ಪ್ರತಿರೋಧವಿಲ್ಲದ ಫ್ಯಾಶಿಸ್ಟ್ ಪುಂಡಾಟಿಕೆ

Update: 2022-03-27 19:30 GMT

ಭಾರತವೆಂಬುದು ಯಾರದು? ಇದು ಎಲ್ಲರದು. ಉಸ್ತಾದ ಬಿಸ್ಮಿಲ್ಲಾಖಾನರ ಶಹನಾಯಿ ವಾದನವಿಲ್ಲದೇ ಕಾಶಿ ವಿಶ್ವನಾಥನ ಪೂಜೆ ಮುಗಿಯುತ್ತಿರಲಿಲ್ಲ. ಒಮ್ಮೆ ಬ್ರಿಟನ್ ಸಿರಿವಂತನೊಬ್ಬ ಬಿಸ್ಮಿಲ್ಲಾಖಾನರನ್ನು ಲಂಡನ್‌ಗೆ ಬಂದು ನೆಲೆಸಿದರೆ ಸಕಲ ಸೌಕರ್ಯ ಒದಗಿಸುವುದಾಗಿ ಹೇಳಿದ ಅದಕ್ಕೆ ಬಿಸ್ಮಿಲ್ಲಾಖಾನರು ನಾನೊಬ್ಬನೇ ಬರುವುದಿಲ್ಲ, ಕಾಶಿವಿಶ್ವನಾಥ ಮತ್ತು ಗಂಗಾ ನದಿಯ ಜೊತೆಗೆ ಬರುವುದಿದ್ದರೆ ಬರುತ್ತೇನೆ ಎಂದು ಹೇಳಿದರು. ಇದು ಮೋದಿ, ಮುತಾಲಿಕರ ಭಾರತ ಮಾತ್ರವಲ್ಲ ಉಸ್ತಾದ ಬಿಸ್ಮಿಲ್ಲಾ ಖಾನ್ ಮತ್ತು ಮಹಮ್ಮದ್ ರಫಿಯವರ ಭಾರತ ಕೂಡ ಹೌದು ಎಂಬುದನ್ನು ಅವಿವೇಕಿಗಳು ಅರಿತುಕೊಳ್ಳಬೇಕು.


ಕರ್ನಾಟಕವನ್ನು ಕಟ್ಟುವಲ್ಲಿ ಕೈ ಜೋಡಿಸಿದ ಒಂದು ಸಮುದಾಯವನ್ನು ವ್ಯಾಪಾರ, ವ್ಯವಹಾರಗಳಿಂದ ದೂರವಿಡುವ. ಬೀದಿ ಗೂಂಡಾಗಿರಿ ಮೂಲಕ ಬೆದರಿಸುವ ಈ ದಿನಗಳಲ್ಲಿ ನಾಡಿನ ಬೌದ್ಧಿಕ ವಲಯಗಳಲ್ಲಿ ಗಾಢ ಮೌನ ಆವರಿಸಿದೆ. ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕನ ಮನೆಗೆ ಹೋಗಿ ಸಂತೈಸಿ ಬಂದ ಮುರುಘಾಶರಣರಾದಿಯಾಗಿ ಮಠಾಧೀಶರು ಜಾಣ ಮೌನ ತಾಳಿದ್ದಾರೆ. ಪಂಡಿತಾರಾಧ್ಯ, ಕೂಡಲ ಸಂಗಮದಂತಹ ಕೆಲವೇ ಕೆಲವು ಸ್ವಾಮಿಗಳು ಮಾತಾಡಿದ್ದಾರೆ. ಇನ್ನು ಪ್ರತಿಪಕ್ಷಗಳಲ್ಲಿ ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಮಾತ್ರ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಏಕಾಂಗಿಯನ್ನಾಗಿ ಮಾಡಿ ಹೆಣೆಯುವ ಮೂಲೆಗುಂಪು ಮಾಡುವ ಮಸಲತ್ತುಗಳು ನಡೆಯುತ್ತಿವೆ. ರಾಜ್ಯದಲ್ಲಿ ಇಂತಹ ಭಯಾನಕ ಆತಂಕದ ಸನ್ನಿವೇಶ ಹಿಂದೆಂದೂ ನಿರ್ಮಾಣವಾಗಿರಲಿಲ್ಲ. ಹಿಂದೆಲ್ಲ ಪಿ.ಲಂಕೇಶ್, ಅನಂತಮೂರ್ತಿ, ಕಲಬುರ್ಗಿ, ಚಂಪಾ,ಜಿ.ಕೆ.ಗೋವಿಂದ ರಾವ್, ಗಿರೀಶ್ ಕಾರ್ನಾಡ್, ತೇಜಸ್ವಿ ಹೀಗೆ ಬೀದಿಗೆ ಬಂದು ನಿಲ್ಲುವ ಚಿಂತಕರು, ಲೇಖಕರು ಇಲ್ಲಿದ್ದರು. ಅವರೆಲ್ಲರ ನಿರ್ಗಮನದ ನಂತರ ಒಂದು ವಿಧದ ಶೂನ್ಯ ಆವರಿಸಿದೆ.

