ಕಾಲು ಕಳೆದುಕೊಂಡರೂ ಶಿಕ್ಷಕಿಯಾಗುವ ಕನಸನ್ನು ಬೆಂಬತ್ತುತ್ತಿರುವ ಬಿಹಾರದ ಬಾಲಕಿ: ವೀಡಿಯೊ ವೈರಲ್

Update: 2022-05-25 19:54 GMT

ಪಾಟ್ನಾ, ಮೇ 25: ಬಿಹಾರದ ಮಾವೋವಾದಿ ಪೀಡಿತ ಜಮುಯಿ ಜಿಲ್ಲೆಯ 10 ವರ್ಷದ ಸೀಮಾ ಕುಮಾರಿ ಸಾಮಾನ್ಯ ಬಾಲಕಿಯಲ್ಲ. ಇತರ ಹಲವು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸ್ಫೂರ್ತಿಯ ಸೆಲೆ. 

ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಸೀಮಾ ಕುಮಾರಿ ಕಾಲು ಕಳೆದುಕೊಂಡಿದ್ದಳು. ಆದರೆ, ಆಕೆ ದೃಢತೆ ಹಾಗೂ ನಿರ್ಧಾರವನ್ನು ಕಳೆದುಕೊಳ್ಳಲಿಲ್ಲ. ತನ್ನ ದುರಾದೃಷ್ಟಕ್ಕೆ ಶಪಿಸುವ ಬದಲು ಆಕೆ ಶಿಕ್ಷಕಿಯಾಗುವ ತನ್ನ ಕನಸನ್ನು ಬೆಂಬತ್ತಲು ನಿರ್ಧರಿಸಿದಳು. 

ಜಮುಯಿ ಜಿಲ್ಲೆಯ ಖೈರಾ ಬ್ಲಾಕ್ನ ಅಡಿಯಲ್ಲಿ ಬರುವ ಫತೇಪುರ ಗ್ರಾಮದ ನಿವಾಸಿಯಾಗಿರುವ ಸೀಮಾ ಒಂದೇ ಕಾಲಿನಲ್ಲಿ 1 ಕಿ.ಮೀ. ದೂರದಲ್ಲಿರುವ ಶಾಲೆಗೆ ತೆರಳಿ ಪ್ರತಿಯೊಬರಲ್ಲಿ ಅಚ್ಚರಿ ಮೂಡಿಸಿದ್ದಾಳೆ. ‘‘ನಾನು ಶಿಕ್ಷಕಿಯಾಗಲು ಬಯಸುತ್ತೇನೆ. ಸುತ್ತಮುತ್ತ ಪ್ರದೇಶದಲ್ಲಿ ಇರುವ ಜನರನ್ನು ವಿದ್ಯಾವಂತರನ್ನಾಗಿ ಮಾಡಲು ಬಯಸುತ್ತೇನೆ’’ ಎಂದು ಹೊಳಪು ಕಂಗಳ ಸೀಮಾ ಹೇಳಿದ್ದಾಳೆ. ಆಕೆಯ ತಂದೆ ಖೈರನ್ ಮಾಂಝಿ ವಲಸೆ ಕಾರ್ಮಿಕ. ಪ್ರತಿ ತಿಂಗಳು ಆತ ಕುಟುಂಬಕ್ಕೆ ಸಣ್ಣ ಮೊತ್ತವನ್ನು ಕಳುಹಿಸಿ ಕೊಡುತ್ತಿದ್ದಾನೆ. 

‘‘ನನ್ನ ಆರು ಮಕ್ಕಳಲ್ಲಿ ಸೀಮಾ ಎರಡನೇಯವಳು’’ ಎಂದು ತಾಯಿ ಬೇಬಿ ದೇವಿ ತಿಳಿಸಿದ್ದಾರೆ. ಶಿಕ್ಷಕ ಶಿವಕುಮಾರ್ ಭಗತ್, ‘‘ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಬಗ್ಗೆ ಸೀಮಾ ವಿಷಾದಪಟ್ಟಿಕೊಂಡಿರುವುದನ್ನು ನಾನು ಇದುವರೆಗೆ ನೋಡಿಲ್ಲ. ಅದರ ಬದಲಾಗಿ ಆಕೆಯಲ್ಲಿ ಯಾವಾಗಲೂ ಭರವಸೆ ಇದೆ’’ ಎಂದಿದ್ದಾರೆ.

ಸೀಮಾ ಕುಮಾರಿ ಅವರ ಬಗ್ಗೆ ನೆಟ್ಟಿಜನ್, ರಾಜಕಾರಣಿಗಳು ಹಾಗೂ ಸೆಲಬ್ರೆಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ವೀಡಿಯೊ ನೋಡಿ ಸೀಮಾಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಸೀಮಾ ಶೀಘ್ರದಲ್ಲಿ ಎರಡೂ ಕಾಲುಗಳಲ್ಲಿ ಶಾಲೆಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ. ಕೃತಕ ಕಾಲುಗಳನ್ನು ಅಳವಡಿಸಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News