ಜೇಮ್ಸ್‌ಗೆ ನ್ಯಾಯ
ಜೇಮ್ಸ್ ಒಬ್ಬ ಕ್ರಿಕೆಟ್ ಬರಹಗಾರನಿಗಿಂತ ಹೆಚ್ಚಿನವರಾಗಿದ್ದರು. ಅವರು ಪ್ರವರ್ತಕ ಸಾಮಾಜಿಕ ಇತಿಹಾಸಕಾರರಾಗಿದ್ದರು, ಫ್ರೆಂಚ್ ಕ್ರಾಂತಿಯ ಸ್ವಲ್ಪಸಮಯದ ನಂತರ ನಡೆದ ಹೈಟಿಯಲ್ಲಿನ ಗುಲಾಮರ ದಂಗೆಯ ಕುರಿತ ಹೆಗ್ಗುರುತಾದ ಪುಸ್ತಕದ ಲೇಖಕ. ಟ್ರಿನಿಡಾಡ್‌ನಲ್ಲಿ ಹುಟ್ಟಿ ಬೆಳೆದ ಅವರು ಅಮೆರಿಕದಲ್ಲಿ ಹಲವು ವರ್ಷಗಳನ್ನು ಕಳೆದರು, ಮಾರ್ಕ್ಸ್‌ವಾದಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಬ್ರಿಟನ್‌ನಲ್ಲಿ ದೀರ್ಘಾವಧಿಯವರೆಗೆ ವಾಸಿಸಿದ್ದರು ಮತ್ತು ಆಫ್ರಿಕಾದಲ್ಲಿ ವಿಮೋಚನಾ ಹೋರಾಟಗಳಿಗೆ ನಿಕಟವಾಗಿದ್ದರು.
ವೃತ್ತಪತ್ರಿಕೆ ಅಂಕಣಕಾರರಿಗೆ ಸಾಮಾನ್ಯವಾಗಿ ತಮ್ಮ ಸ್ವಂತ ಪದಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರುತ್ತದೆ. ಆದರೆ ಅಪರೂಪಕ್ಕೆ ಈ ಪದಗಳು ಕಾಣಿಸಿಕೊಳ್ಳುವ ಶೀರ್ಷಿಕೆ. ಲೇಖನದ ಮುಖ್ಯಾಂಶವನ್ನು ಆಯ್ಕೆ ಮಾಡುವುದು ಪತ್ರಿಕೆಯ ಸಿಬ್ಬಂದಿಯ ವಿಶೇಷ ಹಕ್ಕು, ಅವರು ಓದುಗರನ್ನು ಆಕರ್ಷಿಸುವ ಉತ್ತಮ ಪ್ರಜ್ಞೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಅವರು ನಿಜವಾಗಿಯೂ ಅದನ್ನು ನಿರೂಪಿಸುತ್ತಾರೆ. ನಲವತ್ತು ವರ್ಷಗಳ ಪತ್ರಿಕಾ ಬರವಣಿಗೆಯಲ್ಲಿ, ನಾನು ಹೆಚ್ಚು ಇಷ್ಟಪಟ್ಟ ಶೀರ್ಷಿಕೆಯನ್ನು ಈಗ ಸ್ಥಗಿತಗೊಂಡಿರುವ ‘ಸಂಡೇ ಅಬ್ಸರ್ವರ್’ ನಲ್ಲಿ ಉಪಸಂಪಾದಕರು ನೀಡಿದರು. ಲೇಖನವು ಟ್ರಿನಿಡಾಡಿಯನ್ ಬರಹಗಾರ ಮತ್ತು ಹೋರಾಟಗಾರ ಸಿ.ಎಲ್.ಆರ್. ಜೇಮ್ಸ್ ಅವರ ಬಗ್ಗೆ ಇತ್ತು, ಅದಕ್ಕೆ ಉಪಸಂಪಾದಕರು ‘ಕಪ್ಪುಔದಾರ್ಯ’ ಎಂಬ ಶೀರ್ಷಿಕೆಯನ್ನು ನೀಡಿದ್ದರು.