ಇತ್ತೀಚಿನವರೆಗೆ ಜನಾಂಗೀಯ ಸಾಮರಸ್ಯದ ತಾಣಗಳಾಗಿದ್ದ ಜಾತ್ರೆಗಳು ಈಗ ಕೋಮುವ್ಯಾಧಿಯಿಂದ ಎಂದಿನ ಸಂಭ್ರಮವನ್ನು ಕಳೆದುಕೊಂಡು ಪೊಲೀಸ್ ಬಂದೋಬಸ್ತಿನಲ್ಲಿ ಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇವರು ಮತ್ತು ಧರ್ಮ ಮನೆಯೊಳಗಿದ್ದರೆ, ಗುಡಿಯೊಳಗಿದ್ದರೆ ಹೀಗಾಗುತ್ತಿರಲಿಲ್ಲ. ದೇವರನ್ನು ರಸ್ತೆಗೆ ತಂದು ಧರ್ಮವನ್ನು, ಓಟುಗಳನ್ನು ಒಟ್ಟುಗೂಡಿಸುವ ದುರ್ಬಳಕೆಯ ರಾಜಕಾರಣ ಪ್ರವೇಶ ಮಾಡಿದರೆ ಭಯವೇ ಧರ್ಮದ ಮೂಲವಾಗುತ್ತದೆ.
ಹಿಂದೂ ದೇವಳದ ಸಮೀಪ ಮುಸಲ್ಮಾನ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶವಿಲ್ಲ ಎಂದು ಬೊಬ್ಬಿಡುವ ಕೋಮುವಾದಿಗಳಿಗೆ ಹಿಂದೂ ಧರ್ಮದ ಮೇಲೆ ಪ್ರೇಮವಿಲ್ಲ. ಶ್ರದ್ಧೆಯಿಂದ ಈ ಬೆದರಿಕೆಯನ್ನು ಅವರು ಹಾಕುವುದಿಲ್ಲ. ಮುಸ್ಲಿಮರನ್ನು ಓಡಿಸಿ ಎಲ್ಲ ಲಾಭವನ್ನು ದೋಚುವ ವ್ಯಾಪಾರಿ ಕುತಂತ್ರ ಬುದ್ದಿ ಅವರಲ್ಲಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ.
ಮುಸಲ್ಮಾನರನ್ನು ಓಡಿಸಿ ಬಜರಂಗದಳದವರು ಹಾಕಿದ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಪದಾರ್ಥಗಳ ಮಾರಾಟ ಮಾಡುತ್ತಿರುವುದರಿಂದ ರೋಸಿ ಹೋದ ಭಕ್ತರು ದೂರದಲ್ಲಿದ್ದ ಮುಸ್ಲಿಮರ ಅಂಗಡಿಗಳಿಂದ ಪದಾರ್ಥಗಳ ನ್ನು ಖರೀದಿಸಿ ತಂದ ವರದಿಗಳು ಬಂದಿವೆ.
ಈ ಪುಂಡಾಟಿಕೆ ಇಲ್ಲಿಗೆ ನಿಲ್ಲುವ ಸೂಚನೆಗಳಿಲ್ಲ. ಬರುವ ವಿಧಾನಸಭಾ ಚುನಾವಣೆಯವರೆಗೆ ಇದೇ ಪರಿಸ್ಥಿತಿ ಮುಂದುವರಿಯುವುದು. ಬಿಜೆಪಿ ಸರಕಾರಕ್ಕೂ ಬೇಕಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಮುಂಚೆ ಪ್ರತಿಭಟಿಸುತ್ತಿದ್ದ ಸೌಹಾರ್ದ ಮತ್ತು ಜನಪರ ಸಂಘಟನೆಗಳ ಧ್ವನಿ ಉಡುಗಿ ಹೋಗಿದೆ. ಸಿದ್ಧರಾಮಯ್ಯನವರನ್ನು ಬಿಟ್ಟರೆ ಉಳಿದ ಪ್ರತಿಪಕ್ಷ ನಾಯಕರೂ ದಿವ್ಯ ಮೌನ ತಾಳಿದ್ದಾರೆ. ಪ್ರಜಾವಾಣಿ, ವಾರ್ತಾಭಾರತಿಗಳನ್ನು ಬಿಟ್ಟರೆ ಮಾಧ್ಯಮಗಳು ಗೂಂಡಾಗಿರಿ ಮಾಡುವವರ ಪರವಾಗಿ ಇವೆ. ಈ ದೇಶದ ನಿರ್ಮಾಣಕ್ಕೆ ಬೆವರು ಮತ್ತು ರಕ್ತ ಬಸಿದ ಸಮುದಾಯ ಅಸಹಾಯಕವಾಗಿ ನಿಂತಿದೆ.
