ಜನರು ಬಯಸುವ ಸಾಮರಸ್ಯದ ಬದುಕು

Update: 2022-04-04 05:35 GMT

ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರನ್ನು ಧರ್ಮದ, ಜಾತಿಯ ಆಧಾರದಲ್ಲಿ ಒಡೆಯುವ ಉತ್ತರ ಭಾರತದ ಬನಿಯಾ ವ್ಯಾಪಾರಿ ಕೋಮುವಾದಿ ಶಕ್ತಿಗಳ ಹುನ್ನಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಮತ್ತು ಕಾರ್ಮಿಕ, ರೈತ, ದಲಿತ ಸಂಘಟನೆಗಳು ಧ್ವನಿಯೆತ್ತದಿದ್ದರೆ ಕನ್ನಡಿಗರು ತಮ್ಮ ತವರು ನೆಲದಲ್ಲೇ ಅನಾಥರಾಗಲಿದ್ದಾರೆ.



ಕರ್ನಾಟಕದಲ್ಲಿ ಹದಗೆಡುತ್ತಿರುವ ಕೋಮು ಸಾಮರಸ್ಯದ ದುರವಸ್ಥೆ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಸದಾ ಅಶಾಂತಿಯಿಂದ ಕೂಡಿರುವ ಪ್ರದೇಶಕ್ಕೆ ಬಂದು ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳೂ ಹಿಂಜರಿಯುತ್ತಾರೆ. ಇದೇ ಮಾತನ್ನು ಉದ್ಯಮಿ ಕಿರಣ್ ಮಜುಂದಾರ್ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವ ಅವರು ‘‘ಐಟಿ, ಬಿಟಿ ಕ್ಷೇತ್ರಕ್ಕೆ ಕೋಮುವಾದ ಪ್ರವೇಶ ಮಾಡಿದೆ. ಅದು ನಮ್ಮ ಜಾಗತಿಕ ನಾಯಕತ್ವ ನಾಶ ಮಾಡುತ್ತದೆ’’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಕಿರಣ್ ಮಜುಂದಾರ್ ಕಳಕಳಿ ಮಾತ್ರವಲ್ಲ ನೆಮ್ಮದಿಯ ಬದುಕನ್ನು ಬಯಸುವ ಎಲ್ಲ ಕನ್ನಡಿಗರ ಅಭಿಪ್ರಾಯವೂ ಆಗಿದೆ. ಕಾನೂನು ಪರಿಪಾಲಿಸುವ ಕೆಲಸಕ್ಕೆ ಸರಕಾರ ರಜೆ ಹಾಕಿದಾಗ ಬೀದಿ ಗೂಂಡಾಗಳು ಎಲ್ಲವನ್ನೂ ತೀರ್ಮಾನಿಸಲು ಮುಂದಾದಾಗ ಸಹಜವಾಗಿ ಜನರಲ್ಲಿ ಇಂಥ ಆತಂಕ ಉಂಟಾಗುತ್ತದೆ.

ಕರ್ನಾಟಕದ ಜನ ಶಾಂತಿ ಪ್ರಿಯರು. ಕೂಡಿ ಬದುಕುವುದನ್ನು, ಹಬ್ಬಗಳ ಆಚರಣೆ ಮಾಡುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹೆದರಿ ಕಂಗಾಲಾದ ಈಗ ಅಧಿಕಾರದಲ್ಲಿರುವ ಪಕ್ಷ ಪರೋಕ್ಷವಾಗಿ ಪ್ರಚೋದನಕಾರಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆಯೇನೋ ಎಂಬ ಸಂದೇಹ ಬರುತ್ತದೆ.

ಇತ್ತೀಚೆಗೆ ದಾವಣಗೆರೆಗೆ ಹೋಗಿದ್ದೆ. ನಾನು ಹೋದಾಗ ಅಲ್ಲಿ ಊರ ದೇವತೆ ದುಗ್ಗಮ್ಮನ ಜಾತ್ರೆಯ ಸಂಭ್ರಮ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕದ ನಾನಾ ಕಡೆಗಳಿಂದ ಲಕ್ಷಾಂತರ ಜನ ಬರುತ್ತಾರೆ. ಎಲ್ಲ ಜಾತಿ, ಮತ, ಸಮುದಾಯಗಳ ಜನ ಸೇರಿ ಊರ ದೇವಿಯ ಜಾತ್ರೆ ಮಾಡುತ್ತಾರೆ.

