ಮನಸ್ಸು ಒಡೆದರೆ ಕಟ್ಟುವುದು ಹೇಗೆ?

Update: 2022-02-06 19:30 GMT

ಸರಕಾರ ಅವರದ್ದೇ ಆಗಿರುವುದರಿಂದ ಹಿಜಾಬ್, ಶಾಲು ನಿರ್ಬಂಧ ಮಾಡಿದೆ. ಆದರೆ, ಇದು ಇಲ್ಲಿಗೆ ಮುಗಿಯುವ ಸಮಸ್ಯೆ ಅಲ್ಲ. ಬರೀ ಹಿಜಾಬ್ ವಿವಾದವಾಗಿದ್ದರೆ ಮಾತುಕತೆ ಮೂಲಕ ಬಗೆಹರಿಸಬಹುದಿತ್ತು. ಇದರ ಅಸಲಿ ವಿಷಯ ಬೇರೆ ಇದೆ. ಬರಲಿರುವ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇ ಬೇಕಾಗಿದೆ. ಅದಕ್ಕಾಗಿ ಈಗ ಹಿಜಾಬ್ ನೆಪ.


ಉತ್ತರ ಪ್ರದೇಶದ ಚುನಾವಣೆಯ ಪ್ರಚಾರ ಬಿಸಿಯೇರುತ್ತಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಮತ್ತು ಆ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭಾಷಣಗಳನ್ನು ಗಮನಿಸಿದರೆ ಕರಾವಳಿಯ ಅದರಲ್ಲೂ ಉಡುಪಿ, ಮಂಗಳೂರು ಮುಂತಾದ ಕಡೆ ಸೃಷ್ಟಿ ಯಾಗಿರುವ ಹಿಜಾಬ್ ವಿವಾದದ ಹಿನ್ನೆಲೆಯ ಬಗ್ಗೆ ಅಚ್ಚರಿಯೆನಿಸುವುದಿಲ್ಲ. ಯಾವುದೇ ಸಾಧನೆಯಿಲ್ಲದೆ ಚುನಾವಣೆಯನ್ನು ಗೆಲ್ಲಲು ಹೊರಟವರು ಇಂಥ ಹತಾಶ ದುಸ್ಸಾಹಸಗಳನ್ನು ಮಾಡಲೇ ಬೇಕಾಗುತ್ತದೆ. ದ್ವೇಷದ ಕಿಚ್ಚು ಆರದಂತೆ ನೋಡಿಕೊಳ್ಳಬೇಕಾಗುತ್ತದೆ.

ಏಳು ವರ್ಷಗಳ ಹಿಂದೆ ಭಾರತದ ಜನರಲ್ಲಿ ಶೇಕಡಾ 35ರಷ್ಟು ಜನ ಭಾರೀ ಭರವಸೆಯಿಟ್ಟು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯನ್ನು ಚುನಾಯಿಸಿ ಅಧಿಕಾರ ನೀಡಿದರು. ಗೆಲುವಿನ ಹುರುಪಿನಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ವಿದೇಶಿ ಬ್ಯಾಂಕುಗಳ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದರು. ಮುಂದೇನಾಯಿತು ಎಲ್ಲರಿಗೂ ಗೊತ್ತಿದೆ. ಜನಪರವಾದ ಯಾವುದೇ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಉತ್ತರವಿಲ್ಲದವರಿಗೆ ಮತ್ತೆ ಜನರ ಬಳಿ ಹೋಗಲು ಉಳಿದ ದಾರಿ ಮಂದಿರ, ಮಸೀದಿ, ಮತಾಂತರ, ಲವ್ ಜಿಹಾದ್, ಈಗ ಹಿಜಾಬ್ ಇಂಥ ಅಡ್ಡದಾರಿಗಳೇ ಅನಿವಾರ್ಯವಾಗುತ್ತವೆ. ಜನರನ್ನು ಜಾತಿ, ಮತದ ಹೆಸರಿನಲ್ಲಿ ಸದಾ ವಿಭಜಿಸಿ ಬಹುಸಂಖ್ಯಾತ ಓಟ್ ಬ್ಯಾಂಕ್ ನಿರ್ಮಾಣ ಮಾಡಿ ಮತ್ತೆ ಗೆಲ್ಲುವುದು ಅನಿವಾರ್ಯವಾಗುತ್ತದೆ.

