ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು: ಉದ್ಧವ್ ಠಾಕ್ರೆ
Update: 2022-12-26 09:37 GMT
ನಾಗ್ಪುರ: ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರಕಾರ ಘೋಷಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ Uddhav Thackeray ಸೋಮವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಿನ ಗಡಿ ವಿವಾದದ ಕುರಿತು ಮೇಲ್ಮನೆಯಲ್ಲಿ ಮಾತನಾಡಿದ ಶಿವಸೇನೆ (ಯುಬಿಟಿ) ನಾಯಕ ಠಾಕ್ರೆ, ಇದು ಕೇವಲ ಭಾಷೆ ಹಾಗೂ ಗಡಿಯ ವಿಚಾರವಲ್ಲ, ಆದರೆ ಇದು "ಮಾನವೀಯತೆ" ವಿಚಾರ ಎಂದು ಹೇಳಿದರು.
ಮರಾಠಿ ಮಾತನಾಡುವ ಜನರು ತಲೆಮಾರುಗಳಿಂದ ಗಡಿ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಅವರ ದೈನಂದಿನ ಜೀವನ, ಭಾಷೆ ಹಾಗೂ ಜೀವನಶೈಲಿ ಮರಾಠಿಯಾಗಿದೆ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ಸಮಸ್ಯೆ ಇತ್ಯರ್ಥವಾಗುವವರೆಗೆ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರ ಸರಕಾರವು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಠಾಕ್ರೆ ಒತ್ತಾಯಿಸಿದರು.