ಲಕ್ಷಾಂತರ ಜನ ಸೇರುವ ದಾವಣಗೆರೆ ದುಗ್ಗಮ್ಮನ ಜಾತ್ರೆಯಲ್ಲಿ ಯಾವ ಜಾತಿ ಮತ ಭೇದವೂ ಇರುವುದಿಲ್ಲ. ಕರ್ನಾಟಕದ ಪ್ರಸಿದ್ಧ ಸ್ತ್ರೀ ದೇವತೆಗಳಾದ ಚೌಡಮ್ಮ, ಮಾರಮ್ಮ, ಯಲ್ಲಮ್ಮ, ಗುತ್ತೆಮ್ಮ, ಗಿಡ್ಡಮ್ಮ, ಕರಿಯಮ್ಮ, ಹಳದಮ್ಮ ಮೊದಲಾದ ಜನಪದ ದೈವಗಳ ಸಾಲಿನಲ್ಲಿ ದುಗ್ಗಮ್ಮನೂ ಸೇರಿದ್ದಾಳೆ. ಈ ದೇವಿಯ ವಿಶೇಷವೆಂದರೆ ಜಾತ್ರೆಯ ಮೊದಲ ಎರಡು ದಿನ ಹೋಳಿಗೆ, ಕರಿಗಡುಬು, ಹುಗ್ಗಿ, ಪಾಯಸ ಮತ್ತಿತರ ಸಿಹಿ ಪದಾರ್ಥಗಳ ನೈವೇದ್ಯ ಅರ್ಪಣೆಯಾದರೆ ಮೂರನೇ ದಿನ ಬಾಡೂಟದ ಸಮಾರಾಧನೆ ಇರುತ್ತದೆ.

ಆ ದಿನವಂತೂ ನಗರದ ವಿವಿಧ ಬಡಾವಣೆಗಳ ಜನರು ತಮ್ಮ ಮನೆಯ ಮುಂದೆ ಪೆಂಡಾಲ್ ಹಾಕಿ ತಮ್ಮ ಬಂಧುಗಳು, ಮಿತ್ರರನ್ನು ಊಟಕ್ಕೆ ಆಹ್ವಾನಿಸುತ್ತಾರೆ. ಉಳಿದ ಕಡೆಗಳಲ್ಲಿ ಈ ವರ್ಷ ಕಾಣಿಸಿಕೊಂಡ ಕೋಮು ದ್ವೇಷದ ವ್ಯಾಧಿಗೆ ಇಲ್ಲಿ ಪ್ರವೇಶವಿಲ್ಲ. ಎಲ್ಲಾ ಮತ ಧರ್ಮೀಯರು ಸೇರಿ ಜಾತ್ರೆ ಮಾಡುತ್ತಾರೆ. ನಮ್ಮ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಜನ ಕೂಡಿ ಬದುಕುವುದರಲ್ಲಿ ಖುಷಿ ಪಟ್ಟವರು. ಹಬ್ಬ, ಹುಣ್ಣಿಮೆ, ಜಾತ್ರೆ, ರಥೋತ್ಸವ, ಉರೂಸು, ಕ್ರಿಸ್‌ಮಸ್, ಮಹಾವೀರ ಜಯಂತಿ, ಬುದ್ಧ ಪೂರ್ಣಿಮೆ ಹೀಗೆ ಎಲ್ಲವನ್ನೂ ಪರಸ್ಪರ ಹೊಂದಾಣಿಕೆಯಿಂದ ಆಚರಿಸುತ್ತ ಬಂದವರು.

ದಾವಣಗೆರೆ ದುಗ್ಗಮ್ಮನ ಜಾತ್ರೆ ಮಾತ್ರವಲ್ಲ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ, ಕೊಟ್ಟೂರೇಶ್ವರ ಜಾತ್ರೆ, ಹುಬ್ಬಳ್ಳಿಯ ಸಿದ್ದಾರೂಢರ ಜಾತ್ರೆ, ಕಲಬುರಗಿಯ ಶರಣಬಸವೇಶ್ವರರ ಜಾತ್ರೆ, ಬಂದೇ ನವಾಝರ ಉರೂಸು, ಹರಿಹರದ ಆರೋಗ್ಯ ಮಾತಾ ಜಾತ್ರೆ ಇವೆಲ್ಲ ಸರ್ವ ಜನಾಂಗದ ಸಂಭ್ರಮದ ಸಂಕೇತಗಳು.