ಈ ಲೇಖನವನ್ನು ಜೂನ್ 1989ರಲ್ಲಿ ಸಿ.ಎಲ್.ಆರ್. ಜೇಮ್ಸ್ ಲಂಡನ್‌ನಲ್ಲಿ ಎಂಭತ್ತೆಂಟನೇ ವಯಸ್ಸಿನಲ್ಲಿ ನಿಧನರಾದ ಸ್ವಲ್ಪಸಮಯದ ನಂತರ ಪ್ರಕಟಿಸಲಾಯಿತು. ಅವರ ಕೃತಿಯ ಓದು ಮತ್ತು ಅಮೆರಿಕನ್ ಇತಿಹಾಸಕಾರ ಪಾಲ್ ಬುಹ್ಲೆ ಬರೆದ ಅವರ ಜೀವನಚರಿತ್ರೆಯನ್ನು ಕುರಿತು ನಾನು ಬರೆದಿದ್ದೆ. ಜೇಮ್ಸ್ ಅವರ ಕೃತಿಯ ಹೆಚ್ಚಿನ ಭಾರತೀಯ ಅಭಿಮಾನಿಗಳಂತೆ, ನಾನು ಅವರನ್ನು ಗ್ರಹಿಸಿದ್ದು ಕ್ರಿಕೆಟ್‌ನ ಅದ್ಭುತ ಸಾಮಾಜಿಕ ಇತಿಹಾಸವಾದ ‘ಬಿಯಾಂಡ್ ಎ ಬೌಂಡರಿ’ ಮೂಲಕ. ಫೆಬ್ರವರಿ 1978ರಲ್ಲಿ ದಿಲ್ಲಿಯಲ್ಲಿ ನಡೆದ ಎರಡನೇ ವಿಶ್ವ ಪುಸ್ತಕ ಮೇಳದಲ್ಲಿ ಪ್ರತಿಯನ್ನು ತೆಗೆದುಕೊಳ್ಳುವ ಮೊದಲು ನಾನದನ್ನು ನನ್ನ ಕಾಲೇಜಿನ ಗ್ರಂಥಾಲಯದಲ್ಲಿ ಓದಿದ್ದೆ. ಆ ಪ್ರತಿಯು ನನ್ನ ಬಳಿ ಇದೆ. ಇದು ಮೊದಲ ಆವೃತ್ತಿಯಲ್ಲದಿದ್ದರೂ, ನನ್ನ ಶೆಲ್ಫ್‌ನಲ್ಲಿರುವ ಹಲವು ಪುಸ್ತಕಗಳಿಗಿಂತ ನಾನು ಅದನ್ನು ಹೆಚ್ಚು ಗೌರವಿಸುತ್ತೇನೆ.
ಜೇಮ್ಸ್ ಒಬ್ಬ ಕ್ರಿಕೆಟ್ ಬರಹಗಾರನಿಗಿಂತ ಹೆಚ್ಚಿನವರಾಗಿದ್ದರು. ಅವರು ಪ್ರವರ್ತಕ ಸಾಮಾಜಿಕ ಇತಿಹಾಸಕಾರರಾಗಿದ್ದರು, ಫ್ರೆಂಚ್ ಕ್ರಾಂತಿಯ ಸ್ವಲ್ಪಸಮಯದ ನಂತರ ನಡೆದ ಹೈಟಿಯಲ್ಲಿನ ಗುಲಾಮರ ದಂಗೆಯ ಕುರಿತ ಹೆಗ್ಗುರುತಾದ ಪುಸ್ತಕದ ಲೇಖಕ. ಟ್ರಿನಿಡಾಡ್‌ನಲ್ಲಿ ಹುಟ್ಟಿ ಬೆಳೆದ ಅವರು ಅಮೆರಿಕದಲ್ಲಿ ಹಲವು ವರ್ಷಗಳನ್ನು ಕಳೆದರು, ಮಾರ್ಕ್ಸ್‌ವಾದಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಬ್ರಿಟನ್‌ನಲ್ಲಿ ದೀರ್ಘಾವಧಿಯವರೆಗೆ ವಾಸಿಸಿದ್ದರು ಮತ್ತು ಆಫ್ರಿಕಾದಲ್ಲಿ ವಿಮೋಚನಾ ಹೋರಾಟಗಳಿಗೆ ನಿಕಟವಾಗಿದ್ದರು.