 ಮೊದಲು ಕೇವಲ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳಿಗೆ ಸೀಮಿತವಾಗಿದ್ದ ಕೋಮು ದ್ವೇಷದ ವಾತಾವರಣ ಈಗ ನಿಧಾನವಾಗಿ ರಾಜ್ಯದ ತುಂಬಾ ವ್ಯಾಪಿಸತೊಡಗಿರುವದು ಕಳವಳಕಾರಿ ಸಂಗತಿಯಾಗಿದೆ. ಶಿವಮೊಗ್ಗ, ಶಿರಸಿ ಮಾರಿಕಾಂಬಾ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ಬಿಡಲಿಲ್ಲ. ಕೊಡಗಿನ ಶನಿವಾರ ಸಂತೆಯ ಹತ್ತಿರದ ತಪೋವನ ಕ್ಷೇತ್ರದ ಮನೇಹಳ್ಳಿ ಮಠದ ಬಿಲ್ವ ಗೋ ಶಾಲೆಯ ದಶಮಾನೋತ್ಸದ ಅಂಗವಾಗಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಡೆಸಲು ಬಜರಂಗದಳದವರು ಅವಕಾಶ ನೀಡಲಿಲ್ಲ.

ಮಂಡ್ಯ ನಗರದ ಲಕ್ಷ್ಮೀ ನಾರಾಯಣ ದೇವಾಲಯಕ್ಕೆ ಸೇರಿದ ನಿವೇಶನದಲ್ಲಿ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಹಿಂದೂಗಳಿಗೆ ಮಾತ್ರ ಅವಕಾಶವನ್ನು ನೀಡಬೇಕು ಎಂದು ಬಜರಂಗದಳದ ಕಾರ್ಯಕರ್ತರು ಪುಂಡಾಟಿಕೆ ನಡೆಸಿದ ವರದಿ ಬಂದಿದೆ. ಸೂಫಿ ಶರಣರ ನಾಡಾದ ಕಲಬುರಗಿಯಲ್ಲೂ ಶರಣ ಬಸವೇಶ್ವರ ಜಾತ್ರೆಯಲ್ಲಿ ಹಿಂದೂ ಧರ್ಮದ ವಿರೋಧಿಗಳಾದ ಅನ್ಯ ಕೋಮಿನವರ ಬಳಿ ವ್ಯಾಪಾರ ಮಾಡಬಾರದು ಎಂದು ಸಂಘ ಪರಿವಾರದ ಮಹಿಳಾ ಜಾಗೃತಿ ವೇದಿಕೆ ಒತ್ತಾಯಿಸಿದೆ.

ಎಂಟು ನೂರು ವರ್ಷಗಳ ಇತಿಹಾಸವಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನವನ್ನು ನಿರ್ಮಿಸಿದವನು ಮಲಬಾರ್‌ನ ಮುಸ್ಲಿಮ್ ವ್ಯಾಪಾರಿ ಬಪ್ಪ ಬ್ಯಾರಿ. ಇಲ್ಲಿ ಮುಸಲ್ಮಾನರು ಮೊದಲು ಪ್ರಸಾದ ಸ್ವೀಕರಿಸುವ ಸಂಪ್ರದಾಯವಿದೆ. ಇಂತದರಲ್ಲೂ ಕೂಡ ಮುಸ್ಲಿಮ್ ವ್ಯಾಪಾರಿಗಳಿಗೆ ಭಜರಂಗಿಗಳು ಅವಕಾಶ ನೀಡಲಿಲ್ಲ. ಹೀಗಾಗಿ ಅಂಗಡಿಗಳ ಬಾಡಿಗೆಗಳಿಗೆಂದು ಕಟ್ಟಿದ ಮುಂಗಡ ಹಣವನ್ನು 58 ಮಂದಿ ಮುಸ್ಲಿಮ್ ವ್ಯಾಪಾರಿಗಳು ವಾಪಸು ಪಡೆದು ಕಣ್ಣೀರು ಹಾಕುತ್ತ್ತಾ ವಾಪಸು ಹೋದರು.ಅವರಲ್ಲಿ ಒಬ್ಬ ಅದೇ ಹಣವನ್ನು ದೇವಳದ ಹುಂಡಿಗೆ ಹಾಕಿ ಹೋದ. ಮುಸ್ಲಿಮರು ಅಂಗಡಿ ಹಾಕಲು ದೇವಳದ ಆಡಳಿತ ಮಂಡಳಿ ಆಕ್ಷೇಪವಿಲ್ಲ. ಆದರೆ ಯಾರೋ ಸಂಬಂಧ ಪಡದವರು ಈಗ ಜಾತ್ರೆ ಉತ್ಸವಗಳನ್ನು ನಿಯಂತ್ರಿಸುತ್ತಿದ್ದಾರೆ. ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ಗೊತ್ತಿದ್ದೂ ಕಣ್ಣು ಮುಚ್ಚಿ ಕುಳಿತಿದೆ.