ಉತ್ತರ ಪ್ರದೇಶ ಚುನಾವಣೆ ಪ್ರಚಾರದಲ್ಲಿ ನೇರವಾಗಿ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿಯವರು ವರ್ತಮಾನದ ಸಮಸ್ಯೆಗಳಿಗೆ ಇತಿಹಾಸದ ಪುಟಗಳಲ್ಲಿ ಉತ್ತರ ಹುಡುಕಲು ಯತ್ನಿಸಿದರು. ಅನಗತ್ಯವಾಗಿ ಔರಂಗಜೇಬ್ ಮತ್ತು ಶಿವಾಜಿಯ ಹೆಸರುಗಳನ್ನು ಪದೇ ಪದೇ ಪ್ರಸ್ತಾಪಿಸಿದರು. ಇವರಿಗಿಂತ ಒಂದು ಹಜ್ಜೆ ಮುಂದೆ ಹೋದ ಭಾರತದ ಕಾನೂನು ಮತ್ತು ಶಾಂತಿ ಪಾಲನೆಯ ಹೊಣೆ ಹೊತ್ತ ಗೃಹ ಮಂತ್ರಿ ಅಮಿತ್ ಶಾ ಬಿಜೆಪಿಗೆ ಮೊಗಲರ ಜೊತೆ ಹೋರಾಡಿದ ತಾತ್ವಿಕ ಪರಂಪರೆಯಿದೆ ಎಂದು ಹಿಂದೂ-ಮುಸ್ಲಿಮ್ ದ್ವೇಷದ ದಳ್ಳುರಿ ಎಬ್ಬಿಸಲು ಯತ್ನಿಸಿದರು.

ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರ ಅವತಾರಗಳು ಎಲ್ಲರಿಗೂ ಗೊತ್ತಿದೆ. ಐದು ವರ್ಷಗಳ ತನ್ನ ದುರಾಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಅವರೂ ಮೊರೆ ಹೋಗಿದ್ದು ಪಾಕಿಸ್ತಾನಕ್ಕೆ. ರಾಜ್ಯದ ಚುನಾವಣಾ ಪ್ರಚಾರ ಸಭೆಗಳಲ್ಲಿ ತನ್ನ ಸರಕಾರದ ಸಾಧನೆಗಳ ಬಗ್ಗೆ ಇವರು ಮಾತಾಡಲಿಲ್ಲ. ಮುಂದೇನು ಮಾಡುತ್ತೇನೆ ಎಂಬುದನ್ನೂ ಹೇಳಲಿಲ್ಲ. ಅದರ ಬದಲಾಗಿ ಹೋದಲ್ಲೆಲ್ಲ ತನ್ನ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನಡುವಿನ ಹೋರಾಟ ಭಾರತ-ಪಾಕಿಸ್ತಾನದ ನಡುವಿನ ಹೋರಾಟವಿದ್ದಂತೆ ಎಂದು ಭಾಷಣ ಕುಟ್ಟತೊಡಗಿದ್ದಾರೆ.

