ಲಂಚವೆಂಬ ಮಾಮೂಲು

Update: 2023-02-09 04:54 GMT

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ್ದು ಸಮಾಜದ ಆದ್ಯ ಕರ್ತವ್ಯವಾದರೂ ಅದೊಂದು ಕುಟಿಲ ವ್ಯವಹಾರವಾಗುತ್ತಿರುವುದು ದುರ್ದೈವ. ಲಂಚವೆನ್ನುವುದಕ್ಕೆ 'ಮಾಮೂಲು' ಎಂಬ ರೂಢಿಯ ಪದವಿದೆ. ಇದು ಹೇಗಾಯಿತೋ ಗೊತ್ತಿಲ್ಲ. 'ಮಾಮೂಲು' ಎಂದರೆ ಸಾಮಾನ್ಯವಾದದ್ದು, ಸಾಂಪ್ರದಾಯಿಕ, ಪಾರಂಪರಿಕ ಎಂಬ ಭಾವ ಮತ್ತು ಅರ್ಥ. ಅದು ಲಂಚದಂತಹ ಕೇಡಿಗೆ ಸಮಾನಾರ್ಥವನ್ನು ಹೊಂದಿದ್ದು ಅಚ್ಚರಿಯ ಸಹಜತೆ.



ಒಂದು ಕಾಲದಲ್ಲಿ ಗಂಧದ ನಾಡೆಂದು ಪ್ರಸಿದ್ಧಿ ಹೊಂದಿದ್ದ ಕರ್ನಾಟಕವು ಇಂದು ಲಂಚದ ನಾಡೆಂದು ಪ್ರಸಿದ್ಧಿ ಹೊಂದಿದ್ದರೆ ಅಚ್ಚರಿಯಿಲ್ಲ. ಶೇ. 40ರ ಮಾತು ಎಲ್ಲೆಡೆ ಕೇಳಿಬಂದರೂ, ಅದನ್ನು ನಿರೂಪಿಸುವ ಸತ್ಯಗಳು ನಿತ್ಯ ಹೊರಬೀಳುತ್ತಿದ್ದರೂ ನಮ್ಮನ್ನಾಳುವವರು ತಮ್ಮ ತಲೆಗಳನ್ನು ಮರಳಲ್ಲಿ ಹೂತಿಟ್ಟುಕೊಂಡು ಎಲ್ಲಿ ಭ್ರಷ್ಟಾಚಾರವೆಂಬ ಪ್ರಶ್ನೆಯನ್ನು ಹಾಕುತ್ತಿದ್ದಾರೆ. ಎಲ್ಲವೂ ಸರಿಯಿದೆಯೆಂದೂ ಇದೆಲ್ಲ ಪ್ರತಿಪಕ್ಷಗಳ ಕುತಂತ್ರವೆಂದೂ ಬಣ್ಣಿಸುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅಂದರೆೆ ಎಸಿಬಿ ಎಂಬ ಸರಕಾರೀ ಶಿಶುವನ್ನು ಅಕ್ರಮವೆಂದು ಆದೇಶಿಸಿ ತೊಡೆದುಹಾಕಿದ ಬಳಿಕ ವ್ಯವಸ್ಥೆಯ ಹಳೆಯ ಹೆಂಡತಿ ಲೋಕಾಯುಕ್ತದ ಕದ ವಿಶಾಲವಾಗಿ ತೆರೆದಿದೆ ಮತ್ತು ಸಾಕಷ್ಟು ಸರಕಾರಿ ಮತ್ತು ಸಾರ್ವಜನಿಕ ನೌಕರರು, ಅಧಿಕಾರಿಗಳು ಈ ಬಲೆಗೆ ಬೀಳುತ್ತಿದ್ದಾರೆ. ಇವರಲ್ಲಿ ಭ್ರಷ್ಟರೆಷ್ಟು, ಅಮಾಯಕರೆಷ್ಟು ಎಂಬುದು ಸಂಬಂಧಿಸಿದವರಿಗಷ್ಟೇ ಗೊತ್ತು. ಅದನ್ನು ಇತ್ಯರ್ಥಗೊಳಿಸಲು ಸಂಬಂಧಿಸಿದ ನ್ಯಾಯಾಲಯಗಳಿವೆ. ಅಲ್ಲಿ ಎಲ್ಲವೂ ನ್ಯಾಯಪರವಾಗಿರುತ್ತವೆಂದು