ನಾನು ಈಗ ಸುಮಾರು ಐದು ದಶಕಗಳಿಂದ ಸಿ.ಎಲ್.ಆರ್. ಜೇಮ್ಸ್ ಅವರನ್ನು (ಮತ್ತು ಅವರ ಬಗ್ಗೆ) ಓದಿದ್ದೇನೆ. ಮೇಲೆ ತಿಳಿಸಿದ ಪಾಲ್ ಬುಹ್ಲೆ ಅವರ ಜೀವನಚರಿತ್ರೆಯು ಅವರ ಅಮೆರಿಕನ್ ಹಂತದ ಬಗ್ಗೆ ಬಹಳ ಒಳನೋಟವನ್ನು ಹೊಂದಿದೆ, ಆದರೆ ಅವರ ಕ್ರಿಕೆಟ್ ಬರಹಗಳ ಮೇಲೆ ಅಷ್ಟಾಗಿ ಇಲ್ಲ. ಜೇಮ್ಸ್ ಅವರ ವ್ಯಕ್ತಿತ್ವದ ಕುರಿತು ವೃತ್ತಿಪರ ಶಿಕ್ಷಣ ತಜ್ಞರು ಬರೆದ ಪುಸ್ತಕಗಳು ಮತ್ತು ಲೇಖನಗಳ ಸರಣಿಯನ್ನು ವಸಾಹತೋತ್ತರ ವಿಮರ್ಶಕನಾಗಿ ನಾನು ಮಿಶ್ರ ಭಾವನೆಗಳೊಂದಿಗೆ ಓದಿದ್ದೇನೆ. ಇವುಗಳು ಹೆಚ್ಚು ಪಾರಿಭಾಷಿಕವಾಗಿವೆ. ಆದರೆ ವಾಸ್ತವಿಕ ಜೀವನಚರಿತ್ರೆಯ ಅಥವಾ ಐತಿಹಾಸಿಕ ವಿವರಗಳಿಗೆ ಬಂದಾಗ ಅಸ್ಥಿರವಾಗಿವೆ. ಭಾರತೀಯನೊಬ್ಬನ ಏಕೈಕ ಕೊಡುಗೆಯಾಗಿರುವ ಮತ್ತು ಪೂರ್ಣ ಪ್ರಮಾಣದ ಜೀವನಚರಿತ್ರೆ ಎಂದು ಭಾವಿಸಲಾಗುವ, ಆದರೆ ವೃದ್ಧಾಪ್ಯದ ಜೇಮ್ಸ್
ಬಗ್ಗೆ ಸಂಬಂಧವಿಲ್ಲದ ನೆನಪುಗಳ ವಿವರಕ್ಕಿಂತ ತುಸು ಹೆಚ್ಚು ಪರಿಣಾಮಕಾರಿಯಾಗಿರುವ ಫರೂಖ್ ಧೋಂಡಿಯವರ ಪುಸ್ತಕ ಕೂಡ ನಿರಾಶಾದಾಯಕ.
ಜೇಮ್ಸ್ ತಮ್ಮ ವೈಯಕ್ತಿಕ ಜೀವನದ ಶ್ರೀಮಂತಿಕೆ ಮತ್ತು ಸಾರ್ವಜನಿಕ ಚಟುವಟಿಕೆಗಳ ವ್ಯಾಪ್ತಿಗೆ ಸಂಪೂರ್ಣ ನ್ಯಾಯವನ್ನು ನೀಡುವ ಜೀವನಚರಿತ್ರೆಕಾರರಿಗೆ ಮಹತ್ವದವರಾಗಿದ್ದಾರೆ. ಕಾರ್ಡಿಫ್ ಮೂಲದ ಬರಹಗಾರ ಜಾನ್ ವಿಲಿಯಮ್ಸ್‌ನಲ್ಲಿ ಅವರು ಕಡೆಗೂ ಸ್ಪಷ್ಟವಾಗಿ ಕಾಣಿಸಿದ್ದಾರೆ. ತಮ್ಮ ಇತ್ತೀಚಿನ ಪುಸ್ತಕ, ‘ಸಿ.ಎಲ್.ಆರ್. ಜೇಮ್ಸ್: ಎ ಲೈಫ್ ಬಿಯಾಂಡ್ ದಿ ಬೌಂಡರೀಸ್’ಗಾಗಿ, ವಿಲಿಯಮ್ಸ್ ಅವರು ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿನ ಆರ್ಕೈವ್‌ಗಳಲ್ಲಿ ವ್ಯಾಪಕವಾಗಿ ಹುಡುಕಿದ್ದಾರೆ, ಜೇಮ್ಸ್ ಅವರನ್ನು ತಿಳಿದಿರುವವರೊಂದಿಗೆ ಅನೇಕ ಆಳವಾದ ಸಂದರ್ಶನಗಳನ್ನು ನಡೆಸಿದ್ದಾರೆ ಮತ್ತು ಅವರ ವ್ಯಾಪಕ, ವೈವಿಧ್ಯಮಯ ಬರಹಗಳನ್ನು ಗಮನವಿಟ್ಟು ಓದಿದ್ದಾರೆ.
