ಮೆಹಬೂಬಾ ಮುಫ್ತಿ ವಿರುದ್ಧ ಮಾನಹಾನಿಕರ ಹೇಳಿಕೆ ಆರೋಪ: ಜಮ್ಮುಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಗೆ ನೋಟಿಸ್

Update: 2021-10-22 16:43 GMT

ಶ್ರೀನಗರ, ಅ. 22: ತನ್ನ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿ ಶುಕ್ರವಾರ ನೋಟಿಸ್ ರವಾನಿಸಿದ್ದಾರೆ. 

ರಾಜ್ಯದ ನಿವಾಸಿಗಳೆಗೆ ಭೂ ಒಡೆತನದ ಹಕ್ಕು ನೀಡುವ ಗುರಿ ಹೊಂದಿದ್ದ, ಈಗ ನಿರ್ಲಕ್ಷಿಸಲಾಗಿರುವ ರೋಶ್ನಿ ಯೋಜನೆಯ ಫಲಾನುಭವಿ ಮೆಹಬೂಬಾ ಮುಫ್ತಿ ಎಂದು ಪ್ರಸ್ತುತ ಮೇಘಾಲಯ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲ್ಲಿಕ್ ಆರೋಪಿಸಿದ ಬಳಿಕ ಮೆಹಬೂಬಾ ಮುಫ್ತಿ ಈ ನೋಟಿಸು ಜಾರಿ ಮಾಡಿದ್ದಾರೆ. 

ನಿಮ್ಮ ಹೇಳಿಕೆಯಿಂದ ನನ್ನ ಕಕ್ಷಿದಾರರು ಗೌರವ ಹಾಗೂ ಪ್ರತಿಷ್ಠೆಯನ್ನು ಕಳೆದುಕೊಂಡಿದ್ದಾರೆ. ಅದನ್ನು ಯಾವುದೇ ಮೊತ್ತದಿಂದ ಸರಿದೂಗಿಸಲು ಸಾಧ್ಯವಿಲ್ಲ. ಆದರೂ ನನ್ನ ಕಕ್ಷಿದಾರರು ಪರಿಹಾರಕ್ಕಾಗಿ ನಿಮ್ಮ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ ಎಂದು ಮೆಹಬೂಬಾ ಮುಫ್ತಿ ಅವರ ವಕೀಲ ಅನಿಲ್ ಸೇಥಿ ಅವರು ಕೂನೂನು ನೋಟಿಸ್ನಲ್ಲಿ ಹೇಳಿದ್ದಾರೆ. 30 ದಿನಗಳ ಒಳಗೆ 10 ಕೋಟಿ ರೂಪಾಯಿ 
ಪರಿಹಾರ ನೀಡಿ. ಇಲ್ಲವೇ, ಕಾನೂನು ಪ್ರಕ್ರಿಯೆ ಎದುರಿಸಲು ಸಿದ್ಧರಾಗಿ ಎಂದು ಮಲ್ಲಿಕ್ ಗೆ ನೀಡಿದ ನೋಟಿಸಿನಲ್ಲಿ ತಿಳಿಸಲಾಗಿದೆ. ಈ ಪರಿಹಾರ ಹಣವನ್ನು ಮುಫ್ತಿ ಮೆಹಬೂಬಾ ಅವರು ವೈಯಕ್ತಿಕವಾಗಿ ಬಳಸುವುದಿಲ್ಲ. ಬದಲಾಗಿ ಅವರು ಅದನ್ನು ಸಾರ್ವಜನಿಕರಿಗಾಗಿ ಬಳಸಲಿದ್ದಾರೆ ಎಂದು ನೋಟಿಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News