ಮೋದಿ, ಅಮಿತ್ ಶಾ ಮತ್ತು ಆದಿತ್ಯನಾಥ್‌ರು ಈ ರೀತಿ ಪ್ರಚೋದನಕಾರಿ ಮಾತುಗಳನ್ನು ಆಡಲು ಕಾರಣವಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಬಹುಸಂಖ್ಯಾತ ವೀರಶೈವ ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸಿದಂತೆ 2017ರ ವಿಧಾನ ಸಭಾ ಚುನಾವಣೆಯಲ್ಲಿ ಜಾಟರು ಬಿಜೆಪಿ ಪರವಾಗಿ ಮತ ಹಾಕಿದ್ದರಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹಮತಗಳಿಸಿ ಆದಿತ್ಯನಾಥ್ ಮುಖ್ಯಮಂತ್ರಿಯಾದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಮೋದಿ ನೇತೃತ್ವದ ಬಿಜೆಪಿ ಸರಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವರ್ಷವಿಡೀ ಹೋರಾಡಿ ಸರಕಾರವನ್ನು ಮಣಿಸಿದ ರೈತ ಆಂದೋಲನದಲ್ಲಿ ಜಾಟ್ ಸಮುದಾಯದ ರೈತರು ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಜಾಟ್ ಪ್ರಾಬಲ್ಯದ ರಾಷ್ಟ್ರೀಯ ಲೋಕದಳ ( ಆರ್‌ಎಲ್‌ಡಿ) ಮತ್ತು ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷಗಳು ಚುನಾವಣೆ ಹೊಂದಾಣಿಕೆ ಮಾಡಿಕೊಂಡಿರುವುದು ಬಿಜೆಪಿಗೆ ನಡಕು ಹುಟ್ಟಿಸಿದೆ. ಅದರಿಂದ ಹತಾಶರಾದ ಮೋದೀಜಿ ಮತ್ತು ಅಮಿತ್ ಶಾ ಐದು ಶತಮಾನಗಳ ಹಿಂದೆ ಜಾಟರು ಮೊಗಲರ ವಿರುದ್ಧ ಹೋರಾಡಿದ ಕತೆಗೆ ಮಸಾಲೆ ಬೆರೆಸಿ ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಇವರ ಕುತಂತ್ರವನ್ನು ತರಾಟೆಗೆ ತೆಗೆದುಕೊಂಡ ರೈತ ಚಳವಳಿಯ ನಾಯಕ ಜಾಟ್ ಸಮುದಾಯದ ರಾಕೇಶ್ ಟಿಕಾಯತ್ ನಿಮ್ಮ ಹಳೆಯ ಕತೆ ಬೇಡ. ರೈತರಿಗೆ ದ್ರೋಹ ಬಗೆದಿದ್ದೀರಿ ನಿಮ್ಮನ್ನು ಸೋಲಿಸದೇ ಬಿಡುವುದಿಲ್ಲ ಎಂದು ಆರ್ಭಟಿಸುತ್ತಿದ್ದಾರೆ.

ಇದು ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ. ಇದೊಂದು ವಿಚಿತ್ರ ಸನ್ನಿವೇಶ. ದೇಶದಲ್ಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ವಿವಿಧ ಸಮುದಾಯಗಳ ನಡುವೆ ಭ್ರಾತೃತ್ವ ಮೂಡಿಸುವ ಹೊಣೆ ಹೊತ್ತವರೇ ಜನರ ನಡುವೆ ದ್ವೇಷದ ಬೆಂಕಿ ಹಚ್ಚಿ ತುಪ್ಪ ಸುರಿಯುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಅಮಿತ್ ಶಾ ಮಾತ್ರವಲ್ಲ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಬಹುತೇಕ ಕೇಂದ್ರ ಸಚಿವರು ಉತ್ತರ ಪ್ರದೇಶದಲ್ಲಿ ಅತ್ಯಂತ ಪ್ರಚೋದನಕಾರಿ ಮಾತುಗಳನ್ನು ಆಡಿ ದ್ವೇಷದ ದಳ್ಳುರಿಯಲ್ಲಿ ಓಟಿನ ಬೆಳೆ ಬೆಳೆಯಲು ಹೊರಟಿದ್ದಾರೆ.

