ಹಿಂದುತ್ವವನ್ನು ಸೋಲಿಸುವುದು: ಚರಿತ್ರೆಯಿಂದ ಕೆಲವು ಪಾಠಗಳು

Update: 2023-06-30 05:57 GMT

ತಮ್ಮನ್ನು ತಾವು 'ಹಿಂದೂಗಳು' ಎಂದು ಕರೆದುಕೊಂಡ ಆ ಧಾರ್ಮಿಕ ಮೂಲಭೂತವಾದಿಗಳ ಕೊನೆಯ ಆಟ ಯಾವುದಾಗಿತ್ತು? ಜಯ ಗಳಿಸಿದರೆ ಅವರು ಯಾವ ರೀತಿಯ ದೇಶವನ್ನು ನಿರ್ಮಿಸುವವರಾಗಿದ್ದರು? ಹಿಂದೂ ತೀವ್ರಗಾಮಿಗಳು ಕನಸು ಕಂಡ ಭಾರತವು ಮೀರಾ ಬರೆದಂತೆ, 'ಸ್ವಯಂಘೋಷಿತ ಶ್ರೇಷ್ಠ ಜನಾಂಗದ ಜನರಿಂದ ತುಂಬಿರುವುದಾಗಿತ್ತು. ಅವರ ಆಧ್ಯಾತ್ಮಿಕ ಅಸಹಿಷ್ಣುತೆಯು ನಿಜವಾದ ಹಿಂದೂ ಧರ್ಮದ ನಿರಾಕರಣೆಯಾಗಿತ್ತು. ಎಲ್ಲಾ ಮುಸ್ಲಿಮರನ್ನು ನಿರ್ದಯವಾಗಿ ಅವರ ಪೂರ್ವಜರ ಮನೆಗಳಿಂದ ಇಲ್ಲವಾಗಿಸುವುದು ಮತ್ತು ಹೊರಹಾಕುವುದಾಗಿತ್ತು ಮತ್ತು ಈ ಸ್ಥಿತಿಯಲ್ಲಿ ಹಿಂದೂಗಳಲ್ಲದ ಇತರರು ಇದನ್ನು ಒಪ್ಪದಿರುವ ಹಾಗೆಯೇ ಇರಲಿಲ್ಲ.'



ಭಾರತೀಯಳಾಗಿ ಬದಲಾದ ಆಂಗ್ಲ ಮಹಿಳೆಯೊಬ್ಬರು ತನ್ನದೆಂದು ಭಾವಿಸಿದ ದೇಶದ ನಾಗರಿಕರಲ್ಲಿ ಮಾಡಿಕೊಂಡ ಮನವಿಯೊಂದನ್ನು 'ಹರಿಜನ್' ಪತ್ರಿಕೆಯು ತನ್ನ ನವೆಂಬರ್ 30, 1947ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ''ಇಪ್ಪತ್ತೆರಡು ವರ್ಷಗಳ ಹಿಂದೆ ನಾನು ಕಳೆದುಹೋದ ಅಲೆಮಾರಿಯಾಗಿದ್ದೆ'' ಎಂದು ಶುರುವಾಗುವ ಆ ಮನವಿಯಲ್ಲಿ ಆಕೆ ಹೇಳಿರುವುದು ಹೀಗೆ: ''ಭಾರತದಲ್ಲಿ ನನ್ನ ಚೈತನ್ಯದ ನೆಲೆಯನ್ನು ಮರಳಿ ಪಡೆದೆ. ಅದರ ಇತಿಹಾಸದ ಯುಗಗಳು ಆಧ್ಯಾತ್ಮಿಕ ಭವ್ಯತೆಯ ಮಹಾಕಾವ್ಯಗಳಲ್ಲಿ ಪುನರಾವರ್ತನೆಯಾಗುತ್ತಿರುವ ಭಾರತ ಇದು. ಯುದ್ಧ ಪೀಡಿತ, ಮುಳುಗುತ್ತಿರುವ ಪ್ರಪಂಚದ ಮುಂದೆ ಬೆಳಕು ಮತ್ತು ಭರವಸೆಯೊಂದಿಗೆ ತೆರೆದುಕೊಳ್ಳುವ ಇಲ್ಲಿ ನಾನು ಪಡೆದದ್ದು ಅಪರಿಮಿತ ಸ್ಫೂರ್ತಿ ಮತ್ತು ಉತ್ಸಾಹ. ಬಾಪುವಿನಲ್ಲಿ ನಾನು ದಾರಿದರ್ಶಕ ನಕ್ಷತ್ರವನ್ನು ಕಂಡುಕೊಂಡೆ; ಹಾಗೆಯೇ ಹಿಂದೂ ಧರ್ಮದಲ್ಲಿ ಸತ್ಯವನ್ನೂ ಭಾರತದಲ್ಲಿ ತಾಯಿಯನ್ನೂ ಕಂಡೆ.'' ಇಷ್ಟು ಹೇಳಿದ ನಂತರದ ಮಾತುಗಳು: ''ಇಪ್ಪತ್ತೆರಡು ವರ್ಷಗಳ ನಂತರ ನಾನು, ತಾಯಿಯ ಮೊಲೆಗಳು ತನ್ನ ಸ್ವಂತ ಮಕ್ಕಳೇ ಮಾಡಿದ ಗಾಯಗಳಿಂದ ಹರಿದು ರಕ್ತಸ್ರಾವವಾಗುವುದನ್ನು ಮತ್ತು ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವ ಜನರಿಂದ ಸತ್ಯ ಎಂಬ ಪದವು ಕಾಲಡಿಯಲ್ಲಿ ತುಳಿಯಲ್ಪಡುವುದನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ.''

ಹೀಗೆ ದುಃಖ ವ್ಯಕ್ತಪಡಿಸಿದ ಆಕೆ, 1925ರ ನವೆಂಬರ್‌ನಲ್ಲಿ ಗಾಂಧಿಯವರೊಂದಿಗೆ, ಅವರ ಜೊತೆಯಲ್ಲಿ ಕೆಲಸ ಮಾಡಲು ಈ ದೇಶಕ್ಕೆ ಬಂದಿದ್ದ ಬ್ರಿಟಿಷ್ ಅಡ್ಮಿರಲ್‌ನ ಮಗಳು ಮೀರಾ ಬೆಹೆನ್. 'ಬಾಪು'ವಿನೊಂದಿಗೆ ಆಕೆ ಸಬರಮತಿ ಮತ್ತು ಸೇವಾಗ್ರಾಮ್ ಆಶ್ರಮಗಳಲ್ಲಿ ವಾಸಿಸುತ್ತಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ಆಕೆ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಭಾಷಣ ಪ್ರವಾಸಗಳನ್ನು ಕೈಗೊಂಡಿದ್ದರು. ತನ್ನನ್ನು ಮಗಳಾಗಿ ಸ್ವೀಕರಿಸಿದ ದೇಶಕ್ಕಾಗಿ ಹಲವಾರು ಬಾರಿ ಆಕೆ ದೀರ್ಘಾವಧಿಯ ಜೈಲುವಾಸ ಅನುಭವಿಸಿದರು. ಅಸ್ಪೃಶ್ಯತೆಯ ನಿರ್ಮೂಲ, ಖಾದಿ ಪ್ರಚಾರ ಮತ್ತು ಹಿಂದೂ-ಮುಸ್ಲಿಮ್ ಸೌಹಾರ್ದದ ಅನ್ವೇಷಣೆಯ ಗಾಂಧಿ ಆದರ್ಶಗಳಿಗೆ ನಡೆ-ನುಡಿಯೆರಡರಲ್ಲೂ ತನ್ನನ್ನು ಸಮರ್ಪಿಸಿಕೊಂಡು ಇದೆಲ್ಲವನ್ನೂ ಆಕೆ ಮಾಡಿದ್ದರು.

