ಭಾರತೀಯ ಪಕ್ಷ ವ್ಯವಸ್ಥೆಯ ಸಾವು
ಭಾರತೀಯ ಪಕ್ಷ ವ್ಯವಸ್ಥೆಯ ಅವನತಿಯು ಹೆಚ್ಚು ಕಡಿಮೆ ಸಂಪೂರ್ಣವಾಗಿದೆ. ಒಂದು ಗುಂಪಿನ ರಾಜಕೀಯ ಪಕ್ಷಗಳು ಕುಟುಂಬ ಸಂಸ್ಥೆಗಳಾಗಿ ಮಾರ್ಪಟ್ಟಿವೆ; ಮತ್ತು ಇನ್ನೊಂದು ಗುಂಪು ತಮ್ಮ ನಾಯಕನನ್ನು ಜೀವಂತ ದೇವರಂತೆ ಉದಾತ್ತಗೊಳಿಸುವ ಅರೆ ಧಾರ್ಮಿಕ ಆರಾಧಕತೆಯಲ್ಲಿ ತೊಡಗಿದೆ. ಈ ವಿನಾಶಕ ಪ್ರವೃತ್ತಿಯ ದೊಡ್ಡಮಟ್ಟದ ಪರಿಣಾಮಗಳನ್ನು ಪರಿಶೀಲಿಸಬೇಕಾಗಿದೆ. ರಾಜಕೀಯ ಪಕ್ಷವು ನಿಶ್ಚಿತವಾಗಿಯೂ, ಅದರ ಆರೋಗ್ಯಕಾರಕ ಕೆಲಸದ ಮೇಲೆ ಪ್ರಜಾಪ್ರಭುತ್ವವು ಪ್ರಮುಖವಾಗಿ ಅವಲಂಬಿತವಾಗಿರುವುದರಿಂದ ಆಧುನಿಕ ಸಮಾಜದ ಪ್ರಮುಖ ಸಂಸ್ಥೆಯಾಗಿದೆ. ಪಕ್ಷಗಳು ಸ್ವತಃ ತಲೆಬಾಗುವ ಮತ್ತು ವಿಧೇಯವಾಗಿರುವ ಸಂಸ್ಕೃತಿಯಲ್ಲಿ ತೊಡಗಿದರೆ, ಕುಟುಂಬ ಆರಾಧನೆ ಅಥವಾ ನಾಯಕನ ಆರಾಧನೆಯನ್ನು ಕಡ್ಡಾಯಗೊಳಿಸಿದರೆ, ಇದು ವಿಶಾಲ ರಾಜಕೀಯ ಸಂಸ್ಕೃತಿಗೆ ಏನನ್ನು ಸೂಚಿಸುತ್ತದೆ?
ಇತ್ತೀಚಿನ ವರ್ಷಗಳಲ್ಲಿ ನಮ್ಮ ಪ್ರಜಾಪ್ರಭುತ್ವದ ಆರೋಗ್ಯವು ಹದಗೆಟ್ಟಿದೆ ಎಂದು ಭಾರತೀಯ ಮತ್ತು ವಿದೇಶಿ ವಿದ್ವಾಂಸರು ವಾದಿಸಿದ್ದಾರೆ. ಆದರೂ, ಭಾರತದ ಪ್ರಜಾಪ್ರಭುತ್ವದ ಅವನತಿಯ ಒಂದು ಮಗ್ಗಲು ಬಹುಶಃ ಅಗತ್ಯ ಮಟ್ಟದಲ್ಲಿ ಗಮನಕ್ಕೆ ಬಂದಿಲ್ಲ. ಅದು ಪಕ್ಷ ವ್ಯವಸ್ಥೆಯ ಕುಸಿತ. ವಾಸ್ತವವಾಗಿ, ಭಾರತೀಯ ಪ್ರಜಾಪ್ರಭುತ್ವವು ಎಷ್ಟು ಕುಸಿದಿದೆ ಎಂಬುದನ್ನು ಹೇಳಲು ಕೆಲವು ರೀತಿಯಲ್ಲಿ ಅದು, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಗಳು, ಸ್ವಾಯತ್ತ ಸಂಸ್ಥೆಗಳ ಅಧೀನತೆ, ಚುನಾವಣಾ ನಿಧಿಯ ಅಪಾರದರ್ಶಕತೆ ಇತ್ಯಾದಿಗಳಿಗಿಂತ ಹೆಚ್ಚು ನಿಖರವಾದ ಸಂಕೇತವಾಗಿದೆ.