ಇತ್ತೀಚಿನವರೆಗೆ ಜನಾಂಗೀಯ ಸಾಮರಸ್ಯದ ತಾಣಗಳಾಗಿದ್ದ ಜಾತ್ರೆಗಳು ಈಗ ಕೋಮು ವ್ಯಾಧಿಯಿಂದ ಎಂದಿನ ಸಂಭ್ರಮವನ್ನು ಕಳೆದುಕೊಂಡು ಪೊಲೀಸ್ ಬಂದೋಬಸ್ತಿನಲ್ಲಿ ಜಾತ್ರೆ ಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ ಏನೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇವರು ಮತ್ತು ಧರ್ಮ ಮನೆಯೊಳಗಿದ್ದರೆ, ಗುಡಿಯೊಳಗಿದ್ದರೆ ಹೀಗಾಗುತ್ತಿರಲಿಲ್ಲ. ದೇವರನ್ನು ರಸ್ತೆಗೆ ತಂದು ಧರ್ಮವನ್ನು ಓಟುಗಳನ್ನು ಒಟ್ಟುಗೂಡಿಸುವ ದುರ್ಬಳಕೆಯ ರಾಜಕಾರಣ ಪ್ರವೇಶ ಮಾಡಿದರೆ ಭಯವೇ ಧರ್ಮದ ಮೂಲವಾಗುತ್ತದೆ

ಹಿಂದೂ ದೇವಳದ ಸಮೀಪ ಮುಸಲ್ಮಾನ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಅವಕಾಶವಿಲ್ಲ ಎಂದು ಬೊಬ್ಬಿಡುವ ಕೋಮುವಾದಿಗಳಿಗೆ ಹಿಂದೂ ಧರ್ಮದ ಮೇಲೆ ಪ್ರೇಮವಿಲ್ಲ. ಶ್ರದ್ಧೆಯಿಂದ ಈ ಬೆದರಿಕೆಯನ್ನು ಅವರು ಹಾಕುವುದಿಲ್ಲ. ಮುಸ್ಲಿಮರನ್ನು ಓಡಿಸಿ ಎಲ್ಲ ಲಾಭವನ್ನು ದೋಚುವ ವ್ಯಾಪಾರಿ ಕುತಂತ್ರ ಬುದ್ಧಿ ಅವರಲ್ಲಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ

ಹಿಜಾಬ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಮತ್ತು ಹಲಾಲ್‌ಗಳು ಒಮ್ಮಿಂದೊಮ್ಮೆಲೆ ಉದ್ಭವಿಸಿದ ಆಕಸ್ಮಿಕ ಘಟನಾವಳಿಗಳಲ್ಲ. ಯಾರೋ ಉಡಾಳ ಹುಡುಗರ ಬೀದಿ ಪುಂಡಾಟಿಕೆ ಮಾತ್ರವಲ್ಲ. ಇವು ಕನ್ನಡಿಗರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಓಟಿನ ಬೆಳೆ ತೆಗೆಯಲು ರೂಪಿಸಿದ ಅತ್ಯಂತ ವ್ಯವಸ್ಥಿತ ಕಾರ್ಯತಂತ್ರ.ಇದರ ಹಿಂದೆ ಯಾರಿದ್ದಾರೆಂಬುದನ್ನು ವಿವರಿಸಬೇಕಾಗಿಲ್ಲ. ಇದು ರಾಜಕೀಯ ವಿದ್ಯಮಾನಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ ಬೇಸರವಾಗುತ್ತಿರುವುದು ಬೀದಿಯಲ್ಲಿ ಗೂಂಡಾಗಿರಿ ನಡೆಸಿರುವವರ ಬಗ್ಗೆ ಅಲ್ಲ. ನಿಜವಾದ ಬೇಸರವಾಗುವುದು ಅಧಿಕಾರದಲ್ಲಿ ಇರುವವರ ಬಗ್ಗೆ. ಇಂಥ ಬೀದಿ ಪುಂಡಾಟಿಕೆಗಳನ್ನು ಸರಕಾರ ತಕ್ಷಣ ಹತ್ತಿಕ್ಕಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ. ಆದರೆ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳದ ಸರಕಾರ ಸಾಂವಿಧಾನಿಕ ಹೊಣೆಗಾರಿಕೆಯಿಂದ ಜಾರಿಕೊಂಡಿತು ಎಂಬುದು ಅನೇಕ ಚಿಂತಕರ ಅಭಿಪ್ರಾಯವಾಗಿದೆ. ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಮಧ್ಯಪ್ರವೇಶ ಮಾಡಬೇಕಾದ ಮಠಾಧೀಶರು ನೊಂದವರ ಬಗ್ಗೆ ಕನಿಷ್ಠ ಸಹಾನುಭೂತಿಯನ್ನು ತೋರಿಸಲಿಲ್ಲ.ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕನ ಮನೆಗೆ ಹೋಗಿ ಬಂದ ಬಸವಣ್ಣನವರ ಹೆಸರು ಹೇಳುವ ಕೆಲ ಮಠಾಧೀಶರು ನಮ್ಮ ನೆಲದಲ್ಲೇ ಹುಟ್ಟಿ ಬೆಳೆದ ಒಂದು ಅಲ್ಪಸಂಖ್ಯಾತ ಸಮುದಾಯದ ಬಡ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದಾಗ ಕನಿಷ್ಠ ಸಾಂತ್ವನವನ್ನೂ ಹೇಳಲಿಲ್ಲ.

ಸರ್ವ ಧರ್ಮ ಸಾಮರಸ್ಯವನ್ನು ಸಾರುವ ಸೆಕ್ಯುಲರ್ ಪರಂಪರೆ ಕರ್ನಾಟಕದ ಚರಿತ್ರೆಯಲ್ಲಿ ಗಟ್ಟಿಯಾಗಿ ಬೇರೂರಿದೆ. ಕವಿರಾಜಮಾರ್ಗಕಾರನಿಂದ ಹಿಡಿದು ರಾಷ್ಟ್ರ ಕವಿ ಕುವೆಂಪುವರೆಗೆ ಬಹುತ್ವವನ್ನು ಎತ್ತಿ ಹಿಡಿದ ಪರಂಪರೆ ಕರ್ನಾಟಕದ್ದು ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರನ್ನು ಧರ್ಮದ, ಜಾತಿಯ ಆಧಾರದಲ್ಲಿ ಒಡೆಯುವ ಉತ್ತರ ಭಾರತದ ಬನಿಯಾ ವ್ಯಾಪಾರಿ ಕೋಮುವಾದಿ ಶಕ್ತಿಗಳ ಹುನ್ನಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಮತ್ತು ಕಾರ್ಮಿಕ, ರೈತ, ದಲಿತ ಸಂಘಟನೆಗಳು ಧ್ವನಿಯೆತ್ತದಿದ್ದರೆ ಕನ್ನಡಿಗರು ತಮ್ಮ ತವರು ನೆಲದಲ್ಲೇ ಅನಾಥರಾಗಲಿದ್ದಾರೆ.

