ಬುಡಕಟ್ಟು ಜನರ ಕಷ್ಟ, ನೋವುಗಳಿಗೆ ಮರುಗಿದ ಮೇರು ವ್ಯಕ್ತಿತ್ವ-ಕ್ಷೀರಸಾಗರ
ಸಾಹಿತಿ, ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಮತ್ತು ಸಹಜ ಕೃಷಿ ತಜ್ಞರಾದ ಕ್ಷೀರಸಾಗರ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ. ಬಹುಮುಖ ವ್ಯಕ್ತಿತ್ವದ ವೈಚಾರಿಕ ಹಿನ್ನೆಲೆಯ ಸಾಮಾಜಿಕ ಹೋರಾಟಗಾರರಾಗಿದ್ದ ಅವರು ರೈತ ಸಂಘ, ದಲಿತ ಸಂಘರ್ಷ ಸಮಿತಿ, ಬುಡಕಟ್ಟು ಕೃಷಿಕರ ಸಂಘ ಹಾಗೂ ಇನ್ನಿತರ ಪ್ರಗತಿಪರ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಅವರು ಹೆಗ್ಗಡದೇವನಕೋಟೆ ತಾಲೂಕಿನ ಹಲವು ಹೋರಾಟ ಮತ್ತು ಪ್ರತಿಭಟನೆಗಳ ಮುಂಚೂಣಿಯಲ್ಲಿರುತ್ತಿದ್ದರು. ಅವರು ಇಲ್ಲದ ಪ್ರತಿಭಟನೆಗಳನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಲೇಖಕ, ಅಂಕಣಕಾರ, ನೈಸರ್ಗಿಕ ಕೃಷಿಕ, ಪಕ್ಷಿತಜ್ಞ, ಶಿಕ್ಷಣ ತಜ್ಞ, ಪರಿಸರ ಪ್ರೇಮಿ, ಸಮಾಜ ಸೇವಕ ಹೀಗೆ ಅವರದು ಬಹುಮುಖ ವ್ಯಕ್ತಿತ್ವ.
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಜನಿಸಿದ ಕ್ಷೀರಸಾಗರ ಹೆಗ್ಗಡದೇವನಕೋಟೆಗೆ ಆಗಮಿಸಿದ್ದು ಆಕಸ್ಮಿಕ. ಬೆಂಗಳೂರಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರು ಜಾರಿಗೆ ತಂದ ಭೂಸುಧಾರಣೆಗಳ ಅಧ್ಯಯನಕ್ಕೆಂದು ಹೆಗ್ಗಡದೇವನಕೋಟೆ ತಾಲೂಕಿಗೆ ಆಗಮಿಸಿದ್ದರು. ಆಗ ಇಲ್ಲಿನ ಬುಡಕಟ್ಟು ಜನರ ಕಷ್ಟ, ನೋವುಗಳಿಗೆ ಮರುಗಿದ ಅವರು ಬುಡಕಟ್ಟು ಹಾಗೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಹೆಗ್ಗಡದೇವನಕೋಟೆ ತಾಲೂಕಿನ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ನೋಡಿ ಇವರ ಬಾಳಿನಲ್ಲಿ ಬೆಳಕು ತರಬೇಕು ಎಂಬ ಉದ್ದೇಶದಿಂದ ಇಲ್ಲಿನ ಜನರ ಸಂವೇದನೆಯಾಗಿ ಹೆಗ್ಗಡದೇವನಕೋಟೆಯಲ್ಲೇ ನೆಲೆಕಂಡುಕೊಂಡರು.