ನಂಬಲು ಸಾಧ್ಯವಿಲ್ಲ. ಏಕೆಂದರೆ ನಮ್ಮಲ್ಲಿ ನಡೆಯುವ ನ್ಯಾಯ ನಿರ್ಣಯಗಳು ಕಾನೂನಿನ ಮೂಲಕ ನಡೆಯುವಂಥವು. ನೂರು ಅಪರಾಧಿಗಳಿಗೆ ಶಿಕ್ಷೆಯಾದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುದು ನಮ್ಮ ನ್ಯಾಯಿಕ ನಂಬಿಕೆ. ಕಾನೂನಿನ ಮೂಲಕ ನಡೆಯುವ ನಿರ್ಣಯಗಳಲ್ಲಿ ಕಾನೂನಿನ ಅನುಸರಣೆಯಲ್ಲಾಗುವ ಲೋಪಗಳೂ ಆರೋಪಿಗೆ ಅನುಕೂಲವಾಗುವ ನ್ಯಾಯಶಾಸ್ತ್ರ ನಮ್ಮದಾದ್ದರಿಂದ ಅದರ ವ್ಯವಸ್ಥೆಯ ಬಗ್ಗೆ ಚಿಕಿತ್ಸೆ ನಡೆದು ಸರಿರೂಪಕ್ಕೆ ಬರುವ ವರೆಗೂ ಈ ದೋಷವನ್ನು ಸರಿಪಡಿಸಲಾಗದು. ಸಾಮಾನ್ಯವಾಗಿ ಶತಾಂಶಗಳು ಅಂಕಗಳಿಗೆ ಸಂಬಂಧಿಸಿದವು. ಶಿಕ್ಷಣದಲ್ಲಿ ತೇರ್ಗಡೆಹೊಂದಬೇಕಾದರೆ ಶೇ. 35-40 ಅಂಕಗಳು ಅಗತ್ಯವೆಂದು ರೂಢಿಯಲ್ಲಿದೆ. ಇದನ್ನು ಮೀರಿದರೆ ಆನಂತರ ಬುದ್ಧಿವಂತರ ಸಾಲಿನಲ್ಲಿ ಸ್ಪರ್ಧೆ ನಡೆಯುತ್ತದೆ. ಇದು ಶೇ. 100ರವರೆಗೂ ತಲುಪಬಹುದೆಂದು ಇಂದಿನ ಶಿಕ್ಷಣ ಪರೀಕ್ಷೆಗಳ ಮೌಲ್ಯಮಾಪನ ತೋರಿಸಿದೆ.

ಕೂದಲು ಸೀಳುವ ಚಿಂತನೆಯಲ್ಲಿ ಲಂಚ ಬೇರೆ, ಭ್ರಷ್ಟಾಚಾರ ಬೇರೆ ಎಂಬ ತರ್ಕವಿದೆ. ಒಂದು ರೀತಿಯಲ್ಲಿ ಈ ವಾದವೂ ಸರಿ. ಭ್ರಷ್ಟಾಚಾರದಲ್ಲಿ ಲಂಚವೂ ಒಂದು ಅಂಗ. ಸ್ವಜನ ಪಕ್ಷಪಾತ, ಸುಳ್ಳಿನ ಮೂಲಕ ಅಮಾಯಕರಿಗೆ ಮೋಸಮಾಡುವುದು, ಲಂಚ, ಅಕ್ರಮ, ವ್ಯತ್ಯಸ್ತತೆ ಇವೆಲ್ಲ ಸೇರಿ ಭ್ರಷ್ಟಾಚಾರವಾಗುತ್ತದೆ. ಉಚಿತ ಉಡುಗೊರೆಗಳು, ಸಾಲ ಮನ್ನಾ, ಸಬ್ಸಿಡಿ, ಮುಂತಾದವೂ ಭ್ರಷ್ಟಾಚಾರವೇ. ಬೆಂಗಳೂರಿನಲ್ಲಿ ನಿವೇಶನ ಸಿಗಬೇಕೆಂದು ವಿವಿಧ ಕ್ಷೇತ್ರಗಳಲ್ಲಿ ರಾಜ್ಯಪ್ರಶಸ್ತಿಗೆ ದುಂಬಾಲು ಬೀಳುವುದು, ಅದನ್ನು ಹೇಗಾದರೂ ಪಡೆಯುವುದೂ ಭ್ರಷ್ಟಾಚಾರವೇ. ಇದು ಬರೀ ಹಣದ ವ್ಯವಹಾರವಲ್ಲ. ಮನ್ನಣೆಯ ದಾಹದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುವುದನ್ನು