ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವುದು ನ್ಯಾಯಾಲಯದ ಕೆಲಸವಲ್ಲ: ಸುಪ್ರೀಂಕೋರ್ಟ್

Update: 2022-08-09 03:39 GMT

ಹೊಸದಿಲ್ಲಿ: ಇತರ ಸಮುದಾಯಗಳ ಜನಸಂಖ್ಯೆ ಹಿಂದೂಗಳಿಗಿಂತ ಅಧಿಕ ಇರುವ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಘೋಷಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಹಲವು ಪ್ರಾಯೋಗಿಕ ಅಂಶಗಳು ಹಾಗೂ ಅಂಕಿ ಅಂಶಗಳ ಆಧಾರದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನಿರ್ಧರಿಸಬೇಕಿದ್ದು, ಇದು ನ್ಯಾಯಾಂಗದ ವ್ಯಾಪ್ತಿಯಿಂದ ಹೊರಗಿರುವ ಅಂಶ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಉದಯ್ ಯು ಲಲಿತ್ ಮತ್ತು ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾಕಷ್ಟು ಅಧಿಕೃತ ದಾಖಲೆಗಳು ಇಲ್ಲದೇ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಕೆಲ ರಾಜ್ಯಗಳಲ್ಲಿ ಘೋಷಿಸುವ ನಿರ್ದೇಶನವನ್ನು ನೀಡಲಾಗದು ಎಂದು ಹೇಳಿದೆ.

"ಅಲ್ಪಸಂಖ್ಯಾತರೆಂದು ಘೋಷಿಸುವುದು ನ್ಯಾಯಾಲಯದ ಕೆಲಸವಲ್ಲ.. ಇದನ್ನು ಪ್ರಕರಣವಾರು ನಿರ್ಧಾರ ಮಾಡಬೇಕಾಗುತ್ತದೆ. ಹಿಂದೂಗಳಿಗೆ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸದೇ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸುವಂತೆ ಸಾಮಾನ್ಯ ಸೂಚನೆ ನೀಡಲು ಸಾಧ್ಯವಿಲ್ಲ" ಎಂದು ಅರ್ಜಿದಾರ ದೇವಕಿನಂದನ್ ಠಾಕೂರ್ ಜಿ ಅವರ ಪರ ವಕೀಲ ಅಶ್ವಿನಿ ಉಪಾಧ್ಯಾಯ ಅವರಿಗೆ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ ಎಂದು hindustantimes.com ವರದಿ ಮಾಡಿದೆ.

ಕಳೆದ ಜೂನ್‍ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ-1992 ಹಾಗೂ ಎನ್‍ಸಿಎಂ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಷನ್ಸ್ ಕಾಯ್ದೆ- 2004ರ ನಿಬಂಧನೆಗಳನ್ನು ಪ್ರಶ್ನಿಸಲಾಗಿದೆ. ಈ ಎರಡು ಕಾಯ್ದೆಗಳು ಅಲ್ಪಸಂಖ್ಯಾತರಿಗೆ ಇರುವ ಕೆಲ ಪ್ರಯೋಜನಗಳನ್ನು ಮತ್ತು ಹಕ್ಕುಗಳನ್ನು ನಿರ್ಬಂಧಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News