ಜೇಮ್ಸ್ ಅನಿವಾರ್ಯವಾಗಿ ಪುಸ್ತಕದ ಕೇಂದ್ರದಲ್ಲಿದ್ದರೆ, ವಿಲಿಯಮ್ಸ್ ತನ್ನ ಕಥೆಯಲ್ಲಿನ ಇತರ ಪಾತ್ರಗಳ ಮಹತ್ವದ ಬಗ್ಗೆ ಎಚ್ಚರ ವಹಿಸುತ್ತಾರೆ. ಅದರಲ್ಲಿ ಅವರ ಟ್ರಿನಿಡಾಡ್ ದಿನಗಳ ಯೌವನ ಕಾಲದ ಸ್ನೇಹಿತರು, ಪ್ರೇಮಿಗಳು ಮತ್ತು ಹೆಂಡತಿಯರು, ಅವರ ರಾಜಕೀಯ ಒಡನಾಡಿಗಳು ಮತ್ತು ಇಂಗ್ಲೆಂಡ್, ಅಮೆರಿಕ, ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿರುವ ವಿರೋಧಿಗಳ ಸೂಕ್ಷ್ಮ ಚಿತ್ರಣಗಳಿವೆ. ಜೇಮ್ಸ್ ಜೀವನದ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಕ್ರಿಕೆಟಿಗ ಲಿಯಾರಿ ಕಾನ್ಸ್ಟಂಟೈನ್, ಪೆರಿಪಟಿಕ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ ಮತ್ತು ಟ್ರಿನಿಡಾಡಿಯನ್ ರಾಜಕಾರಣಿ ಎರಿಕ್ ವಿಲಿಯಮ್ಸ್ ಇದ್ದು, ಸೂಕ್ಷ್ಮತೆ ಮತ್ತು ಅಧಿಕೃತತೆಯೊಂದಿಗೆ ನಿರೂಪಿಸಲಾಗಿದೆ.
ಪುಸ್ತಕವು ಅದರ ವಸ್ತುವಿನ ಬಗ್ಗೆ ಹೆಚ್ಚಾಗಿ ಸಹಾನುಭೂತಿ ಹೊಂದಿದ್ದರೂ, ಅದು ಅಭಿಮಾನವಾಗಿಲ್ಲ. ಜೇಮ್ಸ್ ಅವರು ಅಮೆರಿಕದಲ್ಲಿದ್ದ ಸಮಯದಲ್ಲಿ ಎಡಪಂಥೀಯ ವಲಯಗಳ ಪಂಥೀಯತೆಯ ಬಗ್ಗೆ ವಿಲಿಯಮ್ಸ್ ಅವರಿಗೆ ಅಸಹನೆಯಿದೆ. ಆಕರ್ಷಕ ಯುವತಿಯರಲ್ಲಿ ಪುರುಷನ ವಿವೇಕಯುತ ಆಸಕ್ತಿಯ ಬಗ್ಗೆ ಅವರು, ನಮ್ಮದೇ ಆದ ಕಡಿಮೆ ಲೈಂಗಿಕತೆಯ ಯುಗದಲ್ಲಿ ಇದು ಖಂಡಿತವಾಗಿಯೂ ಖಂಡನೆಗೆ ಅರ್ಹ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ತಮ್ಮ ನಿರೂಪಣೆಯ ಸಂದರ್ಭದಲ್ಲಿ ವಿಲಿಯಮ್ಸ್ ನಮಗೆ ಅವರ ಬಗ್ಗೆ ಬಲವಾದ ಉಲ್ಲೇಖಗಳ ದೊಡ್ಡ ಪಟ್ಟಿಯನ್ನೇ ಒದಗಿಸುತ್ತಾರೆ. ಯುವ ಬ್ರಿಟಿಷ್ ಮಹಿಳೆ (ನಂತರ ಅವರ ಅನೇಕ ಪ್ರೇಮಿಗಳಲ್ಲಿ ಒಬ್ಬರು) 1930ರ ಲಂಡನ್‌ನಲ್ಲಿ ಕಮ್ಯುನಿಸ್ಟ್ ವಲಯದ ಬಗ್ಗೆ ಬರೆದಂತೆ ಜೇಮ್ಸ್ ಒಬ್ಬ ಉತ್ತಮ ಬರಹಗಾರ ಆದರೆ ಇನ್ನೂ ಉತ್ತಮ ಭಾಷಣಕಾರ. ‘‘ಸಾಮಾನ್ಯವಾಗಿ, ಯಾರೂ ಸಂವಾದವನ್ನು ಒಮ್ಮುಖವಾಗಿಸುವುದಿಲ್ಲ ಮತ್ತು ಅವರು ಪ್ರಯತ್ನಿಸಿದರೆ, ಸುತ್ತಮುತ್ತಲಿನ ಇತರರು ಸ್ವಲ್ಪ ಕಿರಿಕಿರಿಯನ್ನು ಅನುಭವಿಸುತ್ತಾರೆ. ಆದಾಗ್ಯೂ, ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಜೇಮ್ಸ್‌ನಿಂದ ಸಂಪೂರ್ಣವಾಗಿ ಆಕರ್ಷಿತರಾದರು. ಅವರು ಪ್ರಶ್ನೆಗಳನ್ನು ಕೇಳುತ್ತಿದ್ದರು; ನಾನು ಮಾಡಿದ್ದೆನೊ ಇಲ್ಲವೊ ನನಗೆ ಗೊತ್ತಿಲ್ಲ, ಆದರೆ ಎಲ್ಲರೂ ಸಾಕಷ್ಟು ಸಿದ್ಧರಾಗಿರುತ್ತಿದ್ದರು ಮತ್ತು ಹೆಚ್ಚು ಕಡಿಮೆ ಅವರ ವಿಷಯದ ಕುರಿತು ಉಪನ್ಯಾಸ ಕೇಳಲು ಉತ್ಸುಕರಾಗಿರುತ್ತಿದ್ದರು.’’
ಅವರ ಪ್ರಕಾಶಕ ಫ್ರೆಡ್ರಿಕ್ ವಾರ್ಬರ್ಗ್ ಹೇಳುವುದು: ‘‘ಜೇಮ್ಸ್ ಸ್ವತಃ ನನಗೆ ತಿಳಿದಿರುವ ಅತ್ಯಂತ ಖುಷಿಯಾಗಿದ್ದ ಮತ್ತು ಸರಳವಾಗಿ ಬೆರೆಯಬಲ್ಲವರಾಗಿದ್ದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆರಡಿ ಮೂರು ಇಂಚುಗಳಷ್ಟು ಎತ್ತರವಿದ್ದರು ಮತ್ತು ನೋಡಲು ಸುಂದರವಾಗಿ ಕಾಣಿಸುತ್ತಿದ್ದರು. ಅವರ ನೆನಪಿನ ಶಕ್ತಿ ಅಸಾಧಾರಣವಾಗಿತ್ತು. ಅವರು ಮಾರ್ಕ್ಸ್‌ವಾದಿ ಕ್ಲಾಸಿಕ್ಸ್‌ನ ಭಾಗಗಳನ್ನು ಮಾತ್ರವಲ್ಲದೆ ಷೇಕ್ಸ್‌ಪಿಯರ್‌ನ ದೀರ್ಘ ಭಾಗಗಳನ್ನೂ ಮೃದುವಾದ ಕಾವ್ಯಮಯ ಇಂಗ್ಲಿಷ್‌ನಲ್ಲಿ ಉದ್ಧರಿಸುತ್ತಿದ್ದರು. ಅದು ಕೇಳಲು ಹಿತಕರವಾಗಿರುತ್ತಿತ್ತು. ಅಪಾರವಾದ ಸೌಹಾರ್ದವಿತ್ತು. ಅವರು ಬಂಡವಾಳಶಾಹಿಯನ್ನು, ಉತ್ತಮವಾದ ಅಡುಗೆ, ಉತ್ತಮ ಉಡುಪುಗಳು, ಉತ್ತಮವಾದ ಪೀಠೋಪಕರಣಗಳು ಮತ್ತು ಸುಂದರ ಮಹಿಳೆಯರನ್ನು, ವರ್ಗಸಂಘರ್ಷದ ಅನುಭವಿ ಯೋಧನಿಂದ ನಿರೀಕ್ಷಿಸಬಹುದಾದ ತಪ್ಪಿತಸ್ಥ ಭಾವದ ಕುರುಹು ಇಲ್ಲದಂತೆ ಪ್ರೀತಿಸುತ್ತಿದ್ದರು.