ಮೀರಾ ಬರೆದ ಮನವಿಯು ನಿರ್ದಿಷ್ಟವಾಗಿ ಈ ಆದರ್ಶಗಳನ್ನು ಉಳಿಸಿಕೊಳ್ಳುವ ನಿಟ್ಟಿನದ್ದಾಗಿತ್ತು. ಉಪಖಂಡದ ವಿಭಜನೆಗೆ ಮುಂಚಿತವಾಗಿ ಮತ್ತು ನಂತರ ರಕ್ತಸಿಕ್ತ ದಂಗೆಗಳ ಸರಣಿಯೇ ನಡೆಯಿತು. ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಬಲಿಪಶುಗಳೂ ಆಗಿದ್ದ ಮತ್ತು ಅಪರಾಧಿಗಳೂ ಆಗಿದ್ದ ದಂಗೆಗಳು ಅವಾಗಿದ್ದವು. ಗಾಂಧಿ, ಹಿಂಸಾಚಾರವನ್ನು ತಡೆಯಲು ವೀರೋಚಿತವಾಗಿ ಕೆಲಸ ಮಾಡುತ್ತಿದ್ದರು. ಸೆಪ್ಟಂಬರ್‌ನಲ್ಲಿ ಕಲ್ಕತ್ತಾವನ್ನು ಶಾಂತಗೊಳಿಸುವಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಅವರು ದಿಲ್ಲಿಗೆ ತೆರಳಿದರು. ಅಲ್ಲಿ ಪರಿಸ್ಥಿತಿಯು ಆತಂಕಕಾರಿಯಾಗಿತ್ತು. ವಿಭಜನೆಯಿಂದ ನಿರಾಶ್ರಿತರಾದ ಹಿಂದೂ ಮತ್ತು ಸಿಖ್ ಸಮುದಾಯದವರು ದಿಲ್ಲಿಯಲ್ಲಿ ಇನ್ನೂ ವಾಸಿಸುತ್ತಿದ್ದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದರು. ಉತ್ತರ ಭಾರತದಲ್ಲಿ ಮುಸ್ಲಿಮರ ಪಾಲಿಗೆ ಭದ್ರತೆ ಒದಗಿಸುವುದು ಸಾಧ್ಯವಾದರೆ, ಗಡಿಯಾಚೆ ಪಾಕಿಸ್ತಾನದಲ್ಲಿ ಇನ್ನೂ ಉಳಿದಿರುವ ಹಿಂದೂಗಳು ಮತ್ತು ಸಿಖ್ಖರ ಸುರಕ್ಷತೆ ಸಾಧ್ಯವಾಗುತ್ತದೆ ಎಂಬುದು ಗಾಂಧಿಯ ಆಶಯವಾಗಿತ್ತು.

ಆದರೂ, ದಿಲ್ಲಿ ಮತ್ತು ಅದರ ಸುತ್ತಮುತ್ತ ಶಾಂತಿಯ ಮರುಸ್ಥಾಪನೆಯು ಗಾಂಧಿಯವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ಆಗಲೇ ಆಕ್ರೋಶಿತರಾಗಿದ್ದ ಹಿಂದೂ ಮತ್ತು ಸಿಖ್ ನಿರಾಶ್ರಿತರ ಭಾವನೆಗಳನ್ನು ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ತೀವ್ರಗಾಮಿ ಸಂಘಟನೆಗಳು ಮತ್ತಷ್ಟು ಉದ್ರಿಕ್ತಗೊಳ್ಳುವಂತೆ ಮಾಡಿದ್ದವು. ಭಾರತದಲ್ಲಿಯೇ ಉಳಿಯಲು ಬಯಸಿದ್ದ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುವಲ್ಲಿ ಅವು ಸಕ್ರಿಯವಾಗಿ ತೊಡಗಿದ್ದವು. 