ನಾವು ಕಾಣಬಹುದು. ಪ್ರಶಸ್ತಿ-ಪುರಸ್ಕಾರಗಳು ತರುವ ಜನಪ್ರಿಯತೆಗಾಗಿ ನಡೆಯುವ ಅಕ್ರಮ ಸ್ಪರ್ಧೆಯೂ ಭ್ರಷ್ಟಾಚಾರವೇ. ಆದರೆ ಸಮಾಜದಲ್ಲಿ ಅವಗಣನೆಗೆ ತುತ್ತಾದ ವರ್ಗ, ಜನಾಂಗಗಳಿಗೆ ಅನುಕೂಲ ಕಲ್ಪಿಸುವುದು ಭ್ರಷ್ಟಾಚಾರವಾಗುವುದಿಲ್ಲ. ಅದು ಮಾನವೀಯ ನೆರವಿಗೆ ಸಂಬಂಧಿಸಿದ್ದು. ಬಡವನೊಬ್ಬನಿಗೆ ಉಚಿತವಾಗಿ ಆರೋಗ್ಯ, ಶಿಕ್ಷಣ, ಆಶ್ರಯಗಳನ್ನು ನೀಡುವುದು ಭ್ರಷ್ಟಾಚಾರವಾಗಲು ಸಾಧ್ಯವಿಲ್ಲ. ಹಾಗೆಯೇ ಶತಮಾನಗಳಿಂದ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿ ಭ್ರಷ್ಟಾಚಾರವಾಗಲು ಸಾಧ್ಯವಿಲ್ಲ. ಚರಿತ್ರೆಯಲ್ಲಿ ನಡೆದ ಶೋಷಣೆ, ಅನ್ಯಾಯ ಇವನ್ನು ಪೂರ್ತಿಯಾಗಿ ಅಲ್ಲದಿದ್ದರೂ ಸ್ವಲ್ಪಸರಿಮಾಡಲು ಕೆಲವು ನೇರಕ್ರಮಗಳು ಅಗತ್ಯ. ಇವಲ್ಲದೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಮಾಜಿ ಸೈನಿಕರಿಗೆ ನೀಡುವ ಅನುಕೂಲಗಳು ಅವರು ಮಾಡಿರಬಹುದಾದ ಸೇವೆಗೆ ನೀಡುವ ಕೃತಜ್ಞತೆ ಅಷ್ಟೇ. ಅವರಿಗೆ ಸಂಬಳ, ನಿವೃತ್ತಿ ವೇತನ ಇಲ್ಲವೆಂದಲ್ಲ. ಪುನರ್ವಸತಿಗಾಗಿ ಲೆಕ್ಕಾಚಾರಕ್ಕೆ ಮೀರಿದ ಕೆಲವೊಂದು ನೆರವುಗಳು ಸಾಮಾಜಿಕ ಹಿತವನ್ನು ಈಡೇರುವ ಸಾಧನಗಳು. ಲಂಚ ವಿರೋಧಿ ಕಾಯ್ದೆಯಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯಿದೆ. ಸ್ವತಂತ್ರ ಭಾರತದಲ್ಲಿ ಬಿಹಾರವನ್ನು ಅತ್ಯಂತ ಭ್ರಷ್ಟ ರಾಜ್ಯವೆಂದು ಹೀಯಾಳಿಸಲಾಗುತ್ತಿತ್ತು. ಈಗ ಕರ್ನಾಟಕವು ಅಗ್ರಸ್ಥಾನವನ್ನು ಪಡೆದಿದೆ ಎಂಬುದು ಜನಜನಿತ. ಅಂದರೆ ಇತರ ರಾಜ್ಯಗಳಲ್ಲಿ ಲಂಚವಿಲ್ಲವೆಂದರ್ಥವಲ್ಲ. ಹಾಗಿದ್ದಿದ್ದರೆ ಈ ಶೇ. 40ರ ಅಳತೆಯಿರುತ್ತಿರಲಿಲ್ಲ. ಅಲ್ಲಿ ಈ ಶೇಕಡಾವಾರು ಸಾಧನೆ ಸ್ವಲ್ಪಕಡಿಮೆಯೆಂದೇ ಅರ್ಥ.