ಮುಂದೆ, ಜೇಮ್ಸ್ 1934ರ ಮಾರ್ಚ್‌ನಲ್ಲಿ ಲ್ಯಾಂಕಾಷೈರ್ ಪಟ್ಟಣವಾದ ನೆಲ್ಸನ್‌ನಲ್ಲಿ ನೀಡಿದ, ಬ್ರಿಟಿಷರ ಬಣ್ಣದ ಕುರಿತಾದ ಫ್ರೆಂಚ್ ಮನೋಭಾವವನ್ನು ಅನುಕೂಲಕರವಾಗಿ ವಿರೋಧಿಸಿದ್ದ ಭಾಷಣವನ್ನು ಜೀವನಚರಿತ್ರೆಕಾರ ಬೆಳಕಿಗೆ ತಂದಿರುವುದು ಪರಿಗಣನೀಯ. ಇದರಲ್ಲಿ ಬ್ರಿಟನ್‌ನಲ್ಲಿ ಹೆಚ್ಚು ಕಡಿಮೆ ಯಾರಿಗೂ ನೀಗ್ರೋ ಅರ್ಥವಾಗಿಲ್ಲ ಎಂದು ಜೇಮ್ಸ್ ಹೇಳಿಕೊಂಡಿದ್ದಾರೆ. ‘‘ಅರೆ ಹುಚ್ಚನಂತೆ ಅವನ ನೆರಳಿನಲ್ಲೇ ಕುಣಿದು ಒದೆಯುವುದನ್ನು ಮಾತ್ರ ಅವರು ನೋಡಿದರು; ಅನ್ಯಾಯದ ಸ್ಥಾನದಲ್ಲಿ ಅಲ್ಲ.’’ ಮತ್ತೊಂದೆಡೆ, ಅವರು ಫ್ರಾನ್ಸ್‌ನಲ್ಲಿ ವಾದಿಸಿದರು, ‘‘ಅವರು ಫ್ರೆಂಚ್ ಕ್ಯಾಬಿನೆಟ್‌ನಲ್ಲಿ, ನಿವೃತ್ತ ನೌಕಾ ಮತ್ತು ಸೇನಾ ಸಿಬ್ಬಂದಿಯ ಶ್ರೇಣಿಯಲ್ಲಿ, ವೃತ್ತಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ನೀಗ್ರೋಗಳನ್ನು ಕಂಡುಕೊಳ್ಳುತ್ತಾರೆ. ಫ್ರಾನ್ಸ್ ಈಗಾಗಲೇ ವೈಜ್ಞಾನಿಕ ಸಿದ್ಧಾಂತಗಳನ್ನು ಕಡೆಗಣಿಸಿದ ಫಲಿತಾಂಶಗಳ ಮೇಲೆ ನೀಗ್ರೋವನ್ನು ನಿರ್ಣಯಿಸಿದೆ. ಒಂಭತ್ತು ದಶಕಗಳ ನಂತರ, ಹೋಲಿಕೆ ಬಹುಶಃ ಬ್ರಿಟನ್ ಪರವಾಗಿ ಸಾಗುತ್ತದೆ; ದೀರ್ಘಾವಧಿಯಲ್ಲಿ, ಅವರು ತಮ್ಮ ಆಫ್ರಿಕನ್ (ಹಾಗೆಯೇ ಏಶ್ಯನ್) ಪ್ರಜೆಗಳನ್ನು ಸಂಯೋಜಿಸುವಲ್ಲಿ ಫ್ರೆಂಚ್‌ಗಿಂತ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ.’’