ಅತ್ಯಂತ ವಿಷಾದದ ಸಂಗತಿಯೆಂದರೆ ಉತ್ತರ ಪ್ರದೇಶದಲ್ಲಿ ಇಷ್ಟೆಲ್ಲಾ ನೀತಿ ಸಂಹಿತೆಯ ಉಲ್ಲಂಘನೆ ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಇಲ್ಲವೇ, ಕಣ್ಣು ಮುಚ್ಚಿ ಕುಳಿತುಕೊಳ್ಳುವಂತೆ ಅದರ ಮೇಲೆ ಒತ್ತಡ ಹೇರಲಾಗಿದೆ.

ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲಿ ಶತಾಯ ಗತಾಯ ಗೆದ್ದೇ ಗೆಲ್ಲಬೇಕೆಂಬುದು ಮೋದಿ, ಅಮಿತ್ ಶಾ, ಆದಿತ್ಯನಾಥ್‌ರ ಪ್ರತಿಷ್ಠೆಯ ಪ್ರಶ್ನೆ ಮಾತ್ರವಲ್ಲ ದೂರದ ನಾಗಪುರದಲ್ಲಿ ಕುಳಿತು ಸಂವಿಧಾನದ ಸಮಾಧಿಯ ಕನಸು ಕಾಣುತ್ತಿರುವ ಭಾಗವತರಿಗೂ ಇದು ಅತ್ಯಂತ ನಿರ್ಣಾಯಕ ಸವಾಲಾಗಿದೆ. ಆದರೆ ಜನರಿಗೆ ಅದರಲ್ಲೂ ರೈತಾಪಿ ವರ್ಗಗಳಿಗೆ ಪ್ರಯೋಜನಕಾರಿ ಆಗುವ ಯಾವುದೇ ಕಾರ್ಯಕ್ರಮ ರೂಪಿಸದ ಅಂಬಾನಿ, ಅದಾನಿಗಳಂಥ ಕಾರ್ಪೊರೇಟ್ ಖದೀಮರ ಖಜಾನೆ ತುಂಬಿಸುವುದೇ ಆಡಳಿತ ಎಂದು ತಿಳಿದವರಿಗೆ ಈಗ ಸೋಲಿನ ಭೀತಿ ಎದುರಾಗಿದೆ. ಅದಕ್ಕಾಗಿ ಭಾರತೀಯರನ್ನು ಧರ್ಮದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ, ವಿಭಜಿಸಿ ಗೆಲ್ಲುವ ಮಸಲತ್ತು ನಡೆಸಿದ್ದಾರೆ.

ಇಂಥ ಕೀಳು ಮಟ್ಟದ ರಾಜಕೀಯಕ್ಕಾಗಿ ಅಯೋಧ್ಯೆಯ ಬಾಬರಿ ಮಸೀದಿ ಒಡೆದರು. ಮಸೀದಿ ಕೆಡವಿದ ಜಾಗದಲ್ಲಿ ಪುರೋಹಿತರನ್ನು ಸಾಕಲು ಮಂದಿರ ನಿರ್ಮಿಸುತ್ತಿದ್ದಾರೆ. ಮಸೀದಿ, ಮಂದಿರ, ಚರ್ಚ್ ಇವೆಲ್ಲ ಮನುಷ್ಯರು ಇಹದ ಜಂಜಡದಿಂದ ವಿರಾಮ ಪಡೆದು ಪರಮಾತ್ಮನ ಪೂಜೆ, ಪ್ರಾರ್ಥನೆಯ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳುವ ತಾಣಗಳು. ಯಾವುದೇ ಧಾರ್ಮಿಕ ಕಟ್ಟಡ ಒಡೆಯುವುದು ತಪ್ಪು. ಒಡೆದರೂ ಮತ್ತೆ ಕಟ್ಟಬಹುದು. ಆದರೆ ಕೋಟಿ ಕೋಟಿ ಜನಸಾಮಾನ್ಯರ ಮನಸ್ಸು ಒಡೆದರೆ ಕಟ್ಟುವುದು ಹೇಗೆ? ಮನಸ್ಸು ಎಂಬುದು ಕಲ್ಲಲ್ಲ, ಕಟ್ಟಿಗೆಯಲ್ಲ, ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ಅದನ್ನು ಪ್ರೀತಿ, ವಿಶ್ವಾಸ, ಅಂತಃಕರಣದಿಂದ ಕಟ್ಟಬೇಕಾಗುತ್ತದೆ.