1947ರ ಅಕ್ಟೋಬರ್ 24ರ ದಿಲ್ಲಿ ಪೊಲೀಸ್ ವರದಿಯು ಆರೆಸ್ಸೆಸ್‌ನ ಯೋಜನೆಗಳ ಬಗ್ಗೆ ಹೀಗೆ ಹೇಳುತ್ತದೆ: 'ಸಂಘ ಸ್ವಯಂಸೇವಕರ ಪ್ರಕಾರ, ಮುಸ್ಲಿಮರು ಸಂಪೂರ್ಣವಾಗಿ ಭಾರತವನ್ನು ತೊರೆಯುವಂತೆ ಮಾಡಲು ದಿಲ್ಲಿಯಲ್ಲಿ ಕೆಲವು ಸಮಯದ ಹಿಂದೆ ಪ್ರಾರಂಭವಾದಂತಹದೇ ಮತ್ತೊಂದು ದಂಗೆಗೆ ಅವರೆಲ್ಲ ತಯಾರಾಗಿದ್ದರು. ಅವರು ಗಾಂಧಿ ದಿಲ್ಲಿಯಿಂದ ಹೋಗುವುದಕ್ಕಾಗಿ ಕಾದಿದ್ದರು. ಗಾಂಧಿ ದಿಲ್ಲಿಯಲ್ಲಿರುವವರೆಗೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು.' 15 ನವೆಂಬರ್ 1947ರ ಇಂಟಲಿಜೆನ್ಸ್ ಬ್ಯೂರೋ ವರದಿ ಗಮನಿಸಿದ್ದಂತೆ, 'ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ವಿಶೇಷವಾಗಿ ಪಶ್ಚಿಮ ಪಂಜಾಬ್‌ನಿಂದ ನಿರಾಶ್ರಿತರಾಗಿ ಬಂದವರು ದೀಪಾವಳಿ ಹಬ್ಬದ ನಂತರ ದಿಲ್ಲಿಯಲ್ಲಿ ಕೋಮುಗಲಭೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದರು. ದಿಲ್ಲಿಯಲ್ಲಿ ಮುಸ್ಲಿಮರು ಕಣ್ಣಿಗೆ ಬೀಳುವುದನ್ನು ಅವರು ಸಹಿಸಲಾರದವರಾಗಿದ್ದರು.'

1947ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಮೀರಾ ದಿಲ್ಲಿಯಲ್ಲಿ ವಾಸಿಸುತ್ತಿದ್ದರು. ಈ ದ್ವೇಷ ತುಂಬಿದ ಸಿದ್ಧಾಂತವು ಹೆಚ್ಚು ಹೆಚ್ಚು ಹಿಂದೂಗಳ ಮನಸ್ಸಿನಲ್ಲಿ ಬೇರೂರುತ್ತಿರುವುದನ್ನು ಅವರು ಗಾಬರಿಯಿಂದ ಗಮನಿಸುತ್ತಿದ್ದರು. ಆ ದಳ್ಳುರಿಯ ವಿರುದ್ಧ ಕಾರ್ಯಕ್ಕಿಳಿದ ಅವರು ಭಾರತೀಯರಲ್ಲಿ, ನಿರ್ದಿಷ್ಟವಾಗಿ ಹಿಂದೂಗಳಲ್ಲಿ ಮನವಿ ಮಾಡಿಕೊಳ್ಳುತ್ತ ಕೇಳಿದ್ದರು: ''ಇದಕ್ಕಾಗಿಯೇ ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡದ್ದು? ಬೆಳಕಿನ ನಾಡಾಗಿರುವುದಕ್ಕಲ್ಲವೆ, ಕತ್ತಲೆಯ ನಾಡಾಗಿರುವುದಕ್ಕಾಗಿಯೆ?''