ಉದಾಹರಣೆಗೆ, ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ತನ್ನ ಮಗನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ಗಮನಿಸಿ. ಕಿರಿಯ ಓದುಗರು ಇದನ್ನು ಸಂಪೂರ್ಣವಾಗಿ ಸಾಮಾನ್ಯವೆಂದು ನೋಡಬಹುದು; ಆದರೆ ದೀರ್ಘ ನೆನಪುಗಳನ್ನು ಹೊಂದಿರುವವರು ಇದನ್ನು ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಆದರ್ಶಗಳಿಗೆ ವಿರುದ್ಧದ ನಡೆಯಾಗಿ ಮಾತ್ರ ಕಾಣಬಲ್ಲರು. ಹೆಚ್ಚು ಜನಸಂಖ್ಯೆಯುಳ್ಳ ಮತ್ತು ಅದರಿಂದ ಹೆಚ್ಚು ರಾಜಕೀಯವಾಗಿ ಪ್ರಭಾವವಿರುವ, ಹಿಂದಿ ಮಾತನಾಡುವ ಭಾರತದ ಪ್ರದೇಶಗಳ ಪ್ರಾಬಲ್ಯದ ಎದುರಲ್ಲಿ ತಮಿಳು ಅಸ್ಮಿತೆಯನ್ನು ಪ್ರತಿಪಾದಿಸುವ ಜನಪ್ರಿಯ ಚಳವಳಿಯಿಂದ ಡಿಎಂಕೆ ಹುಟ್ಟಿಕೊಂಡಿತು. ತಮಿಳು ಸಂಸ್ಕೃತಿಯ ಸ್ವಾಯತ್ತತೆ ಮತ್ತು ಸ್ವಾಭಿಮಾನವನ್ನು ಬೆಳೆಸುವ ಹಂಬಲ ಪ್ರಾಥಮಿಕ ಪ್ರೇರಕ ಶಕ್ತಿಯಾಗಿದ್ದರೂ, ಡಿಎಂಕೆ ಕೂಡ ಜಾತಿ ಮತ್ತು ಲಿಂಗದ ಬಗ್ಗೆ ಉತ್ತರದಲ್ಲಿ ಆಗ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಪ್ರಗತಿಪರ ನಡೆಯನ್ನು ತೋರಿಸಿತು. ಇದಲ್ಲದೆ, 1967ರಿಂದ ಅಧಿಕಾರಕ್ಕೆ ಬಂದ ನಂತರ, ಡಿಎಂಕೆಯು ರಾಜ್ಯದಲ್ಲಿ ಹಿಂದಿನ ಸರಕಾರಗಳಿಗಿಂತ ಹೆಚ್ಚು ಕಲ್ಯಾಣ ಆಧಾರಿತ ಆಡಳಿತವನ್ನು ಒದಗಿಸಲು ಪ್ರಯತ್ನಿಸಿತು.
ಡಿಎಂಕೆ ತನ್ನನ್ನು ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮಾಜಿಕ ಸುಧಾರಣೆಯ ಪಕ್ಷವಾಗಿ ತೋರಿಸಿಕೊಂಡಿತು. ಇದು ಕುಟುಂಬದ ಸಂಸ್ಥೆಯಾಗಲು ಉದ್ದೇಶಿಸಿರಲಿಲ್ಲ ಮತ್ತು ಅದರ ಮೊದಲ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಅಕಾಲಿಕ ಸಾವು ಸಂಭವಿಸದೆ ಇದ್ದಲ್ಲಿ ಅದೆಂದೂ ಹೀಗಾಗುತ್ತಿರಲಿಲ್ಲ. ಡಿಎಂಕೆಯನ್ನು ಕುಟುಂಬದ ಪಕ್ಷವನ್ನಾಗಿ ಮಾಡಿದ್ದು ಅವರ ಉತ್ತರಾಧಿಕಾರಿ ಎಂ. ಕರುಣಾನಿಧಿ. ಅವರು ತಮ್ಮ ಮಗ ಎಂ.ಕೆ. ಸ್ಟಾಲಿನ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸಿದರು ಮತ್ತು ತಮಿಳಿನ ಹೆಮ್ಮೆಯ ಪಕ್ಷವನ್ನು ಅದರ ಸಂಸ್ಥಾಪಕರು ನಿರೀಕ್ಷಿಸದ ದಿಕ್ಕಿನಲ್ಲಿ ಪರಿವರ್ತಿಸಿದರು.