ಕರ್ನಾಟಕದ ಸಾಮಾಜಿಕ ಬದುಕು ಸೌಹಾರ್ದದಿಂದ ಕೂಡಿದ್ದರೂ ಕೋಮುವಾದಿ ಶಕ್ತಿಗಳು ಕುತಂತ್ರದಿಂದ ಸೌಹಾರ್ದ ತಾಣಗಳ ನೆಮ್ಮದಿ ಮತ್ತು ಶಾಂತಿ ಹಾಳಾಗುತ್ತಿದೆ. ಭಾರತ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಯಾವುದೇ ಪ್ರದೇಶದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಹಿಂದೂಗಳಂತೆ ಮುಸಲ್ಮಾನರಿಗೂ ಹಾಗೂ ಎಲ್ಲ ಸಮುದಾಯಯದವರಿಗೂ ಸಂವಿಧಾನ ಅವಕಾಶ ನೀಡಿದೆ. ಸಂವಿಧಾನ ಕಲ್ಪಿಸಿರುವ ವ್ಯವಸ್ಥೆಗೆ ಯಾರಾದರೂ ಅಡ್ಡಿಯನ್ನುಂಟು ಮಾಡಿದರೆ ಅಂತಹವರಿಗೆ ಕಡಿವಾಣ ಹಾಕಲು ಸರಕಾರ ಕ್ರಮಕೈಗೊಳ್ಳಬೇಕು. ಆದರೆ ರಾಜ್ಯ ಸರಕಾರಕ್ಕೆ ಇದು ಬೇಕಾಗಿಲ್ಲ.
  ಹಿಂದೂಗಳಲ್ಲದವರಿಗೆ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ನಿರ್ಬಂಧ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ರೂಪುಗೊಂಡಿದೆ ಎಂಬ ಇನ್ನೊಂದು ನೆಪವನ್ನು ಅಧಿಕಾರದಲ್ಲಿ ಇರುವವರು ಹೇಳುತ್ತಿದ್ದಾರೆ. ಆದರೆ ಅದನ್ನೂ ತಿರುಚಿ ಹೇಳುತ್ತಿದ್ದಾರೆ. ಆಗ ಮುಜರಾಯಿ ಕಾನೂನಿಗೆ ತಂದ ತಿದ್ದುಪಡಿ ದೇವಾಲಯದ ಆವರಣದೊಳಗೆ ನಿರ್ಬಂಧಿಸಲಾಗಿದೆ ಎಂದಿದೆ. ಜಾತ್ರೆ, ಉತ್ಸವಗಳಲ್ಲಿ ದೇವಾಲಯದ ಹೊರಗೆ ಜನ ಸೇರುವಲ್ಲಿ ನಿರ್ಬಂಧವಿಲ್ಲ. ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ.

ಈಗ ಈ ಅತಿರೇಕದ ಹುಚ್ಚು ಎಲ್ಲಿಯವರೆಗೆ ಹೋಗಿದೆಯೆಂದರೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಯುತ್ತಿದ್ದ ಮಹಾ ಮಂಗಳಾರತಿಯನ್ನು ನಿಲ್ಲಿಸಬೇಕೆಂದು ಬಜರಂಗದಳ ಬೆದರಿಕೆ ಹಾಕುತ್ತಿದೆ. ಇನ್ನೊಂದೆಡೆ ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುವ ಮುಸ್ಲಿಮ್ ಮತ್ತು ಕ್ರೈಸ್ತ ನೌಕರರನ್ನು ತೆಗೆದು ಹಾಕಲು ಪ್ರಮೋದ್ ಮುತಾಲಿಕ್ ಒತ್ತಾಯಿಸುತ್ತಿದ್ದಾರೆ.
