ಹಿಂದಿ ಹೇರಿಕೆ: ಭಾರತಿದಾಸನ್ ವಿ.ವಿ. ವಿರುದ್ಧ ಕ್ರಮಕ್ಕೆ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಆಗ್ರಹ

Update: 2021-12-08 18:00 GMT
Photo: PTI

ಚೆನ್ನೈ, ಡಿ. 8: ಭಾರತಿದಾಸನ್ ವಿಶ್ವವಿದ್ಯಾನಿಲಯ ತಮಿಳುನಾಡಿನಲ್ಲಿ ಹಿಂದಿ ಹೇರುತ್ತಿದೆ ಎಂದು ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಅನ್ಬುಮಣಿ ರಾಮದಾಸ್ ಅವರು ಆರೋಪಿಸಿದ್ದಾರೆ. ಭಾರತಿದಾಸನ್ ವಿಶ್ವವಿದ್ಯಾನಿಲಯ ತನ್ನ ಪದವಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಹಿಂದಿ ಪದಗಳನ್ನು ಬಳಕೆ ಮಾಡಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. 

ತಮಿಳುನಾಡು ಸರಕಾರದ ಸ್ವಾಮಿತ್ವದ ವಿಶ್ವವಿದ್ಯಾನಿಲಯದ ಹಿಂದಿ ಹೇರುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ. ಭಾರತಿದಾಸನ್ ವಿಶ್ವವಿದ್ಯಾನಿಲಯದ ಪದವಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ‘‘ಅಝಾದ್ ಕಿ ಅಮೃತ ಮಹೋತ್ಸವ್’’ ಎಂದು ರೋಮನ್ ಅಕ್ಷರದಲ್ಲಿ ಮುದ್ರಿಸಲಾಗಿತ್ತು. ತಮಿಳುನಾಡು ಸರಕಾರ ಒದಗಿಸಿದ ಘೋಷಣೆಯ ಭಾಷಾಂತರವನ್ನು ಮುದ್ರಿಸದೆ ಭಾರತಿದಾಸನ್ ವಿಶ್ವವಿದ್ಯಾನಿಲಯ ತಮಿಳುನಾಡು ಸರಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದೆ. ಇದು ಹಿಂದಿ ಹೇರಿಕೆಯ ತಂತ್ರ ಎಂದು ಅವರು ಹೇಳಿದ್ದಾರೆ. 

‘‘ತಮಿಳುನಾಡು ಸರಕಾರ ಸುಂದರ ಭಾಷಾಂತರವನ್ನು ಒದಗಿಸಿದ ಹೊರತಾಗಿಯೂ ಭಾರತಿದಾಸನ್ ವಿಶ್ವವಿದ್ಯಾನಿಲಯ ಹಿಂದಿ ಹೇರುವ ಉದ್ದೇಶದಿಂದ ಹಿಂದಿ ಘೋಷಣೆಯನ್ನೇ ಬಳಸಿದೆ. ತಮಿಳುನಾಡು ಸರಕಾರದ ಆದೇಶಗಳಿಗೆ ಗೌರವ ನೀಡದ ಭಾರತಿದಾಸನ್ ವಿಶ್ವವಿದ್ಯಾನಿಲಯವನ್ನು ಯಾರು ನಿಯಂತ್ರಿಸುತ್ತಿದ್ದಾರೆ’’ ಎಂದು ಅನ್ಬುಮಣಿ ರಾಮದಾಸ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News