ಈ ಸ್ವಜನಪಕ್ಷಪಾತದ ಮಾರ್ಗವನ್ನು ಅನುಸರಿಸಿದ ಪ್ರಮುಖ ಪ್ರಾದೇಶಿಕ ಪಕ್ಷ ಡಿಎಂಕೆ ಮಾತ್ರವಲ್ಲ, ಅಕಾಲಿ ದಳವು ಡಿಎಂಕೆಗಿಂತಲೂ ಹಳೆಯ ವಂಶಾವಳಿಯನ್ನು ಹೊಂದಿದೆ. ಸ್ಥಾಪನೆಯ ನಂತರ ಹಲವು ದಶಕಗಳ ಕಾಲ ದೃಢವಾದ ಸಿಖ್ ಅಸ್ಮಿತೆಗಾಗಿ ಹೋರಾಡುವುದು ಮತ್ತು ರಕ್ಷಿಸುವುದು ಅದರ ಪ್ರಮುಖ ಗುರಿಯಾಗಿತ್ತು. ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಅದು ಕುಟುಂಬ ಪಕ್ಷವಾಗಿ ಮಾರ್ಪಟ್ಟಿತು. ಶಿವಸೇನೆ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿಯಂತಹ ಇತರ ಪ್ರಾದೇಶಿಕ ಪಕ್ಷಗಳು ಇದೇ ಹಾದಿಯನ್ನು ಹಿಡಿದಿವೆ. ವಾಸ್ತವವಾಗಿ, ಸ್ಟಾಲಿನ್ ತಮ್ಮ ಮಗ ಉದಯನಿಧಿಯನ್ನು ಸಂಪುಟಕ್ಕೆ ಸೇರಿಸಿಕೊಂಡಾಗ, ಈಗಾಗಲೇ ತಾವು ಮುಖ್ಯಮಂತ್ರಿಗಳಾಗಿದ್ದ ಸಂಪುಟದಲ್ಲಿ ತಮ್ಮ ಸ್ವಂತ ಪುತ್ರರನ್ನು ಮಂತ್ರಿಗಳನ್ನಾಗಿ ಮಾಡಿದ್ದ ಉದ್ಧವ್ ಠಾಕ್ರೆ ಮತ್ತು ಕೆ. ಚಂದ್ರಶೇಖರ್ ರಾವ್ ಅವರು ಹುಟ್ಟುಹಾಕಿದ ನಿದರ್ಶನಗಳಿಂದ ಖಂಡಿತವಾಗಿಯೂ ಪ್ರೇರಿತರಾಗಿದ್ದರು. ಹಾಗೆಯೇ ನಮ್ಮಲ್ಲಿ, ಪಕ್ಷದ ನಾಯಕತ್ವವು ತಂದೆಯಿಂದ ಮಗನಿಗೆ ಬಂದಾಗ, ‘ಸಾಮಾಜಿಕ ನ್ಯಾಯ’ಕ್ಕಾಗಿ ಅದು ತೋರಿದ್ದ ಸೈದ್ಧಾಂತಿಕ ಬದ್ಧತೆಯು ತೀವ್ರವಾಗಿ ಬಾಧಿತವಾದುದಕ್ಕೆ ಉದಾಹರಣೆಯಾಗಿ ಎಸ್‌ಪಿ, ಆರ್‌ಜೆಡಿ ಮತ್ತು ಆರ್‌ಎಲ್‌ಡಿಯಂತಹ ಉತ್ತರ ಭಾರತದ ಪಕ್ಷಗಳಿವೆ.
ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಭಾರತೀಯ ರಾಜಕೀಯ ಪಕ್ಷಗಳಲ್ಲೇ ಅತ್ಯಂತ ಹಳೆಯ ಮತ್ತು ಅತ್ಯಂತ ಮಹೋನ್ನತ ಪಕ್ಷವು ಒಂದು ಕುಟುಂಬದ ಸಂಸ್ಥೆಯಾಗದೇ ಇದ್ದಿದ್ದರೆ ಮೇಲಿನ ಯಾವುದೂ ಸಂಭವಿಸುತ್ತಿರಲಿಲ್ಲ ಎಂಬುದು ನನ್ನ ವಾದ. ಇಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಅಂತಹ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ ಅದೇ ಹೆಸರಿನ ಪಕ್ಷವನ್ನು ಅತ್ಯಲ್ಪವಾಗಿ ಹೋಲುತ್ತದೆ. ಅವೆರಡರ ನಡುವಿನ ಅಗಾಧ ವ್ಯತ್ಯಾಸವು, ಮೂಲ ಕಾಂಗ್ರೆಸ್‌ನ ಅತ್ಯಂತ ಜನಪ್ರಿಯ ನಾಯಕನ ಕುಟುಂಬದ ಇತಿಹಾಸದಲ್ಲಿ (ಇತರ ವಿಷಯಗಳ ಜೊತೆಗೆ) ಸೇರಿಹೋಗಿದೆ. ಮಹಾತ್ಮ ಗಾಂಧೀಜಿಗೆ ನಾಲ್ವರು ಪುತ್ರರು. ಬ್ರಿಟಿಷ್ ಆಳ್ವಿಕೆಯನ್ನು ಪ್ರತಿಭಟಿಸುವಾಗ ಎಲ್ಲರೂ ಹಲವಾರು ಬಾರಿ ಜೈಲಿಗೆ ಹೋದರು. ಸ್ವತಂತ್ರ ಭಾರತದಲ್ಲಿ ಯಾರೂ ಸಂಸತ್ತಿನ ಸದಸ್ಯರಾಗಲಿಲ್ಲ, ಮಂತ್ರಿಯಾಗಲಿಲ್ಲ. ಗಾಂಧಿಯವರ ಕಿರಿಯ ಮಗ ದೇವದಾಸ್ ಗಾಂಧಿಯವರನ್ನು ಪ್ರಧಾನಿ ಜವಾಹರಲಾಲ್ ನೆಹರೂ ಅವರು ರಾಜಕೀಯವನ್ನು ಪ್ರವೇಶಿಸಲು ಕೇಳಿಕೊಂಡರು. ಅವರು ನಿರಾಕರಿಸಿದರು. ಬದಲಿಗೆ ಪತ್ರಿಕೆಯ ಸಂಪಾದಕನಾಗಿರುವ ತನ್ನ ಕೆಲಸದಲ್ಲಿಯೇ ಉಳಿಯುವುದನ್ನೇ ಆಯ್ಕೆ ಮಾಡಿಕೊಂಡರು. 1949ರಲ್ಲಿ, ನೆಹರೂ ದೇವದಾಸ್ ಅವರನ್ನು ಸೋವಿಯತ್ ಒಕ್ಕೂಟಕ್ಕೆ ಭಾರತದ ರಾಯಭಾರಿಯಾಗಿ ಕಳುಹಿಸಲು ಮುಂದಾದರು; ಮುಂದಿನ ವರ್ಷ, ನೆಹರೂ ದೇವದಾಸರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ಆಹ್ವಾನಿಸಿದರು. ಮಹಾತ್ಮಾ ಗಾಂಧಿಯವರ ಮಗ, ಅದು ಹಾಕಿಕೊಡುವ ಮಾದರಿಯನ್ನು ಗಮನದಲ್ಲಿಟ್ಟುಕೊಂಡು, ಪ್ರತೀ ಬಾರಿಯೂ ನಿರಾಕರಿಸಿದರು.
ಆ ರೀತಿಯ ನೈತಿಕ ಕಳಕಳಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲ, ಭಾರತೀಯ ರಾಜಕೀಯದಲ್ಲಿಯೇ ಇಲ್ಲ. ಇಂದಿರಾ ಗಾಂಧಿಯವರು ಪುತ್ರರಾದ ಸಂಜಯ್ ಮತ್ತು ರಾಜೀವ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು, ಡಿಎಂಕೆ ಮತ್ತು ಅಕಾಲಿ ದಳದ ನಾಯಕರು ಕೂಡ ತಮ್ಮ ಮಕ್ಕಳ ವಿಚಾರದಲ್ಲಿ ಅನುಸರಿಸುವುದನ್ನು ಉತ್ತೇಜಿಸಿತು. ಒಂದು ಪೀಳಿಗೆಯ ನಂತರ, ಸೋನಿಯಾ ಗಾಂಧಿಯವರು ತಮ್ಮ ಮಗ ರಾಹುಲ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕ ಎಂದು ಪರಿಗಣಿಸಲು ನಿರಾಕರಿಸಿರುವುದು ಭಾರತೀಯ ರಾಜಕೀಯದಲ್ಲಿ ವಂಶಪಾರಂಪರ್ಯದ ಸಂಸ್ಕೃತಿಯನ್ನು ಬೆಳೆಸಲು ಮತ್ತಷ್ಟು ಪ್ರಚೋದನೆಯನ್ನು ನೀಡಿದೆ.