ವಿಲಿಯಮ್ಸ್ ಜೇಮ್ಸ್‌ನ ಎರಡು ಶ್ರೇಷ್ಠ ಪುಸ್ತಕಗಳಿಗೆ ಸರಿಯಾದ ಗಮನವನ್ನು ಕೊಡುತ್ತಾರೆ. ಬ್ಲ್ಯಾಕ್ ಜಾಕೋಬಿನ್‌ಗಳ ಬಗ್ಗೆ ಅವರು ಬರೆಯುತ್ತಾರೆ, ‘‘ಸಿ.ಎಲ್.ಆರ್. ಹೈಟಿ ಕ್ರಾಂತಿಯ ತನ್ನ ನಿರೂಪಣೆಯನ್ನು ಇತಿಹಾಸ ಮತ್ತು ಭವಿಷ್ಯದ ಕ್ರಾಂತಿಗಳ ನೀಲನಕ್ಷೆಯಾಗಿಸಲು ಉದ್ದೇಶಿಸಿದ್ದಾರೆ’’ ಮತ್ತು, ‘ಬಿಯಾಂಡ್ ಎ ಬೌಂಡರಿ’ಗೆ ಸಂಬಂಧಿಸಿದಂತೆ, ಅವರು ಪುಸ್ತಕವನ್ನು ಹೇಗೆ ರೂಪಿಸಲಾಯಿತು, ಅದು ಏನು ಹೇಳಲು ಪ್ರಯತ್ನಿಸಿತು ಮತ್ತು ಅದನ್ನು ಹೇಗೆ ಸ್ವೀಕರಿಸಲಾಯಿತು ಎಂಬುದರ ಶ್ರೀಮಂತ, ಸೂಕ್ಷ್ಮ ವ್ಯತ್ಯಾಸದ ವಿವರಗಳನ್ನು ನಮಗೆ ನೀಡುತ್ತಾರೆ. ಜೇಮ್ಸ್ 1953ರಲ್ಲಿ ತಾವು ಬರೆಯಲು ಉದ್ದೇಶಿಸಿದ, ಆಮೂಲಾಗ್ರವಾಗಿ ಅವರು ಕಂಡುಹಿಡಿದ ಆಟದ ಇಂಗ್ಲಿಷ್ ದೃಷ್ಟಿಕೋನವನ್ನು ಕೇಂದ್ರೀಕರಿಸುವ ಮತ್ತು ಅವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ ಎಂದುಕೊಂಡ ಪುಸ್ತಕದ ಬಗ್ಗೆ ವಾರ್ಬರ್‌ಗೆ ಬರೆದ ಪತ್ರವೊಂದರಿಂದ ಅವರು ಉದ್ಧರಿಸುತ್ತಾರೆ.
ಈ ಪತ್ರದಲ್ಲಿ, ಜೇಮ್ಸ್ ತನ್ನ ಪುಸ್ತಕದ ಉದ್ದೇಶವನ್ನು ಈ ಕೆಳಗಿನಂತೆ ವಿವರಿಸಿದ್ದಾರೆ: ‘‘ದೇವರು ಇಂಗ್ಲಿಷ್ ಲೇಖಕರನ್ನು ಎಲ್ಮ್ ಮರಗಳು, ಹಸಿರು ಹುಲ್ಲುಹಾಸುಗಳು, ಚರ್ಚ್‌ನ ಗೋಪುರಗಳು, ಕ್ರಿಕೆಟ್ ಆಡುತ್ತಿರುವ 11 ಆಟಗಾರರು ಮತ್ತು ಅದರ ಇಂಗ್ಲಿಷ್ತನವನ್ನು ಹಾಳು ಮಾಡಿದ್ದು, ಎಲ್ಲವೂ ಕಸದ ಬುಟ್ಟಿಗೆ ಎಸೆಯಲ್ಪಡುತ್ತವೆ. ಎಲ್ಮ್ ಮರಗಳು, ಚರ್ಚಿನ ಗೋಪುರಗಳು ಇಲ್ಲದೆ ಇರುವ, ಆದರೆ ಮಸೀದಿಗಳು, ಟಾಂಟಾಂಗಳಿರುವ ಭಾರತ, ಸಿಲೋನ್, ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟನ್ನು ಉನ್ಮತ್ತರಾಗಿ ಆಡುತ್ತಾರೆ ಎಂಬುದನ್ನು ವಿವರಿಸಬೇಕಿದೆ.’’
‘ಬಿಯಾಂಡ್ ಎ ಬೌಂಡರಿ’ ಹತ್ತು ವರ್ಷಗಳ ನಂತರ ಕಾಣಿಸಿಕೊಂಡಿತು, ಮತ್ತು ಸೆಕರ್ ಮತ್ತು ವಾರ್ಬರ್ಗ್ ಹೊರತುಪಡಿಸಿ ಬೇರೆ ಇನ್ಪ್ರಿಂಟ್ ಅಡಿಯಲ್ಲಿತ್ತು. ಪುಸ್ತಕವು ನ್ಯೂನತೆಗಳನ್ನು ಹೊಂದಿದೆ ಎಂದು ವಿಲಿಯಮ್ಸ್ ಹೇಳುತ್ತಾರೆ. ಇದು ಒಂದು ಥೀಮ್‌ನಿಂದ ಇನ್ನೊಂದಕ್ಕೆ ಥಟ್ಟನೆ ನೆಗೆಯುತ್ತದೆ. ಕೆಲವು ವಿಭಾಗಗಳು ಸಾಹಿತ್ಯಕ್ಕಿಂತ ಪತ್ರಿಕೋದ್ಯಮವನ್ನು ಹೆಚ್ಚು ಗಮನಿಸುತ್ತವೆ. ಅದೇನೇ ಇದ್ದರೂ, ವಿಲಿಯಮ್ಸ್ ಬರೆಯುತ್ತಾರೆ, ‘‘ಅಭಿಮಾನಪಡಲು ತುಂಬಾ ಇದೆ. ಬರವಣಿಗೆಗೆ ದೊಡ್ಡ ಭಾಷಣ ಅಥವಾ ಉಪದೇಶದ ಪ್ರಲೋಭಕ ಶಕ್ತಿ ಇದೆ. ಒಂದು ಪುಸ್ತಕವು ಅದರ ಲೇಖಕರ ಬಹುಶಿಸ್ತೀಯ ತೇಜಸ್ಸನ್ನು ಒಟ್ಟುಗೂಡಿಸಿದರೆ, ಅವರ ಹೃದಯ ಮತ್ತು ಆತ್ಮವನ್ನು ಸಹ ಬಹಿರಂಗಪಡಿಸುತ್ತದೆ. ಇದು ಹಾಗಿದೆ.