  ಇಂತಹ ಹುಚ್ಚಾಟಗಳಿಂದ ಜಾಗತಿಕವಾಗಿ ಭಾರತದ ಬಗ್ಗೆ ಎಷ್ಟು ತಪ್ಪು ಕಲ್ಪನೆ ಉಂಟಾಗುತ್ತದೆ. ವಿದೇಶಾಂಗ ನೀತಿಯ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದು ಮೆದುಳಲ್ಲಿ ಸಗಣಿ ತುಂಬಿದ ಈ ಅವಿವೇಕಿಗಳಿಗೆ ಗೊತ್ತಿಲ್ಲ. ಮುಸಲ್ಮಾನರು ಬೇಡವೆಂದಾದರೆ ಮುಸ್ಲಿಮ್ ರಾಷ್ಟ್ರಗಳಿಂದ ಬರುವ ಪೆಟ್ರೋಲಿಯಂ ಉತ್ಪನ್ನಗಳನ್ನು ಏಕೆ ಬಳಸಿಕೊಳ್ಳುತ್ತಾರೆ? ಇಸ್ಲಾಮಿಕ್ ದೇಶಗಳ ಜೊತೆ ವ್ಯಾಪಾರ, ವಹಿವಾಟು ನಿಲ್ಲಿಸಲು ಮೋದಿ ನೇತೃತ್ವದ ಒಕ್ಕೂಟ ಸರಕಾರ ತಯಾರಿದೆಯೇ? ಐದಾರು ಲಕ್ಷ ಭಾರತೀಯರು ಮುಸ್ಲಿಮ್ ದೇಶಗಳಾದ ದುಬೈ, ಕತಾರ್, ಮುಂತಾದ ಕಡೆ ಕೆಲಸ ಮಾಡಿ ಸ್ವದೇಶದಲ್ಲಿರುವ ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ನೀವು ಮಾಡಿದಂತೆ ನಾಳೆ ಅಲ್ಲಿನ ಸರಕಾರಗಳು ಮತ್ತು ಜನ ಭಾರತೀಯರನ್ನು ಹೊರ ದಬ್ಬಿದರೆ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳದವರು ಅವರ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತವೆಯೇ?
ವಾಸ್ತವವಾಗಿ ಇವರೆಷ್ಟೇ ದೊಂಬಿ ಎಬ್ಬಿಸಲಿ ಹಿಂದೂ, ಮುಸಲ್ಮಾನರು ಮತ್ತು ಕ್ರೈಸ್ತರು ನಡೆದುಕೊಳ್ಳುವ ಮಂದಿರ, ದರ್ಗಾ, ಚರ್ಚ್‌ಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇವೆ. ನಾನು ಅವುಗಳ ಪಟ್ಟಿ ಮಾಡಿರುವೆ. ಆದರೆ ಇಲ್ಲಿ ಹಾಕಲು ಹೆದರಿಕೆ ಆಗುತ್ತಿದೆ. ಇದೇ ಪಟ್ಟಿ ಹಿಡಿದುಕೊಂಡು ಹೋಗಿ ಆ ಸೌಹಾರ್ದ ತಾಣಗಳಿಗೆ ಕೊಳ್ಳಿ ಇಟ್ಟರೆ ಮುಂದೇನು ಎಂಬುದು ತೋಚುತ್ತಿಲ್ಲ.
