ಕಲ್ಯಾಣ ಕರ್ನಾಟಕದ ನೆಮ್ಮದಿಗೆ ಧಕ್ಕೆ

Update: 2022-03-06 19:30 GMT

ಕಲ್ಯಾಣ ಕರ್ನಾಟಕ ಭಾಗದ ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದವರು ಬೇರಾರೂ ಅಲ್ಲ. ರಾಜ್ಯದ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯದ ಆಡಳಿತ ಪಕ್ಷದ ಕೆಲ ಶಾಸಕರು ಮತ್ತು ಸಚಿವರು ಅಶಾಂತಿಗೆ ಕಾರಣರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.


ಶರಣ, ಸೂಫಿಗಳ ಸಂತ ಪರಂಪರೆಯ ಪ್ರಭಾವವಿರುವ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ ಈ ಜಿಲ್ಲೆಗಳನ್ನು ಮುಂಚೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹನ್ನೆರಡನೇ ಶತಮಾನದ ವಚನ ಚಳವಳಿ, ಸಾಮಾಜಿಕ ಕ್ರಾಂತಿಯ ತಾಣವಾದ ಬಸವಕಲ್ಯಾಣ ಈ ಭೂಪ್ರದೇಶದ ಭಾಗವಾಗಿರುವುದರಿಂದ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದ್ದಕ್ಕೆ ಯಾರ ಆಕ್ಷೇಪವೂ ಇರಲಿಲ್ಲ. ರಾಜ್ಯದ ಎಲ್ಲೇ ಕೋಮು ಗಲಭೆ ನಡೆದರೂ ಈ ಭಾಗ ಸುರಕ್ಷಿತವಾಗಿತ್ತು. ಈಗ ಈ ಸುರಕ್ಷತೆಯ ನೆಮ್ಮದಿಗೆ ಭಂಗ ಬಂದಿದೆ.

ಕಲ್ಯಾಣ ಕರ್ನಾಟಕ ಭಾಗದ ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದವರು ಬೇರಾರೂ ಅಲ್ಲ. ರಾಜ್ಯದ ಶಾಂತಿ, ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯದ ಆಡಳಿತ ಪಕ್ಷದ ಕೆಲ ಶಾಸಕರು ಮತ್ತು ಸಚಿವರು ಅಶಾಂತಿಗೆ ಕಾರಣರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕ ವಿಧಾನ ಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಗೆ ಮತ್ತೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಆಸೆ. ಆದರೆ ಹೇಳಿಕೊಳ್ಳುವಂಥ ಯಾವುದೇ ಸಾಧನೆಯನ್ನು ಮಾಡಲು ಆಗಿಲ್ಲ.

ಒಕ್ಕೂಟ ಸರಕಾರದ ಸೂತ್ರ ಹಿಡಿದವರೂ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಹೀಗಾಗಿ ಜನರ ಬಳಿ ಹೋಗಲು ಮುಖವಿಲ್ಲ. ಮುಖವಾಡವೂ ಇಲ್ಲ. ಹೀಗಾಗಿ ಹತಾಶರಾದ ಬಿಜೆಪಿ ನಾಯಕರಿಗೆ ಸಂಘದ ಗುರುಗಳು ಹೇಳಿದ ಕಿವಿ ಮಾತು ಕೋಮು ಧ್ರುವೀಕರಣ. ಅಂದರೆ ತಿಳಿನೀರಿನ ಕೊಳದಲ್ಲಿ ಕಲ್ಲೆಸೆದು ರಾಡಿಯೆಬ್ಬಿಸುವುದು. ಹಿಂದೂ, ಮುಸ್ಲಿಮ್, ಕ್ರೈಸ್ತ ವಿಭಜನೆ ತಂತ್ರ ಬಳಸಿ ಬಹುಸಂಖ್ಯಾತರ ಓಟ್ ಬ್ಯಾಂಕ್ ನಿರ್ಮಿಸಿ ಚುನಾವಣೆ ಗೆಲ್ಲುವುದು.

ಅದಕ್ಕಾಗಿಯೇ ಹಿಜಾಬ್ ವಿವಾದ ಹುಟ್ಟು ಹಾಕಲು ಹಿಂಜರಿಯಲಿಲ್ಲ. ಮತಾಂತರದ ಹುಯಿಲೆಬ್ಬಿಸಲಾಯಿತು. ಶಿವಮೊಗ್ಗದ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಹೀಗಾಗಿ ಕರಾವಳಿ ಕರ್ನಾಟಕ, ಮಲೆನಾಡು, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮುಂತಾದ ಕಡೆ ನೆಲೆಯೂರಿದ ಬಿಜೆಪಿಗೆ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಈ ವರೆಗೆ ನೆಲೆಯಿರಲಿಲ್ಲ.

ಕಲ್ಯಾಣ ಕರ್ನಾಟಕವನ್ನು ಗೆದ್ದರೆ ಇಡೀ ಕರ್ನಾಟಕವನ್ನು ಸ್ವಾಧೀನ ಪಡಿಸಿಕೊಂಡು ಗುಜರಾತ್ ಮಾದರಿಯ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಬಹುದು, ದಕ್ಷಿಣ ಭಾರತದಲ್ಲಿ ನೆಲೆಯೂರಬಹುದು ಎಂದು ಲೆಕ್ಕಾಚಾರ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುಗಳು ಬಿಜೆಪಿ ನಾಯಕರ ಕಿವಿ ಹಿಂಡಿ ಕಾರ್ಯಾಚರಣೆಗೆ ಇಳಿಸಿದರು.

ಈ ಕಾರ್ಯತಂತ್ರದ ಭಾಗವಾಗಿ ಕಲಬುರಗಿ ಜಿಲ್ಲೆಯ ಆಳಂದದಲ್ಲಿರುವ ಸೂಫಿ ಸಂತ ಲಾಡ್ಲೆ ಮಶಾಕ್ ಅನ್ಸಾರಿ ಅವರ ದರ್ಗಾದ ಮೇಲೆ ಕಣ್ಣು ಹಾಕಿದರು. ಮುಸಲ್ಮಾನರಿಗಿಂತ ಹಿಂದೂಗಳು, ಲಿಂಗಾಯತರು, ದಲಿತರು, ವಿಭಿನ್ನ ಹಿಂದುಳಿದ ಸಮುದಾಯಗಳ ಜನರು ನಡೆದುಕೊಳ್ಳುವ ಈ ಭಾವೈಕ್ಯದ ತಾಣವನ್ನೇ ಬಾಬಾ ಬುಡಾನ್‌ಗಿರಿಯಂತೆ ವಿವಾದದ ಕೇಂದ್ರ ಮಾಡಲು ಮುಂದಾದರು.

ಆರೆಸ್ಸೆಸ್‌ನ ಸರಸಂಘಚಾಲಕ ಮೋಹನ್ ಭಾಗವತರು ಕಳೆದ ಜನವರಿಯಲ್ಲಿ ಕಲಬುರಗಿಗೆ ಬಂದು ಮೂರು ದಿನ ವಾಸ್ತವ್ಯ ಮಾಡಿ ಹಗಲೂ ರಾತ್ರಿ ಗುಪ್ತ ಸಭೆಗಳನ್ನು ನಡೆಸಿದರು. ಈ ಸಭೆಗಳಲ್ಲಿ ಸಂಘದ ಪದಾಧಿಕಾರಿಗಳು ಮಾತ್ರವಲ್ಲ ಬಿಜೆಪಿ ಶಾಸಕರು, ಸಂಸದರು, ಕೆಲ ಮಂತ್ರಿಗಳು ಪಾಲ್ಗೊಂಡಿದ್ದರು. ಭಾಗವತರು ಸಭೆ ನಡೆಸಲು ಯಾರ ತಕರಾರೂ ಇಲ್ಲ. ಆದರೆ, ಅವರು ಬಂದು ಹೋದ ನಂತರ ಹೊಸ ವಿವಾದವೊಂದು ಸೃಷ್ಟಿಯಾಗಿದ್ದು ನಿಜ.