 
ಆದರೆ ಲಂಚವೆಂಬುದು ನೇರ ನಡೆಯುವ ಅಕ್ರಮ. ಇದು ನಿಗದಿತ ಶುಲ್ಕ-ನಿಯಮಗಳನ್ನು ಮೀರಿದ, ನಿಯಮಾನುಸಾರ ಮಾಡಬೇಕಾದ್ದಕ್ಕೆ ಇಡುವ, ಅಕ್ರಮ ಬೇಡಿಕೆ. ಲಂಚದ ಇತಿಹಾಸ ಭಾರೀ ಹಳೆಯದು. ಲಂಚಕ್ಕೆ ಬೇಕಾದ ಮೂಲ ಸತ್ವವೆಂದರೆ ಅಧಿಕಾರ. ಅಧಿಕಾರವಿಲ್ಲದಿದ್ದರೆ ಅಥವಾ ಅಧಿಕಾರ ಮುಖೇನವಲ್ಲದಿದ್ದರೆ ಲಂಚ ಸಾಧ್ಯವಿಲ್ಲ. ಸಮುದ್ರದ ಅಲೆಗಳನ್ನು ಲೆಕ್ಕ ಹಾಕಲು ನೇಮಕವಾದವನೂ ಭ್ರಷ್ಟನಾಗಬಹುದೆಂದು ಬೀರಬಲ್ಲನ ಕಥೆ ನಿರೂಪಿಸಿದೆ. ಬೆಣ್ಣೆಯನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಸಾಗಿಸುತ್ತ ಹೋದರೆ ಕೊನೆಯವನ ಕೈಗೆ ತಲುಪುವಾಗ ಅದು ಏನೂ ಇಲ್ಲವಾಗುತ್ತದೆಂಬುದೂ ನೀತಿ ಕಥೆ. ಬಟ್ಟೆಯಿಂದ ಮುಚ್ಚಿದ ಖಾಲಿ ಹಳ್ಳಕ್ಕೆ ಎಲ್ಲರೂ ಹಾಲು ಸುರಿಯಿರೆಂದು ಆದೇಶಿಸಿದಾಗ ಪ್ರತಿಯೊಬ್ಬರೂ ''ಎಲ್ಲರೂ ಹಾಲು ಸುರಿಯುವಾಗ ನಾನೊಬ್ಬ ನೀರು ಸುರಿದರೆ ಗೊತ್ತಾಗದು'' ಎಂದು ತಿಳಿದದ್ದರ ಪರಿಣಾಮವೇ ಬಾವಿಯಲ್ಲಿ ನೀರು ಮಾತ್ರವಿತ್ತು ಎಂಬ ತೆನಾಲಿ ರಾಮಕೃಷ್ಣನ ಕಥೆಯೂ ಇದನ್ನೇ ಹೇಳುತ್ತದೆ. ಅನೈತಿಕತೆಯೂ ಭ್ರಷ್ಟಾಚಾರ ಹೇಗಾಗುತ್ತದೆಯೆಂಬ ವಿವೇಕವನ್ನು ಭರ್ತೃಹರಿಯ ಶತಕದ (ಪ್ರಕ್ಷಿಪ್ತವಾಗಿರಬಹುದಾದ) ಕಥೆಯೂ ಹೇಳುತ್ತದೆ: ಭರ್ತೃಹರಿ ಒಬ್ಬ ರಾಜ. ಎಷ್ಟೇ ದೊಡ್ಡ ರಾಜನಾದರೂ ಮನುಷ್ಯ ಸಂಬಂಧಗಳಲ್ಲಿ ಕೊನೆಗೂ ವ್ಯವಹರಿಸುವುದು ಷಡ್ವೈರಿಗಳೆಂದು ಗುರುತಿಸಲಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೇ. ಈತನ ಕಿರಿಯ ಪತ್ನಿ ಪಿಂಗಳೆ ಒಬ್ಬ ಕುದುರೆ ಸವಾರನನ್ನು ಪ್ರೀತಿಸುತ್ತಿದ್ದಳು. ಆ ಸವಾರನು ಒಬ್ಬ ವೇಶ್ಯೆಯನ್ನು ಪ್ರೀತಿಸುತ್ತಿದ್ದನು. ಆ ವೇಶ್ಯೆಯಾದರೋ ಅರಸನಾದ ಭರ್ತೃಹರಿಗಾಗಿ ತನ್ನ ಪ್ರಾಣವನ್ನೂ ಕೊಡಲು ಸಿದ್ಧವಾಗಿದ್ದವಳು. ಒಬ್ಬ ಸಿದ್ಧಪುರುಷನು ಭರ್ತೃಹರಿಗೆ ಒಂದು ಅಮರ ಫಲವನ್ನು ಕೊಡುತ್ತಾನೆ. ಅದನ್ನು ಭರ್ತೃಹರಿ ತನ್ನ ಪ್ರೀತಿಪಾತ್ರಳಾದ ರಾಣಿ ಪಿಂಗಳೆಗೆ ನೀಡುತ್ತಾನೆ. ಆಕೆ ಅದನ್ನು ತನ್ನ ಇಷ್ಟದ ಈ ಕುದುರೆ ಸವಾರನಿಗೆ ನೀಡುತ್ತಾಳೆ. ಆತ ಅದನ್ನು ವೇಶ್ಯೆಗೆ ನೀಡುತ್ತಾನೆ. ವೇಶ್ಯೆಯು ಇದು ತನಗೆ ತಕ್ಕುದಲ್ಲ, ದೇಶವನ್ನಾಳುವ ಅರಸನಿಗೆ ಸಲ್ಲತಕ್ಕದ್ದು ಎಂದು ಭರ್ತೃಹರಿಗೆ ಸಲ್ಲಿಸುತ್ತಾಳೆ. ಇಲ್ಲಿಗೆ ಈ ವಿಷ/ವಿಷುವ ವೃತ್ತ ಪೂರ್ಣವಾಗುತ್ತದೆ ಮತ್ತು ಭರ್ತೃಹರಿ ವೈರಾಗ್ಯವನ್ನು ತಾಳಿ ಗೋರಕ್ಷಾ ಪಂಥವನ್ನು ಸೇರುತ್ತಾನೆಂದು ಕಥೆ. ಅಹಲ್ಯೆ ಕಲ್ಲಾದದ್ದು ದೇವೇಂದ್ರನ ಕಾಮರೂಪೀ ಭ್ರಷ್ಟತೆಯಿಂದ. ಇದನ್ನು ಅರಿಯದ ಗೌತಮ ಋಷಿಯೂ ಗೋತ್ರೋದ್ಭವನೇ. ಜನ್ನನ ಯಶೋಧರ ಚರಿತೆ ಇದನ್ನು ಸಾಬೀತು ಮಾಡುವ ಕಾವ್ಯ! ನಮ್ಮ ಪುರಾಣಗಳು, ಚರಿತ್ರೆಗಳು ಇಂತಹ ಅನೇಕ ಪ್ರಸಂಗಗಳನ್ನು ಹೋಲಿಕೆ, ರೂಪಕಗಳ ಮೂಲಕವೂ ಹೇಳಿವೆ. ದುರದೃಷ್ಟವೆಂದರೆ ಇವ್ಯಾವುದೂ ಮನುಷ್ಯನ ಅವಿವೇಕವನ್ನು ಬಾಧಿಸುವುದಿಲ್ಲ. ಜಗತ್ತಿಗೇ ನೀತಿಯನ್ನು ಹೇಳುವ ಸಾಧುಸಂತರು ಮಾತ್ರವಲ್ಲ ನಮಗೆ ಆದರ್ಶವೆಂದು ತಿಳಿಯುವ ದೇವಾನುದೇವತೆಗಳೂ ಭ್ರಷ್ಟರಾದ್ದನ್ನು ಓದುತ್ತೇವೆ, ಕೇಳುತ್ತೇವೆ, ಆದರೆ ತಿಳಿಯುತ್ತಿಲ್ಲ. ಪ್ರಾಯಃ ಇವೆಲ್ಲದರ ಸಾರವೆಂದರೆ ಹಂಸಕ್ಷೀರ ನ್ಯಾಯವನ್ನು ಅಣಕಿಸುವ ಬುದ್ಧಿಯೇ ಮನುಷ್ಯನಲ್ಲಿ ಹೆಚ್ಚು ಜಾಗೃತವಾಗಿದ್ದು ನಮಗೆ ಬೇಕಾದ, ಅನುಕೂಲಕರವಾದ ಮತ್ತು ಇಷ್ಟವಾದ, ಅನಿಷ್ಟಗಳನ್ನಷ್ಟೇ ನಾವು ಸ್ವೀಕರಿಸುತ್ತೇವೆ.

ರಾಜೀವ್ ಗಾಂಧಿ ಒಂದು ಬಾರಿ ಸರಕಾರದ ಯೋಜನೆಗಳ ಶೇ. 100ರ ಫಲ ಜನಸಾಮಾನ್ಯರನ್ನು ತಲುಪುವಾಗ ತೃಣಮಾತ್ರವಾಗಿರುತ್ತದೆಯೆಂದು ಹೇಳಿದ್ದರು. ಇದು ಆಗಿನ ಕಾಂಗ್ರೆಸ್ ಸರಕಾರಕ್ಕೆ ಅನ್ವಯಿಸುತ್ತದೆಯೆಂದು ಆಗ ಅಧಿಕಾರದಲ್ಲಿಲ್ಲದ, ಈಗ ಅಧಿಕಾರಕ್ಕೆ ಬಂದಿರುವ ಪಕ್ಷಗಳು ತಿಳಿಯುತ್ತವೆ. ಆದರೆ ಇದು ವ್ಯವಸ್ಥೆಯ ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಟೀಕೆಯೆಂದು ತಿಳಿದರೆ ಅದು ವಿವೇಕ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದ್ದು ಸಮಾಜದ ಆದ್ಯ ಕರ್ತವ್ಯವಾದರೂ ಅದೊಂದು ಕುಟಿಲ ವ್ಯವಹಾರವಾಗುತ್ತಿರುವುದು ದುರ್ದೈವ. ಲಂಚವೆನ್ನುವುದಕ್ಕೆ 'ಮಾಮೂಲು' ಎಂಬ ರೂಢಿಯ ಪದವಿದೆ. ಇದು ಹೇಗಾಯಿತೋ ಗೊತ್ತಿಲ್ಲ. 