ತಮ್ಮನ್ನು ತಾವು 'ಹಿಂದೂಗಳು' ಎಂದು ಕರೆದುಕೊಂಡ ಆ ಧಾರ್ಮಿಕ ಮೂಲಭೂತವಾದಿಗಳ ಕೊನೆಯ ಆಟ ಯಾವುದಾಗಿತ್ತು? ಜಯ ಗಳಿಸಿದರೆ ಅವರು ಯಾವ ರೀತಿಯ ದೇಶವನ್ನು ನಿರ್ಮಿಸುವವರಾಗಿದ್ದರು? ಹಿಂದೂ ತೀವ್ರಗಾಮಿಗಳು ಕನಸು ಕಂಡ ಭಾರತವು ಮೀರಾ ಬರೆದಂತೆ, 'ಸ್ವಯಂಘೋಷಿತ ಶ್ರೇಷ್ಠ ಜನಾಂಗದ ಜನರಿಂದ ತುಂಬಿರುವುದಾಗಿತ್ತು. ಅವರ ಆಧ್ಯಾತ್ಮಿಕ ಅಸಹಿಷ್ಣುತೆಯು ನಿಜವಾದ ಹಿಂದೂ ಧರ್ಮದ ನಿರಾಕರಣೆಯಾಗಿತ್ತು. ಎಲ್ಲಾ ಮುಸ್ಲಿಮರನ್ನು ನಿರ್ದಯವಾಗಿ ಅವರ ಪೂರ್ವಜರ ಮನೆಗಳಿಂದ ಇಲ್ಲವಾಗಿಸುವುದು ಮತ್ತು ಹೊರಹಾಕುವುದಾಗಿತ್ತು ಮತ್ತು ಈ ಸ್ಥಿತಿಯಲ್ಲಿ ಹಿಂದೂಗಳಲ್ಲದ ಇತರರು ಇದನ್ನು ಒಪ್ಪದಿರುವ ಹಾಗೆಯೇ ಇರಲಿಲ್ಲ.'

ಮೀರಾ ತನ್ನ ಮನವಿಯನ್ನು ಕೊನೆಗೊಳಿಸುವುದು ಈ ಸ್ಫೂರ್ತಿದಾಯಕ ಮಾತುಗಳೊಂದಿಗೆ. ಅದನ್ನು ನಾನು ಪೂರ್ಣವಾಗಿ ಉಲ್ಲೇಖಿಸಬೇಕು:
''ಆದರೆ ನನ್ನ ಹೃದಯ ಮತ್ತು ಮನಸ್ಸು ಈ ದ್ವೇಷಮಯ ಚಿತ್ರವನ್ನು ಅನಿವಾರ್ಯವೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ಹಿಂದೂ ಸ್ವಭಾವವು ಮೊದಲಿನ ತನ್ನ ಸಮತೋಲನವನ್ನು ಮರಳಿ ಪಡೆಯುತ್ತದೆ ಮತ್ತು ದ್ವೇಷಭಾವದಿಂದ ವಿಷಪೂರಿತವಾಗಿರುವ ಮತಾಂಧ ಜನರ ಗುಂಪು ಇಂಥದೊಂದು ಕತ್ತಲ ಕೂಪಕ್ಕೆ ಪರಿಸ್ಥಿತಿಯನ್ನು ಒಯ್ದಿದೆ ಎಂಬುದನ್ನು ಅದು ಅರಿತುಕೊಳ್ಳುತ್ತದೆ. ದುಷ್ಟತನವನ್ನು ನಿವಾರಿಸಲು ಅದರದೇ ರೀತಿಯಲ್ಲಿ ಯತ್ನಿಸುವುದು ಯಾವುದೇ ಪರಿಹಾರವಾಗಲಾರದು. ಜನರು ಇವೆಲ್ಲವನ್ನೂ ನಿಲ್ಲಿಸಬೇಕು ಮತ್ತು ತಮಗೇನಾಗುತ್ತಿದೆ ಎಂದು ಸ್ವತಃ ಯೋಚಿಸಬೇಕು. ವಿಷಣ್ಣತೆಯಿಂದ ಸ್ವಾತಂತ್ರ್ಯದ ಉತ್ತುಂಗಕ್ಕೆ ಕರೆತಂದ ಮಹಾನಾಯಕರನ್ನು ಅವರೆಲ್ಲರೂ ಮತಾಂಧ ಪ್ರಚಾರದ ಪ್ರಭಾವದಲ್ಲಿ ಕುರುಡಾಗಿ ನಿಂದಿಸುತ್ತಿದ್ದಾರೆ. ಅವರು ಇಂದು ಆ ಮಹನೀಯರನ್ನು ಗಮನಿಸದಿದ್ದರೆ, ಕತ್ತಲೆಯ ಪ್ರಪಾತಕ್ಕೆ ಜಾರಿಬೀಳಬೇಕಾಗುತ್ತದೆ.''