2018ರಲ್ಲಿ ನಡೆದ ಹೆಗ್ಗಡದೇವನಕೋಟೆ ತಾಲೂಕು ಮಟ್ಟದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನುಡಿ ಜಾತ್ರೆಯ ತೇರನ್ನೆಳೆದಿದ್ದರು. ತಾಲೂಕಿನ ಆದಿವಾಸಿಗಳ ಕುರಿತಾಗಿ ಅನೇಕ ಸರಕಾರೇತರ ಸಂಸ್ಥೆಗಳ ಮೂಲಕ ಸಾಕಷ್ಟು ಅಧ್ಯಯನ ನಡೆಸಿದ್ದ ಅವರು ಪ್ರತಿ ಹಾಡಿಗಳ ಭೌಗೋಳಿಕ ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸಿಕೊಂಡಿದ್ದಾರೆ. ಕಾಡಿನ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಆದಿವಾಸಿಗಳಾದ ಸೋಲಿಗ, ಜೇನುಕುರುಬ ಮತ್ತು ಲಂಬಾಣಿ ಭಾಷೆಯ ಪಠ್ಯಪುಸ್ತಕಗಳ ರಚನಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಮೈಸೂರು ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದ ಮೊದಲನೇ ಜಿಲ್ಲಾ ಮಹಾಕಾರ್ಯದರ್ಶಿಯಾಗಿ ಸಾಕ್ಷರತಾ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ನವ ಸಾಕ್ಷರರಿಗಾಗಿ ರಾಜ್ಯ ಸಂಪನ್ಮೂಲ ಕೇಂದ್ರಕ್ಕೆ ಐದು ಪುಸ್ತಕಗಳನ್ನು ಬರೆದಿದ್ದಾರೆ. ದಿಕ್ಕು ತಪ್ಪಿದ ಕರ್ನಾಟಕ ಭೂಸುಧಾರಣೆ(ಸಂಶೋಧನಾ ಗ್ರಂಥ), ಜೇನು ಆಕಾಶದ ಅರಮನೆಯೋ, ಕಾಡಿನ ಮಕ್ಕಳ ಒಡನಾಟದಲ್ಲಿ, ಕಾಡಿನ ನಾಡಿ ಮಿಡಿದವರು, ಮೌನ ಕ್ರಾಂತಿಯ ರೂವಾರಿಗಳು ಹಾಗೂ ಇತರ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಕಾಡಿನ ನಾಡಿ ಮಿಡಿದವರು’ ಕೃತಿಗೆ 2013ನೇ ಸಾಲಿನ ಜಾನಪದ ಅಕಾಡಮಿ ಪುಸ್ತಕ ಪ್ರಶಸ್ತಿ ಬಂದಿದೆ. ‘ಕಾಡಿನ ಮಕ್ಕಳ ಒಡನಾಟದಲ್ಲಿ’ ಕೃತಿಯನ್ನು ಟಾಟಾ ಎಜುಕೇಷನ್ ಟ್ರಸ್ಟ್‌ನವರು ‘ಪ್ಲೇಯಿಂಗ್ ವಿತ್‌ದಿ ಚಿಲ್ಡ್ರನ್ ಆಫ್ ದಿ ಫಾರೆಸ್ಟ್’ ಎಂಬ ಹೆಸರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೊರತಂದಿದ್ದಾರೆ.
‘ಕಾಡಿನ ಮಕ್ಕಳ ಒಡನಾಟದಲ್ಲಿ’ ಕೃತಿಯೂ ‘ಅ ಆ ಇ ಈ’ ಎಂಬ ಮಕ್ಕಳ ಚಲನಚಿತ್ರವಾಗಿ ತೆರೆಕಂಡಿದೆ. ಮತ್ತೊಂದು ಕೃತಿ ‘ಜೇನು ಆಕಾಶದ ಅರಮನೆಯೋ’ ‘ಕಿನ್ನೇರಿ’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ.
ಜೇನು ಕುರುಬರ ಪುರಾತನ ಸಂಸ್ಕೃತಿ ಮತ್ತು ಭಾಷೆ ಕುರಿತು ಸಮಗ್ರ ಮಾಹಿತಿಯನ್ನು ಟಾಟಾ ಎಜುಕೇಷನ್ ಟ್ರಸ್ಟ್‌ನ ಸಹಕಾರದೊಂದಿಗೆ ಡಿಜಿಟಲೀಕರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಜೀಂ ಪ್ರೇಮ್‌ಜಿ ಸಂಸ್ಥೆಯ ಮೂಲಕ ಸರಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ಕುರಿತು ‘ನಮ್ಮೂರ ಶಾಲೆ’ ಎಂಬ ಯೋಜನೆಯೊಂದನ್ನು ತಯಾರಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವವಾದ ಯೋಜನೆಯೊಂದನ್ನು ಹೊರತಂದಿದ್ದರು.
ರಾಜ್ಯದ ಹಲವಾರು ಪ್ರಮುಖ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು ಅಂಕಣಕಾರರಾಗಿಯೂ ಪ್ರಖ್ಯಾತಿ ಪಡೆದಿದ್ದಾರೆ.
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆಯುವ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕ್ಷೀರಸಾಗರ ಕಳೆದೆರಡು ವರ್ಷಗಳಿಂದ ತಾರಕ ಮತ್ತು ಹೆಬ್ಬಳ್ಳ ಅಚ್ಚುಕಟ್ಟು ರೈತರ ಹೋರಾಟ ಸಮಿತಿಯನ್ನು ರಚಿಸಿಕೊಂಡು ರೈತರೊಟ್ಟಿಗೆ ಧರಣಿ, ಸತ್ಯಾಗ್ರಹಗಳನ್ನು ಮಾಡಿ ಸುಮಾರು ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಏತ ನೀರಾವರಿ ಯೋಜನೆಗಳು ಜೀವ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಫೆಡಿನಾ ವಿಕಾಸ(ಬುಡಕಟ್ಟು ಜನರ ಸರಕಾರೇತರ ಸಂಸ್ಥೆ)ದೊಂದಿಗೆ ಭಾಗವಹಿಸಿ 1984ರಿಂದ 2002ರವರೆಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹೋರಾಟ ನಡೆಸುವ ಮೂಲಕ ಎಂಟು ಸಾವಿರ ಎಕರೆಯಷ್ಟು ಭೂಮಿಯನ್ನು ಕಾಡು ಕುರುಬರಿಗೆ ದೊರೆಯುವಂತೆ ಮಾಡಿದ್ದರು. ನಿರ್ಗತಿಕರು ಮತ್ತು ಸಮಾಜದ ಕಟ್ಟಕಡೆಯ ಜನರ ಕುರಿತು ಅವರಿಗಿದ್ದ ಕಾಳಜಿ ನಿಜಕ್ಕೂ ಅನುಕರಣೀಯ.