ಉತ್ತರ ಭಾರತದಲ್ಲಿ ಈ ಕತೆಯಾದರೆ ದಕ್ಷಿಣ ಭಾರತದಲ್ಲಿ ಹಿಜಾಬ್ ವಿವಾದ ಕೆರಳಿಸಿದ್ದಾರೆ. ಮೊದಲು ಮಂಗಳೂರು, ಉಡುಪಿಗೆ ಸೀಮಿತವಾಗಿದ್ದ ಅದು ಈಗ ಉತ್ತರ ಕರ್ನಾಟಕದ ಗೋಕಾಕ, ರಾಮದುರ್ಗ, ಮುಂತಾದ ಊರುಗಳ ಶಾಲೆಗಳಿಗೂ ವ್ಯಾಪಿಸಿದೆ. ಎಲ್ಲೆಡೆ ಮನಸ್ಸುಗಳ ನಡುವೆ ದ್ವೇಷದ ದಳ್ಳುರಿ ಎಬ್ಬಿಸಿ ಬಹುಸಂಖ್ಯಾತರ ಓಟ್ ಬ್ಯಾಂಕ್ ನಿರ್ಮಿಸುವ ಹುನ್ನಾರ ನಡೆದಿದೆ. ಅಧಿಕಾರ ಸಿಕ್ಕಾಗ ಲೂಟಿ ಮಾಡದೇ ಜನಪರವಾದ ಕೆಲಸಗಳನ್ನು ಮಾಡಿದರೆ ಇಂಥ ನವರಂಗಿ ಆಟಗಳನ್ನು ಆಡುವ ಪರಿಸ್ಥಿತಿ ಬರುತ್ತಿರಲಿಲ್ಲ.