'ಮಾಮೂಲು' ಎಂದರೆ ಸಾಮಾನ್ಯವಾದದ್ದು, ಸಾಂಪ್ರದಾಯಿಕ, ಪಾರಂಪರಿಕ ಎಂಬ ಭಾವ ಮತ್ತು ಅರ್ಥ. ಅದು ಲಂಚದಂತಹ ಕೇಡಿಗೆ ಸಮಾನಾರ್ಥವನ್ನು ಹೊಂದಿದ್ದು ಅಚ್ಚರಿಯ ಸಹಜತೆ. ಸಹಜವೇ: ಏಕೆಂದರೆ ಲಂಚವನ್ನು ಜನರು ಅಪವಾದವೆಂದು ತಿಳಿಯುವ ಕಾಲ ಕಳೆದಿದೆ. ಅದು ತನ್ನ ಹಕ್ಕು ಎಂದು ತಿಳಿಯುವ ಅಧಿಕಾರಿಗಳು, ನೌಕರರೇ ಹೆಚ್ಚು. ನನ್ನಂತಹ ವಕೀಲರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಆರೋಪಿಯ ಪರವಾಗಿ ನಿಲ್ಲುತ್ತಾರೆ. ಆದರೆ ಇದು ವೃತ್ತಿಧರ್ಮವೂ ಹೌದು. ಇಷ್ಟಕ್ಕೂ ಆರೋಪ ಸತ್ಯವೇ ಮಿಥ್ಯವೇ ಎಂದು ನಿರ್ಣಯಿಸುವುದಕ್ಕೆ ನಾವು ಯಾರು? ಅದನ್ನು ಇತ್ಯರ್ಥಗೊಳಿಸುವುದಕ್ಕೆ ಶಾಸನಬದ್ಧ ಪ್ರಾಧಿಕಾರಗಳಿರುವಾಗ ವೃತ್ತಿಪರರು ಅದನ್ನು ಮನಗಾಣಬೇಕಾಗಿಲ್ಲ. ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ ವೃತ್ತಿಪರರಿಗೆ ಕಕ್ಷಿದಾರರು ನೀಡುವ ಯಾವುದೇ ಮಾಹಿತಿಯೂ ಖಾಸಗಿಯೆಂಬ ಅನುಶಾಸನವಿದೆ. ಕೊಲೆಮಾಡಿದವನೊಬ್ಬ ತಾನು ಕೊಲೆಯೆಸಗಿದ್ದೇನೆಂದು ಹೇಳಿ ತನ್ನನ್ನು ಪಾರುಮಾಡಲು ವಕೀಲರಲ್ಲಿ ಹೇಳಿದರೆ ವಕೀಲರು ನಿಗದಿ ಪಡಿಸಿದ ಶುಲ್ಕವನ್ನು ಆತ ಪಾವತಿಸಿದರೆ ಆತನ ಪರವಾಗಿ ನಿಲ್ಲುವುದು ವೃತ್ತಿಧರ್ಮ. ಆತ ತಿಳಿಸಿದ ಸತ್ಯವನ್ನು ನ್ಯಾಯಾಲಯಕ್ಕೆ ಹೇಳುವುದು ಅ(ಪ)ಧರ್ಮವಾಗುತ್ತದೆ.

ಇಲ್ಲಿ ಸರಿತಪ್ಪುಗಳ ವಿವೇಚನೆಯನ್ನು ನ್ಯಾಯಾಲಯಕ್ಕೆ ಬಿಟ್ಟು ವೃತ್ತಿಯನ್ನು ಮುಂದುವರಿಸುವುದೇ ಸರಿಯಾದದ್ದು. ಗಾಂಧಿಯಂಥವರು ಇದನ್ನು ತಾಳಿಕೊಳ್ಳಲಾರದೆ ಅತಿಗೆ ಒಯ್ದರೇನೋ ಅನ್ನಿಸುತ್ತಿದೆ. ಭ್ರಷ್ಟಾಚಾರ ನಿಯಂತ್ರಣದಲ್ಲಿ ಲಂಚಕೋರರನ್ನು ನಿಯಂತ್ರಿಸುವುದೇ ದೊಡ್ಡ ಸಾಹಸ. ಈಗ ನಡೆಯುವ ಭ್ರಷ್ಟರ ಬೇಟೆಯ ಕಾನೂನಾತ್ಮಕ ಚಟುವಟಿಕೆಗಳಲ್ಲಿ ಚಿಕ್ಕಪುಟ್ಟ ನೌಕರರೇ ಸಿಕ್ಕಿಬೀಳುವುದನ್ನು ಕಾಣುತ್ತೇವೆಯೇ ವಿನಾ ತಿಮಿಂಗಿಲಗಳನ್ನಲ್ಲ. ಈಗ ಆರೋಪಿಸುವ ಶೇ. 