ಮೈಸೂರು ಜಿಲ್ಲೆಯ ಚಾಮಲಾಪುರದಲ್ಲಿ 2013-14ರಲ್ಲಿ ಸರಕಾರ 5,500 ಕೋಟಿ ರೂ. ವೆಚ್ಚದಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಹೊರಟಾಗ ರೈತ ಸಂಘ ಹಾಗೂ ಇನ್ನಿತರ ಪ್ರಗತಿಪರ ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಅದರ ವಿರುದ್ಧ ಹೋರಾಟ ನಡೆಸಿದ್ದರು. ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು ಮತ್ತು ಸಮೀಪದ ಕೃಷಿ ಭೂಮಿಗಳಿಗೆ ಇದು ಅಪಾಯಕಾರಿಯಾಗಿದೆ. ಥರ್ಮಲ್ ಯೋಜನೆಯನ್ನು ಜಾರಿಗೆ ತಂದರೆ ಪರಿಸರ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೆ ಗಂಭೀರವಾದ ಪರಿಣಾಮಗಳು ಬೀರುತ್ತವೆ ಎಂದು ಪ್ರತಿಪಾದಿಸಿದ್ದರು. ಸಂಘ-ಸಂಸ್ಥೆಗಳ ಪ್ರತಿಭಟನೆ ಯಿಂದಾಗಿ ಯೋಜನೆಯನ್ನು ಸರಕಾರ ಹಿಂದೆಗೆದುಕೊಂಡಿತು.
ಸಹಜ ಕೃಷಿಕರಾಗಿದ್ದ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷಿಗಳಿಗೆ ಮತ್ತು ಜೀವವೈವಿಧ್ಯಕ್ಕೆ ಪೂರಕವಾಗಿ ಮಾಡುತ್ತಿದ್ದ ಸಹಜ ಕೃಷಿ ನಿಜಕ್ಕೂ ಮಾದರಿಯಾಗಿದೆ. ಸದಾ ಕಾಲ ಹಚ್ಚ ಹಸಿರಿನೊಂದಿಗೆ ಕಂಗೊಳಿಸುತ್ತಿದ್ದ ಅವರ ತೋಟದಲ್ಲಿ ನಾನಾ ಜಾತಿಯ ಹಣ್ಣಿನ ಗಿಡಗಳು, ಅಲ್ಲಲ್ಲಿ ಬಾಳೆ, ತೋಟದ ಅಂಚಿನಲ್ಲಿ ಬೇವು, ಗ್ಲಿರಿಸಿಡಿಯಾ, ಸಿಲ್ವರ್, ಅಕೇಶಿಯಾ ಹೀಗೆ ಹಲವು ಬಗೆಯ ಮರಗಳಲ್ಲಿ ಹಲವಾರು ಜಾತಿಯ ಪಕ್ಷಿಗಳು, ಚಿಟ್ಟೆಗಳು ಜೀವನ ಸಾಗಿಸುತ್ತಿವೆ. ಅವರು ಹಣ್ಣುಗಳನ್ನು ಯಾವತ್ತೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿದವರಲ್ಲ. ಸಮೀಪದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಹಂಚಿ ಬಿಡುತ್ತಿದ್ದರು. ಉಳಿದವುಗಳು ಅಲ್ಲೇ ಉದುರಿ ಹಲವಾರು ಪಕ್ಷಿಗಳಿಗೆ ಆಹಾರವಾಗುತ್ತಿದ್ದವು. ಪಕ್ಷಿ, ಚಿಟ್ಟೆಗಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು ಕ್ಷೀರಸಾಗರ.
ತಾಲೂಕಿನ ಗಿರಿಜನರ ಸಂಸ್ಕೃತಿ, ಭಾಷೆಗಳ ಕುರಿತಾಗಿ ಸಾಕಷ್ಟು ಅಧ್ಯಯನಗಳನ್ನು ಮಾಡಿರುವುದಲ್ಲದೆ ಅವರ ಹಕ್ಕು ಮತ್ತು ರಕ್ಷಣೆಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಹೆಗ್ಗಡದೇವನಕೋಟೆ ತಾಲೂಕಿನ ನೆಲ, ಜಲ, ಕಾಡು, ಕಾಡಿನ ಮಕ್ಕಳ ಕುರಿತಾದ ಅವರ ಅಧ್ಯಯನ, ಸಮಾಜ ಸೇವೆ ಮತ್ತು ಹೋರಾಟದ ಬದುಕು ಇನ್ನಷ್ಟು ದಿನ ದೊರೆಯಬೇಕಾಗಿತ್ತು.