ಜೈನ ಸಮುದಾಯದ ಬಗ್ಗೆ ಕೀಳು ಮಟ್ಟದ ಮಾತುಗಳನ್ನಾಡುವ ಈ ಅವಿವೇಕಿಗಳಿಗೆ ಜೈನ ಧರ್ಮದ ಬಗ್ಗೆ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ತೆಪ್ಪಗಿರಬೇಕು. ವಾಸ್ತವವಾಗಿ ಜೈನರಲ್ಲಿ ದಿಗಂಬರ ಮತ್ತು ಶ್ವೇತಾಂಬರ ಎಂಬ ಎರಡು ಪಂಥಗಳಿವೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಸಾಹಿತಿ ಹಂಪನಾ ಮುಂತಾದವರು ದಿಗಂಬರ ಜೈನ ಸಮಾಜಕ್ಕೆ ಸೇರಿದವರು. ದಿಗಂಬರ ಜೈನ ಪಂಥಕ್ಕೆ ಸೇರಿದವರೆಲ್ಲರೂ ವಸ್ತ್ರತ್ಯಾಗ ಮಾಡುವುದಿಲ್ಲ. ವಸ್ತ್ರತ್ಯಾಗ ಮಾಡುವವರು ಜೈನ ಸಾಧುಗಳು ಮಾತ್ರ. ಅಪರಿಗ್ರಹ ಜೈನ ಧರ್ಮದ ಸಿದ್ಧಾಂತ. ಜೈನ ಸಾಧುಗಳು ಸ್ವಂತಕ್ಕೆ ಏನನ್ನೂ ಹೊಂದಿರಬಾರದು ಎಂಬ ಉದಾತ್ತ ಕಾರಣಕ್ಕಾಗಿ ಎಲ್ಲಾ ಪರಿಗ್ರಹಗಳಿಂದ ಮುಕ್ತರಾಗಲು ಬಯಸುತ್ತಾರೆ. ಮುಚ್ಚಿಟ್ಟುಕೊಳ್ಳುವಂಥದೇನೂ ತಮ್ಮ ಬಳಿ ಇಲ್ಲ ಎಂದು ಎಲ್ಲವನ್ನೂ ತ್ಯಜಿಸುತ್ತಾರೆ. ಕೊರೆವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ, ಸುರಿವ ಮಳೆಯಲ್ಲಿ ಮೈ ಮೇಲೆ ಒಂದು ಚೂರು ಬಟ್ಟೆಯಿಲ್ಲದೇ ಕಾಲ್ನಡಿಗೆಯಲ್ಲಿ ಊರಿಂದ ಊರಿಗೆ ಹೋಗುತ್ತಾರೆ. ಇದೇ ಅಪರಿಗ್ರಹದ ಅತ್ಯುನ್ನತ ಹಂತ.ಏನನ್ನೂ ಮುಚ್ಚಿಟ್ಟುಕೊಳ್ಳದೇ ಮುಕ್ತರಾಗಿರುವುದೇ ದಿಗಂಬರತ್ವ. ಆಂಧ್ರಪ್ರದೇಶದ ತೆಲುಗು ಸಾಹಿತ್ಯದಲ್ಲಿ ಎಪ್ಪತ್ತು, ಎಂಭತ್ತರ ದಶಕದಲ್ಲಿ ಪ್ರಗತಿಪರ, ಎಡಪಂಥೀಯ ಲೇಖಕರು ದಿಗಂಬರ ಸಾಹಿತ್ಯ ಎಂಬ ಪ್ರಾಕಾರವನ್ನೇ ಹುಟ್ಟು ಹಾಕಿದ್ದರು. ಇದರ ಮಹತ್ವ ಅರಿಯದೆ ಅವಿವೇಕಿ ಕೋತಿಗಳು ತಮ್ಮ ಹೊಲಸು ರಾಜಕೀಯದಿಂದಾಗಿ ದಿಗಂಬರತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ. ಈ ಅಪಾಯಕಾರಿ ಕೋಮುವಾದಿ ವಿಷ ಜಂತುಗಳ ಬಗ್ಗೆ ಜೈನ ಸಮುದಾಯದ ಬಂಧುಗಳು ಎಚ್ಚರವಾಗಿರಬೇಕಾಗಿದೆ. ಈಗಾಗಲೇ ಜೈನ ಧರ್ಮವನ್ನೇ ಹಿಂದುತ್ವದಲ್ಲಿ ಆಪೋಶನ ಮಾಡಿಕೊಳ್ಳುವ ಬಹು ದೊಡ್ಡ ಸಂಚು ನಡೆದಿದೆ.

ಹಿಜಾಬ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜೈನ ಧರ್ಮೀಯನ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಜೈನ ಧರ್ಮೀಯನಾದ ನಾನು ಬೆತ್ತಲೆಯಾಗಿ ಕಾಲೇಜಿಗೆ ಬಂದು ಹುಡುಗಿಯರ ಪಕ್ಕ ಕುಳಿತುಕೊಳ್ಳುವೆ ಎಂಬಂತೆ ಕೀಳು ಮಟ್ಟದ ಸ್ಟೇಟಸ್ ಹಾಕಲಾಗುತ್ತಿದೆ. ಇಷ್ಟೇ ಅಲ್ಲ ಅವಿವೇಕಿ ಟಿ.ವಿ. ಆ್ಯಂಕರ್‌ವೊಬ್ಬ ತನಗೆ ಸಂಬಳ ನೀಡುವ ಮಾಲಕನನ್ನು ಓಲೈಸಲು ಜೈನರು ಕಾಲೇಜಿಗೆ ದಿಗಂಬರರಾಗಿ ಬಂದರೆ ಹೇಗೆ ಎಂದು ಪ್ರಶ್ನಿಸುತ್ತಾನೆ. ಆ ಮೂಲಕ ಅಲ್ಪಸಂಖ್ಯಾತ ಜೈನ ಸಮುದಾಯದ ವಿರುದ್ಧ ಇನ್ನೊಂದು ಅಲ್ಪಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಕುಚೇಷ್ಟೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಜೈನ ಸಮುದಾಯದವರು ಇಂಥವರ ಮೇಲೆ ಕೇಸು ಜಡಿಯಲು ತಯಾರಾಗಿದ್ದಾರೆ.