 ಭಾರತದ ತನ್ನ ಸಹ ನಾಗರಿಕರಿಗೆ ಮೀರಾ ಮಾಡಿದ ಮನವಿಯನ್ನು 1947ರ ಕೊನೆಯ ವಾರಗಳಲ್ಲಿ ಪ್ರಕಟಿಸಲಾಯಿತು. ಎಪ್ಪತ್ತೈದು ವರ್ಷಗಳ ನಂತರ ನಾನು ಈ ಅಂಕಣವನ್ನು ಬರೆಯುತ್ತಿರುವಾಗ, ಆಕೆಯ ಮನವಿಯು ಇವತ್ತಿನ ನಾವಿರುವ ದೇಶಕ್ಕೆ ಗಮನಾರ್ಹವಾಗಿ ಪ್ರಸ್ತುತವಾಗಿದೆ ಎಂದು ತೋರುತ್ತದೆ. ''ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವ ಜನರಿಂದ ಸತ್ಯ ಎಂಬ ಪದವು ಕಾಲಡಿಯಲ್ಲಿ ತುಳಿಯಲ್ಪಟ್ಟಿದೆ'' ಎಂಬ ಆಕೆಯ ಮಾತು ಬಿಜೆಪಿಯ ಐಟಿ ಸೆಲ್‌ನ ಚಟುವಟಿಕೆಗಳಿಗೆ ಅಕ್ಷರಶಃ ಅನ್ವಯಿಸುತ್ತದೆ. 'ಸ್ವಯಂಘೋಷಿತ ಶ್ರೇಷ್ಠ ಜನಾಂಗದ ಜನರಿಂದ ತುಂಬಿರುವ, ಅವರ ಆಧ್ಯಾತ್ಮಿಕ ಅಸಹಿಷ್ಣುತೆಯು ನಿಜವಾದ ಹಿಂದೂ ಧರ್ಮದ ನಿರಾಕರಣೆಯಾಗಿರುವ' ಕಾಲ್ಪನಿಕ ಹಿಂದುತ್ವ ರಾಷ್ಟ್ರದ ಕುರಿತ ಆಕೆಯ ವಿವರಣೆಯು ಇಂದು ಭಾರತದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತವನ್ನು ಸಂಪೂರ್ಣವಾಗಿ ನಿರೂಪಿಸುತ್ತದೆ. ವಿಭಜನೆಯ ನಂತರದ ತಕ್ಷಣದಲ್ಲೇ ಹಿಂದುತ್ವ ಸಿದ್ಧಾಂತಿಗಳು 'ಎಲ್ಲಾ ಮುಸ್ಲಿಮರನ್ನು ನಿರ್ದಯವಾಗಿ ಅವರ ಪೂರ್ವಜರ ಮನೆಗಳಿಂದ ಹೊರಹಾಕಿ ಪಾಕಿಸ್ತಾನಕ್ಕೆ ಓಡಿಸಬೇಕು ಎಂದು' ಬಯಸಿದ್ದರು; ಈಗ, ಅವರು ಅದನ್ನೇ ಮಾರ್ಪಡಿಸಿ, ಭಾರತೀಯ ಪ್ರಜೆಗಳಾಗಿರುವ ಮುಸ್ಲಿಮರು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದೂಗಳಿಗೆ ಅಧೀನರಾಗಿರಬೇಕು ಎಂದು ಬಯಸುತ್ತಿದ್ದಾರೆ.

