಳ್ಳಲು ಇದು ಸಕಾಲ.

ಉಡುಪಿ ಮೆಡಿಕಲ್ ಕಾಲೇಜಿಗೆ 30 ಎಕರೆ ಜಾಗ ಸಿದ್ಧಪಡಿಸಿಡಲಾಗಿದೆ ಎಂದು ಉಡುಪಿ ಶಾಸಕರು ಮೊನ್ನೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಆಸಕ್ತ ಖಾಸಗಿ ವೈದ್ಯರು ಸುಮಾರು 50-100 ಮಂದಿ, ಹಿರಿಯ ಸಹಕಾರಿಗಳು, ಜನಪ್ರತಿನಿಧಿಗಳು ಮತ್ತು ಅಗತ್ಯ ಬಿದ್ದರೆ ಸಹಕಾರಿ ಹೂಡಿಕೆದಾರರು ಸೇರಿಕೊಂಡು ಆದಷ್ಟು ಶೀಘ್ರವಾಗಿ ಸೂಕ್ತ ಸಹಕಾರಿಯೊಂದನ್ನು ರಚಿಸಿಕೊಂಡು ಅಥವಾ ಹಾಲಿ ಇರುವ ಸಹಕಾರಿಯೊಂದಕ್ಕೆ ಅಗತ್ಯ ಬೈಲಾ ತಿದ್ದುಪಡಿಗಳನ್ನು ಮಾಡಿಕೊಂಡು, ಉಡುಪಿ ಜಿಲ್ಲೆಯಲ್ಲಿ ಸಹಕಾರಿ ರಂಗದ ಮೆಡಿಕಲ್ ಕಾಲೇಜೊಂದನ್ನು ಸ್ಥಾಪಿಸುವ ಕನಸನ್ನು ಸಾಕಾರಗೊಳಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಪ್ರಸ್ತಾಪವನ್ನು ರಾಜ್ಯ ಸರಕಾರದ ಮುಂದಿರಿಸಬೇಕು ಎಂದು ಈ ಮೂಲಕ ಕೈಮುಗಿದು ಕೇಳಿಕೊಳ್ಳುತ್ತೇನೆ.

ಇಂತಹದೊಂದು ವೈದ್ಯಕೀಯ ಕಾಲೇಜು ಉಡುಪಿ ಜಿಲ್ಲೆಯ ಮತ್ತು ಆಸುಪಾಸಿನ ಬಡ, ಮಧ್ಯಮವರ್ಗದ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆಯನ್ನು ಸುಲಭ ಮತ್ತು ಕೈಗೆಟುಕುವ ದರದಲ್ಲಿ ಒದಗಿಸುವುದು ಸಾಧ್ಯವಾಗಲಿದೆಯಲ್ಲದೇ ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.
ಉಡುಪಿ ಜಿಲ್ಲೆಯ ನಾಗರಿಕರು ತಮ್ಮ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳಿಗೆ ಈ ನಿಟ್ಟಿನಲ್ಲಿ ಹಕ್ಕೊತ್ತಾಯ ಮಾಡಬೇಕು ಎಂಬ ಪ್ರಾರ್ಥನೆ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News