ಕೊನೆಯದಾಗಿ ಒಂದು ಮಾತು. ಸರಕಾರ ಅವರದೇ ಆಗಿರುವುದರಿಂದ ಹಿಜಾಬ್, ಶಾಲು ನಿರ್ಬಂಧ ಮಾಡಿದೆ. ಆದರೆ, ಇದು ಇಲ್ಲಿಗೆ ಮುಗಿಯುವ ಸಮಸ್ಯೆ ಅಲ್ಲ. ಬರೀ ಹಿಜಾಬ್ ವಿವಾದವಾಗಿದ್ದರೆ ಮಾತುಕತೆ ಮೂಲಕ ಬಗೆಹರಿಸಬಹುದಿತ್ತು. ಇದರ ಅಸಲಿ ವಿಷಯ ಬೇರೆ ಇದೆ.ಬರಲಿರುವ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇ ಬೇಕಾಗಿದೆ. ಅದಕ್ಕಾಗಿ ಈಗ ಹಿಜಾಬ್ ನೆಪ ಮಾಡಿದವರು ನಾಳೆ ಇನ್ನೊಂದು ನೆಪ ಮುಂದೆ ಮಾಡುತ್ತಾರೆ. ಮುಸ್ಲಿಮ್ ವಿದ್ಯಾರ್ಥಿನಿಯರು ತಾವು ಹೇಳಿದಂಥ ಉಡುಪು ಧರಿಸಿ ಬರಬೇಕೆಂದು ಪಟ್ಟು ಹಿಡಿಯುತ್ತಾರೆ. ಬರುವ ಚುನಾವಣೆಯ ವರೆಗೆ ಕೋಮು ದ್ವೇಷದ ಕಿಚ್ಚು ಆರದಂತೆ ನೋಡಿಕೊಳ್ಳುತ್ತಾರೆ. ಅವರು ಹಾಕುವ ಷರತ್ತುಗಳನ್ನು ಒಪ್ಪುತ್ತಾ ಹೋದರೆ ಕೊನೆ ಎಂಬುದಿಲ್ಲ.

