ಉತ್ತರಪ್ರದೇಶ,ಬಿಹಾರ ಜನತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಚನ್ನಿ ವಿರುದ್ಧ ಪ್ರಧಾನಿ ವಾಗ್ದಾಳಿ

Update: 2022-02-17 10:14 GMT

ಫಜಿಲ್ಕಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಂಜಾಬ್ ಮುಖ್ಯಮಂತ್ರಿ ಚರಣ ಜಿತ್ ಸಿಂಗ್ ಚನ್ನಿ ಅವರ ವಿವಾದಾತ್ಮಕ "ಉತ್ತರಪ್ರದೇಶ, ಬಿಹಾರ್ ಕೆ ಭಾಯಿಯೆ" ಹೇಳಿಕೆಯ ಬಗ್ಗೆ ಹರಿಹಾಯ್ದರು. ಈ  ಹೇಳಿಕೆಗೆ  "ದಿಲ್ಲಿಯ ಕುಟುಂಬವು ಚಪ್ಪಾಳೆ ತಟ್ಟುತ್ತಿದೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗುರಿಯಾಗಿಸಿ  ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್ ಮುಖ್ಯಮಂತ್ರಿ ಇಲ್ಲಿ ಹೇಳಿದ್ದನ್ನು ಇಡೀ ದೇಶವೇ ನೋಡಿದೆ. ದಿಲ್ಲಿಯ ಕುಟುಂಬವು ಅವರ ಮಾಲಿಕ್ (ಬಾಸ್).  ಆ ಮಾಲಿಕ್ ಅವರ ಪಕ್ಕದಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು" ಎಂದು ರವಿವಾರದ ರಾಜ್ಯ ಚುನಾವಣೆಗೆ ಮುನ್ನ ಪಂಜಾಬ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.

"ಗುರು ಗೋವಿಂದ್ ಸಿಂಗ್ ಹುಟ್ಟಿದ್ದು ಎಲ್ಲಿ? ಬಿಹಾರದ ಪಾಟ್ನಾ ಸಾಹಿಬ್‌ನಲ್ಲಿ. ಗುರು ಗೋವಿಂದ್ ಸಿಂಗ್ ಅವರನ್ನು ಪಂಜಾಬ್‌ನಿಂದ ಹೊರಹಾಕುತ್ತೀರಾ? ಇಂತಹ ವಿಭಜಕ ಮನಸ್ಥಿತಿಯ ಜನರು ಒಂದು ಕ್ಷಣವೂ ಪಂಜಾಬ್ ಅನ್ನು ಆಳಲು ಬಿಡಬಾರದು" ಎಂದು ಪ್ರಧಾನಿ ಹೇಳಿದರು.

"ನಿನ್ನೆಯಷ್ಟೇ ನಾವು ಸಂತ ರವಿದಾಸ್ ಜಯಂತಿಯನ್ನು ಆಚರಿಸಿದ್ದೇವೆ. ಅವರು ಎಲ್ಲಿ ಜನಿಸಿದರು? ಉತ್ತರ ಪ್ರದೇಶದಲ್ಲಿ ವಾರಣಾಸಿಯಲ್ಲಿ ಅವರು ಜನಿಸಿದ್ದರು. ನೀವು ಸಂತ ರವಿದಾಸ್ ಅವರನ್ನು ಪಂಜಾಬ್‌ನಿಂದ ಹೊರಹಾಕುತ್ತೀರಾ?" ಎಂದು ಪ್ರಧಾನಿ ಪ್ರಶ್ನಿಸಿದರು.

ನಿನ್ನೆ ನಡೆದ ರೋಡ್ ಶೋ ವೇಳೆ ಪ್ರಿಯಾಂಕಾ ಗಾಂಧಿ ಜೊತೆ ಪ್ರಚಾರ ಮಾಡುತ್ತಿದ್ದ ವೇಳೆ ಪಂಜಾಬ್ ಸಿಎಂ ಚನ್ನಿ, "ಪ್ರಿಯಾಂಕಾ ಗಾಂಧಿ ಪಂಜಾಬಿನ ಸೊಸೆ,. ಉತ್ತರ ಪ್ರದೇಶ, ಬಿಹಾರ, ದಿಲ್ಲಿಯ ಅಣ್ಣಂದರಿಗೆ ಇಲ್ಲಿ ಬಂದು ಆಳಲು ಸಾಧ್ಯವಿಲ್ಲ. ಯುಪಿ ಭಯ್ಯಾಗಳಿಗೆ ಪಂಜಾಬ್‌ ದಾರಿ ತಪ್ಪಿಸಲು  ನಾವು ಬಿಡುವುದಿಲ್ಲ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News