ʼಹಿಮಾಲಯ ಯೋಗಿʼಗೆ ಸ್ಟಾಕ್‌ ಎಕ್ಸ್‌ಚೇಂಜ್‌ ಮಾಹಿತಿ ರವಾನೆ: ಎನ್‌ಎಸ್‌ಇ ಮಾಜಿ ಅಧಿಕಾರಿ ಚಿತ್ರಾ ನಿವಾಸಕ್ಕೆ ಐಟಿ ದಾಳಿ

Update: 2022-02-17 17:01 GMT

ಮುಂಬೈ,ಫೆ.17: ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ಎನ್‌ಎಸ್‌ಇ)ದ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರ ಇಲ್ಲಿಯ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಚಿತ್ರಾ ಮತ್ತು ಇತರರ ವಿರುದ್ಧದ ತೆರಿಗೆ ವಂಚನೆ ಮತ್ತು ಹಣಕಾಸು ಅಕ್ರಮಗಳ ಆರೋಪಗಳ ತನಿಖೆಯ ಅಂಗವಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಚಿತ್ರಾ 2013,ಎಪ್ರಿಲ್‌ನಿಂದ 2016,ಡಿಸೆಂಬರ್‌ವರೆಗೆ ಎನ್‌ಎಸ್‌ಇದ ಆಡಳಿತ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು.

ಚಿತ್ರಾ ಎನ್‌ಎಸ್‌ಇ ಮುಖ್ಯಸ್ಥೆಯಾಗಿದ್ದಾಗ ಹಿಮಾಲಯದ ಯೋಗಿಯೋರ್ವರ ಸೂಚನೆಯಂತೆ ಆನಂದ ಸುಬ್ರಮಣಿಯನ್‌ರನ್ನು ಸಂಸ್ಥೆಯ ಗ್ರೂಪ್ ಆಪರೇಟಿಂಗ್ ಅಧಿಕಾರಿಯಾಗಿ ಮತ್ತು ಆಡಳಿತ ನಿರ್ದೇಶಕರ ಸಲಹೆಗಾರರಾಗಿ ನೇಮಕಗೊಳಿಸಿದ್ದರು ಎಂದು ಸೆಬಿ ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

ಎನ್‌ಎಸ್‌ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳು, ಲಾಭಾಂಶ ವಿವರಗಳು ಮತ್ತು ಹಣಕಾಸು ಫಲಿತಾಂಶಗಳು ಸೇರಿದಂತೆ ಕೆಲವು ಆಂತರಿಕ ರಹಸ್ಯ ಮಾಹಿತಿಗಳನ್ನು ಚಿತ್ರಾ ಯೋಗಿಯೊಂದಿಗೆ ಹಂಚಿಕೊಂಡಿದ್ದರು ಮತ್ತು ಎನ್‌ಎಸ್‌ಇ ಉದ್ಯೋಗಿಗಳ ಕಾರ್ಯ ನಿರ್ವಹಣೆ ಮೌಲ್ಯಮಾಪನದ ಬಗ್ಗೆ ಅವರೊಂದಿಗೆ ಸಮಾಲೋಚಿಸಿದ್ದರು ಎಂದೂ ಸೆಬಿ ತನ್ನ ಆದೇಶದಲ್ಲಿ ಹೇಳಿದೆ.

ಎನ್‌ಎಸ್‌ಇ ಆಡಳಿತ ಮಂಡಳಿಯು ಚಿತ್ರಾ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದೆ ಅವರ ರಾಜೀನಾಮೆಗೆ ಅವಕಾಶ ನೀಡಿದೆ ಎಂದು ಸೆಬಿ ಬೆಟ್ಟು ಮಾಡಿದೆ.

20 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತನ್ನ ಆಧ್ಯಾತ್ಮಿಕ ಗುರುವಾಗಿರುವ ‘ಸಿದ್ಧ ಪುರುಷ’ ಅಥವಾ ‘ಪರಮಹಂಸ’ರಿಂದ ತಾನು ಮಾರ್ಗದರ್ಶನವನ್ನು ಪಡೆಯುತ್ತಿದ್ದೆ ಎಂದು ಚಿತ್ರಾ ತನಿಖೆ ಸಂದರ್ಭ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಸೆಬಿ ತನಿಖೆಯ ವಿವರಗಳು ಇದನ್ನು ದೃಢಪಡಿಸಿಲ್ಲ.

ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಎಸ್‌ಇ,ಅದರ ಮಾಜಿ ಮುಖ್ಯಸ್ಥರಾದ ಚಿತ್ರಾ ಮತ್ತು ರವಿನಾರಾಯಣ ಅವರಿಗೆ ದಂಡವನ್ನು ವಿಧಿಸಿರುವ ಸೆಬಿ,ಎನ್‌ಎಸ್‌ಇ ಯಾವುದೇ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸುವುದನ್ನು ಆರು ತಿಂಗಳ ಅವಧಿಗೆ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News