ವಿಲಿಯಮ್ಸ್ ಈ ಜೀವನಚರಿತ್ರೆಯನ್ನು ಪೂರ್ಣಗೊಳಿಸು ತ್ತಿದ್ದಂತೆ, ಅಮೆರಿಕ ಮತ್ತು ಇತರೆಡೆಗಳಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನೆಗಳು ರೂಪುಗೊಂಡವು. ವಿಲಿಯಮ್ಸ್ ಇದನ್ನು ತನ್ನ ವಸ್ತುವಿನ ಪೂರ್ವಜ್ಞಾನದ ಕಾಕತಾಳೀಯ ಪುರಾವೆ ಎಂದು ಭಾವಿಸಿದರು: ಹೀಗಾಗಿ, ಅವರು ಇಲ್ಲಿ ಬರೆದಂತೆ, ಜೇಮ್ಸ್ ತನ್ನ ಕಾಲದಲ್ಲಿ ಮಂಡಿಸಿದ್ದ ವಿಚಾರಗಳು-ವರ್ಗದ ಜೊತೆಗೆ ಗುರುತಿನ ಪ್ರಾಮುಖ್ಯತೆ, ತಳಮಟ್ಟದಿಂದ ಬರುವ ದಂಗೆ, ಕಪ್ಪುಜನರ ಪ್ರಮುಖ ಪಾತ್ರಗಳ ಬಗ್ಗೆ, ರಾಜಕೀಯ ಹೋರಾಟದಲ್ಲಿ ಮಹಿಳೆಯರು ಮತ್ತು ಯುವಕರು- ಕ್ರಮೇಣ ರಾಜಕೀಯ ಚಿಂತನೆಯ ಮುಂಚೂಣಿಗೆ ದಾರಿಯಾದವು’’.
ಜಾನ್ ಎಲ್ ವಿಲಿಯಮ್ಸ್ ಅವರ ಅತ್ಯದ್ಭುತವಾಗಿ ಸಂಶೋಧಿಸಲ್ಪಟ್ಟ ಮತ್ತು ಸುಂದರವಾಗಿ ರೂಪಿತವಾದ ಈ ಪುಸ್ತಕವು ಸಿ.ಎಲ್.ಆರ್. ಜೇಮ್ಸ್ ಕುರಿತು ಇಲ್ಲಿಯವರೆಗೆ ಬಂದ ಎಲ್ಲವನ್ನೂ ಮೀರಿಸುತ್ತದೆ. ಈಗ ಯಾವುದೇ ನಂತರದ ಜೀವನಚರಿತ್ರೆ ಅಥವಾ ವಿಮರ್ಶಾತ್ಮಕ ಅಧ್ಯಯನವನ್ನು ಓದುವ ಅಗತ್ಯವಿದೆಯೆಂದು ನನಗನ್ನಿಸುವುದಿಲ್ಲ. ಆದರೆ ನಾನು ನನ್ನ ಹದಿಹರೆಯದಲ್ಲಿದ್ದಾಗಿನಿಂದ ಮಾಡಿದಂತೆ ಪ್ರತೀ ವರ್ಷವೂ ‘ಬಿಯಾಂಡ್ ಎ ಬೌಂಡರಿ’ಯನ್ನು ಖಂಡಿತವಾಗಿಯೂ ಮತ್ತೆ ಓದುತ್ತೇನೆ.