40 ಆರೋಪದಲ್ಲಿ ಸಿಕ್ಕಿಬೀಳುವವರು ಪಡೆಯುವ ಲಂಚದ ಪ್ರಮಾಣವು ಶೇ. 1ರಷ್ಟೂ ಇರಲಿಕ್ಕಿಲ್ಲ. ದಿನಾ ಪತ್ರಿಕೆಗಳಲ್ಲಿ ಸಿಕ್ಕಿಬಿದ್ದವರ ಪಟ್ಟಿಯನ್ನು ನೋಡಿದರೆ ಇವುಗಳಲ್ಲಿ ಪತ್ರಾಂಕಿತ ಅಧಿಕಾರಿಗಳು ಕಡಿಮೆಯೇ. ಕೆಳ ಹಂತದ ನೌಕರರಿಗೆ ರಾಜಕಾರಣಿಗಳೊಂದಿಗೆ ಸಂಬಂಧವಿರುವುದಿಲ್ಲ. ಅವರದ್ದೇನಿದ್ದರೂ ತಮ್ಮ ಅನುಕೂಲಕ್ಕೆ ಮಾತ್ರ. ಆದರೆ ಮೇಲಧಿಕಾರಿಗಳಿಗೆ ರಾಜಕಾರಣಿಗಳೊಂದಿಗೆ ನೇರ ಸಂಬಂಧವಿರುತ್ತದೆ. ಇಂಥವರು ಸಿಕ್ಕಿಬೀಳುವುದೇ ಇಲ್ಲ. ಅವರು ಮಹಾನಗರಗಳಲ್ಲಿ ಹೊಂದಿರುವ ಆಸ್ತಿಗಳ ಕುರಿತು ನಡೆಯುವ ತನಿಖೆಗಳು ಅರೆಮನಸ್ಸಿನಿಂದ ಅರ್ಧ ಬೆಂದು ಹಳಸಿ ಹಳ್ಳಹಿಡಿದು ಮಾಯವಾಗುತ್ತವೆ. ಇವರೊಂದಿಗೆ ನೇರ ಸಂಬಂಧವಿರುವ ರಾಜಕಾರಣಿಗಳಂತೂ ಲಂಚದ ಅವ್ಯವಹಾರಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದು ಇಲ್ಲವೇ ಇಲ್ಲವೆನ್ನುಷ್ಟು ಅಪರೂಪ. ಹಾಗಾದರೆ ರಾಜಕಾರಣದಲ್ಲಿ ಲಂಚ ನಡೆಯುವುದಿಲ್ಲವೇ ಎಂದು ಕೇಳಿದರೆ ಅದು ಮೂರ್ಖತನದ ಪರಮಾವಧಿ.

ಇಂದು ನಮ್ಮ ರಾಜಕಾರಣಿಗಳು ಇಷ್ಟಬಂದಂತೆ ವಿಮಾನ/ಹೆಲಿಕಾಪ್ಟರ್/ಐಶಾರಾಮೀ ವಾಹನಗಳಲ್ಲಿ ಪ್ರಯಾಣಮಾಡುವುದಕ್ಕೆ, ಉಚಿತ ಆಮಿಷಗಳನ್ನು ಘೋಷಿಸುವುದಕ್ಕೆ ಮೂಲ ಯಾವುದು? ಕೋಟಿಕೋಟಿ ಹಣದ ವೆಚ್ಚದಲ್ಲಿ ನಡೆಯುವ ಚುನಾವಣೆಗಳು ನಡೆಯುವ ಸೂತ್ರ, ರಹಸ್ಯವಾದರೂ ಏನು? ಇವರು ನೀಡುವ ಆದರ್ಶವಾದರೂ ಏನು? ವಿಶೇಷವೆಂದರೆ ಸರಕಾರ ಘೋಷಿಸುವ ಪ್ರತೀ ಯೋಜನೆ ಮೊದಲ ಫಲಾನುಭವಿಗಳು, ಪಾಲುದಾರರು ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ಎಂಬುದನ್ನು ಶ್ರೀಸಾಮಾನ್ಯನೂ ಬಲ್ಲ. ಇದನ್ನು ಹೇಗೆ ಸಾಬೀತು ಪಡಿಸುತ್ತೀರಿ ಎಂದರೆ ದೇವರ ಅಸ್ತಿತ್ವಕ್ಕೆ ಪುರಾವೆ ನೀಡಿದಂತೆಯೇ. ಅದು ಅಮೂರ್ತ; ಲಂಚ/ಭ್ರಷ್ಟಾಚಾರ ಮೂರ್ತ. ಉದ್ಘಾಟನೆಯಾಗುವ ಮೊದಲೇ ಕುಸಿಯುವ ಯೋಜನೆಗಳು ಈ (ಅ)ವ್ಯವಸ್ಥೆಯ ಭಾವಚಿತ್ರಗಳು. ಇವೆಲ್ಲ ಇವೆಯೆಂದು ತಿಳಿಯುವ ಪ್ರಜೆ ತನ್ನ ಅನುಕೂಲಗಳನ್ನಷ್ಟೇ ನೋಡುತ್ತಾನೆಂಬುದಕ್ಕೆ ನಮ್ಮ ಚುನಾವಣಾ ಫಲಿತಾಂಶಗಳೇ ಸಾಕ್ಷಿ. ಅಷ್ಟೇ ಅಲ್ಲ, ಯಾವನಾದರೊಬ್ಬ ಅಧಿಕಾರಿ ಊರಿಗೆ ಬಂದನೆಂದರೆ, ವರ್ಗವಾಗಿ ಹೋಗುತ್ತಾನೆಂದರೆ ಆತನಿಗೆ ಸಿಗುವ ಸಾಂಪ್ರದಾಯಿಕವೆಂಬ ಹೆಸರಿನ ವೈಭವದ ಸ್ವಾಗತ, ಬೀಳ್ಕೊಡುಗೆಗಳನ್ನು ಗಮನಿಸಿದರೆ ಜನರು ಇಂತಹ ಭ್ರಷ್ಟಾಚಾರವನ್ನು ಸ್ವಾಗತಿಸುತ್ತಾರೆಂದು ಮತ್ತು ಅದನ್ನೇ ನೆಚ್ಚಿಕೊಂಡಿದ್ದಾರೆಂಬುದು ಸ್ಪಷ್ಟ.

ಸಾಮಾಜಿಕ ಸೇವೆಯ ಹೆಸರಿನಲ್ಲಿ ಭ್ರಷ್ಟಾಚಾರವನ್ನು ವಿರೋಧಿಸಿದ ಅನೇಕರು ಹುತಾತ್ಮರಾಗಿದ್ದಾರೆ. ಈ ಬಲಿದಾನವನ್ನು ಸಮಾಜ ಮರೆತಿದೆ. ನಾನು ವೃತ್ತಿಯನ್ನಾರಂಭಿಸುವ ಮೊದಲು ನನ್ನ ಹಿರಿಯ ಸಂಬಂಧಿಯೊಬ್ಬರು ಹೇಳುತ್ತಿದ್ದರು: ''ಒಂದೇ ರೂಪಾಯಿ ಸಂಬಳ ಬಂದರೂ ಸರಕಾರಿ ನೌಕರಿ ಹಿಡಿಯಬೇಕು; ಅಲ್ಲಿ ನೂರು ರೂಪಾಯಿ ಗಿಂಬಳವಿರುತ್ತದೆ!'' ಅವರ ಕಾಲದಲ್ಲಿ ಶಾನುಭೋಗರು ತಮ್ಮ ಮನೆಯಲ್ಲಿ ಅಕ್ಕಿ ಮುಗಿದರೆ ಊರಿನ ಎಲ್ಲಾದರೊಂದು ಕಡೆ ತಮ್ಮ ಉಗ್ರಾಣಿಯನ್ನು ಕರೆದುಕೊಂಡು ಚೈನು ಹಿಡಿದು ಅಳೆಯಲು ಆರಂಭಿಸುತ್ತಿದ್ದರಂತೆ. ಆ ಜಾಗದ ಅಥವಾ ನೆರೆಯ ಜಾಗದ ಅನುಭವಿ ಅದೇ ದಿನ ಅವರ ಮನೆಗೆ ಒಂದು ಮುಡಿ ಅಕ್ಕಿ ಕಳಿಸುತ್ತಿದ್ದನಂತೆ. ಅವರ ಎಚ್ಚರ ಈ ನಂಬಿಕೆಯನ್ನೇ ಅಧರಿಸಿರಬಹುದು. ನಮ್ಮ ಜಿಲ್ಲಾಧಿಕಾರಿಗಳೊಬ್ಬರು ತಮ್ಮ ಇಲಾಖೆಯ ಮಂದಿ 6 ತಿಂಗಳು ಸಂಬಳವಿಲ್ಲದಿದ್ದರೂ ಕೆಲಸ ಮಾಡುತ್ತಾರೆ. ಸಂಬಳವನ್ನು ಅವರು ನಂಬಿದವರೇ ಅಲ್ಲ ಎಂದು ನೋವಿನಿಂದ ಮತ್ತು ವ್ಯಂಗ್ಯವಾಗಿ ಹೇಳುತ್ತಿದ್ದರು. ಇದು ಆಗಲೂ ಸತ್ಯವೇ; ಈಗಲೂ ಸತ್ಯವೇ. ಅಪವಾದಗಳ ಹೊರತಾಗಿ ಎಂಬ ವಿನಾಯಿತಿಯನ್ನು ಕೊಡೋಣ.

Similar News