ಮಧ್ಯಪ್ರದೇಶ: ಲಸಿಕೆಯ ಎರಡೂ ಡೋಸ್ ಪಡೆದಿದ್ದ ಆರು ಜನರಿಗೆ ಡೆಲ್ಟಾ ಪ್ಲಸ್ ಎವೈ.4.2 ಸೋಂಕು

Update: 2021-10-25 17:35 GMT

ಇಂದೋರ,ಅ.25: ಮಧ್ಯಪ್ರದೇಶದ ಇಂದೋರಿನಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದ ಆರು ಜನರಲ್ಲಿ ವೈರಸ್‌ನ ನೂತನ ಪ್ರಭೇದ ಡೆಲ್ಟಾ ಪ್ಲಸ್ ಎವೈ.4.2 ಸೋಂಕು ಪತ್ತೆಯಾಗಿದೆ.

ದಿಲ್ಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ)ದಿಂದ ಸ್ವೀಕರಿಸಿರುವ ವರದಿಯಂತೆ ಆರು ಜನರು ಎವೈ.4.2 ಸೋಂಕಿಗೆ ತುತ್ತಾಗಿದ್ದಾರೆ. ಜೆನೋಮ್ ಸೀಕ್ವೆನ್ಸಿಂಗ್‌ಗಾಗಿ ಇತರ ಸೋಂಕಿತ ವ್ಯಕ್ತಿಗಳೊಂದಿಗೆ ಅವರ ಮಾದರಿಗಳನ್ನೂ ಸೆಪ್ಟಂಬರ್‌ನಲ್ಲಿ ಎನ್‌ಸಿಡಿಸಿಗೆ ಕಳುಹಿಸಲಾಗಿತ್ತು. ಸಾಂಕ್ರಾಮಿಕದ 19 ತಿಂಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎವೈ.4.2 ಪ್ರಭೇದ ಪತ್ತೆಯಾಗಿದೆ. ಈ ಎಲ್ಲ ಆರೂ ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದರು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಬಿ.ಎಸ್.ಸೈತಿಯಾ ಅವರು ಸೋಮವಾರ ತಿಳಿಸಿದರು.

ಕಳೆದ ಕೆಲವು ದಿನಗಳಲ್ಲಿ ಈ ಆರು ಜನರ ಸಂಪರ್ಕಕ್ಕೆ ಬಂದಿದ್ದ 50ಕ್ಕೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು,ಅವರೆಲ್ಲ ಆರೋಗ್ಯಯುತರಾಗಿರುವುದು ಕಂಡುಬಂದಿದೆ ಎಂದರು.

ಈ ನಡುವೆ ಇಂದೋರಿನ ಸರಕಾರಿ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಸೂಕ್ಷ್ಮಜೀವಾಣು ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅನಿತಾ ಮುಥಾ ಅವರು,ಎವೈ.4.2 ಕೊರೋನವೈರಸ್‌ನ ನೂತನ ಪ್ರಭೇದವಾಗಿದ್ದು,ಅದರ ತೀವ್ರತೆಯ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News