ಭಾರತದಲ್ಲಿ, ಅನೇಕ ವೃತ್ತಿಗಳು ಕುಟುಂಬದವರ ಹಿಡಿತದಲ್ಲಿಯೇ ನಡೆಯುತ್ತವೆ ಎಂಬುದು ನಿಜ. ಆದಾಗ್ಯೂ, ಪೋಷಕರ ವ್ಯವಹಾರವನ್ನು ಅಳವಡಿಸಿಕೊಳ್ಳುವ ವ್ಯಕ್ತಿ ಆರಂಭಿಕ ಗೆಲುವುಗಳನ್ನು ಪಡೆಯಬಹುದೇ ಹೊರತು, ಅಂತಿಮವಾಗಿ ಲೆಕ್ಕಕ್ಕೆ ಬರುವುದು ಆತ ಏನನ್ನು ಸಾಧಿಸುತ್ತಾನೆ ಎನ್ನುವುದು ಮಾತ್ರ. ರೋಹನ್ ಗವಾಸ್ಕರ್ ತನ್ನ ತಂದೆಯಿಂದಾಗಿ ಕ್ರಿಕೆಟಿಗರಾದರೂ, ಅವರು ಸಾಧಿಸಿದ್ದು ಕಡಿಮೆ. ಚೇತೇಶ್ವರ ಪೂಜಾರ ಕೂಡ ತಮ್ಮ ತಂದೆಯಿಂದಾಗಿ ಕ್ರಿಕೆಟಿಗರಾದರು. ಅವರು ಹೆಚ್ಚು ಯಶಸ್ವಿಯಾದರು. ಅಭಿಷೇಕ್ ಬಚ್ಚನ್ ಖಂಡಿತವಾಗಿಯೂ ಅವರ ತಂದೆಯ ಹೆಸರಿನಿಂದಾಗಿ ಕೆಲವು ಪಾತ್ರಗಳನ್ನು ಪಡೆದರು. ಆದರೆ ಅವರು ಎಷ್ಟು ಪ್ರಯತ್ನಿಸಿದರೂ, ಅವರೆಂದೂ ಅಮಿತಾಭ್ ಅವರ ಖ್ಯಾತಿಯನ್ನು ಸರಿಗಟ್ಟಲಾಗಲಿಲ್ಲ.
ಕ್ರೀಡೆ ಅಥವಾ ಸಿನೆಮಾ ಅಥವಾ ಕಾನೂನು ಅಥವಾ ಸಾಹಿತ್ಯದಲ್ಲಿ ವಂಶಪಾರಂಪರ್ಯವು ಸಾಮಾಜಿಕ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ರಾಜಕೀಯದಲ್ಲಿ ವಂಶಪಾರಂಪರ್ಯವು ಅತ್ಯಂತ ಕೆಟ್ಟದ್ದು. ಏಕೆಂದರೆ ಅದು ಪ್ರಜಾಪ್ರಭುತ್ವ ತತ್ವದ ಉಲ್ಲಂಘನೆ ಮತ್ತು ಅದರ ಪರಿಣಾಮ ಅನೇಕರ ಮೇಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ರಾಜಕೀಯದ ಹೊರಗಿನ ಕ್ಷೇತ್ರಗಳಲ್ಲಿ ಸ್ವಲ್ಪಮಟ್ಟಿಗೆ ಹೊಣೆಗಾರಿಕೆ ಇರುತ್ತದೆ. ಪೋಷಕರಿಗಿಂತ ಕಡಿಮೆ ಸಮರ್ಥ ವಕೀಲರು ಕಡಿಮೆ ಅವಕಾಶವನ್ನೇ ಪಡೆಯುತ್ತಾರೆ. ಪೋಷಕರಿಗಿಂತ ಕಡಿಮೆ ಸಮರ್ಥ ವೈದ್ಯರಲ್ಲಿ ಬರುವ ರೋಗಿಗಳು ಕಡಿಮೆಯೇ ಇರುತ್ತಾರೆ. ರಾಜಕೀಯದಲ್ಲಿ ಇಂತಹ ಹೊಣೆಗಾರಿಕೆ ಇರುವುದು ಅಪರೂಪ. ಸ್ಟಾಲಿನ್ ಅಥವಾ ಉದ್ಧವ್ ಅಥವಾ ಕೆಸಿಆರ್ ಅಥವಾ ಸೋನಿಯಾ ಅವರು