'ಅಗ್ನಿಪಥ್' ಯೋಜನೆ ವಿರುದ್ಧ ಬಿಹಾರದಲ್ಲಿ ವ್ಯಾಪಕ ಪ್ರತಿಭಟನೆ; ರೈಲಿಗೆ ಬೆಂಕಿ

Update: 2022-06-16 11:35 GMT
Photo: Twitter/@ndtv

ಪಾಟ್ನಾ: ಕೇಂದ್ರ ಸರಕಾರವು ಸೇನಾ ಪಡೆಗಳಿಗೆ ಅಲ್ಪಾವಧಿಗೆ ಸಿಬ್ಬಂದಿಗಳ ನೇಮಕಾತಿಗಾಗಿ ಘೋಷಿಸಿದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು ಬಿಹಾರದ ಸರಣ್ ಜಿಲ್ಲೆಯ ಛಪ್ರಾ ಎಂಬಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಪ್ಯಾಸೆಂಜರ್ ರೈಲೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಅರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲೆಸೆತದ ಘಟನೆಯೂ ನಡೆದಿದ್ದು ರಾಜ್ಯದ ಹಲವೆಡೆ  ರಸ್ತೆ ತಡೆ ಮತ್ತು ಪಿಕೆಟಿಂಗ್ ನಡೆಯುತ್ತಿದೆ.

ಭಗಲ್ಪುರ್, ಅರ್ವಾಲ್, ಬುಕ್ಸಾರ್,ಗಯಾ, ಮುಂಗೇರ್, ನವಾಡ, ಸಹರ್ಸ, ಸಿವಾನ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಬಿಹಾರದಿಂದ ಸೇನಾಪಡೆಗಳಿಗೆ ಸೇರುವವರಲ್ಲಿ ಗರಿಷ್ಠ ಮಂದಿ ಭೋಜ್ಪುರ್ ಮತ್ತು ಸರಣ್ ಪ್ರದೇಶದವರಾಗಿರುವುದು ಗಮನಾರ್ಹ.

ಬುಕ್ಸಾರ್ ಜಿಲ್ಲೆಯಲ್ಲಿ ಸುಮಾರು 100 ಸೇನಾ ಆಕಾಂಕ್ಷಿಗಳು ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಹಳಿಗಳ ಮೇಲೆ ಕುಳಿತು ಪಾಟ್ನಾಗೆ ಹೊರಟಿದ್ದ ಜನ್ ಶತಾಬ್ದಿ ಎಕ್ಸ್‍ಪ್ರೆಸ್ ರೈಲನ್ನು ಸುಮಾರು 30 ನಿಮಿಷ ತಡೆದರು. ಭಭುವಾ ಎಂಬಲ್ಲಿ ಪ್ರತಿಭಟನಾಕಾರರು ಇಂಟರ್‍ಸಿಟಿ ರೈಲಿನ ಕಿಟಿಕಿಗಳನ್ನು ಪಡೆದು ಒಂದು ಬೋಗಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಕೆಲ ಇತರ ನಗರಗಳಲ್ಲಿಯೂ ಹಿಂಸೆಯ ಘಟನೆಗಳು ಹಾಗೂ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಿದ ಘಟನೆ ನಡೆದಿದೆ. ಜೆಹನಾಬಾದಿನಲ್ಲಿ ರೈಲು ಹಳಿ ತೆರವುಗೊಳಿಸಲು ಪೊಲೀಸ್ ಕಾರ್ಯಾಚರಣೆಯ ಬೆನ್ನಲ್ಲೇ ಪ್ರತಿಭಟನಾಕಾರರು ಕಲ್ಲೆಸೆತದಲ್ಲಿ ತೊಡಗಿದ್ದರಿಂದ ಹಲವರು ಗಾಯಗೊಂಡರು.

ನವಾಡ ಎಂಬಲ್ಲಿ ಯುವಕರ ಗುಂಪೊಂದು ಹಳಿಗಳ ಮೇಲೆ ಪ್ರತಿಭಟಿಸಿ ಟಯರುಗಳನ್ನು ಸುಟ್ಟಿದೆಯಲ್ಲದೆ ಅಗ್ನಿಪಥ್ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News