 ಭಾರತದ ಕೋಮುವಾದ ಈಗ ಹಿಟ್ಲರ್, ಮುಸಲೋನಿ ಮಾದರಿಯ ಫ್ಯಾಶಿಸ್ಟ್ ಕುರೂಪ ತಾಳಿದೆ. ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಜರ್ಮನ್ ಮತ್ತು ಇಟಲಿಗಳಲ್ಲಿ ನಾಝಿ, ಫ್ಯಾಶಿಸ್ಟ್ ಜನಾಂಗ ದ್ವೇಷ (ಯೆಹೂದಿ ದ್ವೇಷ) ಭಯಾನಕ ರೂಪ ತಾಳಿದಾಗ ಸಮಾಜವಾದಿ ಸೋವಿಯತ್ ರಶ್ಯ ಇತ್ತು. ಸ್ಟಾಲಿನ್‌ನಂತಹ ಬಲಿಷ್ಠ ನಾಯಕರಿದ್ದರು. ಸೋವಿಯತ್ ಕೆಂಪು ಸೇನೆ ಇತ್ತು. ಹೀಗಾಗಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡು ಸತ್ತ. ಮುಸಲೋನಿಯನ್ನು ಜನಸಾಮಾನ್ಯರೇ ಹಿಡಿದು ಒದ್ದು ಕೊಂದು ಬೀದಿಗೆಸೆದರು. ಆದರೆ ಈಗ ಸಮಾಜವಾದಿ ದೇಶಗಳು ವಿರಳ. ಅಂತರ್‌ರಾಷ್ಟ್ರೀಯ ಪರಿಸ್ಥಿತಿ ಭಿನ್ನ. ವಿಶ್ವ ಬಂಡವಾಳ ಶಾಹಿ ಅಳಿವು ಉಳಿವಿನ ಪ್ರಾಣ ಸಂಕಟ ಅನುಭವಿಸುತ್ತಿದೆ. ಇದನ್ನು ಎದುರಿಸಬೇಕಾದ ದುಡಿಯುವ ವರ್ಗ ಎಲ್ಲಿದೆ? ಅದು ಕೂಡ ಜಾತಿ, ಕೋಮು, ಆಧಾರದಲ್ಲಿ ವಿಭಜನೆಗೊಂಡಿದೆ. ಮುಷ್ಕರ ಗಳಿಗೆ ಬರುವವರು ಕೋಮುವಾದ ವಿರುದ್ಧ ಹೋರಾಟಕ್ಕೆ ಬರುವುದಿಲ್ಲ. ಅವರ ಮತ ಅದೇ ವಿಷ ಪರಿವಾರದ ಪಕ್ಷಕ್ಕೆ. ಹೀಗಾಗಿ ಮುಂದಿನ ದಾರಿ ಸುಗಮವಾಗಿಲ್ಲ.
  
  ಭಾರತದ ಕೋಮುವಾದ ಫ್ಯಾಶಿಸ್ಟ್ ಕುರೂಪ ತಾಳಿ ಎರಡು ದಶಕಗಳೇ ಗತಿಸಿದವು.ಅಲ್ಪಸಂಖ್ಯಾತರು ಮಾತ್ರವಲ್ಲ ಅವರ ಪರವಾಗಿ ಮಾತಾಡುವ,ಸಮಾನತೆಯ ಪರವಾಗಿ ಧ್ವನಿಯೆತ್ತುವ ಚಿಂತಕರನ್ನು 'ಅರ್ಬನ್ ನಕ್ಸಲ್' ಎಂದು ಕರೆದು ಅವರನ್ನು ಪಟ್ಟಿ ಮಾಡಿ ಒಬ್ಬೊಬ್ಬರನ್ನಾಗಿ ಕೊಲ್ಲುವ ದುಷ್ಕ್ರತ್ಯಕ್ಕೆ ಕೈ ಹಾಕಿದ ಫ್ಯಾಶಿಸ್ಟ್ ಶಕ್ತಿಗಳು ಮೊದಲು ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಬೋಳ್ಕರ್ ಅವರನ್ನು ಹಾಡುಹಗಲೇ ಹತ್ಯೆ ಮಾಡಿದವು. ನಂತರ ಕೊಲ್ಹಾಪುರದ ಜನಪ್ರಿಯ ಕಮ್ಯುನಿಸ್ಟ್ ನಾಯಕ, ಚಿಂತಕ ಗೋವಿಂದ ಪನ್ಸಾರೆ ಹಂತಕರ ಗುಂಡಿಗೆ ಬಲಿಯಾದರು.ಅವರ ನಂತರದ ಸರದಿ ನಮ್ಮ ಡಾ.ಎಂ.ಎಂ.ಕಲಬುರ್ಗಿ ಅವರದ್ದು. ಧಾರವಾಡದ ಕಲ್ಯಾಣ ನಗರದ ಅವರ ಮನೆಯಲ್ಲಿ ಹಾಡುಹಗಲೇ ಮನೆ ಹೊಕ್ಕು ಹಣೆಗೆ ಗುಂಡಿಕ್ಕಿ ಕೊಂದರು.ಕಲಬುರ್ಗಿ ನಂತರ ಗೌರಿ ಲಂಕೇಶರನ್ನು ಹತ್ಯೆ ಮಾಡಿದರು. ಈ ಹತ್ಯೆಗಳ ವಿರುದ್ಧ ಬರಬೇಕಾದ ಉಗ್ರ ಪ್ರತಿರೋಧ ಬರಲೇ ಇಲ್ಲ. ಕಲಬುರ್ಗಿ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಯಾರು ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಅರ್ಥವಿಷ್ಟೆ. ತಮ್ಮ ಹತ್ಯೆಗಳನ್ನು ಸಮರ್ಥನೆ ಮಾಡುವ ಬಹುದೊಡ್ಡ ಸಂಖ್ಯೆಯ ಜನ ಸಮೂಹವನ್ನು ಫ್ಯಾಸಿಸ್ಟರು ತಯಾರು ಮಾಡಿದ್ದಾರೆ. ಸಮಾಜದ ಬಹುತೇಕ ಜನರ ಅಂತಃಕರಣದ ಸೆಲೆ ಬತ್ತಿ ಹೋಗಿದೆ.