ತಮ್ಮ ಮಕ್ಕಳನ್ನು ಅವರ ನೇತೃತ್ವದ ಪಕ್ಷ ಅಥವಾ ಸರಕಾರಕ್ಕೆ ಸೇರಿಸಿದಾಗ, ಇತರ ಸದಸ್ಯರಿಗೆ - ಅವರ ಪ್ರತಿಭೆ ಮತ್ತು ಗುಣಗಳು ಏನೇ ಇರಲಿ - ಅವರು ಎಂದಿಗೂ ಉನ್ನತ ನಾಯಕತ್ವವನ್ನು ಬಯಸುವುದಿಲ್ಲ ಎಂಬ ಸಂದೇಶವನ್ನು ಮುಟ್ಟಿಸುತ್ತಾರೆ.
ಪಕ್ಷಗಳನ್ನು ಕುಟುಂಬದ ಸಂಸ್ಥೆಗಳಾಗಿ ಪರಿವರ್ತಿಸುವುದು ಪ್ರಜಾಪ್ರಭುತ್ವದ ಅವನತಿಯ ಒಂದು ರೀತಿಯಾಗಿದೆ. ಇನ್ನೊಂದು, ಪಕ್ಷಗಳ ಅಧೀನತೆ ಒಬ್ಬ ನಾಯಕನ ಪಾಲಾಗುವುದು. ಇಲ್ಲಿ ಅದು ಖಂಡಿತವಾಗಿಯೂ ಭಾರತೀಯ ಜನತಾ ಪಕ್ಷ. ಮೋದಿಗಿಂತ ಮೊದಲಿನ ಬಿಜೆಪಿ ಈಗ ಆಗಿರುವ ರೀತಿಯಲ್ಲಿ ಒಬ್ಬನ ವ್ಯಕ್ತಿತ್ವ ಪೂಜೆಗೆ ಎಂದಿಗೂ ಬಂಧಿಯಾಗಿರಲಿಲ್ಲ. ಪಕ್ಷವು ಆಗ ‘ವ್ಯಕ್ತಿ ಪೂಜೆ’, ವ್ಯಕ್ತಿಯ ಆರಾಧನೆಯನ್ನು ವಿರೋಧಿಸಿತ್ತು. ಅದರ ಸಾಮೂಹಿಕ ನಾಯಕತ್ವ ಮತ್ತು ಆಂತರಿಕ ಪ್ರಜಾಪ್ರಭುತ್ವವು ಅದನ್ನು ಸರ್ವಾಧಿಕಾರಿ ಇಂದಿರಾ ಗಾಂಧಿಯವರ ಕಾಂಗ್ರೆಸ್‌ನಿಂದ ಪ್ರತ್ಯೇಕಿಸುತ್ತದೆ ಎಂದು ಪ್ರತಿಪಾದಿಸಿತ್ತು. ನರೇಂದ್ರ ಮೋದಿಯವರಂತೆ ವಾಜಪೇಯಿ ಅವರು ತಮ್ಮ ಸಂಪುಟದಲ್ಲಿ ಪ್ರಾಬಲ್ಯ ಸಾಧಿಸಿರಲಿಲ್ಲ; ಈಗಿನವರು ಮಾಡುತ್ತಿರುವಂತೆ ಬಿಜೆಪಿಯ ರಾಜ್ಯ ಮುಖ್ಯಮಂತ್ರಿಗಳು ತಮ್ಮ ಪ್ರಧಾನಿಯ ಬಗ್ಗೆ ಈಗಿನಂತೆ ಹುಚ್ಚುಚ್ಚಾಗಿ ಮಾತನಾಡಲು ಪ್ರಯತ್ನಿಸಿರಲಿಲ್ಲ. ಮೇ 2014ರಿಂದ, ಕೇಂದ್ರ ಸರಕಾರ ಮತ್ತು ಆಡಳಿತ ಪಕ್ಷದ ಅಪಾರ ಸಂಪನ್ಮೂಲಗಳನ್ನು ಪ್ರಧಾನ ಮಂತ್ರಿಯ ಇಮೇಜಿಗೆ ಹೊಳಪು ಕೊಡಲು, ಅವರನ್ನು ತನ್ನ ವ್ಯಕ್ತಿತ್ವದಲ್ಲಿ ಭಾರತ ದೇಶದ ಮತ್ತು ಭಾರತೀಯ ನಾಗರಿಕತೆಯ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಹೊಂದಿರುವ ಅರೆ-ದೈವಿಕ ಜೀವಿ ಎಂದು ಬಿಂಬಿಸಲು ಮೀಸಲಿಡಲಾಗಿದೆ.