ತನ್ನ ಧಾರ್ಮಿಕ ಮತ್ತು ರಾಜಕೀಯ ಪ್ರಾಬಲ್ಯದಲ್ಲಿ ಎಲ್ಲವನ್ನೂ ಮರೆತಿರುವ ಹಿಂದೂ ಮನಸ್ಸು ತನ್ನ ಸಮತೋಲನವನ್ನು ಮರಳಿ ಪಡೆಯಬಹುದೇ ಮತ್ತು ಸ್ವಾತಂತ್ರ್ಯ ಹೋರಾಟದ ಜಾತ್ಯತೀತ ಮತ್ತು ಬಹುತ್ವದ ಆದರ್ಶಗಳನ್ನು ನಿಜವಾಗಿಯೂ ಅಳವಡಿಸಿಕೊಳ್ಳಬಹುದೇ? 1947-48ರ ಸಮಯದಲ್ಲಿ, ಎರಡು ಕಾರಣಗಳಿಗಾಗಿ ಹಾಗೆ ಮಾಡಲು ಸಾಧ್ಯವಾಯಿತು; ಮೊದಲನೆಯದಾಗಿ, ಗಾಂಧಿಯವರ ಉಪವಾಸ. ಅಲ್ಲಿ ಎಪ್ಪತ್ತೆಂಟು ವರ್ಷದ ವ್ಯಕ್ತಿಯ ಅಸಾಧಾರಣ ನೈತಿಕ ಮತ್ತು ದೈಹಿಕ ಸ್ಥೈರ್ಯದಿಂದಾಗಿ ದಿಲ್ಲಿಯ ನಾಗರಿಕರು ತಮ್ಮ ಬಗ್ಗೆ ತಾವೇ ನಾಚಿಕೆಪಟ್ಟುಕೊಂಡು ಕೋಮುಸೌಹಾರ್ದಕ್ಕೆ ಮಣಿಯುವಂತಾಯಿತು ಮತ್ತು ಎರಡನೆಯದಾಗಿ, ಗಾಂಧಿ ಹತ್ಯೆ. ಎಲ್ಲೆಡೆಯ ಹಿಂದೂಗಳು ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟುಕೊಳ್ಳುವಂತಾಗಿ, ಮಹಾತ್ಮನ ಹಂತಕರನ್ನು ಬೆಳೆಸಿದ್ದ ಆರೆಸ್ಸೆಸ್ ಮತ್ತು ಮಹಾಸಭಾದಂತಹ ಸಂಘಟನೆಗಳನ್ನು ದೂರವಿಡುವಂತೆ ಮಾಡಿತ್ತು.

ಸಾಮಾನ್ಯ ಹಿಂದೂಗಳನ್ನು ನಾಚಿಕೆಗೀಡಾಗಿಸಿದ್ದರ ಹೊರತಾಗಿ, ಗಾಂಧಿಯವರ ಹತ್ಯೆಯು ಜವಾಹರಲಾಲ್ ನೆಹರೂ ಮತ್ತು ವಲ್ಲಭಭಾಯಿ ಪಟೇಲ್ ಅವರನ್ನು ಮತ್ತೆ ಒಟ್ಟಿಗೆ ತರುವ ಪ್ರಮುಖ ಬೆಳವಣಿಗೆಗೂ ಕಾರಣವಾಗಿತ್ತು. ಸ್ವಾತಂತ್ರ್ಯದ ನಂತರದ ತಿಂಗಳುಗಳು ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿಗಳಿಬ್ಬರಿಗೂ ಪರೀಕ್ಷೆಯ ಸಮಯವಾಗಿದ್ದವು. ಆದಾಗ್ಯೂ, ತಮ್ಮ ಮಾರ್ಗದರ್ಶಕನ ಹತ್ಯೆಯ ನಂತರ, ಅವರಿಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಬಿಜೆಪಿ ಪ್ರಚಾರಕರು ಎಷ್ಟೇ ಪ್ರಯತ್ನಿಸಿದರೂ, 1948ರಿಂದ 1950ರವರೆಗಿನ ಆ ನಿರ್ಣಾಯಕ ವರ್ಷಗಳಲ್ಲಿ ನೆಹರೂ ಮತ್ತು ಪಟೇಲ್ ಪ್ರತಿಸ್ಪರ್ಧಿಗಳಾಗದೆ ಒಡನಾಡಿಗಳಾಗಿದ್ದರೆಂಬ, ದೇಶವನ್ನು ಅದರ ಛಿದ್ರತೆಯಿಂದ ಒಗ್ಗೂಡಿಸಲು ಮತ್ತು ಅದರ ಪ್ರಜಾಸತ್ತಾತ್ಮಕ ಭವಿಷ್ಯಕ್ಕಾಗಿ ಸಾಂಸ್ಥಿಕ ಮಾದರಿಯೊಂದನ್ನು ನಿರ್ಮಿಸಲು ಅವರಿಬ್ಬರೂ ಪರಸ್ಪರ ಹೆಗಲೆಣೆಯಾಗಿ ದುಡಿದರೆಂಬ ಐತಿಹಾಸಿಕ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ.