ಜಾತಿ, ಮತ, ಧರ್ಮ, ಭಾಷೆ, ದೇಶ, ಪ್ರದೇಶವೆನ್ನದೇ ಎಲ್ಲರ ಪ್ರಾಣಕ್ಕೂ ಅಪಾಯವನ್ನು ತಂದೊಡ್ಡಿದೆ, ಅನೇಕರ ಸಾವಿಗೆ ಕಾರಣವಾದ ಕೋವಿಡ್ ಕಾಲದಲ್ಲಿ ಸತ್ತ ಎಷ್ಟೋ ಬ್ರಾಹ್ಮಣರ ಶವಗಳನ್ನು ಅಂತ್ಯಕ್ರಿಯೆ ಮಾಡಲು ಅವರ ಸಂಬಂಧಿಕರೇ ಮುಂದೆ ಬರಲಿಲ್ಲ. ಶವ ಮುಟ್ಟಿದರೆ ಎಲ್ಲಿ ಕೊರೋನ ಬಂದೀತೆಂದು ಹೆದರಿದರು. ಆಗ ಕೆಲ ಮುಸ್ಲಿಮ್ ಯುವಕರು ಅಸು ನೀಗಿದ ವ್ಯಕ್ತಿಯ ಧಾರ್ಮಿಕ ನಂಬಿಕೆಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿ ಗೌರವದ ಬೀಳ್ಕೊಡುಗೆ ನೀಡಿದರು. ಇದರಿಂದಲೂ ಕೋಮು ವೈರಾಣು ಅಂಟಿಸಿಕೊಂಡವರು ಬದಲಾಗಲಿಲ್ಲ. ಕೊರೋನ ಕೂಡ ಮನುಷ್ಯನಲ್ಲಿನ ಕ್ರೌರ್ಯವನ್ನು ಕಡಿಮೆ ಮಾಡಲಿಲ್ಲ. ಈಗ ಮತ್ತೆ ಅದೇ ಹಳೆಯ ರಾಗ,ದ್ವೇಷದ ರೋಗ.


ಹಿಟ್ಲರನಂತೆ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದವರಿಗೆ ಚುನಾವಣೆಯ ಮೂಲಕ ಪಾಠ ಕಲಿಸಿ ಅಧಿಕಾರದಿಂದ ಅವರನ್ನು ದೂರವಿಡುವದೇ ತುರ್ತು ಅಗತ್ಯ. ಆದರೆ ಚುನಾವಣೆ ಬರುವವರೆಗೆ ಬಿಜೆಪಿ ಯನ್ನು ವಿರೋಧಿಸುವ ಪ್ರತಿಪಕ್ಷಗಳು ಚುನಾವಣೆ ಬಂದಾಗ ಪರಸ್ಪರ ಕಚ್ಚಾಟಕ್ಕೆ ಇಳಿಯುತ್ತವೆ. ಸಿಬಿಐ, ಐಡಿಟಿ ಅಸ್ತಗಳನ್ನು ಬಳಸಿ ವಿರೋಧ ಪಕ್ಷಗಳು ಒಂದಾಗದಂತೆ ಬಿಜೆಪಿ ಸರಕಾರ ನಾನಾ ತಂತ್ರ, ಕುತಂತ್ರಗಳನ್ನು ಮಾಡುತ್ತದೆ.ಕೇರಳದ ಕಮ್ಯುನಿಸ್ಟರು ಮಾತ್ರ ಇಂತಹ ಸಂಕಷ್ಟದ ದಿನಗಳಲ್ಲೂ ನಿತ್ಯವೂ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತ ತಮ್ಮ ನೆಲೆಯನ್ನು ಉಳಿಸಿಕೊಂಡಿದ್ದಾರೆ. ನಾರಾಯಣ ಗುರುಗಳ ರಕ್ಷಾ ಕವಚ,ದಶಕಗಳ ತ್ಯಾಗ, ಬಲಿದಾನ ಅವರನ್ನು ಅಲ್ಲಿ ಕಾಪಾಡಿದೆ.