ನರೇಂದ್ರ ಮೋದಿಯವರ ಆರಾಧನೆಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಆಗಿರುವ ಹಾನಿಯ ಬಗ್ಗೆ ನಾನು ಈ ಅಂಕಣಗಳಲ್ಲಿ ಹಿಂದೆ ಬರೆದಿದ್ದೇನೆ. ಆತಂಕಕಾರಿಯಾಗಿ, ಇತರ ಪಕ್ಷಗಳು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಪ್ರಭಾವಿಸಲು ಇದು ಆರಂಭಿಸಿದೆ. ಆಮ್ ಆದ್ಮಿ ಪಕ್ಷ ಸ್ಥಾಪನೆಯಾದಾಗ, ಭ್ರಷ್ಟಾಚಾರದ ವಿರುದ್ಧದ ಅದರ ನಿಲುವು ಮತ್ತು ಅರ್ಹತೆ ಮತ್ತು ಸವಲತ್ತುಗಳಿಂದ ಅದರ ಸ್ಪಷ್ಟವಾದ ದೂರದ ಕಾರಣಕ್ಕೆ ವ್ಯಾಪಕ ಬೆಂಬಲವನ್ನು ಅದು ಪಡೆಯಿತು. ಹಾಗಿದ್ದರೂ, ಇಷ್ಟು ವರ್ಷಗಳಲ್ಲಿ ಅದು ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗೆ ಒಂದು ವಾಹಕವಾಗಿದೆ. ಇತರ ಎಎಪಿ ನಾಯಕರು ಅವರೆದುರು, ಮೋದಿಗೆ ಇತರ ಬಿಜೆಪಿ ನಾಯಕರು ಹೇಗೆ ತಲೆಬಾಗುತ್ತಾರೋ ಅದೇ ರೀತಿಯಲ್ಲಿ ತಲೆಬಾಗುತ್ತಾರೆ. ದಿಲ್ಲಿ ಸರಕಾರವು ಕೇಜ್ರಿವಾಲ್ ಆರಾಧನೆಯನ್ನು ಪ್ರಚಾರ ಮಾಡಲು ದೊಡ್ಡ ಮೊತ್ತದ ಹಣವನ್ನು ವ್ಯಯಿಸುತ್ತದೆ, ಬಹುಶಃ ಕೇಂದ್ರ ಸರಕಾರವು ಮೋದಿ ಆರಾಧನೆಯನ್ನು ಪ್ರಚಾರ ಮಾಡುವಷ್ಟೇ ಪ್ರಮಾಣದಲ್ಲಿ.
ಒಬ್ಬನೇ ವ್ಯಕ್ತಿ ಇಡೀ ಪಕ್ಷವನ್ನು, ಇಡೀ ರಾಜ್ಯವನ್ನು ಪ್ರತಿನಿಧಿಸಬಹುದು ಎಂಬ ಕಲ್ಪನೆಯು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಆರಾಧನೆಯಲ್ಲಿಯೂ ಗೋಚರಿಸುತ್ತದೆ; ಮತ್ತು ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಆರಾಧನೆಯಲ್ಲಿಯೂ ಸಹ. ಬಿಜೆಪಿಯಂತೆಯೇ, ಸಿಪಿಐ(ಎಂ) ಒಮ್ಮೆ ತನ್ನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತಿತ್ತು; 2021ರಲ್ಲಿ ಎಡರಂಗವು ಮರು ಆಯ್ಕೆಯಾದಾಗ ವಿಜಯನ್ ಅವರು ತಮ್ಮ ಅತ್ಯುತ್ತಮ ಕಾರ್ಯನಿರ್ವಹಣೆಯ ಇಬ್ಬರು ಮಂತ್ರಿಗಳನ್ನು ವಜಾಗೊಳಿಸಿದ್ದು ಈಗ ಇತಿಹಾಸ.
