ಮಿಝೋರಾಂ: ಕಲ್ಲಿನ ಕ್ವಾರಿ ಕುಸಿತಗೊಂಡು 8 ಕಾರ್ಮಿಕರು ಸಾವು
Update: 2022-11-15 15:57 GMT
ಐಜ್ವಾಲ್, ನ. 15: ಮಿರೆರಾಂನ ಹನಥಿಯಾಲ್(Hanathiol) ಜಿಲ್ಲೆಯಲ್ಲಿ ಸೋಮವಾರ ಕಲ್ಲಿನ ಕ್ವಾರಿ ಕುಸಿದ ಪರಿಣಾಮ 8 ಕಾರ್ಮಿಕರು ಮೃತಪಟ್ಟಿದ್ದಾರೆ. ಕನಿಷ್ಠ ನಾಲ್ವರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ. ನಾಪತ್ತೆಯಾದ ಎಲ್ಲರೂ ಸಿಗುವ ವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುವುದು ಎಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಹನಥಿಯಾಲ್ ಜಿಲ್ಲೆಯ ಮೌದಾರ್ ಗ್ರಾಮದಲ್ಲಿ ಕಲ್ಲಿನ ಕ್ವಾರಿಯಲ್ಲಿ ಖಾಸಗಿ ಕಂಪೆನಿ ಎಬಿಸಿಐ ಇನ್ಫ್ರಾಸ್ಟ್ರಕ್ಚರ್ನ ಕಾರ್ಮಿಕರು ಸೋಮವಾರ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಸಂಜೆ ಸುಮಾರು 3 ಗಂಟೆಗೆ ಕುಸಿತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲಿನ ಕ್ವಾರಿ ಕುಸಿದ ಸಂದರ್ಭ 13 ಕಾರ್ಮಿಕರು ಅಲ್ಲಿದ್ದರು. ಓರ್ವ ಪಾರಾಗಿದ್ದಾನೆ ಎಂದು ಪೊಲೀಸ್ ಅಧೀಕ್ಷಕ ವಿನೀತ್ ಕುಮಾರ್ ತಿಳಿಸಿದ್ದಾರೆ.