ಇಂಥ ಸನ್ನಿವೇಶದಲ್ಲಿ ನೊಂದ ಸಮುದಾಯಗಳ ಜನರಿಗೆ ಆತ್ಮವಿಶ್ವಾಸ ಮತ್ತು ಭರವಸೆಯನ್ನು ತುಂಬಬೇಕಾದ ಮಂತ್ರಿಗಳ ಬಾಯಿಯಿಂದಲೂ ಕೂಡ ಶಾಂತಿಯನ್ನು ಕದಡುವ ಪ್ರಚೋದನಕಾರಿ ಮಾತುಗಳು ಬರುತ್ತಿರುವುದು ವಿಷಾದದ ಸಂಗತಿಯಾಗಿದೆ.
ಸಚಿವೆ ಶಶಿಕಲಾ ಜೊಲ್ಲೆ ಅವರು ಹಲಾಲ್ ಕಟ್ ವಿರುದ್ಧ ಹಿಂಸಾಚಾರಕ್ಕೆ ಇಳಿದಿರುವ ಸಮಾಜ ವಿರೋಧಿ ಗೂಂಡಾ ಶಕ್ತಿಗಳ ಪರವಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ತನ್ನ ಕುರ್ಚಿ ಉಳಿಸಿಕೊಳ್ಳಲು ಎಂಬುದು ನಿಜವಾದರೂ ಅದು ಖಂಡನೀಯ.
ಕೋಮುವಾದಿ ಗೂಂಡಾ ಗುಂಪುಗಳು ಚುನಾವಣಾ ಕಾರಣಕ್ಕಾಗಿ ಹೊಸ ಹೊಸ ಅಜೆಂಡಾಗಳನ್ನು ಮುಂದೆ ಬಿಟ್ಟು ಜನಸಾಮಾನ್ಯರ ನಡುವೆ ಒಡಕಿನ ವಿಷ ಬೀಜವನ್ನು ಬಿತ್ತುತ್ತಿವೆ. ಆದರೆ ಕರ್ನಾಟಕದ ಜನರು ಇಂಥ ಅಪಪ್ರಚಾರ, ಪುಂಡಾಟಿಕೆಗಳಿಂದ ವಿಚಲಿತರಾಗಿಲ್ಲ. ವ್ಯಾಪಾರ ವಹಿವಾಟುಗಳು ಎಂದಿನಂತೆ ಸುಗಮವಾಗಿ ನಡೆದಿವೆ.

ಆದರೆ ಕರ್ನಾಟಕವನ್ನು ಇನ್ನೊಂದು ಗುಜರಾತನ್ನಾಗಿ ಮಾಡುವ ಮಸಲತ್ತು ಮುಂದುವರಿದಿದೆ ಎಂಬುದನ್ನು ಮರೆಯಬಾರದು. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ನಂಥ ಮುಖ್ಯ ವಿರೋಧ ಪಕ್ಷ ಜನರಲ್ಲಿ ಭರವಸೆ ತುಂಬಲು ಮುಂದಾಗಬೇಕು.ಆದರೆ ಕಾಂಗ್ರೆಸ್‌ನಲ್ಲೂ ಸಂಘ ಪರಿವಾರದ ಕೋಮುವಾದಿ ಶಕ್ತಿಗಳ ಅಪಾಯದ ಬಗ್ಗೆ ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಾತ್ರ ಬಹಿರಂಗವಾಗಿ ಮಾತಾಡುತ್ತಾರೆ. ಉಳಿದ ಬಹುತೇಕ ನಾಯಕರು ಜಾಣ ಮೌನ ತಾಳಿದ್ದಾರೆ. ಟೀಕಿಸಿದರೂ ಬಿಜೆಪಿಯನ್ನು ಮಾತ್ರ ಕಾಟಾಚಾರಕ್ಕಾಗಿ ಟೀಕಿಸುತ್ತಾರೆ. ಆದರೆ ಆರೆಸ್ಸೆಸ್ ಪ್ರಶ್ನೆ ಬಂದಾಗ ವೌನ ತಾಳುತ್ತಾರೆ

ಕೋಮುವಾದಿ ಶಕ್ತಿಗಳ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ರಾಜ್ಯವ್ಯಾಪಿ ಜಾಥಾ ನಡೆಸಲು ಕಾಂಗ್ರೆಸ್ ಮುಂದಾಗಬೇಕು. ಹಿಂದೆ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಬಳ್ಳಾರಿ ಜಾಥಾ ಮಾಡಿದ್ದನ್ನು ಗಮನಿಸಬೇಕು.
ಕರ್ನಾಟಕದ ಜನರಿಗೆ ಶಾಂತಿ, ನೆಮ್ಮದಿಯ ಬದುಕು ಬೇಕಾಗಿದೆ. ಆದರೆ ಕೋಮುವಾದಿ ಶಕ್ತಿಗಳಿಗೆ ಅದು ಬೇಕಾಗಿಲ್ಲ. ಜನರು ಬಯಸುವ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡುವುದು ಕರ್ನಾಟಕದ ಎಲ್ಲ ಸಮಾನ ಮನಸ್ಕ ವ್ಯಕ್ತಿ ಶಕ್ತಿಗಳ ಆದ್ಯ ಕರ್ತವ್ಯವಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