ಭಾರತೀಯ ಪಕ್ಷ ವ್ಯವಸ್ಥೆಯ ಅವನತಿಯು ಹೆಚ್ಚು ಕಡಿಮೆ ಸಂಪೂರ್ಣವಾಗಿದೆ. ಒಂದು ಗುಂಪಿನ ರಾಜಕೀಯ ಪಕ್ಷಗಳು ಕುಟುಂಬ ಸಂಸ್ಥೆಗಳಾಗಿ ಮಾರ್ಪಟ್ಟಿವೆ; ಮತ್ತು ಇನ್ನೊಂದು ಗುಂಪು ತಮ್ಮ ನಾಯಕನನ್ನು ಜೀವಂತ ದೇವರಂತೆ ಉದಾತ್ತಗೊಳಿಸುವ ಅರೆ ಧಾರ್ಮಿಕ ಆರಾಧಕತೆಯಲ್ಲಿ ತೊಡಗಿದೆ. ಈ ವಿನಾಶಕ ಪ್ರವೃತ್ತಿಯ ದೊಡ್ಡಮಟ್ಟದ ಪರಿಣಾಮಗಳನ್ನು ಪರಿಶೀಲಿಸಬೇಕಾಗಿದೆ. ರಾಜಕೀಯ ಪಕ್ಷವು ನಿಶ್ಚಿತವಾಗಿಯೂ, ಅದರ ಆರೋಗ್ಯಕಾರಕ ಕೆಲಸದ ಮೇಲೆ ಪ್ರಜಾಪ್ರಭುತ್ವವು ಪ್ರಮುಖವಾಗಿ ಅವಲಂಬಿತವಾಗಿರುವುದರಿಂದ ಆಧುನಿಕ ಸಮಾಜದ ಪ್ರಮುಖ ಸಂಸ್ಥೆಯಾಗಿದೆ. ಪಕ್ಷಗಳು ಸ್ವತಃ ತಲೆಬಾಗುವ ಮತ್ತು ವಿಧೇಯವಾಗಿರುವ ಸಂಸ್ಕೃತಿಯಲ್ಲಿ ತೊಡಗಿದರೆ, ಕುಟುಂಬ ಆರಾಧನೆ ಅಥವಾ ನಾಯಕನ ಆರಾಧನೆಯನ್ನು ಕಡ್ಡಾಯಗೊಳಿಸಿದರೆ, ಇದು ವಿಶಾಲ ರಾಜಕೀಯ ಸಂಸ್ಕೃತಿಗೆ ಏನನ್ನು ಸೂಚಿಸುತ್ತದೆ? ಒಬ್ಬ ನಾಯಕ ತನ್ನ ಪಕ್ಷದ ಸಹೋದ್ಯೋಗಿಗಳಿಂದ ಹೊಗಳಿಕೆಯನ್ನು ಮಾತ್ರ ಬಯಸಿದರೆ, ಅವನು ಎಂದಾದರೂ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಬಲ್ಲನೆ? ಒಬ್ಬ ನಾಯಕ ಪಕ್ಷದ ಸದಸ್ಯರಿಂದ ಪ್ರಶ್ನಾತೀತ ನಿಷ್ಠೆಯನ್ನು ಕೇಳಿದರೆ, ಅವನು ಅಧಿಕಾರದಲ್ಲಿದ್ದಾಗ, ಅಧಿಕಾರಶಾಹಿ, ಪೋಲೀಸ್, ಮಾಧ್ಯಮ ಅಥವಾ ನ್ಯಾಯಾಂಗದಿಂದ ತನ್ನ ದುರುದ್ದೇಶಪೂರಿತ ನೀತಿಗಳಿಗೆ ಪ್ರಶ್ನಾತೀತ ಬೆಂಬಲವನ್ನು ಕೇಳದಿರುವನೇ?