 
ಬಹುತ್ವ ಭಾರತದ ಜೀವ ಸೆಲೆಗಳು ಒಂದೊಂದಾಗಿ ನಾಶವಾಗುತ್ತಿರುವ ಈ ದಿನಗಳಲ್ಲಿ ಹಳೆಯ ತಂತ್ರಗಳಿಂದ, ಟೌನ್ ಹಾಲ್ ಮುಂದಿನ ಸಾಂಕೇತಿಕ ಪ್ರತಿಭಟನೆಗಳಿಂದ ಹೆಚ್ಚಿನ ಪ್ರಯೋಜನವಾಗುವದಿಲ್ಲ.ಹೊಸ ನಿರೂಪಣೆ, ನವೀನ ಆಲೋಚನೆಗಳೊಂದಿಗೆ ಬಹು ವ್ಯಾಪಕವಾದ ಸಾಂಸ್ಕೃತಿಕ ಪ್ರತಿರೋಧ ಮಾತ್ರ ಹಳಿ ತಪ್ಪುತ್ತಿರುವ ಭಾರತವನ್ನು ಮತ್ತ್ತೆ ಹಳಿಗೆ ತರಬಹುದು. ಅವರಂತೆ ಮನೆ ಮನೆಗೆ ಹೋಗಿ ಮನ ಮನದ ಬಾಗಿಲು ತಟ್ಟಬೇಕು.ಅನೇಕ ಪ್ರಗತಿಪರರ ಮನೆಗಳಲ್ಲೇ ಭಕ್ತರು ಹುಟ್ಟಿಕೊಂಡ ಈ ದಿನಗಳಲ್ಲಿ ಇದು ಅಷ್ಟು ಸುಲಭವಲ್ಲ. ಇದರ ಜೊತೆಗೆ ರಾಜಕೀಯ ಅಧಿಕಾರದಿಂದ ಫ್ಯಾಶಿಸ್ಟ್‌ಶಕ್ತಿಗಳನ್ನು ದೂರವಿಡಬೇಕು. ದೂರವಿಟ್ಟರೆ ಸಾಲದು ಪ್ರತಿರೋಧದ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಧರ್ಮ, ಮಠ, ಮಠಾಧಿಪತಿಗಳು, ಮಂದಿರಗಳು ಎಲ್ಲ ಅವರ ಜೊತೆಗಿವೆ. ಈಗ ರಾಜ್ಯಾಧಿಕಾರವೂ ಅವರ ಕೈಯಲ್ಲಿ ಇದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಹೀಗೆ ಸಕಲಾಂಗಗಳಲ್ಲೂ ವ್ಯಾಪಿಸಿದ ಕೋಮು ದ್ವೇಷದ ಸಾಂಕ್ರಾಮಿಕ ವೈರಾಣುವನ್ನು ತೊಲಗಿಸುವದು ನಮ್ಮೆಲ್ಲರ ಇಂದಿನ ಮೊದಲ ಏಕೈಕ ಆದ್ಯತೆಯಾಗಬೇಕಾಗಿದೆ.

ಭಾರತವೆಂಬುದು ಯಾರದು? ಇದು ಎಲ್ಲರದ್ದು. ಉಸ್ತಾದ್ ಬಿಸ್ಮಿಲ್ಲಾಖಾನರ ಶಹನಾಯಿ ವಾದನವಿಲ್ಲದೇ ಕಾಶಿ ವಿಶ್ವನಾಥನ ಪೂಜೆ ಮುಗಿಯುತ್ತಿರಲಿಲ್ಲ. ಒಮ್ಮೆ ಬ್ರಿಟನ್ ಸಿರಿವಂತನೊಬ್ಬ ಬಿಸ್ಮಿಲ್ಲಾಖಾನರನ್ನು ಲಂಡನ್‌ಗೆ ಬಂದು ನೆಲೆಸಿದರೆ ಸಕಲ ಸೌಕರ್ಯ ಒದಗಿಸುವುದಾಗಿ ಹೇಳಿದ ಅದಕ್ಕೆ ಬಿಸ್ಮಿಲ್ಲಾಖಾನರು ನಾನೊಬ್ಬನೇ ಬರುವುದಿಲ್ಲ, ಕಾಶಿವಿಶ್ವನಾಥ ಮತ್ತು ಗಂಗಾ ನದಿಯ ಜೊತೆಗೆ ಬರುವುದಿದ್ದರೆ ಬರುತ್ತೇನೆ ಎಂದು ಹೇಳಿದರು. ಇದು ಮೋದಿ, ಮುತಾಲಿಕರ ಭಾರತ ಮಾತ್ರವಲ್ಲ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಮಹಮ್ಮದ್ ರಫಿಯವರ ಭಾರತ ಕೂಡ ಹೌದು ಎಂಬುದನ್ನು ಅವಿವೇಕಿಗಳು ಅರಿತುಕೊಳ್ಳಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News