ಇನ್ನೊಂದು ವಿಷಯ, ಮುಸ್ಲಿಮ್ ಸಮಾಜ ಆಧುನಿಕತೆಗೆ, ಬದಲಾವಣೆಗೆ ಮುಕ್ತವಾಗಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ಅದಕ್ಕಿಂತ ಮೊದಲು ಮುಸ್ಲಿಮ್ ಸಮುದಾಯ ನಿರ್ಭೀತಿಯಿಂದ ಬದುಕುವಂಥ ವಾತಾವರಣವನ್ನು ಕಲ್ಪಿಸಬೇಕು. ಪ್ರತಿನಿತ್ಯ ಯಾವಾಗ ಏನಾಗುತ್ತದೋ ಎಂದು ಭಯದಿಂದ ನಲುಗಿ ಹೋಗುವ ಪರಿಸ್ಥಿತಿ ಬದಲಾಗಬೇಕು. ಈ ಸಮುದಾಯ ಬದಲಾವಣೆಗೆ ಸ್ಪಂದಿಸಿಲ್ಲವೆಂದಲ್ಲ. ಇರಾಕ್ ದೇಶದಲ್ಲಿ ಸದ್ದಾಮ್ ಹುಸೇನ್, ಲಿಬಿಯಾದಲ್ಲಿ ಗದ್ದಾಫಿ ಅಧಿಕಾರದಲ್ಲಿ ಇದ್ದಾಗ ಮುಸ್ಲಿಮ್ ಹೆಣ್ಣುಮಕ್ಕಳು ಅನುಭವಿಸಿದ ಸ್ವಾತಂತ್ರ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲಾ ರಂಗಗಳಲ್ಲಿ ಅವರ ಸಾಧನೆಯನ್ನು ಇಡೀ ಜಗತ್ತೇ ಶ್ಲಾಘಿಸಿತ್ತು. ಆದರೆ, ಜಗತ್ತಿನ ಅದರಲ್ಲೂ ಅರಬ್ ದೇಶಗಳ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯಲು ಹೊರಟ ಅಮೆರಿಕದ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಮುಸ್ಲಿಮ್ ಸಮುದಾಯ ಬದಲಾವಣೆಗೆ ಸ್ಪಂದಿಸುವುದು ಬೇಕಾಗಿಲ್ಲ. ಅಂತಲೇ ಬದಲಾವಣೆಯ ಹರಿಕಾರರಾದ ಸದ್ದಾಮ್ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್‌ಗದ್ದಾಫಿಯಂಥವರನ್ನು ಮುಗಿಸಿದರು. ಈ ದಗಾಕೋರರು ತಮ್ಮ ಚೇಲಾಗಳು ಅಧಿಕಾರದಲ್ಲಿ ಇರಬೇಕೆಂದು ಬಯಸತ್ತಾರೆ.

ಈ ಹಿನ್ನೆಲೆಯಲ್ಲಿ ಭಾರತದ ಸದ್ಯದ ವಿದ್ಯಮಾನಗಳನ್ನು ಅವಲೋಕಿಸಿ ಮನಸ್ಸು ಕಟ್ಟುವ, ಹೃದಯ ಬೆಸೆಯುವ ಕಾರ್ಯ ಆಗಬೇಕಾಗಿದೆ.
ಇದು ರಾಜಕೀಯ ಪಕ್ಷಗಳಿಂದ, ಯಾವುದೇ ಸಂಘಟನೆಗಳಿಂದ ಮಾತ್ರ ಆಗುವ ಕೆಲಸವಲ್ಲ.
ಇತ್ತೀಚೆಗೆ ಕೊನೆಯುಸಿರೆಳೆದ ಕರ್ನಾಟಕದ ಕಬೀರ ಇಬ್ರಾಹೀಂ ಸುತಾರರಂಥ ಸೂಫಿ, ಶರಣ ಸಂತರಿಂದ ಮನಸ್ಸು ಬೆಸೆಯುವ ಕಾರ್ಯ ಆಗಬೇಕು. ಸರ್ವಧರ್ಮಗಳ ಭಾವೈಕ್ಯದ ಬೆಳಕು ಎಲ್ಲೆಡೆ ಪಸರಿಸಬೇಕು. ಜೊತೆಗೆ ರಾಜ್ಯಾಧಿಕಾರವನ್ನು ವಿಧ್ವಂಸಕ ಶಕ್ತಿಗಳಿಂದ ಕಿತ್ತುಕೊಂಡು ಜನಸಾಮಾನ್ಯರು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು.
1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸದೇ ಇದ್ದಿದ್ದರೆ, ಕೋಮು ಹಿಂಸಾಚಾರ ನಡೆಯದಿದ್ದರೆ, ಇಷ್ಟು ಹೊತ್ತಿಗೆ ಬಹುತೇಕ ಮುಸ್ಲಿಮ್ ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಉಸಾಬರಿಗೆ ಹೋಗುತ್ತಿರಲಿಲ್ಲ. ಅಭದ್ರತೆ ಅವರನ್ನು ಈ ಸ್ಥಿತಿಗೆ ತಳ್ಳಿದೆ ಅಂದರೆ ಅತಿಶಯೋಕ್ತಿಯಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