ಸಾಮಾನ್ಯವಾಗಿ ದರ್ಗಾಗಳಿಗೆ ಹಿಂದೂ, ಮುಸ್ಲಿಮ್ ಸಮುದಾಯಗಳಿಗೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಿ ಹಿಂದೂ ಧಾರ್ಮಿಕ ಸಂಕೇತಗಳೂ ಇರುತ್ತವೆ. ಬಾಬಾಬುಡಾನ್‌ಗಿರಿಯಲ್ಲಿ ದತ್ತಾತ್ರೇಯ ಸ್ವಾಮಿಗಳ ಪಾದುಕೆಗಳು ಇರುವಂತೆ ಆಳಂದದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಮಹಾರಾಷ್ಟ್ರದ ರಾಘವ ಚೈತನ್ಯರ ಶಿವಲಿಂಗವೂ ಇದೆ.

ನೂರಾರು ವರ್ಷಗಳಿಂದ ಹಿಂದೂಗಳು ಲಿಂಗದ ಪೂಜೆ ಹಾಗೂ ಮುಸ್ಲಿಮರು ಉರೂಸ್ ಮಾಡುತ್ತಾ ಬಂದಿದ್ದಾರೆ. ಆದರೆ 2021ರ ನವೆಂಬರ್ 1ರಂದು ಯಾರೋ ಕಿಡಿಗೇಡಿಯೊಬ್ಬ ಲಿಂಗಕ್ಕೆ ಅಪಚಾರ ಮಾಡಿದನೆಂದು ಗಲಾಟೆ ಉಂಟಾಗಿ ಸ್ಥಳೀಯ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ ಇದನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು.

ಸೌಹಾರ್ದಯುತವಾಗಿ ಬಗೆಹರಿಯಬಹುದಾಗಿದ್ದ ಈ ಸಮಸ್ಯೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಂಡಿತು. ಈ ಸಲ ಶಿವರಾತ್ರಿ ದಿನ ಲಿಂಗಪೂಜೆ ಮಾಡಲು ಶ್ರೀ ರಾಮಸೇನೆಯ ಕಾರ್ಯಕರ್ತರನ್ನು ಬಿಜೆಪಿ ನಾಯಕರು ಪ್ರಚೋದಿಸಿದರು. ಪೊಲೀಸರು ನಿಷೇಧಾಜ್ಞೆ ವಿಧಿಸಿದರು. ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಅವರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಯಿತು.

ನ್ಯಾಯಾಲಯದಲ್ಲಿ ಇರುವ ಈ ವಿವಾದದ ಬಗ್ಗೆ ಬಿಜೆಪಿ ಶಾಸಕರು, ಸಚಿವರು ತಾಳ್ಮೆ ವಹಿಸಬೇಕಾಗಿತ್ತು. ಆದರೆ, ಬಿಜೆಪಿಯ ಕೇಂದ್ರ ಮಂತ್ರಿ ಭಗವಂತ ಖೂಬಾ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರು, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರು, ಸುಭಾಷ್ ಗುತ್ತೇದಾರ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಮುಂತಾದವರು ಪೊಲೀಸರು ವಿಧಿಸಿದ್ದ ನಿಷೇಧವನ್ನು ಧಿಕ್ಕರಿಸಿ ಭಾರೀ ಮೆರವಣಿಗೆ ನಡೆಸಲು ಮುಂದಾದರು. ಬಸ್ ನಿಲ್ದಾಣದ ಬಳಿ ಸಾವಿರಾರು ಜನ ಸೇರಲು ಪೊಲೀಸರು ಅವಕಾಶ ನೀಡಿದರು. ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಶಾಂತಿ ಸಭೆ ನಡೆದು ಹನ್ನೊಂದು ಜನರಿಗೆ ದರ್ಗಾದ ಒಳಗೆ ಹೋಗಿ ಲಿಂಗ ಪೂಜೆ ಮಾಡಲು ಅವಕಾಶ ನೀಡಲಾಯಿತು.
ಆದರೆ, ರಾಜಕೀಯ ಕುತಂತ್ರದಿಂದ ನಡೆದ ಈ ಒಂದು ದಿನದ ಘಟನೆಯಿಂದ ಆಳಂದ ಸುತ್ತಮುತ್ತಲಿನ ಪ್ರದೇಶದ ಹಿಂದೂ, ಮುಸಲ್ಮಾನರ ನಡುವಿನ ಭಾವೈಕ್ಯ ಮತ್ತು ಸೌಹಾರ್ದದ ಬದುಕಿಗೆ ಪೆಟ್ಟು ಬಿತ್ತು.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಹಿನ್ನೆಲೆಯ ಬಿ.ಆರ್.ಪಾಟೀಲರು ಕಳೆದ ಬಾರಿ ಕಾಂಗ್ರೆಸ್‌ನಿಂದ ಚುನಾಯಿತರಾಗಿ ಬಂದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುಭಾಷ್ ಗುತ್ತೇದಾರ ಗೆದ್ದಿದ್ದರು. ಈ ಬಾರಿ ಮತ್ತೆ ಗೆಲ್ಲುವುದು ಅವರ ಸಹಜ ಬಯಕೆ. ಇದಕ್ಕೆ ದಾಳವಾಗಿದ್ದು ಈ ದರ್ಗಾ ವಿವಾದ.

ಅದೇನೇ ಇರಲಿ, ಜಿಲ್ಲಾಧಿಕಾರಿ ಯಶವಂತ ಗುರುಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ನಿಷೇಧ ಹೇರಿದ್ದರೂ ನಿಷೇಧಾಜ್ಞೆ ಉಲ್ಲಂಘಿಸಿ ಧರಣಿ ನಡೆಸಿದ ಬಿಜೆಪಿಯ ಕೇಂದ್ರ ಸಚಿವರು ಮತ್ತು ಶಾಸಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲವೇಕೆ? ನಿಷೇಧ ಉಲ್ಲಂಘಿಸಿದ ಸಂಬಂಧ ಐದು ಎಫ್‌ಐಆರ್ ದಾಖಲಾದರೂ ಅದರಲ್ಲಿ ಮುಸ್ಲಿಮ್ ಹೆಸರುಗಳು ಮಾತ್ರ ಇವೆ. ಕಾನೂನು ಉಲ್ಲಂಘಿಸಿದ ಬಿಜೆಪಿ ಮತ್ತು ಶ್ರೀ ರಾಮಸೇನೆಯ ಕಾರ್ಯಕರ್ತರು ಹಾಗೂ ಶಾಸಕರ ಹೆಸರಿಲ್ಲ. ಇದು ಪಕ್ಷಪಾತ ಅಲ್ಲವೇ?

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ ಸಚಿವ ಈಶ್ವರಪ್ಪ ಮೇಲೆ, ಸಂಸದ ರಾಘವೇಂದ್ರ ಮೇಲೆ ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಆಳಂದದಲ್ಲಿ ಅದರ ಪುನರಾವರ್ತನೆಯಾಗಿದೆ.
ಬಸವಣ್ಣನವರು, ಶರಣ ಬಸವೇಶ್ವರರು, ಸೂಫಿ ಸಂತ ಬಂದೇ ನವಾಝರು, ನಡೆದಾಡಿದ, ಜೊತೆ ಜೊತೆಯಾಗಿ ಬಾಳಿದ ಈ ಸೌಹಾರ್ದ ತಾಣ ಈ ಪ್ರಭುತ್ವ ನಿರ್ಮಿತ ಬಿಕ್ಕಟ್ಟಿನಿಂದ ಹೇಗೆ ಪಾರಾಗುತ್ತದೆ ಎಂದು ಕಾದು ನೋಡುವುದೊಂದೇ ಉಳಿದ ದಾರಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