ಗಾಂಧಿಯವರ ಉಪವಾಸ, ಗಾಂಧಿಯವರ ಹತ್ಯೆ ಹಾಗೂ ನೆಹರೂ ಮತ್ತು ಪಟೇಲರ ಒಗ್ಗೂಡುವಿಕೆ ಇವೆಲ್ಲವೂ ಭಾರತದ ಸ್ವಾತಂತ್ರ್ಯದ ಮೊದಲ, ಅತ್ಯಂತ ಒತ್ತಡದ ವರ್ಷಗಳಲ್ಲಿ ಹಿಂದುತ್ವದ ಶಕ್ತಿಗಳನ್ನು ಸೋಲಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಿದವು. ನಮ್ಮ ವಿವಾದಾತ್ಮಕ ವರ್ತಮಾನಕ್ಕೆ ಆ ದೂರದ ಗತಕಾಲದಿಂದ ಏನಾದರೂ ಪಾಠಗಳಿವೆಯೇ? 1947-48ರಲ್ಲಿ, ಹಿಂದುತ್ವವು ಹೊರಗಿನಿಂದ ದೇಶದ ಮೇಲೆ ದಾಳಿ ಮಾಡಿದ ಒಂದು ದಂಗೆಕೋರ ಶಕ್ತಿಯಾಗಿತ್ತು. ಈಗ, ಅದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ ಮತ್ತು ಅದು ಪ್ರತೀ ಸಂಸ್ಥೆಯನ್ನೂ (ನ್ಯಾಯಾಂಗ ಮತ್ತು ಮಿಲಿಟರಿ ಸೇರಿದಂತೆ) ತನ್ನ ಇಚ್ಛೆಗೆ ತಕ್ಕಂತೆ ಬಗ್ಗಿಸಲು ನೋಡುತ್ತಿದೆ. ಹಿಂದುತ್ವವನ್ನು ಅಧಿಕಾರದಿಂದ ಕಿತ್ತೊಗೆಯಲು ಎಂಥ ಬಿಕ್ಕಟ್ಟುಗಳು, ದುರಂತಗಳು ಮತ್ತು ದೂರದೃಷ್ಟಿಯ ನಾಯಕತ್ವದ ಸಂಯೋಜನೆ ಬೇಕಿದೆ? ಅಥವಾ ಹಿಂದೂ ಮನಸ್ಸು ಎಂದಿಗೂ ತನ್ನ ಸಮತೋಲನವನ್ನು ಮರಳಿ ಪಡೆಯದೆ, ನಮ್ಮೆಲ್ಲರನ್ನು ವಿಭಜಕ ಮತ್ತು ವಿನಾಶಕಾರಿ ಭವಿಷ್ಯಕ್ಕೆ ತಳ್ಳುವುದೆ? ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಆ ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತೇವೆ ಎಂಬುದರ ಮೇಲೆ ಈ ದೇಶದ ಭವಿಷ್ಯವು ನಿಂತಿದೆ.

Similar News