ಯೋಗೇಂದ್ರ ಯಾದವ್‌ ರನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ

Update: 2021-10-22 06:15 GMT

ಹೊಸದಿಲ್ಲಿ: ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರನ್ನು ಸಂಯುಕ್ತ ಕಿಸಾನ್ ಮೋರ್ಚಾದಿಂದ (ಎಸ್‌ಕೆಎಂ) ಒಂದು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ರೈತ ಮುಖಂಡರು ಗುರುವಾರ ತಿಳಿಸಿದ್ದಾರೆ. ಲಖಿಂಪುರ್ ಖೇರಿಯಲ್ಲಿ ಮೃತ ಬಿಜೆಪಿ ಸದಸ್ಯನ ಕುಟುಂಬಕ್ಕೆ ಭೇಟಿ ನೀಡಿದ ಘಟನೆಯ ಬಳಿಕ ರೈತರು ಈ ನಿರ್ಧಾರ ಕೈಗೊಂಡಿದ್ದಾರೆ.

"ಯೋಗೇಂದ್ರ ಯಾದವ್‌ ರನ್ನು ಒಂದು ತಿಂಗಳ ಕಾಲ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅವರು ವಾಹನ ಚಾಲಕನ ಕುಟುಂಬಕ್ಕೆ ಭೇಟಿ ನೀಡಿದ್ದು ರೈತರ ಹೋರಾಟದ ದೃಷ್ಟಿಯಲ್ಲಿ ಸರಿಯಾದುದಲ್ಲ. ಅಮಾನತು ವೇಳೆಯಲ್ಲಿ ಅವರು ನಡೆಸುವ ಭೇಟಿಗಳಿಗೆ, ಅಥವಾ ಅವರಿಗೆ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ, ಇತರ ರೈತರೊಂದಿಗೆ ಅವರು ಪ್ರತಿಭಟನೆಗಳಲ್ಲಿ ಭಾಗವಹಿಸಬಹುದು" ಎಂದು ಪಂಜಾಬ್‌ ಕಿಸಾನ್‌ ಯೂನಿಯನ್‌ ಅಧ್ಯಕ್ಷ ರುಲ್ಡು ಸಿಂಗ್‌ ಮಾನ್ಸ ತಿಳಿಸಿದ್ದಾರೆ.

ಅಕ್ಟೋಬರ್ 12 ರಂದು, ಯಾದವ್ ಬಿಜೆಪಿ ಕಾರ್ಯಕರ್ತ ಹಾಗೂ ವಾಹನ ಚಾಲಕ ಶುಭಂ ಮಿಶ್ರಾ ಕುಟುಂಬವನ್ನು ಭೇಟಿ ಮಾಡಿದ್ದರು. ಪ್ರತಿಭಟನಾ ನಿರತ ರೈತರ ಮೇಲೆ ವಾಹನವು ಹರಿದ ನಂತರ ಪ್ರತೀಕಾರದ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟಿದ್ದರು. ಬಳಿಕ ಯೋಗೇಂದ್ರ ಯಾದವ್‌, "ಶಹೀದ್ ಕಿಸಾನ್ ಶ್ರದ್ಧಾಂಜಲಿಯಿಂದ ಹಿಂದಿರುಗುತ್ತಿದ್ದಾಗ, ನಾನು ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಮನೆಗೆ ಭೇಟಿ ನೀಡಿದ್ದೆ. ಕುಟುಂಬವು ನಮ್ಮ ಮೇಲೆ ಕೋಪಗೊಳ್ಳಲಿಲ್ಲ. ಅವರು ಕೇಳಿದರು, ನಾವು ರೈತರಲ್ಲವೇ? ನಮ್ಮ ಮಗನ ತಪ್ಪೇನು? ನಿಮ್ಮ ಸಹಚರರು ಏಕೆ ಕ್ರಿಯೆ-ಪ್ರತಿಕ್ರಿಯೆ ಎಂದು ಹೇಳಿದರು? ಅವರ ಪ್ರಶ್ನೆಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ." ಎಂದು ಟ್ವೀಟ್‌ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News